ಕರ್ನಾಟಕ

karnataka

ಘಾಟಿ ಸುಬ್ರಹ್ಮಣ್ಯ ದೇಗುಲಕ್ಕೆ ಕುಟುಂಬಸಮೇತ ಭೇಟಿ ನೀಡಿದ ಸಿಎಂ

By

Published : Mar 31, 2023, 1:36 PM IST

ಮುಖ್ಯಮಂತ್ರಿ ಬಸವರಾಜ​ ಬೊಮ್ಮಾಯಿ ಅವರಿಂದು ಕುಟುಂಬಸಮೇತರಾಗಿ ದೊಡ್ಡಬಳ್ಳಾಪುರದ ಘಾಟಿ ಸುಬ್ರಹ್ಮಣ್ಯ ಕ್ಷೇತ್ರಕ್ಕೆ ಭೇಟಿ ನೀಡಿದರು.

bommai
ಬೊಮ್ಮಾಯಿ

ಘಾಟಿ ಸುಬ್ರಹ್ಮಣ್ಯ ಕ್ಷೇತ್ರಕ್ಕೆ ಸಿಎಂ ಭೇಟಿ

ದೊಡ್ಡಬಳ್ಳಾಪುರ (ಬೆಂಗಳೂರು ಗ್ರಾ): ಕರ್ನಾಟಕ ರಾಜ್ಯ ವಿಧಾನಸಭೆ ಚುನಾವಣೆಗೆ ದಿನಾಂಕ ಘೋಷಣೆಯಾಗಿರುವ ಬೆನ್ನಲ್ಲೇ ಇಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ‌ ಅವರು ಕುಟುಂಬದೊಂದಿಗೆ ದೊಡ್ಡಬಳ್ಳಾಪುರದ ಘಾಟಿ ಸುಬ್ರಹ್ಮಣ್ಯ ಕ್ಷೇತ್ರಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದರು. ಪತ್ನಿ ಚೆನ್ನಮ್ಮ, ಪುತ್ರ ಭರತ್ ಜೊತೆಗಿದ್ದರು.

ಮಾಧ್ಯಮಗಳೊಂದಿಗೆ ಮಾತನಾಡಿದ ಸಿಎಂ, ಕಳೆದ ಬಾರಿಯೇ ದೇವಾಲಯಕ್ಕೆ ಬರಬೇಕಿತ್ತು. ಆದರೆ ಕಾರ್ಯದ ಒತ್ತಡದ ಕಾರಣ ಸಾಧ್ಯವಾಗಿರಲಿಲ್ಲ ಎಂದರು. ಚುನಾವಣೆ ಬಗ್ಗೆ ಮಾತನಾಡುತ್ತಾ, ವರುಣಾದಲ್ಲಿ ನಾವು ಖಂಡಿತವಾಗಿ ಪ್ರಬಲ ಪೈಪೋಟಿ ನೀಡುತ್ತೇವೆ. ವಿಜಯೇಂದ್ರ ಅವರು ಸ್ಪರ್ಧೆ ಮಾಡಬೇಕು ಎಂಬ ಜನರ ಅಭಿಪ್ರಾಯ ಕುರಿತು ಅಂತಿಮವಾಗಿ ಯಡಿಯೂರಪ್ಪ ತೀರ್ಮಾನ ತೆಗೆದುಕೊಳ್ಳಲಿದ್ದಾರೆ ಎಂದು ತಿಳಿಸಿದರು.

ಈ ಬಾರಿ ನಾವು ಸಂಪೂರ್ಣ ಬೆಂಬಲದೊಂದಿಗೆ ಅಧಿಕಾರ ಹಿಡಿಯುತ್ತೇವೆ. ಸಿದ್ದರಾಮಯ್ಯ ಹಗಲು ಕನಸು ಕಾಣುತ್ತಿದ್ದಾರೆ ಎಂದರು. ಮೀಸಲಾತಿ ಚುನಾವಣಾ ಗಿಮಿಕ್‌ ಎಂಬ ವಿರೋಧ ಪಕ್ಷದ ಆರೋಪಕ್ಕೆ ಪ್ರತಿಕ್ರಿಯಿಸಿ, ಅವರ ಸರಕಾರದಲ್ಲಿ ಏಕೆ ಮಾಡಲಿಲ್ಲ ಎಂದು ಕೇಳಿದರು. ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಕುರಿತ ಪ್ರಶ್ನೆಗೆ ಉತ್ತರಿಸಿ, ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆ ಪ್ರಾರಂಭವಾಗಿದೆ. ಇನ್ನೊಂದು ವಾರದೊಳಗೆ ಬರುತ್ತದೆ ಎಂದರು.

ಸಿದ್ದರಾಮಯ್ಯ 2013 ರಲ್ಲೇ ಇದು ಕೊನೆ ಚುನಾವಣೆ ಎಂದಿದ್ದರು. 2018 ರಲ್ಲಿ ಕೂಡ ಮುಖ್ಯಮಂತ್ರಿ ಕನಸು ಕಂಡರು. ಈಗ ಮತ್ತೆ ಹಗಲು ಕನಸು ಕಾಣುತ್ತಿದ್ದಾರೆ. ಒಬ್ಬ ವ್ಯಕ್ತಿ ಮುಖ್ಯಮಂತ್ರಿಯಾಗುವುದು ಮುಖ್ಯವಲ್ಲ. ಆ ವ್ಯಕ್ತಿ ಮುಖ್ಯಮಂತ್ರಿಯಾಗಿದ್ದಾಗ ಏನು ಮಾಡಿದ್ದರು, ಏನು ಮಾಡಬಲ್ಲರು ಎಂಬುದನ್ನು ಜನತೆ ತೀರ್ಮಾನ ಮಾಡುತ್ತಾರೆ. ಸಿದ್ದರಾಮಯ್ಯನವರನ್ನು 2018 ರಲ್ಲಿ ಜನರು ತಿರಸ್ಕಾರ ಮಾಡಿದ್ದಾರೆ. ಈ ಬಾರಿ ಕೂಡ ತಿರಸ್ಕಾರ ಮಾಡುತ್ತಾರೆ ಎಂದು ಸಿಎಂ ಹೇಳಿದರು.

ಇದನ್ನೂ ಓದಿ:ಬಂಡೀಪುರಕ್ಕೆ ಪ್ರಧಾನಿ ಮೋದಿ ಭೇಟಿ ಸಾಧ್ಯತೆ: ಅರಣ್ಯ ಇಲಾಖೆಯಿಂದ ಸಕಲ ತಯಾರಿ

ABOUT THE AUTHOR

...view details