ETV Bharat / business

ಸ್ವಂತ ಬಿಸ್ನೆಸ್‌ ಮಾಡಲು ಬಯಸುತ್ತಿದ್ದೀರಾ?: ನಿಮಗೆ ಸೂಕ್ತವಾದ ಲೋನ್‌ಗಳ ಬಗ್ಗೆ ತಿಳಿಯಿರಿ - Business Loans

author img

By ETV Bharat Karnataka Team

Published : Apr 7, 2024, 5:24 PM IST

ಸ್ವಂತ ವ್ಯಾಪಾರ ಪ್ರಾರಂಭಿಸಲು ಬಯಸುವರು ಬ್ಯಾಂಕ್​ ಸಾಲ ಪಡೆಯಬಹುದು. ದೇಶದಲ್ಲಿ ಮುಖ್ಯವಾಗಿ 8 ವಿಧದ ಸಾಲ ಸೌಲಭ್ಯಗಳು ಲಭ್ಯ ಇವೆ. ಆ ಬಿಸ್ನೆಸ್ ಲೋನ್‌ಗಳ ಸಂಪೂರ್ಣ ಮಾಹಿತಿ ಇಲ್ಲಿದೆ.

Eight Different Types of Business Loans in India
ಸ್ವಂತ Business ಮಾಡಲು ಬಯಸುತ್ತಿದ್ದೀರಾ?; ನಮಗೆ ಸೂಕ್ತವಾದ Loans ಬಗ್ಗೆ ತಿಳಿಯಿರಿ

ಇಂದಿನ ದಿನಗಳಲ್ಲಿ ಅನೇಕರು ಉದ್ಯೋಗ ಪಡೆಯುವುದಕ್ಕಿಂತ ಹೆಚ್ಚಾಗಿ ತಾವೇ ಒಂದು ಸ್ವಂತ ಉದ್ಯಮ ಪ್ರಾರಂಭಿಸಬೇಕೆಂದು ಬಯಸುತ್ತಾರೆ. ಆದರೆ, ಯಾವುದೇ ವ್ಯಾಪಾರ ಮಾಡುವುದು, ಉದ್ಯಮ ಆರಂಭಿಸುವುದು ಅಷ್ಟು ಸುಲಭವಲ್ಲ. ಹಲವು ತೊಂದರೆಗಳನ್ನು ಎದುರಿಸಬೇಕಾಗುತ್ತದೆ. ಕೆಲವೊಮ್ಮೆ ಏಳುಬೀಳುಗಳನ್ನು ಕಾಣಬೇಕಾಗುತ್ತದೆ. ಆದ್ದರಿಂದಲೇ ಯಾವುದೇ ಉದ್ಯಮ ಆರಂಭಿಸಬೇಕಾದರೆ, ಹಲವು ಬಾರಿ ಆಲೋಚಿಸಬೇಕು. ಪ್ರತಿಯೊಂದು ವಿಷಯವನ್ನೂ ಮುಂಚಿತವಾಗಿಯೇ ಯೋಚಿಸಬೇಕಾಗುತ್ತದೆ. ಸಾಮಾನ್ಯವಾಗಿ ಉದ್ಯಮ ಪ್ರಾರಂಭಿಸಲು ಸಾಕಷ್ಟು ಹಣದ ಅಗತ್ಯವಿರುತ್ತದೆ. ಹೀಗಾಗಿ ಮೊದಲಿಗೆ ಉದ್ಭವಿಸುವ ಪ್ರಶ್ನೆ ಎಂದರೆ, ಇದಕ್ಕೆ ಬಂಡವಾಳ ಎಲ್ಲಿಂದ ತರುವುದು?, ಅದಕ್ಕಾಗಿಯೇ ಅನೇಕ ಜನರು ಬ್ಯಾಂಕ್ ಸಾಲಕ್ಕಾಗಿ ಪ್ರಯತ್ನಿಸುತ್ತಾರೆ. ನಮ್ಮ ದೇಶದಲ್ಲಿ ಉದ್ಯಮ, ವ್ಯಾಪಾರ ಆರಂಭಿಸಲು ಮುಖ್ಯವಾಗಿ 8 ರೀತಿಯ ಸಾಲಗಳನ್ನು ನೀಡಲಾಗುತ್ತದೆ.

