ETV Bharat / sports

ಐಪಿಎಲ್​ಗೆ ದಿನೇಶ್‌ ಕಾರ್ತಿಕ್ ಕಣ್ಣೀರ ವಿದಾಯ: ತಬ್ಬಿ ಸಂತೈಸಿದ ಕೊಹ್ಲಿ, ಆಟಗಾರರಿಂದ ವಿಶೇಷ ಗೌರವ - Dinesh Karthik

author img

By ANI

Published : May 23, 2024, 9:59 AM IST

Updated : May 23, 2024, 10:18 AM IST

ಆರ್​ಸಿಬಿ ತಂಡದ ವಿಕೆಟ್​ ಕೀಪರ್ ಮತ್ತು ಫಿನಿಶರ್​ ದಿನೇಶ್​ ಕಾರ್ತಿಕ್​ ಐಪಿಎಲ್‌ಗೆ ನಿವೃತ್ತಿ ಘೋಷಿಸುವ ಮಹತ್ವದ ಸುಳಿವು ನೀಡಿದ್ದಾರೆ.

ಐಪಿಎಲ್​ಗೆ ದಿನೇಶ್​ ಕಾರ್ತಿಕ್ ಭಾವನಾತ್ಮಕ ವಿಧಾಯ
ದಿನೇಶ್​ ಕಾರ್ತಿಕ್ (AP)

ಅಹಮದಾಬಾದ್: ರಾಯಲ್​ ಚಾಲೆಂಜರ್ಸ್​ ಬೆಂಗಳೂರು(ಆರ್‌ಸಿಬಿ) ತಂಡದ ವಿಕೆಟ್​ ಕೀಪರ್​ ಮತ್ತು ಸ್ಟಾರ್​ ಫಿನಿಶರ್​ ದಿನೇಶ್​ ಕಾರ್ತಿಕ್ ಇಂಡಿಯನ್ ಪ್ರೀಮಿಯರ್‌ ಲೀಗ್‌​ (ಐಪಿಎಲ್)​ಗೆ ನಿವೃತ್ತಿ ಘೋಷಿಸಲಿದ್ದಾರೆ ಎನ್ನುವುದು ಬಹುತೇಕ ಖಚಿತವಾಗಿದೆ.

ನಿನ್ನೆ ರಾತ್ರಿ ಅಹಮದಾಬಾದ್​ನಲ್ಲಿ ನಡೆದ ರಾಜಸ್ಥಾನ್ ರಾಯಲ್ಸ್​ ವಿರುದ್ಧದ ಎಲಿಮಿನೇಟರ್​ ಪಂದ್ಯದ ಬಳಿಕ ಮೈದಾನದಿಂದ ಮರಳುತ್ತಿದ್ದಾಗ, ಡಿಕೆ (ದಿನೇಶ್ ಕಾರ್ತಿಕ್) ತಮ್ಮ ಕೈಯಲ್ಲಿದ್ದ ಗ್ಲೌಸ್​ಗಳನ್ನು ಮೇಲೆತ್ತಿ ಸ್ಟೇಡಿಯಂನಲ್ಲಿ ನೆರೆದಿದ್ದ ಜನರಿಗೆ ತೋರಿಸುತ್ತಾ ಡ್ರೆಸ್ಸಿಂಗ್​ ರೂಂನತ್ತ ಭಾರವಾದ ಹೆಜ್ಜೆ ಹಾಕಿದರು. ಈ ವೇಳೆ ಅವರ ದೇಹಭಾಷೆ, ಇದು ತಮ್ಮ ಕೊನೆಯ ಐಪಿಎಲ್​ ಪಂದ್ಯ ಎಂಬುದನ್ನು ತೋರಿಸಿತು.

