ಕರ್ನಾಟಕ

karnataka

ಬಿಸಿಯೂಟದಲ್ಲಿ ಹಲ್ಲಿ ಅಲ್ಲ, ಹಾವು! 20 ವಿದ್ಯಾರ್ಥಿಗಳು ಅಸ್ವಸ್ಥ, ಶಿಕ್ಷಕರ ವಾಹನ ಧ್ವಂಸ

By

Published : Jan 12, 2023, 10:57 AM IST

Updated : Jan 12, 2023, 11:29 AM IST

ಬಿಸಿಯೂಟದ ಪಾತ್ರೆಯಲ್ಲಿ ಹಾವು ಪತ್ತೆಯಾಗಿದ್ದು, ಊಟ ಸೇವಿಸಿದ ಹಲವು ಮಂದಿ ವಿದ್ಯಾರ್ಥಿಗಳು ಅಸ್ವಸ್ಥರಾಗಿದ್ದಾರೆ. ವಿಷಯ ತಿಳಿದು ಕೋಪಗೊಂಡು ಪೋಷಕರು, ಇತರೆ ಜನರು ಶಾಲಾಡಳಿತದ ವಿರುದ್ಧ ರೊಚ್ಚಿಗೆದ್ದು ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

Snake found in mid day meal
ಬಿಸಿಯೂಟದಲ್ಲಿ ಹಾವು

ಬಿರ್ಭುಮ್​ (ಪಶ್ಚಿಮ ಬಂಗಾಳ): ಪಶ್ಚಿಮ ಬಂಗಾಳದ ಬಿರ್ಭುಮ್ ಜಿಲ್ಲೆಯ ಮಯೂರೇಶ್ವರ ಬ್ಲಾಕ್​ನ ಪ್ರಾಥಮಿಕ ಶಾಲೆಯೊಂದರ ವಿದ್ಯಾರ್ಥಿಗಳಿಗೆ ವಿತರಿಸಲಾದ ಬಿಸಿಯೂಟದಲ್ಲಿ ಹಾವು ಪತ್ತೆಯಾದ ಘಟನೆ ಸೋಮವಾರ ನಡೆದಿದೆ. ಆಹಾರ ಸೇವಿಸಿದ್ದ 20 ವಿದ್ಯಾರ್ಥಿಗಳು ಅಸ್ವಸ್ಥರಾಗಿದ್ದಾರೆ. ಘಟನೆ ತಿಳಿದು ವಿದ್ಯಾರ್ಥಿಗಳ ಪಾಲಕರು ಭಾರಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ವಿಷಾಹಾರ ಸೇವಿಸಿದ ಕೂಡಲೇ ಕೆಲವು ವಿದ್ಯಾರ್ಥಿಗಳು ಅಸ್ವಸ್ಥರಾಗಿದ್ದು ಕೂಡಲೇ ಇಲ್ಲಿನ ರಾಮ್​ಪುರಹತ್​ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗೆ ದಾಖಲಿಸಲಾಗಿದೆ. ಇತರರನ್ನು ಸೈಥಿಯಾನ್​ ಬ್ಲಾಕ್​ ಆಸ್ಪತ್ರೆಗೆ ಸಾಗಿಸಲಾಗಿದೆ. ಕೆಲವು ವಿದ್ಯಾರ್ಥಿಗಳು ಊಟ ಸೇವಿಸಿದ ಬಳಿಕ ಪಾತ್ರೆಯಲ್ಲಿ ಹಾವು ಇದ್ದುದನ್ನು ಅಡುಗೆ ಸಿಬ್ಬಂದಿಯ ಗಮನಕ್ಕೆ ತಂದಿದ್ದಾರೆ. ಅಡುಗೆ ಸಿಬ್ಬಂದಿ ತಕ್ಷಣವೇ ವಿದ್ಯಾರ್ಥಿಗಳಿಗೆ ಊಟ ಸೇವಿಸದಂತೆ ಸೂಚಿಸಿದ್ದಾರೆ. ಹೀಗಾಗಿ ಹೆಚ್ಚಿನ ಮಕ್ಕಳು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಮುಖ್ಯ ಶಿಕ್ಷಕರಿಗೆ ತರಾಟೆ, ವಾಹನ ಧ್ವಂಸ: ಘಟನೆಯ ಸಂಬಂಧ ಸಂತ್ರಸ್ತ ಮಕ್ಕಳ ಪೋಷಕರು ಶಿಕ್ಷಕರು ಮತ್ತು ಅಡುಗೆ ಸಿಬ್ಬಂದಿಯನ್ನು ನೇರವಾಗಿ ದೂಷಿಸಿದ್ದಾರೆ. ಸ್ಥಳೀಯರು ಶಾಲೆಯನ್ನು ಸುತ್ತುವರೆದು ಮುಖ್ಯೋಪಾಧ್ಯಾಯರನ್ನು ತರಾಟೆಗೆ ತೆಗೆದುಕೊಂಡು, ಅವರ ವಾಹನಯನ್ನು ಧ್ವಂಸಗೊಳಿಸಿದ್ದಾರೆ. ಸ್ಥಳಕ್ಕಾಗಮಿಸಿದ ಪೊಲೀಸರು ಮುಖ್ಯೋಪಾಧ್ಯಾಯರನ್ನು ರಕ್ಷಿಸಿ, ಜನರ ಮನವೊಲಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಇದನ್ನೂ ಓದಿ:ಫ್ರೀಯಾಗಿ ಊಟ ಕೊಡಲು‌ ನಿರಾಕರಿಸಿದ ಫಾಸ್ಟ್​ ಫುಡ್​ ಸೆಂಟರ್​ ಮಾಲೀಕ: ಅವಾಚ್ಯ ಶಬ್ಧಗಳಿಂದ ನಿಂದಿಸಿದ ರೌಡಿಶೀಟರ್​ ಅರೆಸ್ಟ್