1) ವರ್ಕಿಂಗ್​ ಕ್ಯಾಪಿಟಲ್​ ಲೋನ್​: ವರ್ಕಿಂಗ್​ ಕ್ಯಾಪಿಟಲ್​ ಲೋನ್​ ಎಂದರೆ ಕಾರ್ಯನಿತರ ಬಂಡವಾಳ. ವ್ಯಕ್ತಿಗಳು, ಉದ್ಯಮಿಗಳು, ಸ್ಟಾರ್ಟ್‌ಅಪ್‌ಗಳು, ಎಂಎಸ್‌ಎಂಇಗಳು ತಮ್ಮ ದಿನನಿತ್ಯದ ವ್ಯಾಪಾರದ ಅಗತ್ಯಗಳನ್ನು ಪೂರೈಸಲು ಈ ವರ್ಕಿಂಗ್​ ಬಂಡವಾಳವನ್ನು ಎರವಲು ಪಡೆಯುತ್ತಾರೆ. ವ್ಯಾಪಾರ ವಿಸ್ತರಣೆ, ವ್ಯಾಪಾರದ ಹಣದ ಹರಿವನ್ನು ಸುಧಾರಿಸಲು, ಕಚ್ಚಾ ಸಾಮಗ್ರಿಗಳ ಖರೀದಿ, ಹೆಚ್ಚುವರಿ ದಾಸ್ತಾನು/ಸ್ಟಾಕ್‌ಗಳನ್ನು ಸ್ಥಾಪಿಸಲು, ಸಂಬಳ ಪಾವತಿಸಲು, ಸಿಬ್ಬಂದಿಯನ್ನು ನೇಮಿಸಿಕೊಳ್ಳಲು ಇತ್ಯಾದಿಗಳಿಗೆ ಇದನ್ನು ಬಳಸಲಾಗುತ್ತದೆ. ಈ ವರ್ಕಿಂಗ್ ಕ್ಯಾಪಿಟಲ್ ಸಾಲವು ಮುಖ್ಯವಾಗಿ ಅಲ್ಪಾವಧಿಯ ಸಾಲವಾಗಿದೆ. ದೇಶದಲ್ಲಿ ಗರಿಷ್ಠ 40 ಲಕ್ಷ ರೂಪಾಯಿವರೆಗೆ ಈ ಸಾಲ ನೀಡಲಾಗುತ್ತದೆ. ಇದನ್ನು 12 ತಿಂಗಳಲ್ಲಿ ಮರುಪಾವತಿಸಬೇಕು. ಅಗತ್ಯವಿದ್ದರೆ ಈ ಅವಧಿಯನ್ನು ವಿಸ್ತರಿಸಬಹುದು. ದೀರ್ಘಾವಧಿಯ ಸಾಲಗಳಿಗೆ ಹೋಲಿಸಿದರೆ ಬ್ಯಾಂಕ್‌ಗಳು, ಎನ್‌ಬಿಎಫ್‌ಸಿಗಳು ಈ ವರ್ಕಿಂಗ್​ ಕ್ಯಾಪಿಟಲ್ ಲೋನ್‌ಗಳ ಮೇಲೆ ಹೆಚ್ಚಿನ ಬಡ್ಡಿ ದರಗಳನ್ನು ವಿಧಿಸುತ್ತವೆ. ಆದರೆ, ಈ ಬಂಡವಾಳವನ್ನು ಬ್ಯಾಂಕ್ ನಿರ್ದಿಷ್ಟಪಡಿಸಿದ ವಿಷಯಗಳಿಗೆ ಮಾತ್ರ ಖರ್ಚು ಮಾಡಬೇಕಾಗುತ್ತದೆ.

