ETV Bharat / state

ಮೀನುಗಾರರನ್ನು ಕಾಡುವ ನೌಕಾನೆಲೆ ಸಿಬ್ಬಂದಿ: ಬಲೆ ತುಂಡರಿಸಿ ಮೀನುಗಾರಿಕೆಗೆ ಅಡ್ಡಿ ಆರೋಪ!

author img

By

Published : May 12, 2023, 12:09 PM IST

ಕಾರವಾರದಲ್ಲಿ ಮೀನುಗಾರರಿಗೆ ನೌಕಾನೆಲೆ ಸಿಬ್ಬಂದಿ ವಿನಾಕಾರಣ ತೊಂದರೆ ನೀಡುತ್ತಿದ್ದಾರೆ ಎಂಬ ಆರೋಪ ಕೇಳಿ ಬಂದಿದ್ದು, ಅಧಿಕಾರಿಗಳ ವಿರುದ್ಧ ಸ್ಥಳೀಯರು ಆಕ್ರೋಶ ಹೊರ ಹಾಕಿದ್ದಾರೆ.

fishermen
ನೌಕಾನೆಲೆ ಸಿಬ್ಬಂದಿ ವಿರುದ್ಧ ಮೀನುಗಾರರು ಆಕ್ರೋಶ

ನೌಕಾನೆಲೆ ಸಿಬ್ಬಂದಿ ವಿರುದ್ಧ ಮೀನುಗಾರರು ಆಕ್ರೋಶ

ಕಾರವಾರ: ಅವರೆಲ್ಲರೂ ಸಣ್ಣ ದೋಣಿಗಳ ಮೂಲಕ ಸಾಂಪ್ರದಾಯಿಕ ಮೀನುಗಾರಿಕೆ ನಡೆಸುವ ಮೀನುಗಾರರು. ಲಕ್ಷಾಂತರ ವೆಚ್ಚದ ಸಣ್ಣ ದೋಣಿ, ಬಲೆಗಳ ಮೂಲಕ ಜೀವನ ಕಂಡುಕೊಂಡಿರುವ ಮೀನುಗಾರರಿಗೆ ಇದೀಗ ನೌಕಾನೆಲೆ ಸಿಬ್ಬಂದಿ ದುಃಸ್ವಪ್ನವಾಗಿ ಕಾಡುತ್ತಿದ್ದಾರೆ ಎನ್ನಲಾಗಿದೆ. ನೌಕಾನೆಲೆ ಹತ್ತಿರ ಮೀನುಗಾರಿಕೆ ಮಾಡುವ ಆರೋಪದಡಿ ಮೀನುಗಾರರ ಬಲೆಗಳನ್ನು ತುಂಡರಿಸಿ ಅವಾಚ್ಯ ಶಬ್ಧಗಳಿಂದ ನಿಂದನೆ ಮಾಡುತ್ತಿರುವ ಘಟನೆಗಳು ಪದೇ ಪದೆ ಮರುಕಳಿಸುತ್ತಿದ್ದು, ಜನ ನೌಕಾನೆಲೆ ಸಿಬ್ಬಂದಿ ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ.

ಹೌದು, ಕರಾವಳಿ ತೀರದಲ್ಲಿ ಬದುಕು ಕಟ್ಟಿಕೊಂಡು ಜೀವನ ಸಾಗಿಸುತ್ತಿರುವ ಸಾವಿರಾರು ಕುಟುಂಬಗಳಿಗೆ ಮೀನುಗಾರಿಕೆಯೇ ಜೀವನಾಧಾರವಾಗಿದೆ. ಯಾಂತ್ರಿಕ ಮೀನುಗಾರಿಕಾ ಬೋಟುಗಳ ಮೀನುಗಾರರು ಆಳಸಮುದ್ರಕ್ಕೆ ತೆರಳಿ ಮೀನುಗಾರಿಕೆ ನಡೆಸಿದರೆ ಸಣ್ಣ ಬೋಟುಗಳ ಮೀನುಗಾರರು ಸಮುದ್ರ ತೀರದಿಂದ 20 ಕಿ.ಮೀ ವ್ಯಾಪ್ತಿಯಲ್ಲಿ ಮೀನುಗಾರಿಕೆ ನಡೆಸುತ್ತಾರೆ. ಆದರೆ, ಕಾರವಾರ ತಾಲೂಕಿನ ಅರಬ್ಬೀ ಸಮುದ್ರ ವ್ಯಾಪ್ತಿಯಲ್ಲಿ ಮೀನುಗಾರಿಕೆ ನಡೆಸುವ ಸಣ್ಣ ಬೋಟುಗಳ ಮೀನುಗಾರರಿಗೆ ಇದೀಗ ನೌಕಾನೆಲೆ ಅಧಿಕಾರಿಗಳು ಕಿರುಕುಳ ನೀಡುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

