ETV Bharat / sports

ಆರ್‌ಸಿಬಿಯ ಹೊಸ ಅಧ್ಯಾಯ ಮುಕ್ತಾಯ: ಈ ಬಾರಿಯೂ ಕಪ್ ಕನಸು ಭಗ್ನ - RR Beat RCB

author img

By PTI

Published : May 23, 2024, 7:33 AM IST

ಬುಧವಾರ ರಾತ್ರಿ ನಡೆದ ಐಪಿಎಲ್​ ಎಲಿಮಿನೇಟರ್​ ಪಂದ್ಯದಲ್ಲಿ ರಾಜಸ್ಥಾನ್​ ರಾಯಲ್ಸ್​ ತಂಡ ರಾಯಲ್ ಚಾಲೆಂಜರ್ಸ್‌ ಬೆಂಗಳೂರು ವಿರುದ್ದ ಗೆದ್ದು ಕ್ವಾಲಿಫೈಯರ್​ 2ಕ್ಕೆ ಅರ್ಹತೆ ಪಡೆಯಿತು.

ಆರ್ಸಿಬಿಯ ಹೊಸ ಅಧ್ಯಾಯ ಮುಕ್ತಾಯ
ಎಲಿಮಿನೇಟರ್‌ ಪಂದ್ಯದಲ್ಲಿ ಆರ್‌ಸಿಬಿಗೆ ಸೋಲು (IANS)

ಅಹಮದಾಬಾದ್​: ಸತತ 6 ಪಂದ್ಯಗಳನ್ನು ಗೆದ್ದು ಕ್ವಾಲಿಫೈಯರ್​ಗೇರಿದ್ದ ರಾಯಲ್​ ಚಾಲೆಂಜರ್ಸ್​ ಬೆಂಗಳೂರು(ಆರ್‌ಸಿಬಿ) ತಂಡ IPL ಎಲಿಮಿನೇಟರ್​ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್​ ವಿರುದ್ದ 4 ವಿಕೆಟ್​ಗಳಿಂದ ಸೋಲನುಭವಿಸಿ ಟೂರ್ನಿಯಿಂದಲೇ ಹೊರಬಿದ್ದಿದೆ. ಈ ಮೂಲಕ "ಈ ಸಲ ಕಪ್​ ನಮ್ದೆ" ಎನ್ನುತ್ತಿದ್ದ ಕೋಟ್ಯಂತರ ಅಭಿಮಾನಿಗಳ ಕನಸು ಭಗ್ನಗೊಂಡಿತು.

ಅಹಮದಾಬಾದ್​ನ ನರೇಂದ್ರ ಮೋದಿ ಮೈದಾನದಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್​ ಸೋತು ಮೊದಲು ಬ್ಯಾಟ್​ ಮಾಡಿದ್ದ ಆರ್‌ಸಿಬಿ ನಿಗದಿತ 20 ಓವರ್​ಗಳಲ್ಲಿ 8 ವಿಕೆಟ್​ ನಷ್ಟಕ್ಕೆ 172 ರನ್​ಗಳನ್ನು ಕಲೆ ಹಾಕಿತು. ಕಳೆದ ಕೆಲವು ಪಂದ್ಯಗಳಲ್ಲಿ ಆರ್‌ಸಿಬಿ ಬಿಗಿ ಬೌಲಿಂಗ್​​ ಪ್ರದರ್ಶನವನ್ನು ಗಮನಿಸಿದರೆ ಈ ಮೊತ್ತವನ್ನು ರಾಯಲ್ಸ್​ ಪಡೆ ಬೆನ್ನಟ್ಟುವುದು ಕಷ್ಟವೆಂದೇ ಅಂದಾಜಿಸಲಾಗಿತ್ತು. ಆದರೆ ಆ ಎಲ್ಲಾ ಲೆಕ್ಕಾಚಾರಗಳನ್ನು ತಲೆ ಕೆಳಗಾಗಿಸಿದ ಸ್ಯಾಮ್ಸನ್​ ತಂಡ, ಒಂದು ಓವರ್​ ಬಾಕಿ ಇರುವಂತೆಯೇ ಪಂದ್ಯ ಗೆದ್ದು ಬೀಗಿತು.