ಪ್ರಾಥಮಿಕ ಶಿಕ್ಷಣ ಮಂಡಳಿ ಅಧ್ಯಕ್ಷರ ಹೇಳಿಕೆ: ಇದೇ ವೇಳೆ, ಪ್ರಾಥಮಿಕ ಶಿಕ್ಷಣ ಮಂಡಳಿ ಅಧ್ಯಕ್ಷ ಪ್ರಯೋಲ್​ ನಾಯ್ಕ್​ ಆಸ್ಪತ್ರೆಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. "ಮಕ್ಕಳ ವಿಷಯದಲ್ಲಿ ಶಿಕ್ಷಕರು ಮತ್ತು ಅಡುಗೆ ಸಿಬ್ಬಂದಿ ಜಾಗರೂಕರಾಗಿರಬೇಕು. ಮುಂದೆ ಇಂತಹ ಅನಾಹುತಗಳು ಸಂಭವಿಸದಂತೆ ನೋಡಿಕೊಳ್ಳಬೇಕು" ಎಂದು ಎಚ್ಚರಿಕೆ ನೀಡಿದ್ದಾರೆ.

ವಾರಕ್ಕೊಂದಿನ ಮಾಂಸಾಹಾರ ಘೋಷಿಸಿದ್ದ ಸಿಎಂ: ರಾಜ್ಯದಲ್ಲಿ ಲಕ್ಷಾಂತರ ವಿದ್ಯಾರ್ಥಿಗಳು ಮಧ್ಯಾಹ್ನದ ಬಿಸಿಯೂಟ ಸೇವಿಸುತ್ತಾರೆ. ಆದರೆ ಕಳಪೆ ಗುಣಮಟ್ಟದ ಆಹಾರವನ್ನೇ ಮಕ್ಕಳಿಗೆ ನೀಡಲಾಗುತ್ತಿದೆ ಎಂಬ ದೂರುಗಳು ಬಹಳ ಹಿಂದಿನಿಂದಲೂ ಇತ್ತು. ಇದಕ್ಕೆ ಸಂಬಂಧಿಸಿದಂತೆ ಮಧ್ಯಾಹ್ನದ ಊಟದ ಗುಣಮಟ್ಟವನ್ನು ಹೆಚ್ಚಿಸಿ, ವಾರದಲ್ಲಿ ಒಂದು ದಿನ ಮಕ್ಕಳಿಗೆ ಮಾಂಸಾಹಾರ ಊಟವನ್ನು ನೀಡಬೇಕು ಎಂದು ಇತ್ತೀಚೆಗಷ್ಟೇ ರಾಜ್ಯದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಘೋಷಣೆ ಮಾಡಿದ್ದರು. ಇದರ ಬೆನ್ನಲ್ಲೇ ಬಿಸಿಯೂಟದಲ್ಲಿ ಹಾವು ಪತ್ತೆಯಾಗಿದ್ದು, ವಿವಾದ ಉಂಟಾಗಿದೆ.

ಇಂಥ ಘಟನೆ ಇದೇ ಮೊದಲಲ್ಲ..: ಪಶ್ಚಿಮ ಬಂಗಾಳದಲ್ಲಿ ಈ ರೀತಿಯ ಘಟನೆ ಹೊಸದಲ್ಲ. ಈ ಹಿಂದೆಯೂ ರಾಜ್ಯದ ಹಲವಾರು ಶಾಲೆಗಳಲ್ಲಿ ಕಳಪೆ ಗುಣಮಟ್ಟದಿಂದ ಕೂಡಿದ ಆಹಾರದಿಂದ ಮಧ್ಯಾಹ್ನದ ಊಟದಲ್ಲಿ ಹುಳುಗಳು ಕಂಡುಬಂದಿತ್ತು. ಇಲ್ಲಿನ ಕುಲ್ಪಿಯಲ್ಲಿರುವ ರಾಜರಾಮಪುರ ಪ್ರಾಥಮಿಕ ಶಾಲೆಯಲ್ಲಿ ವಿದ್ಯಾರ್ಥಿಗಳು ಊಟ ಮಾಡುತ್ತಿರುವಾಗ ಕೀಟಗಳು ಸಿಕ್ಕಿದ್ದವು. ಬಳಿಕ ಶಾಲೆಯ ವಿದ್ಯಾರ್ಥಿಗಳು ಹಾಗೂ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿ, ಶಾಲೆಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದ್ದರು.

ಇದನ್ನೂ ನೋಡಿ:300 ಕೋಟಿ ವಂಚಿಸಿದ ಚೀನಾ ಸಾಲದ ಆ್ಯಪ್​ ಗ್ಯಾಂಗ್ ಭೇದಿಸಿದ ಉತ್ತರಾಖಂಡ ಪೊಲೀಸರು: ಕಿಂಗ್​​ಪಿನ್ ಅಂಕುರ್ ಧಿಂಗ್ರಿ ಬಂಧನ

Last Updated :Jan 12, 2023, 11:29 AM IST

ABOUT THE AUTHOR

...view details