ಕರ್ನಾಟಕ

karnataka

ಚುನಾವಣೆಯಲ್ಲಿ ಕುಕ್ಕರ್, ಐರನ್ ಬಾಕ್ಸ್ ಹಂಚಿಕೆ; ಯತೀಂದ್ರ ಹೇಳಿಕೆ ನಿಜವಾಗಿದ್ದರೆ, ಚುನಾವಣಾ ಆಯೋಗ ಗಂಭೀರವಾಗಿ ಪರಿಗಣಿಸಬೇಕು ಎಂದ ಬೊಮ್ಮಾಯಿ

By ETV Bharat Karnataka Team

Published : Sep 19, 2023, 7:03 PM IST

Updated : Sep 20, 2023, 6:29 PM IST

ಚುನಾವಣೆಯಲ್ಲಿ ಕುಕ್ಕರ್, ಐರನ್ ಬಾಕ್ಸ್​ ಹಂಚಿಕೆ ಕುರಿತು ಸಿದ್ದರಾಮಯ್ಯನವರ ಪುತ್ರ ಯತೀಂದ್ರ ನೀಡಿರುವ ಹೇಳಿಕೆ ನಿಜವಾಗಿದ್ದರೆ ಚುನಾವಣಾ ಆಯೋಗ ಗಂಭೀರವಾಗಿ ಪರಿಗಣಿಸಬೇಕು ಎಂದು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಒತ್ತಾಯಿಸಿದ್ದಾರೆ.

yathindra siddaramaiah-  Basavaraj Bommai
ಯತೀಂದ್ರ ಸಿದ್ದರಾಮಯ್ಯ - ಬಸವರಾಜ ಬೊಮ್ಮಾಯಿ

ಬೆಂಗಳೂರು/ಮೈಸೂರು: ಮುಖ್ಯಮಂತ್ರಿ ಸಿದ್ದರಾಮಯ್ಯನವರ ಪುತ್ರ, ಮಾಜಿ ಶಾಸಕ ಡಾ. ಯತೀಂದ್ರ ಸಿದ್ದರಾಮಯ್ಯ ನೀಡಿರುವ ಹೇಳಿಕೆಯೊಂದು ಚರ್ಚೆಗೆ ಗ್ರಾಸವಾಗಿದೆ. ಚುನಾವಣೆ ಸಂದರ್ಭದಲ್ಲಿ ವರುಣಾ ಕ್ಷೇತ್ರದಲ್ಲಿ ಮಡಿವಾಳ ಸಮುದಾಯದ ಅಧ್ಯಕ್ಷರಾದ ನಂಜಪ್ಪನವರು ನಮ್ಮ ತಂದೆಯವರ ಕೈಲಿಂದ ಕುಕ್ಕರ್ ಮತ್ತು ಐರನ್​ ಬಾಕ್ಸ್ (ಇಸ್ತ್ರಿ ಪೆಟ್ಟಿಗೆ) ಹಂಚಿಕೆಯ ಕಾರ್ಯಕ್ರಮಕ್ಕೆ ಚಾಲನೆ ಕೊಡಿಸಿದ್ದರು ಎಂಬ ಯತೀಂದ್ರ ಹೇಳಿಕೆಯ ವಿಡಿಯೋ ವೈರಲ್​ ಆಗಿದೆ.