ಎರಡನೇ ಇನಿಂಗ್ಸ್​ನಲ್ಲಿ 46 ರನ್​ಗಳವರೆಗೂ ವಿಕೆಟ್​ ನಷ್ಟವಿಲ್ಲದೆ ಉತ್ತಮ ಸ್ಕೋರ್​ ಕಲೆ ಹಾಕಿದ್ದ ರಾಯಲ್ಸ್​ ತಂಡ 86 ರನ್ ಗಡಿ ತಲುಪುವಷ್ಟರಲ್ಲೇ ಕ್ಯಾಡ್​​ಮೋರ್​ (20), ಜೈಸ್ವಾಲ್​ (45), ಸಂಜು ಸ್ಯಾಮ್ಸನ್​ (17) ಹೀಗೆ ಪ್ರಮುಖ 3 ವಿಕೆಟ್​ಗಳನ್ನು ಕಳೆದುಕೊಂಡಿತು. ನಂತರ 112 ರನ್‌ಗಳಿಗೆ ನಾಲ್ಕನೇ ವಿಕೆಟ್‌ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ಈ ವೇಳೆ ತಂಡಕ್ಕೆ ರಿಯಾನ್ ಪರಾಗ್ (26) ಮತ್ತು ಶಿಮ್ರಾನ್ ಹೆಟ್ಮೆಯರ್ (26) ಆಸರೆಯಾದರು. ಈ ಜೋಡಿ 3 ಓವರ್​ಗಳಲ್ಲಿ 39 ರನ್​ಗಳನ್ನು ಕಲೆಹಾಕಿ ಪಂದ್ಯದ ಗೆಲುವನ್ನು ಮತ್ತಷ್ಟು ಸುಲಭಗೊಳಿಸಿತು. 17ನೇ ಓವರ್​ನಲ್ಲಿ ಈ ಇಬ್ಬರಿಗೆ ಸಿರಾಜ್​ ಪೆವಿಲಿಯನ್ ದಾರಿ ತೋರಿಸಿದರು​. ಅಂತಿಮವಾಗಿ, ಪೋವೆಲ್​ ಅಜೇಯ 16 ರನ್ ಸಿಡಿಸಿ ತಂಡವನ್ನು ಗೆಲುವಿನ ದಡ ಸೇರಿಸಿದರು.

ಆರ್​ಸಿಬಿ ಬ್ಯಾಟಿಂಗ್​ ವೈಫಲ್ಯ: ಇದಕ್ಕೂ ಮೊದಲು ಬ್ಯಾಟ್​ ಮಾಡಿದ್ದ ಆರ್​ಸಿಬಿ ಮಹತ್ವದ ಎಲಿಮಿನೇಟರ್​ ಪಂದ್ಯದಲ್ಲಿ ಬ್ಯಾಟಿಂಗ್​ ವೈಫಲ್ಯ ಅನುಭವಿಸಿತು. ಆರಂಭದಿಂದಲೇ ವಿಕೆಟ್​ ಕಳೆದುಕೊಳ್ಳುತ್ತಾ ಸಾಗಿದ ತಂಡ ಯಾವುದೇ ಹಂತದಲ್ಲೂ ಮಿಂಚಲು ಸಾಧ್ಯವಾಗಲಿಲ್ಲ. ಉತ್ತಮ ಆರಂಭದ ಸುಳಿವು ನೀಡಿದ ವಿರಾಟ್​ ಮತ್ತು ಪ್ಲೆಸಿಸ್​ ಮೊದಲ ವಿಕೆಟ್​ಗೆ 37 ರನ್​ ಗಳಿಸಿ ಬೇರ್ಪಟ್ಟರು. ಡು ಪ್ಲೆಸಿಸ್​ 17 ರನ್​ ಗಳಿಸಿದ್ದಾಗ ಬೌಲ್ಟ್​ ಎಸೆತದಲ್ಲಿ ಬಲವಾದ ಹೊಡೆತಕ್ಕೆ ಕೈಹಾಕಿ ವಿಕೆಟ್​ ನೀಡಿದರೆ, ವಿರಾಟ್​ (33) ಚಹಲ್​ ಬೌಲಿಂಗ್​ನಲ್ಲಿ ಸಿಕ್ಸರ್​​ ಬಾರಿಸಲು ಯತ್ನಿಸಿ ಕ್ಯಾಚಿತ್ತರು.