2) ಟರ್ಮ್​​ ಲೋನ್​​: ಟರ್ಮ್ ಲೋನ್ ಎಂದರೆ ನಿಗದಿತ ಅವಧಿಯಲ್ಲಿ ಮರುಪಾವತಿ ಮಾಡಬೇಕಾದ ಸಾಲ. ಈ ಸಾಲವನ್ನು ಅಲ್ಪಾವಧಿ, ಮಧ್ಯಂತರ ಮತ್ತು ದೀರ್ಘಾವಧಿ ಸಾಲಗಳನ್ನಾಗಿ ವರ್ಗೀಕರಿಸಲಾಗಿದೆ. ಇದರ ಮರುಪಾವತಿ ಅವಧಿಯು 12 ತಿಂಗಳಿಂದ 5 ವರ್ಷಗಳವರೆಗೆ ಇರುತ್ತದೆ. ಅಲ್ಪಾವಧಿಯ ಸಾಲಗಳು 12 ತಿಂಗಳಿಗಿಂತ ಕಡಿಮೆ ಅವಧಿಯನ್ನು ಹೊಂದಿರುತ್ತವೆ. 5 ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ಅವಧಿಯ ಸಾಲಗಳನ್ನು ದೀರ್ಘಾವಧಿ ಸಾಲಗಳು ಎಂದು ಕರೆಯಲಾಗುತ್ತದೆ. ಮುಕ್ತ ವ್ಯಾಪಾರ ಸಾಲವಾಗಿ 2 ಕೋಟಿ ರೂಪಾಯಿವರೆಗೆ ನೀಡಲಾಗುತ್ತದೆ. ವ್ಯಾಪಾರದ ಅಗತ್ಯಗಳಿಗೆ ಅನುಗುಣವಾಗಿ ಈ ಸಾಲದ ಮೊತ್ತವನ್ನು ಹೆಚ್ಚಿಸಬಹುದು. ಇಲ್ಲಿ ಕೂಡ ಸಾಲದಾತರೇ ಸಾಲ ಮರುಪಾವತಿ ಅವಧಿಯನ್ನು ಅಂತಿಮಗೊಳಿಸುತ್ತಾರೆ.

3) ಲೆಟರ್ ಆಫ್ ಕ್ರೆಡಿಟ್: ಲೆಟರ್ ಆಫ್ ಕ್ರೆಡಿಟ್ ಎನ್ನುವುದು ಮುಖ್ಯವಾಗಿ ಅಂತಾರಾಷ್ಟ್ರೀಯ ವ್ಯಾಪಾರ ಮತ್ತು ವಾಣಿಜ್ಯದಲ್ಲಿ ಬಳಸಲಾಗುವ ಒಂದು ರೀತಿಯ ಸಾಲ ಸೌಲಭ್ಯವಾಗಿದೆ. ಇದನ್ನು ಸಾಲದ ಪತ್ರ ಎಂದು ಕರೆಯಬಹುದು. ಈ ಸಾಲವನ್ನು ಉದ್ಯಮಿಗಳು ಆಮದು ಮತ್ತು ರಫ್ತು ವ್ಯವಹಾರಕ್ಕಾಗಿ ಬಳಸುತ್ತಾರೆ. ವಿದೇಶಿ ದೇಶಗಳೊಂದಿಗೆ ವ್ಯಾಪಾರ ಮಾಡುವ ಕಂಪನಿಗಳು ಸಾಮಾನ್ಯವಾಗಿ ಅಪರಿಚಿತ ಕಂಪನಿಗಳು ಅಥವಾ ಪೂರೈಕೆದಾರರೊಂದಿಗೆ ವ್ಯವಹರಿಸುತ್ತವೆ. ಆದ್ದರಿಂದ ಯಾವುದೇ ವಹಿವಾಟು ನಡೆಸುವ ಮೊದಲು ಅವರಿಗೆ ಪಾವತಿ ಭರವಸೆ ಅಗತ್ಯವಿರುತ್ತದೆ. ಇದಕ್ಕಾಗಿ, ಬ್ಯಾಂಕ್​​ಗಳು ಅಥವಾ ಸಾಲ ಸಂಸ್ಥೆಗಳು ಸಾಲದ ಪತ್ರವನ್ನು ನೀಡುತ್ತವೆ.