ಈ ಕುರಿತು ಮಾಧ್ಯಮದವರು ಕೇಳಿದ ಪ್ರಶ್ನೆಗೆ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ‌ ಪ್ರತಿಕ್ರಿಯಿಸಿ, ಡಾ.ಯತೀಂದ್ರ ಅವರು ನೀಡಿರುವ ಹೇಳಿಕೆ ನಿಜವಾಗಿದ್ದರೆ ಚುನಾವಣಾ ಆಯೋಗ ಗಂಭೀರವಾಗಿ ಪರಿಗಣಿಸಬೇಕು ಎಂದು ಆಗ್ರಹಿಸಿದ್ದಾರೆ. ಅಲ್ಲದೇ, ಈಗಾಗಲೇ ಸಿದ್ದರಾಮಯ್ಯ ವಿರುದ್ಧ ಒಂದು ಚುನಾವಣಾ ತಕರಾರು ಅರ್ಜಿ ಇದೆ. ಯತೀಂದ್ರ ಹೇಳಿದ್ದಕ್ಕೆ ಸಾಕ್ಷ್ಯಾಧಾರ ಇದ್ದರೆ ಆಯೋಗ ಇದನ್ನು ಪರಿಗಣಿಸಬೇಕಾಗುತ್ತದೆ. ಕುಕ್ಕರ್, ಐರನ್ ಬಾಕ್ಸ್ ಹಂಚಿಕೆ ನಿಜ ಆಗಿದ್ದರೆ ಇದು ಗಂಭೀರ ಪ್ರಕರಣ ಆಗಲಿದೆ ಎಂದು ಬೊಮ್ಮಾಯಿ ಹೇಳಿದ್ದಾರೆ.

ಇದನ್ನೂ ಓದಿ:ಲೋಕಸಭಾ ಚುನಾವಣೆಗೆ ನನ್ನದು ಯಾವ ಬೇಡಿಕೆಯೂ ಇಲ್ಲ: ಡಾ. ಯತೀಂದ್ರ ಸಿದ್ದರಾಮಯ್ಯ

ಐದು ದಿನಗಳ ಹಿಂದೆ ಮೈಸೂರು ಜಿಲ್ಲೆಯ ನಂಜನಗೂಡಿನ ಮಡಿವಾಳ ಸಮುದಾಯದವರ ಕೃತಜ್ಞತಾ ಸಭೆಯಲ್ಲಿ ಮಾತನಾಡಿದ್ದ ಯತೀಂದ್ರ ಸಿದ್ದರಾಮಯ್ಯ, ಮಡಿವಾಳ ಸಮುದಾಯದವರು ಈಗ ತಾನೆ ನಡೆದಂತಹ 2023ರ ಚುನಾವಣೆಯಲ್ಲಿ ಆಳವಾದ ಪರಿಣಾಮ ಬೀರಿದ್ದಾರೆ. ರಾಜ್ಯಾಧ್ಯಕ್ಷರಾದ ನಂಜಪ್ಪನವರು ವರುಣಾ ಕ್ಷೇತ್ರದಲ್ಲಿ ಮಡಿವಾಳ ಸಮುದಾಯದ ಸಂಘಟನೆ ಮಾಡಬೇಕೆಂದು ಹೇಳಿ ಸಾವಿರಾರು ಕುಕ್ಕರ್ ಹಾಗೂ ಐರನ್ ಬಾಕ್ಸ್ ಹಂಚಿದ್ದಾರೆ. ಈ ಸಮಾರಂಭಕ್ಕೆ ನಂಜಪ್ಪನವರು ತಂದೆಯ ಬಳಿಗೆ ಬಂದು, ಕಾರ್ಯಕ್ರಮ ತಂದೆಯ ಕಡೆಯಿಂದಲೇ ಆಗಬೇಕೆಂದು ಪಟ್ಟು ಹಿಡಿದರು. ಎರಡ್ಮೂರು ಬಾರಿ ದಿನಾಂಕ ಸಿಗದೆ ಕಾರ್ಯಕ್ರಮ ರದ್ದಾಗಿತ್ತು. ಕೊನೆಗೆ ನಂಜಪ್ಪನವರು ನಮ್ಮ ತಂದೆಯವರ ಕೈಲಿಂದಲೇ ಕುಕ್ಕರ್ ಹಾಗೂ ಐರನ್​ ಬಾಕ್ಸ್​ಅನ್ನು ಸಮುದಾಯದ ಜನರಿಗೆ ಹಂಚುವ ಕಾರ್ಯಕ್ರಮಕ್ಕೆ ಚಾಲನೆ ಕೊಡಿಸಿದ್ದರು ಎಂದು ಹೇಳಿಕೆ ನೀಡಿರುವ ವಿಡಿಯೋ ಹರಿದಾಡುತ್ತಿದೆ.

Last Updated :Sep 20, 2023, 6:29 PM IST

ABOUT THE AUTHOR

...view details