ಬಳಿಕ ಪಾಟೀದಾರ್ (34) ಮೂರನೇ ವಿಕೆಟ್‌ಗೆ ಕ್ಯಾಮರೂನ್ ಗ್ರೀನ್ (27) ಜೊತೆ 41 ರನ್‌ಗಳ ಜೊತೆಯಾಟವಾಡಿ ನಿರ್ಗಮಿಸಿದರು. ನಂತರ ಬಂದ ಗ್ಲೆನ್ ಮ್ಯಾಕ್ಸ್‌ವೆಲ್ ಖಾತೆ ತೆರೆಯದೇ ಶೂನ್ಯಕ್ಕೆ ನಿರ್ಗಮಿಸಿದರು. ಅಶ್ವಿನ್ 13ನೇ ಓವರ್‌ನಲ್ಲಿ ಗ್ರೀನ್ ಮತ್ತು ಮ್ಯಾಕ್ಸ್‌ವೆಲ್ ಅವರನ್ನು ಪೆವಿಲಿಯನ್‌ಗಟ್ಟಿದರು. ಉಳಿದಂತೆ, ಮಹಿಪಾಲ್​ ಲೋಮ್ರೊರ್​ (32), ದಿನೇಶ್​ ಕಾರ್ತಿಕ್​ (11), ಇಂಪ್ಯಾಕ್ಟ್​ ಪ್ಲೇಯರ್​ ಆಗಿ ಬಂದ ಸ್ವಪ್ನಿಲ್​ ಸಿಂಗ್​ (9), ಕರಣ್​ ಶರ್ಮಾ (5) ಬ್ಯಾಟಿಂಗ್​ ನೆರವಿನಿಂದ ಆರ್‌ಸಿಬಿ 172ರ ಗಡಿ ತಲುಪಿತು. ರಾಜಸ್ಥಾನದ ಪರ ಆವೇಶ್​ ಖಾನ್​ 3 ವಿಕೆಟ್​ ಪಡೆದು ಮಿಂಚಿದರು.

ಎಲಿಮಿನೇಟರ್‌-ಆರ್‌ಸಿಬಿಗೆ 3ನೇ ಬಾರಿ ಸೋಲು: ಎಲಿಮಿನೇಟರ್​ ಪಂದ್ಯದಲ್ಲಿ ಆರ್‌ಸಿಬಿಗೆ ಇದು 3ನೇ ಸೋಲು. ಈ ಹಿಂದೆ, 2020, 2021ರಲ್ಲಿ ತಂಡ ಪರಾಭವಗೊಂಡಿತ್ತು.

ನಾಳೆ 2ನೇ ಕ್ವಾಲಿಫೈಯರ್‌​: ಎಲಿಮಿನೇಟರ್​ ಪಂದ್ಯ ಗೆದ್ದಿರುವ ರಾಜಸ್ಥಾನ ರಾಯಲ್ಸ್​ 2ನೇ ಕ್ವಾಲಿಫೈಯರ್​ ಪಂದ್ಯದಲ್ಲಿ ಹೈದರಾಬಾದ್​ ವಿರುದ್ದ (ಮೇ 24ರಂದು) ಚೆನ್ನೈನ ಎಂ.ಎ.ಚಿದಂಬರಂ ಮೈದಾನದಲ್ಲಿ ಸೆಣಸಲಿದೆ.​

ಇದನ್ನೂ ಓದಿ: ಐಪಿಎಲ್​ನಲ್ಲಿ 8 ಸಾವಿರ ರನ್​ ಗಳಿಸಿದ ವಿರಾಟ್​ ಕೊಹ್ಲಿ, ಮೊದಲ ಬ್ಯಾಟರ್​ ಹಿರಿಮೆ - virat kohli runs in ipl

ETV Bharat Logo

Copyright © 2024 Ushodaya Enterprises Pvt. Ltd., All Rights Reserved.