4) ಬಿಲ್ ರಿಯಾಯಿತಿ: ಬಿಲ್ ಅಥವಾ ಇನ್‌ವಾಯ್ಸ್ ರಿಯಾಯಿತಿಯು ಒಂದು ಅನನ್ಯವಾದ ಸಾಲ ಸೌಕರ್ಯವಾಗಿದೆ. ಉದಾಹರಣೆಗೆ ನೀವು ಬ್ಯಾಂಕ್‌ನಿಂದ 45 ದಿನಗಳವರೆಗೆ 10 ಲಕ್ಷ ರೂ. ಸಾಲವನ್ನು ಪಡೆಯಲು ಬಯಸುತ್ತೀರಿ. ಆಗ ಬ್ಯಾಂಕ್ ಮುಂಗಡವಾಗಿ 50,000 ಕಡಿತಗೊಳಿಸಿ 9,50,000 ರೂ. ನಿಮಗೆ ನೀಡುತ್ತದೆ. ಅಂದರೆ ನಿಮಗೆ ಬರಬೇಕಾದ ಬಡ್ಡಿಯನ್ನು ಮುಂಗಡವಾಗಿ ಕಡಿತಗೊಳಿಸಲಾಗುತ್ತದೆ. 45 ದಿನಗಳ ಅವಧಿ ಮುಗಿದ ನಂತರ ನೀವು 10 ಲಕ್ಷ ರೂ.ಗಳನ್ನು ಬ್ಯಾಂಕ್‌ಗೆ ಪಾವತಿಸಬೇಕಾಗುತ್ತದೆ.

5) ಓವರ್‌ಡ್ರಾಫ್ಟ್ ಸೌಲಭ್ಯ: ಓವರ್‌ಡ್ರಾಫ್ಟ್ ಕೂಡ ಒಂದು ರೀತಿಯ ಸಾಲದ ಮಾದರಿ. ಬ್ಯಾಂಕ್​ಗಳು ತಮ್ಮ ಗ್ರಾಹಕರಿಗೆ ಓವರ್‌ಡ್ರಾಫ್ಟ್ ಸೌಲಭ್ಯ ಒದಗಿಸುತ್ತವೆ. ಇದನ್ನು ಬಳಸಿಕೊಂಡು ತಮ್ಮ ಖಾತೆಯಲ್ಲಿ ಬ್ಯಾಲೆನ್ಸ್ ಇಲ್ಲದಿದ್ದರೂ ಮಿತಿಯವರೆಗೂ ಹಣ ತೆಗೆಯಬಹುದು. ಈ ಓವರ್‌ಡ್ರಾಫ್ಟ್‌ಗೆ ಪ್ರತಿದಿನ ಬಡ್ಡಿ ವಿಧಿಸಲಾಗುತ್ತದೆ. ಸಾಮಾನ್ಯವಾಗಿ ಈ ಓವರ್‌ಡ್ರಾಫ್ಟ್‌ನ ಮೊತ್ತವನ್ನು ಬ್ಯಾಂಕ್‌ನೊಂದಿಗಿನ ಗ್ರಾಹಕರ ಸಂಬಂಧ, ಕ್ರೆಡಿಟ್ ಇತಿಹಾಸ, ಹಣದ ವಹಿವಾಟು, ಮರುಪಾವತಿ ಸಾಮರ್ಥ್ಯದ ಆಧಾರದ ಮೇಲೆ ನಿರ್ಧರಿಸಲಾಗುತ್ತದೆ. ಓವರ್‌ಡ್ರಾಫ್ಟ್ ಮಿತಿಯನ್ನು ಪ್ರತಿ ವರ್ಷವೂ ಪರಿಷ್ಕರಿಸಲಾಗುತ್ತದೆ. ಬಡ್ಡಿಯನ್ನು ಸಮಯಕ್ಕೆ ಸರಿಯಾಗಿ ಪಾವತಿಸುವವರೆಗೆ ನೀವು ಓವರ್‌ಡ್ರಾಫ್ಟ್ ಹಣವನ್ನು ನಿಮಗೆ ಇಷ್ಟವಾದಂತೆ ಬಳಸಬಹುದು.

