ETV Bharat / international

'ಭಾರತೀಯ ಮೂಲದವರ ನೇಮಕ ಬೇಡ'.. ಇನ್ಫೋಸಿಸ್ ವಿರುದ್ಧ ಅಮೆರಿಕದ ನ್ಯಾಯಾಲಯದಲ್ಲಿ ಮೊಕದ್ದಮೆ

author img

By

Published : Oct 9, 2022, 8:41 PM IST

ನೇಮಕಾತಿಯಲ್ಲಿ ತಾರತಮ್ಯದ ನೀತಿಯ ನಿರ್ದೇಶನ ಪ್ರಶ್ನಿಸಿದ ಕಾರಣಕ್ಕೆ ಕೆಲಸ ಕಳೆದುಕೊಂಡ ಮಾಜಿ ಹೆಚ್​ಆರ್​​, ಅಮೆರಿಕದ ನ್ಯಾಯಾಲಯದಲ್ಲಿ ಇನ್ಫೋಸಿಸ್ ವಿರುದ್ಧ ಮೊಕದ್ದಮೆ ಹೂಡಿದ್ದಾರೆ.

lawsuit-against-infosys-over-direction-against-hiring-indian-origin-candidates-in-us
'ಭಾರತೀಯ ಮೂಲದವರ ನೇಮಕ ಬೇಡ'.. ಇನ್ಫೋಸಿಸ್ ವಿರುದ್ಧ ಅಮೆರಿಕದ ನ್ಯಾಯಾಲಯದಲ್ಲಿ ಮೊಕದ್ದಮೆ

ಹೈದರಾಬಾದ್ (ತೆಲಂಗಾಣ): ಟೆಕ್ ದೈತ್ಯ ಇನ್ಫೋಸಿಸ್ ವಿರುದ್ಧ ಅಮೆರಿಕದ ನ್ಯಾಯಾಲಯದಲ್ಲಿ ಮೊಕದ್ದಮೆ ದಾಖಲಾಗಿದ್ದು, ಇದರ ವಿಚಾರಣೆ ನಡೆಯುತ್ತಿದೆ. ಕಂಪನಿಯ ಟ್ಯಾಲೆಂಟ್ ಅಕ್ವಿಸಿಷನ್‌ (ಹೆಚ್​ಆರ್​)ನ ಮಾಜಿ ಉಪಾಧ್ಯಕ್ಷೆ ಜಿಲ್ ಪ್ರೀಜೀನ್ ಅವರು ನ್ಯೂಯಾರ್ಕ್‌ನ ಯುನೈಟೆಡ್ ಸ್ಟೇಟ್ಸ್ ಜಿಲ್ಲಾ ನ್ಯಾಯಾಲಯದಲ್ಲಿ ಈ ಮೊಕದ್ದಮೆ ಹೂಡಿದ್ದಾರೆ.

ಭಾರತೀಯ ಮೂಲದವರು, ಮನೆಯಲ್ಲಿ ಚಿಕ್ಕ ಮಕ್ಕಳಿರುವ ಮಹಿಳೆಯರು ಹಾಗೂ 50 ವರ್ಷಕ್ಕಿಂತ ಮೇಲ್ಪಟ್ಟವರನ್ನು ನೇಮಿಸಿಕೊಳ್ಳದಂತೆ ಇನ್ಫೋಸಿಸ್ ಸಂಸ್ಥೆ ತಮಗೆ ಸೂಚಿಸಿತ್ತು ಎಂಬ ಆರೋಪದ ಮೇಲೆ ಜಿಲ್ ಪ್ರೀಜೀನ್ 2021ರ ಸೆಪ್ಟೆಂಬರ್​ನಲ್ಲಿ ದೂರು ಸಲ್ಲಿಸಿದ್ದಾರೆ. ಇತ್ತೀಚೆಗೆ ಈ ಅರ್ಜಿಯನ್ನು ವಜಾಗೊಳಿಸುವಂತೆ ಇನ್ಫೋಸಿಸ್ ಮಾಡಿದ ಮನವಿಯನ್ನು ನ್ಯಾಯಾಲಯವು ತಿರಸ್ಕರಿಸಿದೆ.

ಇನ್ಫೋಸಿಸ್ ಕಂಪನಿಯ ಮಾಜಿ ಹಿರಿಯ ಉಪಾಧ್ಯಕ್ಷ, ಸಲಹಾ ಮುಖ್ಯಸ್ಥ ಮಾರ್ಕ್ ಲಿವಿಂಗ್‌ಸ್ಟೋನ್ ಹಾಗೂ ಇನ್ಫೋಸಿಸ್‌ನ ಮಾಜಿ ಬಿಸಿನೆಸ್ ಪಾಲುದಾರರಾದ ಡಾನ್ ಆಲ್‌ಬ್ರೈಟ್ ಮತ್ತು ಜೆರ್ರಿ ಕರ್ಟ್ಜ್ ಅವರನ್ನು ಗುರಿಯಾಗಿಸಿ ಈ ಮೊಕದ್ದಮೆ ದಾಖಲಾಗಿದೆ. ನೇಮಕಾತಿ ಕುರಿತಾದ ಪ್ರಶ್ನಾರ್ಹ ನಿರ್ದೇಶನಗಳನ್ನು ಅನುಸರಿಸಲು ನಿರಾಕರಿಸಿದಾಗ ತಮ್ಮ ಮೇಲೆ ಹಗೆತನ ಸಾಧಿಸಲಾಯಿತು ಎಂದು ಜಿಲ್ ಪ್ರೀಜೀನ್ ದೂರಿದ್ದಾರೆ.

