ETV Bharat / state

ರಾಜ್ಯ ಸರ್ಕಾರದ ಗ್ಯಾರಂಟಿ ಬಗ್ಗೆ ಯಾರೂ ತಲೆಕೆಡಿಸಿಕೊಂಡಿಲ್ಲ : ಬಿ ಎಸ್ ಯಡಿಯೂರಪ್ಪ - B S Yediyurappa

author img

By ETV Bharat Karnataka Team

Published : May 5, 2024, 4:45 PM IST

ಕಾಂಗ್ರೆಸ್​ ಸರ್ಕಾರದ ಗ್ಯಾರಂಟಿ ಯೋಜನೆಯ ಕುರಿತು ಬಿ ಎಸ್ ಯಡಿಯೂರಪ್ಪ ಅವರು ಮಾತನಾಡಿದ್ದಾರೆ.

B S YEDIYURAPPA
ಬಿ ಎಸ್ ಯಡಿಯೂರಪ್ಪ (ETV Bharat)

ಬಿ ಎಸ್ ಯಡಿಯೂರಪ್ಪ (ETV Bharat)

ಶಿವಮೊಗ್ಗ : ರಾಜ್ಯ ಸರ್ಕಾರದ ಗ್ಯಾರಂಟಿ ಬಗ್ಗೆ ಯಾರೂ ತಲೆಕೆಡಿಸಿಕೊಂಡಿಲ್ಲ. ಅದರ ಬಗ್ಗೆ ವಿಶ್ವಾಸವನ್ನು ಹೊಂದಿಲ್ಲ ಎಂದು ಬಿಜೆಪಿಯ ಕೇಂದ್ರ ಸಂಸದೀಯ ಮಂಡಳಿಯ ಸದಸ್ಯ ಬಿ. ಎಸ್ ಯಡಿಯೂರಪ್ಪ ಹೇಳಿದ್ದಾರೆ.

ಶಿವಮೊಗ್ಗದ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ನಡೆದ ಮಾಧ್ಯಮಗೋಷ್ಟಿ ಉದ್ದೇಶಿಸಿ ಮಾತನಾಡಿದ ಅವರು, ಜನರು ಮೋದಿ ಗ್ಯಾರಂಟಿ ನಂಬಿದ್ದಾರೆ. ಯಾವುದೇ ಗ್ಯಾರಂಟಿ ಚುನಾವಣೆಯಲ್ಲಿ ಲಾಭ ಆಗಲ್ಲ. ನಾನು ರಾಜ್ಯಾದ್ಯಂತ ಪ್ರವಾಸ ಮಾಡಿದ್ದೇನೆ. ನಮ್ಮ‌ ಪ್ರಚಾರ ಕಾರ್ಯಕ್ರಮದಲ್ಲಿ ಶೇ. 70 ರಷ್ಟು ಮಹಿಳೆಯರು ಬರುತ್ತಿದ್ದಾರೆ. ಇದು ನಮಗೆ ದೊಡ್ಡ ಶಕ್ತಿಯನ್ನು ಕೊಟ್ಟಿದೆ ಎಂಬುದು ನಮ್ಮ ಭಾವನೆ ಎಂದರು.

ಈಶ್ವರಪ್ಪನವರ ಸ್ಪರ್ಧೆ ಕುರಿತು ಪ್ರತಿಕ್ರಿಯಿಸಲು ನಿರಾಕರಿಸಿದ ಯಡಿಯೂರಪ್ಪ, ನಾನು ಯಾವುದೇ ಕ್ಷೇತ್ರದಲ್ಲಿ ಯಾವ ಅಭ್ಯರ್ಥಿಯ ಹೆಸರನ್ನು ಹೇಳಲ್ಲ. ಯಾರ ಬಗ್ಗೆಯೂ ನಾನು ಮಾತನಾಡಲ್ಲ ಎಂದು ಸ್ಪಷ್ಟಪಡಿಸಿದರು.