6) ಯಂತ್ರೋಪಕರಣಗಳ ಸಾಲ: ಬ್ಯಾಂಕ್​ಗಳು ಅಥವಾ ಸಾಲ ನೀಡುವ ಸಂಸ್ಥೆಗಳು ಹೊಸ ಉಪಕರಣಗಳು/ಯಂತ್ರೋಪಕರಣಗಳನ್ನು ಖರೀದಿಸಲು ಸಾಲಗಾರರಿಗೆ ಸಲಕರಣೆ ಹಣಕಾಸು ಅಥವಾ ಯಂತ್ರೋಪಕರಣಗಳ ಸಾಲವನ್ನು ಒದಗಿಸುತ್ತವೆ. ಸಲಕರಣೆ ಹಣಕಾಸು ಮುಖ್ಯವಾಗಿ ದೊಡ್ಡ ಕಂಪನಿಗಳು ಮತ್ತು ಉತ್ಪಾದನಾ ಕಂಪನಿಗಳಿಂದ ಬಳಸಲ್ಪಡುತ್ತದೆ. ಇದು ತೆರಿಗೆ ಪ್ರಯೋಜನಗಳನ್ನೂ ಸಹ ನೀಡುತ್ತದೆ. ಆದಾಗ್ಯೂ, ಬಡ್ಡಿದರಗಳು, ಸಾಲದ ಮೊತ್ತ ಮತ್ತು ಮರುಪಾವತಿ ಅವಧಿಯು ಸಾಲದಾತರು ಮತ್ತು ಸಾಲಗಾರರ ಮೇಲೆ ಅವಲಂಬಿಸಿ ಬದಲಾಗುತ್ತದೆ.

7) ಸರ್ಕಾರದ ಯೋಜನೆಗಳಡಿ ಸಾಲಗಳು: ವ್ಯಕ್ತಿ, ಎಂಎಸ್​ಎಂಇಗಳು, ಮಹಿಳಾ ಉದ್ಯಮಿಗಳಿಗಾಗಿ ವ್ಯಾಪಾರ, ಸೇವೆ ಮತ್ತು ಉತ್ಪಾದನಾ ಕ್ಷೇತ್ರಗಳಲ್ಲಿ ತೊಡಗಿರುವ ಕಂಪನಿಗಳಿಗೆ ಭಾರತ ಸರ್ಕಾರದಿಂದ ವಿವಿಧ ಸಾಲ ಯೋಜನೆಗಳನ್ನು ಪರಿಚಯಿಸಲಾಗಿದೆ. ಸಾರ್ವಜನಿಕ ಮತ್ತು ಖಾಸಗಿ ವಲಯದ ಬ್ಯಾಂಕ್‌ಗಳು, ಎನ್‌ಬಿಎಫ್‌ಸಿಗಳು, ಪ್ರಾದೇಶಿಕ ಗ್ರಾಮೀಣ ಬ್ಯಾಂಕ್‌ಗಳು (ಆರ್‌ಆರ್‌ಬಿ), ಮೈಕ್ರೋ ಫೈನಾನ್ಸ್ ಸಂಸ್ಥೆಗಳು (ಎಂಎಫ್‌ಐ), ಸಣ್ಣ ಹಣಕಾಸು ಬ್ಯಾಂಕ್‌ಗಳು (ಎಸ್‌ಎಫ್‌ಬಿ) ಸರ್ಕಾರಿ ಯೋಜನೆಗಳ ಅಡಿಯಲ್ಲಿ ಸಾಲವನ್ನು ನೀಡುತ್ತವೆ. ಪ್ರಸ್ತುತ ಕೇಂದ್ರ ಸರ್ಕಾರವು ನೀಡುವ ಯೋಜನೆಗಳೆಂದರೆ, ಪ್ರಧಾನಮಂತ್ರಿ ಮುದ್ರಾ ಯೋಜನೆ (PMMY), ಪ್ರಧಾನಮಂತ್ರಿ ಉದ್ಯೋಗ ಸೃಷ್ಟಿ ಕಾರ್ಯಕ್ರಮ (PMEGP), ಮೈಕ್ರೋ ಮತ್ತು ಸಣ್ಣ ಉದ್ಯಮಗಳಿಗೆ ಕ್ರೆಡಿಟ್ ಗ್ಯಾರಂಟಿ ಫಂಡ್ ಟ್ರಸ್ಟ್ (CGTMSE), ಸ್ಟ್ಯಾಂಡಪ್ ಇಂಡಿಯಾ, ಸ್ಟಾರ್ಟ್ಅಪ್ ಇಂಡಿಯಾ, 59 ನಿಮಿಷದಲ್ಲಿ ಪಿಎಸ್​ಬಿ ಸಾಲಗಳು, ಪ್ರಧಾನಮಂತ್ರಿ ರೋಜ್​ಗಾರ್​ ಯೋಜನಾ (PMRY) ಇತ್ಯಾದಿ.

