ETV Bharat / bharat

ದೇವಸ್ಥಾನದ ಉತ್ಸವದಲ್ಲಿ ಬಲಿ ಕೊಟ್ಟ ಮೇಕೆಗಳ ರಕ್ತ ಸೇವಿಸಿದ ಅರ್ಚಕ ಸಾವು - PRIEST DIED DRUNK GOAT BLOOD

author img

By ETV Bharat Karnataka Team

Published : May 23, 2024, 10:00 PM IST

ತಮಿಳುನಾಡಿನ ಈರೋಡ್ ಜಿಲ್ಲೆಯಲ್ಲಿ ನಡೆದ ದೇವರ ಉತ್ಸವದಲ್ಲಿ ಬಲಿ ಕೊಟ್ಟ ಮೇಕೆಗಳ ರಕ್ತ ಸೇವಿಸಿದ ಬಳಿಕ ಅರ್ಚಕರೊಬ್ಬರು ಸಾವನ್ನಪ್ಪಿದ್ದಾರೆ.

Tamil nadu: Festival Place and Deceased Priest
ತಮಿಳುನಾಡು: ಉತ್ಸವದ ಸ್ಥಳ, ಮೃತ ಅರ್ಚಕ ಪಳನಿಸ್ವಾಮಿ (ETV Bharat)

ಈರೋಡ್ (ತಮಿಳುನಾಡು): ದೇವರ ಉತ್ಸವದಲ್ಲಿ ಬಲಿ ನೀಡಿದ ಮೇಕೆಗಳ ರಕ್ತ ಸೇವಿಸಿದ ನಂತರ ಅರ್ಚಕರೊಬ್ಬರು ಮೃತಪಟ್ಟ ಆಘಾತಕಾರಿ ಘಟನೆ ತಮಿಳುನಾಡಿನ ಈರೋಡ್ ಜಿಲ್ಲೆಯಲ್ಲಿ ನಡೆದಿದೆ. ಮೃತರನ್ನು ಪಳನಿಸ್ವಾಮಿ (45) ಎಂದು ಗುರುತಿಸಲಾಗಿದೆ.

ಇಲ್ಲಿನ ಗೋಪಿಚೆಟ್ಟಿಪಾಳ್ಯಂ ಬಳಿಯ ಅಣ್ಣಾಮಾರ್ ದೇವಸ್ಥಾನದಲ್ಲಿ ಪ್ರತಿ ವರ್ಷ ಮೇ ತಿಂಗಳಲ್ಲಿ ಉತ್ಸವ ನಡೆಯುತ್ತದೆ. ಅದರಂತೆ ಈ ವರ್ಷವೂ ಕಳೆದ ಮೇ 6ರಂದು ವಿಶೇಷ ಪೂಜೆಯೊಂದಿಗೆ ಉತ್ಸವ ಆರಂಭವಾಗಿದೆ. ಉತ್ಸವದ ನಿಮಿತ್ತ ದೇವಸ್ಥಾನದ 16 ಅರ್ಚಕರು ಉಪವಾಸ ಆಚರಣೆ ಮಾಡಿದ್ದರು. ಇಂದು ಪೂಜೆಗಳ ಕಾರ್ಯ ಆರಂಭದ ವೇಳೆ ಭಕ್ತರು ನೀಡಿದ್ದ 20ಕ್ಕೂ ಹೆಚ್ಚು ಮೇಕೆಗಳನ್ನು ದೇವಾಲಯದ ಆವರಣದಲ್ಲಿ ಅರ್ಚಕರು ಬಲಿ ಕೊಟ್ಟಿದ್ದರು.

ಬಲಿ ಕೊಟ್ಟ ಮೇಕೆಗಳ ರಕ್ತದಲ್ಲಿ ಅರ್ಚಕರು ಬಾಳೆಹಣ್ಣನ್ನು ಹಿಂಡಿ ತಿಂದು, ಅದನ್ನು ಸಂತಾನವಿಲ್ಲದವರಿಗೆ, ಉತ್ತಮ ಆರೋಗ್ಯ ಬಯಸುವ ಭಕ್ತರಿಗೆ ಕೊಡುವುದು ವಾಡಿಕೆ. ಅಂತೆಯೇ, ಪಳನಿಸ್ವಾಮಿ ಸೇರಿದಂತೆ 5 ಮಂದಿ ಅರ್ಚಕರು ಮೇಕೆಗಳ ರಕ್ತ ಮತ್ತು ಹಿಂಡಿದ ಬಾಳೆಹಣ್ಣು ಸೇವಿಸಿದ್ದರು. ಇದಾದ ಕೆಲ ಹೊತ್ತಿನ ಬಳಿಕ ಪಳನಿಸ್ವಾಮಿ ವಾಂತಿ ಮಾಡಿಕೊಂಡು ಪ್ರಜ್ಞೆ ತಪ್ಪಿದ್ದರು.

ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಪಳನಿಸ್ವಾಮಿಯನ್ನು ಗೋಪಿಚೆಟ್ಟಿಪಾಳ್ಯಂ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ತಪಾಸಣೆ ನಡೆಸಿದ ವೈದ್ಯರು ಅದಾಗಲೇ ಮೃತಪಟ್ಟಿರುವುದಾಗಿ ದೃಢಪಟ್ಟಿದ್ದಾರೆ. ನಂತರ ಅವರ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ. ಈ ಘಟನೆ ಬಗ್ಗೆ ಸಿರುವಲೂರು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಮೃತ ಪಳನಿಸ್ವಾಮಿ ಅವರಿಗೆ ದೇವಿ ಎಂಬ ಪತ್ನಿ ಮತ್ತು ಪ್ರಭುಕುಮಾರ್ ಮತ್ತು ದಿನೇಶ್ ಎಂಬ ಇಬ್ಬರು ಪುತ್ರರಿದ್ದಾರೆ. ಅರ್ಚಕ ವೃತ್ತಿಯೊಂದಿಗೆ ಪಳನಿಸ್ವಾಮಿ ವ್ಯಾನ್​ ಚಾಲಕರಾಗಿಯೂ ಕೆಲಸ ಮಾಡುತ್ತಿದ್ದರು ಎಂದು ತಿಳಿದು ಬಂದಿದೆ.

ಇದನ್ನೂ ಓದಿ: ಭಾರತಕ್ಕೆ ಚಿಕಿತ್ಸೆಗೆ ಬಂದು ಕೋಲ್ಕತ್ತಾದಲ್ಲಿ ಶವವಾಗಿ ಪತ್ತೆಯಾದ ಬಾಂಗ್ಲಾದೇಶ ಸಂಸದ, ಮೂವರ ಬಂಧನ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.