ವಯಸ್ಸು, ಲಿಂಗ ಮತ್ತು ಪಾಲನೆ ಮಾಡುವವರ ಸ್ಥಿತಿಯ ಆಧಾರದ ಮೇಲಿನ ತಾರತಮ್ಯದ ಅತಿರೇಕದ ಸಂಸ್ಕೃತಿಯನ್ನು ಕಂಡು ಆಘಾತಕ್ಕೆ ಒಳಗಾಗಿದ್ದೆ ಎಂದು ಪ್ರೀಜೀನ್ ಹೇಳಿರುವುದಾಗಿ ವರದಿಯಾಗಿದೆ. ಮೊದಲ ಎರಡು ತಿಂಗಳಲ್ಲಿ ಈ ತಾರತಮ್ಯದ ಸಂಸ್ಕೃತಿಯನ್ನು ಬದಲಾಯಿಸಲು ಅವರು ಪ್ರಯತ್ನಿಸಿದ್ದರು. ಆದರೆ, ಇನ್ಫೋಸಿಸ್​​ನ ಪಾಲುದಾರರಿಂದ ಡಾನ್ ಆಲ್‌ಬ್ರೈಟ್ ಮತ್ತು ಜೆರ್ರಿ ಕರ್ಟ್ಜ್ ಪ್ರತಿರೋಧವನ್ನು ಎದುರಿಸಿದ್ದರು. ಕಾನೂನು ತೊಡಕುಗಳಿಂದ ಪಾರಾಗಲು ತಮ್ಮ ಅಧಿಕಾರವನ್ನು ತಪ್ಪಿಸಲು ಪ್ರಯತ್ನಿಸಿದ್ದರು. ಅಲ್ಲದೇ, ಇದನ್ನು ಪ್ರಶ್ನೆ ಮಾಡಿದ ಕಾರಣಕ್ಕೆ ಜಿಲ್ ಪ್ರೀಜೀನ್ ಕೆಲಸ ಕಳೆದುಕೊಳ್ಳಬೇಕಾಗಿದೆ ಎಂದು ವರದಿಗಳಲ್ಲಿ ಉಲ್ಲೇಖಿಸಲಾಗಿದೆ.

ಜಿಲ್ ಪ್ರೆಜೀನ್ ಹೂಡಿದ ಮೊಕದ್ದಮೆಯನ್ನು ಕೈಗೆತ್ತಿಕೊಂಡಿರುವ ನ್ಯಾಯಾಲಯವು ಸೆಪ್ಪೆಂಬರ್ 30ರ ಆದೇಶದ ಅನ್ವಯ 21 ದಿನದೊಳಗೆ ಪ್ರತಿಕ್ರಿಯಿಸಬೇಕೆಂದು ಕಂಪನಿಗೆ ಆದೇಶ ನೀಡಿದೆ. ಗಮನಾರ್ಹ ಅಂಶ ಎಂದರೆ ಈ ತಾರತಮ್ಯದ ನೀತಿಯ ಆರೋಪವು ಇನ್ಫೋಸಿಸ್ ವಿರುದ್ಧ ಈ ಹಿಂದೆ ಕೂಡ ಕೇಳಿ ಬಂದಿತ್ತು. 2021ರಲ್ಲಿ ಇನ್ಫೋಸಿಸ್‌ನ ನಾಲ್ವರು ಮಹಿಳಾ ಉದ್ಯೋಗಿಗಳು ಸಮಾನ ಉದ್ಯೋಗ ಅವಕಾಶ ಆಯೋಗದಲ್ಲಿ ಮನವಿ ಸಲ್ಲಿಸಿದ್ದರು. ಕಂಪನಿಯು ಭಾರತೀಯ ಮತ್ತು ಪುರುಷ ಅಭ್ಯರ್ಥಿಗಳಿಗೆ ಆದ್ಯತೆ ಕೊಟ್ಟಿದೆ ಎಂದು ಆರೋಪಿಸಿದ್ದರು.

ಇದನ್ನೂ ಓದಿ: ಸರ್ಕಾರದ ಎಚ್ಚರಿಕೆಗೆ ಬಗ್ಗಿದ ಆ್ಯಪ್ ಆಧಾರಿತ ಟ್ಯಾಕ್ಸಿ ಸೇವಾ ಸಂಸ್ಥೆಗಳು: ಸೇವಾ ದರದಲ್ಲಿ ಇಳಿಕೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.