ಪ್ರಜ್ವಲ್ ರೇವಣ್ಣ ಪ್ರಕರಣ : ರೇವಣ್ಣ ಹಾಗೂ ಪ್ರಜ್ವಲ್ ರೇವಣ್ಣ ಪ್ರಕರಣದ ಕುರಿತು ಕಾನೂನು ಕ್ರಮ ತೆಗೆದುಕೊಳ್ಳುತ್ತದೆ. ಇದು ಚುನಾವಣೆ ಮೇಲೆ ಯಾವುದೇ ಪರಿಣಾಮ ಬೀರಲ್ಲ. ಬಿಜೆಪಿ- ಜೆಡಿಎಸ್ ಒಂದಾಗಿ ಚುನಾವಣೆ ಎದುರಿಸುತ್ತಿವೆ. ದೇವೇಗೌಡರ ಆರೋಗ್ಯ ಸುಧಾರಿಸಬೇಕು. ಆರೋಗ್ಯವಾಗಿ‌ ಓಡಾಟ ಮಾಡಬೇಕು. ನಮ್ಮ ಹೊಂದಾಣಿಕೆಯಲ್ಲಿ ಯಾವುದೇ ಬಿರುಕು ಉಂಟಾಗುವುದಿಲ್ಲ.‌ ನಾವು ಒಟ್ಟಾಗಿ ಚುನಾವಣೆ ಎದುರಿಸುವುದರಿಂದ 28ಕ್ಕೆ 28 ಕ್ಷೇತ್ರವನ್ನು ಗೆಲ್ಲುತ್ತೇವೆ ಎಂದು ಮಾಜಿ ಸಿಎಂ ಯಡಿಯೂರಪ್ಪ ವಿಶ್ವಾಸ ವ್ಯಕ್ತಪಡಿಸಿದರು.

ವಾಸ್ತವವಾಗಿ ಸಿದ್ದರಾಮಯ್ಯ ವಿಧಾನಸಭಾ ಚುನಾವಣಾ ಗುಂಗಿನಿಂದ ಹೊರ ಬಂದಿಲ್ಲ.‌ ಬಹುಷಃ ಈಗ 2024ರ ಲೋಕಸಭಾ ಚುನಾವಣೆ ನಡೆಯುತ್ತಿದೆ ಎಂಬುದನ್ನು ಅವರು ಮರೆತಿದ್ದಾರೆ ಎಂಬುದು ನನ್ನ ಭಾವನೆ. ಸರ್ಕಾರ ಅಭಿವೃದ್ಧಿ ಹೊಂದಿಲ್ಲ. ಬರದ ಕುರಿತು ಜನರ ಗಮನ ಸೆಳೆದು ಮತ ಗಳಿಸಬಹುದು ಎಂಬ ಭ್ರಮೆಯಲ್ಲಿದೆ. ಕಾಂಗ್ರೆಸ್ ಸುಳ್ಳಿನ ಆಧಾರದ ಮೇಲೆ ಚುನಾವಣೆ ನಡೆಸುತ್ತಿದೆ. ಅವರಿಗೆ ಅಭಿವೃದ್ಧಿಯ ಬೆಂಬಲವೂ ಸಹ ಇಲ್ಲ ಎಂದರು.

ಭಾರತ ಆರ್ಥಿಕವಾಗಿ ಬಲಿಷ್ಠವಾಗಿದೆ. ಈಗ ಬಿಜೆಪಿ 24X7 ಕೆಲಸ ಮಾಡುತ್ತಿದೆ. 2 ಕೋಟಿ‌ ಉದ್ಯೋಗದ ಬಗ್ಗೆ ಪದೇ ಪದೆ ಅಂಕಿ ಅಂಶವಿಲ್ಲದೆ, ಪ್ರಶ್ನೆ ಮಾಡುವ ಬದಲು ಮಾಹಿತಿ ಇಲ್ಲದೆ ಕಾಂಗ್ರೆಸ್​ನವರು ಮಾತನಾಡುತ್ತಿದ್ದಾರೆ. 7 ಕೋಟಿ ಹೊಸ ಉದ್ಯೋಗಗಳು ಸೇರ್ಪಡೆಯಾಗಿವೆ.‌ 370 ಕಾಯ್ದೆ ರದ್ದು‌ ಮಾಡಿದ್ರೆ, ಕಾಂಗ್ರೆಸ್​ನವರು ಅಧಿಕಾರಕ್ಕೆ ಬಂದ್ರೆ 370 ಅನ್ನು ವಾಪಸ್ ತೆಗೆದುಕೊಳ್ಳಲಾಗುವುದು ಎಂದು ಹೇಳುತ್ತಿದ್ದಾರೆ. ಅದನ್ನು ಪ್ರೆಸ್ಮಿಟ್ ಮಾಡಿ ಹೇಳಬೇಕಿದೆ ಎಂದರು.