ಇದಕ್ಕೂ ಮುನ್ನ ಎಲಿಮಿನೇಟರ್ ಪಂದ್ಯ ಸೋತ ನಿರಾಶೆಯಲ್ಲಿ ಕಣ್ಣೀರು ಹಾಕುತ್ತಿದ್ದ ಡಿಕೆಯನ್ನು ತಬ್ಬಿಕೊಂಡ ವಿರಾಟ್​ ಕೊಹ್ಲಿ ಸಂತೈಸಿದರು. ಇದಾದ ಬಳಿಕ ಉಭಯ ತಂಡಗಳ ಆಟಗಾರರು ಪರಸ್ಪರ ಆಲಿಂಗನದೊಂದಿಗೆ ಹಸ್ತಲಾಘವ ಮಾಡಿ ದಿನೇಶ್‌ ಕಾರ್ತಿಕ್‌ಗೆ ಶುಭ ಹಾರೈಸಿದರು. ಸಾಮಾನ್ಯವಾಗಿ ಆಟಗಾರನೊಬ್ಬ ನಿವೃತ್ತಿ ಘೋಷಿಸಿದ ಸಂದರ್ಭದಲ್ಲಿ ಮಾತ್ರ ಈ ರೀತಿಯ ದೃಶ್ಯಗಳು ಕಂಡುಬರುತ್ತವೆ.

ಆದರೆ, ಡಿಕೆ ತಮ್ಮ ಐಪಿಎಲ್​ ನಿವೃತ್ತಿ ಬಗ್ಗೆ ಅಧಿಕೃತವಾಗಿ ಎಲ್ಲಿಯೂ ಘೋಷಣೆ ಮಾಡಿಲ್ಲ. ಹೀಗಿದ್ದರೂ ಈ ಸೀಸನ್​ ಆರಂಭಕ್ಕೂ ಮುನ್ನ, ಇದು ತಮ್ಮ ಕೊನೆಯ ಲೀಗ್​ ಎಂದು ಹೇಳಿಕೊಂಡಿದ್ದರು.

ಪ್ರಸಕ್ತ ಋತುವಿನಲ್ಲಿ ಆರ್​ಸಿಬಿಯ ಅದ್ಭುತ ಫಿನಿಶರ್​ ಆಗಿದ್ದ ಡಿಕೆ, ಟೂರ್ನಿಯುದ್ದಕ್ಕೂ ತಮ್ಮ ಆಕರ್ಷಕ ಬ್ಯಾಟಿಂಗ್​ ಮೂಲಕ ಅಭಿಮಾನಿಗಳಲ್ಲಿ ಕಪ್​ ಗೆಲ್ಲುವ ಭರವಸೆ ಮೂಡಿಸಿದ್ದರು. ತಾವಾಡಿದ 15 ಪಂದ್ಯಗಳಲ್ಲಿ 187.36 ಸ್ಟ್ರೈಕ್ ರೇಟ್‌ನೊಂದಿಗೆ 326 ರನ್ ಸಿಡಿಸಿದ್ದಾರೆ. ಈ ಅವಧಿಯಲ್ಲಿ 2 ಅರ್ಧ ಶತಕಗಳನ್ನು ಗಳಿಸಿದ್ದಾರೆ. ಇದೀಗ ಅವೆಲ್ಲವೂ ನೆನಪು ಎಂಬ ಬೇಸರ ಅಭಿಮಾನಿಗಳನ್ನು ಕಾಡುತ್ತಿದೆ.