"ಕೆಲ ದಿನಗಳ ಹಿಂದೆ ತಾಲೂಕಿನ ಮುದಗಾ ಭಾಗದ ಮೀನುಗಾರರು ನೌಕಾನೆಲೆ ವ್ಯಾಪ್ತಿಯಿಂದ ಸುಮಾರು ಏಳೆಂಟು ಕಿ.ಮೀ ದೂರದಲ್ಲಿ ಮೀನುಗಾರಿಕೆ ನಡೆಸುತ್ತಿದ್ದರು. ಈ ವೇಳೆ, ಏಕಾಏಕಿ ಸ್ಪೀಡ್ ಬೋಟ್‌ನಲ್ಲಿ ಆಗಮಿಸಿದ ನೌಕಾನೆಲೆ ಅಧಿಕಾರಿಗಳು ಮೀನುಗಾರರು ಹಾಕಿದ್ದ ಬಲೆಗಳನ್ನು ತುಂಡರಿಸಿ ತೆರಳಿದ್ದಾರೆ. ಈ ಹಿಂದೆಯೂ ಸಹ ಇದೇ ರೀತಿ ಬಲೆಗಳನ್ನ ಕತ್ತರಿಸಿ ಹಾಕಿದ್ದು, ವಿನಾಕಾರಣ ತೊಂದರೆ ನೀಡುತ್ತಾರೆ. ಅಲ್ಲದೆ, ಕಬ್ಬಿಣದ ರಾಡ್​ಗಳಿಂದ ಹಲ್ಲೆ ಮಾಡುತ್ತಾರೆ" ಎಂದು ಮೀನುಗಾರರಾದ ಶ್ರೀಕಾಂತ ದುರ್ಗೇಕರ್ ಆರೋಪಿಸಿದ್ದಾರೆ.

ಇದನ್ನೂ ಓದಿ : ಸೂರ್ಯನ ಕೌತುಕ: 'ಶೂನ್ಯ ನೆರಳಿನ ದಿನ'ಕ್ಕೆ ಸಾಕ್ಷಿಯಾದ ಕಾರವಾರ

"ಮುದಗಾ, ಹಾರವಾಡ ಭಾಗದ ನೂರಾರು ಮೀನುಗಾರರು ನಿತ್ಯ ಮೀನುಗಾರಿಕೆಗಾಗಿ ನೌಕಾನೆಲೆ ಪ್ರದೇಶವನ್ನೇ ದಾಟಿಕೊಂಡು ಬಂದು ಅಲ್ಲಿಂದ ದೂರದಲ್ಲಿ ಮೀನುಗಾರಿಕೆ ನಡೆಸುತ್ತಾರೆ. ಆದರೂ ಮೀನುಗಾರರಿದ್ದಲ್ಲಿಗೆ ಬರುವ ನೌಕಾನೆಲೆ ಅಧಿಕಾರಿಗಳು ಬಲೆ ತುಂಡರಿಸುವುದಲ್ಲದೇ, ಕೆಲವೊಮ್ಮೆ ಸಣ್ಣ ದೋಣಿಗಳು ಪಲ್ಟಿಯಾಗುವಂತೆ ವೇಗವಾಗಿ ಬೋಟು ಚಲಾಯಿಸಿಕೊಂಡು ಹೋಗುತ್ತಾರೆ. ಅರಗಾ ಗ್ರಾಮದಲ್ಲಿ ನೌಕಾನೆಲೆ ಸ್ಥಾಪನೆಗೂ ಮೊದಲು ನೂರಾರು ಮೀನುಗಾರರ ಕುಟುಂಬಗಳೇ ವಾಸವಾಗಿದ್ದು, ಬಳಿಕ ನೌಕಾನೆಲೆಗಾಗಿ ಭೂಮಿಯನ್ನ ತ್ಯಾಗಮಾಡಿ ನಿರಾಶ್ರಿತರಾಗಿದ್ದಾರೆ. ಇದೀಗ ಅದೇ ಮೀನುಗಾರರಿಗೆ ನೌಕಾನೆಲೆ ಸಿಬ್ಬಂದಿ ವಿನಾಕಾರಣ ತೊಂದರೆ ನೀಡುತ್ತಿದ್ದು, ಸಾಲ ಮಾಡಿ ಮೀನುಗಾರಿಕೆ ನಡೆಸುವವರು ಇದೀಗ ಸಂಕಷ್ಟ ಎದುರಿಸುವಂತಾಗಿದೆ. ನಾವೆಲ್ಲ ಮೀನುಗಾರಿಕೆಯಿಂದ ಸಿಗುವ ಅಲ್ಪ ಹಣದಲ್ಲಿ ಜೀವನ ನಡೆಸುತ್ತಿದ್ದು, ಈ ರೀತಿ ಬಲೆ ಕತ್ತರಿಸಿದಲ್ಲಿ ಸಾವಿರಾರು ರೂಪಾಯಿ ನಷ್ಟ ಅನುಭವಿಸಬೇಕಾಗಿದೆ. ಅಲ್ಲದೇ, ಬೋಟ್ ದಾಖಲೆಗಳನ್ನು ಪರಿಶೀಲಿಸದೆ ಅವಾಚ್ಯ ಶಬ್ಧಗಳಿಂದ ನಿಂದನೆ ಮಾಡುತ್ತಾರೆ. ಇಂತಹ ಘಟನೆಗಳು ಮರುಕಳಿಸುತ್ತಿದ್ದು, ಮೀನುಗಾರರಿಗೆ ಸಾಕಷ್ಟು ಸಮಸ್ಯೆಯಾಗಿದೆ. ಹೀಗಾಗಿ ಕೂಡಲೇ ಅಧಿಕಾರಿಗಳು ನೆರವು ನೀಡಬೇಕು" ಎಂದು ಮೀನುಗಾರರಾದ ತೇಲು ತಾಂಡೇಲ್ ಮನವಿ ಮಾಡಿದ್ದಾರೆ.

ಇದನ್ನೂ ಓದಿ : ಹೆಂಡತಿ, ಮಕ್ಕಳ ಬಂಗಾರ ಅಡವಿಟ್ಟು ಕೆಲಸ ಮಾಡಿದ್ದೇವೆ, ಸಾಲದ ಬಡ್ಡಿ ದುಪ್ಪಟ್ಟಾಗಿದೆ.. ಗುತ್ತಿಗೆದಾರರ ಅಳಲು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.