''ಓಬಿಸಿಯ ಮೀಸಲಾತಿಯನ್ನು ಮುಸ್ಲಿಂರಿಗೆ ನೀಡುವುದಾಗಿ ಕಾಂಗ್ರೆಸ್ ನಿರ್ಧರಿಸಿತ್ತು. 10 ವರ್ಷ ಅಧಿಕಾರದಿಂದ ದೂರವಿದ್ದ ಕಾಂಗ್ರೆಸ್ ಈಗ ಮತ್ತೆ ಅಧಿಕಾರಕ್ಕೆ ಬಂದು ಹಿಂದೆ 2ಜಿ ಹಗರಣ ಮಾಡಿದಂತೆ ಮತ್ತೆ ಹಗರಣ ಮಾಡಲು ನಿರ್ಧರಿಸಿದಂತೆ ಇದೆ ಎಂದರು. ರಾಜ್ಯದಲ್ಲಿ ಭೀಕರ‌ ಬರಗಾಲವಿದೆ. ರೈತರ ಬಗ್ಗೆ ಚಿಂತನೆ ನಡೆಸದ ಬೇಜವಾಬ್ದಾರಿ ಸರ್ಕಾರವಿದೆ. ಎಸ್ಸಿ/ ಎಸ್ಟಿ ಸಮುದಾಯಕ್ಕೆ ಮೀಸಲಿಟ್ಟಿದ್ದ 2396 ಕೋಟಿ ರೂ. ಅನ್ನು ನುಂಗಿ ನೀರು ಕುಡಿದಿದೆ. 25 ಪಕ್ಷಗಳ ಒಕ್ಕೂಟದವರು ವರ್ಷಕ್ಕೆ ಒಬ್ಬರಂತೆ ಪ್ರಧಾನ ಮಂತ್ರಿಯನ್ನಾಗಿ ಮಾಡಲು ಹೊರಟಿದ್ದಾರೆ'' ಎಂದು ಯಡಿಯೂರಪ್ಪ ಟೀಕಿಸಿದರು.

''ಕಾಂಗ್ರೆಸ್ ಪಕ್ಷ ಅಧಿಕಾರದಲ್ಲಿದ್ದಾಗ ಹನುಮಾನ್ ಚಾಲಿಸಾ ಹಾಕಿದ್ರೆ ಹಲ್ಲೆ ನಡೆಸುತ್ತಿದ್ದಾರೆ. ಕಾಂಗ್ರೆಸ್ ತುಷ್ಟೀಕರಣದ ರಾಜಕಾರಣ ನಡೆಸುತ್ತಿದೆ. ಓಬಿಸಿ ಮೀಸಲಾತಿಯನ್ನು ಜಾರಿಗೆ ತರಲಾಗುವುದು ಎಂದರು.‌ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ.‌ ರಾಮೇಶ್ವರಂ ಕೆಫೆ ಬಾಂಬ್‌ ಸ್ಫೋಟವನ್ನು‌‌ ಗ್ಯಾಸ್ ಸಿಲಿಂಡರ್​ ಸ್ಫೋಟವಾಗಿದೆ ಎಂದು ಸುಳ್ಳು ಹೇಳಿದ್ದರು. ಕಾಂಗ್ರೆಸ್ ಮೂರು ಬಣಗಳಾಗಿವೆ'' ಎಂದು ಹೇಳಿದರು.

''ಸೋಲನ್ನು ತಪ್ಪಿಸಿಕೊಳ್ಳಲು ರಾಹುಲ್ ಗಾಂಧಿ‌ ಪಲಾಯನ‌ ಮಾಡುತ್ತಿದ್ದಾರೆ. ವಯನಾಡ ಬಿಟ್ಟು ಈಗ ಉತ್ತರ ಪ್ರದೇಶದ ರಾಯಬರೇಲಿ ಕ್ಷೇತ್ರಕ್ಕೆ ಕೊನೆ ಅವಧಿಗೆ ನಾಮಪತ್ರ ಸಲ್ಲಿಸಿದ್ದಾರೆ. ಮುಸ್ಲಿಂರಿಗೆ ಓಬಿಸಿ ಮೀಸಲಾತಿ‌‌‌ ನೀಡುವುದನ್ನು ಯಾರೂ ಒಪ್ಪಲ್ಲ, ಮೋದಿಜಿನೂ ಸಹ ಇದಕ್ಕೆ ಒಪ್ಪಿಲ್ಲ'' ಎಂದು ಬಿಎಸ್​ವೈ ತಿಳಿಸಿದರು.

ಇದನ್ನೂ ಓದಿ : 28 ಲೋಕಸಭಾ ಕ್ಷೇತ್ರ ಗೆಲ್ಲಲು ಶಕ್ತಿಮೀರಿ ಪ್ರಯತ್ನ ಮಾಡಲಾಗುತ್ತಿದೆ: ಬಿ.ಎಸ್.ಯಡಿಯೂರಪ್ಪ - Lok Sabha Election 2024

ETV Bharat Logo

Copyright © 2024 Ushodaya Enterprises Pvt. Ltd., All Rights Reserved.