IPLನಲ್ಲಿ 6 ತಂಡ ಪ್ರತಿನಿಧಿಸಿದ ದಿನೇಶ್ ಕಾರ್ತಿಕ್​: ದಿನೇಶ್​ ಕಾರ್ತಿಕ್​ ಐಪಿಎಲ್​ ಆರಂಭವಾದಗಿನಿಂದಲೂ, ಅಂದರೆ 2008ರಿಂದ 2024ರವರೆಗೆ ಎಲ್ಲಾ 17 ಸೀಸನ್​ಗಳಲ್ಲಿ ಆಡಿದ್ದು ಒಟ್ಟು 6 ತಂಡಗಳನ್ನು ಪ್ರತಿನಿಧಿಸಿದ್ದಾರೆ. ಡೆಲ್ಲಿ ಕ್ಯಾಪಿಟಲ್ಸ್ (2008, 2010, 2014)​, ಪಂಜಾಬ್​ ಕಿಂಗ್ಸ್ (2011), ಮುಂಬೈ ಇಂಡಿಯನ್ಸ್ (2012-13)​, ಗುಜರಾತ್​ ಲಯನ್ಸ್ (2016-17)​, ಕೋಲ್ಕತ್ತಾ ನೈಟ್​ ರೈಡರ್ಸ್ (2018-21)​, ಆರ್​ಸಿಬಿ (2015, 2022-24) ಪರ ಆಡಿದ್ದಾರೆ. ಈ ಅವಧಿಯಲ್ಲಿ ಒಂದು ಬಾರಿ ಕೋಲ್ಕತ್ತಾ ನೈಟ್​ ರೈಡರ್ಸ್​ ತಂಡದ ನಾಯಕನಾಗಿಯೂ ಜವಾಬ್ದಾರಿ ನಿಭಾಯಿಸಿದ್ದಾರೆ. ಇವರ ನಾಯಕತ್ವದಲ್ಲಿ ಕೆಕೆಆರ್​ 17 ಪಂದ್ಯಗಳನ್ನು ಗೆದ್ದುಕೊಂಡಿತ್ತು. ಬಳಿಕ 2013ರಲ್ಲಿ ಮುಂಬೈ ಇಂಡಿಯನ್ಸ್​ ಪ್ರಶಸ್ತಿ ಗೆದ್ದ ವೇಳೆ ಡಿಕೆ ತಂಡದ ಭಾಗವಾಗಿದ್ದರು.

ದಿನೇಶ್ ಕಾರ್ತಿಕ್ ಐಪಿಎಲ್​ ದಾಖಲೆ: ದಿನೇಶ್​ ಕಾರ್ತಿಕ್​ ತಮ್ಮ ಐಪಿಎಲ್​ ವೃತ್ತಿ ಜೀವನದಲ್ಲಿ ಇದೂವರೆಗೂ 257 ಪಂದ್ಯಗಳನ್ನು ಆಡಿದ್ದು, ಅತೀ ಹೆಚ್ಚು ಐಪಿಎಲ್​ ಪಂದ್ಯಗಳನ್ನು ಆಡಿದ ಆಟಗಾರರ ಪಟ್ಟಿಯಲ್ಲಿ ರೋಹಿತ್ ಶರ್ಮಾರೊಂದಿಗೆ ಎರಡನೇ ಸ್ಥಾನಲ್ಲಿದ್ದಾರೆ. ಐಪಿಎಲ್​ನಲ್ಲಿ ಒಟ್ಟು 4,842 ರನ್​ ಗಳಿಸಿದ್ದು, 22 ಅರ್ಧಶತಕಗಳು ಸೇರಿವೆ. ಐಪಿಎಲ್​ನಲ್ಲಿ ಹೆಚ್ಚು ರನ್​ಗಳಿಸಿದ ಬ್ಯಾಟರ್​ಗಳ ಪಟ್ಟಿಯಲ್ಲಿಯೂ ಡಿಕೆ 10ನೇ ಸ್ಥಾನದಲ್ಲಿದ್ದಾರೆ.

ಡಿಕೆ ಸ್ಟಂಪಿಂಗ್ ದಾಖಲೆ​: ಐಪಿಎಲ್​ನಲ್ಲಿ ವಿಕೆಟ್​ ಕೀಪರ್​ ಆಗಿ ದಿನೇಶ್​ ಕಾರ್ತಿಕ್​ ಇದುವರೆಗೂ 37 ಬಾರಿ ಸ್ಟಂಪಿಂಗ್​ ಮಾಡಿ ಅತೀ ಹೆಚ್ಚು ಸ್ಟಂಪಿಂಗ್​ ಮಾಡಿದ ಕೀಪರ್​ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದ್ದಾರೆ. ಧೋನಿ 42 ಸ್ಟಂಪಿಂಗ್​ ಮಾಡುವ ಮೂಲಕ ಅಗ್ರಸ್ಥಾನದಲ್ಲಿದ್ದಾರೆ.

ಇದನ್ನೂ ಓದಿ: ಆರ್‌ಸಿಬಿಯ ಹೊಸ ಅಧ್ಯಾಯ ಮುಕ್ತಾಯ: ಈ ಬಾರಿಯೂ ಕಪ್ ಕನಸು ಭಗ್ನ - RR Beat RCB

Last Updated : May 23, 2024, 10:18 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.