8) ಪಾಯಿಂಟ್ ಆಫ್ ಸೇಲ್ (ಪಿಒಎಸ್) ಸಾಲಗಳು: ಚಿಲ್ಲರೆ ಅಂಗಡಿಗಳು, ಕಿರಾಣಿ ಅಂಗಡಿಗಳು, ಸೂಪರ್‌ಮಾರ್ಕೆಟ್‌ಗಳು, ಶಾಪಿಂಗ್ ಮಾಲ್‌ಗಳಿಗೆ ದಿನನಿತ್ಯದ ಅಗತ್ಯಗಳಿಗಾಗಿ ಅಥವಾ ಅಲ್ಪಾವಧಿಯ ಅಗತ್ಯಗಳಿಗಾಗಿ ಸಾಲದ ಅಗತ್ಯ ಇರುತ್ತದೆ. ಅಂತಹವರ ಅಗತ್ಯಗಳನ್ನು ಪೂರೈಸಲು ಬ್ಯಾಂಕ್‌ಗಳು ಪಾಯಿಂಟ್ ಆಫ್ ಸೇಲ್ ಸಾಲಗಳನ್ನು ನೀಡುತ್ತವೆ. ಆದಾಗ್ಯೂ, ಇತರ ಸಾಲಗಳಿಗೆ ಹೋಲಿಸಿದರೆ, ಇವುಗಳ ಮೇಲಿನ ಬಡ್ಡಿ ದರಗಳು ಸ್ವಲ್ಪ ಹೆಚ್ಚು. ಸಾಮಾನ್ಯವಾಗಿ ಚಿಲ್ಲರೆ ಅಂಗಡಿಗಳು, ಕಿರಾಣಿ ಅಂಗಡಿಗಳು, ಸೂಪರ್‌ಮಾರ್ಕೆಟ್‌ಗಳು, ಶಾಪಿಂಗ್ ಮಾಲ್‌ಗಳಲ್ಲಿ ಸ್ಥಾಪಿಸಲಾದ ಡೆಬಿಟ್/ಕ್ರೆಡಿಟ್ ವಹಿವಾಟುಗಳಿಗೆ ಪಾಯಿಂಟ್ ಆಫ್ ಸೇಲ್ಸ್ ಮಷಿನ್​ಗಳಿಗೆ ಲಿಂಕ್ ಮಾಡಲಾಗುತ್ತದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.