ETV Bharat / state

ಸಾಮೂಹಿಕ ಅತ್ಯಾಚಾರವೆಸಗಿ ಮಹಿಳೆ ಹತ್ಯೆ: 11 ವರ್ಷಗಳ ಬಳಿಕ ನಿವೃತ್ತ ಬ್ಯಾಂಕ್ ಮ್ಯಾನೇಜರ್ ಸೇರಿ ಮೂವರನ್ನ ಬಂಧಿಸಿದ ಸಿಐಡಿ - gang rape and murder case

author img

By ETV Bharat Karnataka Team

Published : May 24, 2024, 9:16 PM IST

ಸಾಮೂಹಿಕ ಅತ್ಯಾಚಾರವೆಸಗಿ ಮಹಿಳೆಯನ್ನು ಹತ್ಯೆ ಮಾಡಿದ ಮೂವರು ಆರೋಪಿಗಳನ್ನು ಸಿಐಡಿ ಪೊಲೀಸರು ಬಂಧಿಸಿದ್ದಾರೆ.

accused
ಆರೋಪಿಗಳು (ETV Bharat)

ಬೆಂಗಳೂರು : ಕಳೆದ 11 ವರ್ಷಗಳ ಹಿಂದೆ ವಿವಾಹಿತ ಮಹಿಳೆಯನ್ನ ಸಾಮೂಹಿಕವಾಗಿ ಅತ್ಯಾಚಾರವೆಸಗಿ ಕೊಲೆ ಮಾಡಿ, ಕಾನೂನಿನ ಕುಣಿಕೆಯಿಂದ ತಪ್ಪಿಸಿಕೊಂಡಿದ್ದ ನಿವೃತ್ತ ಬ್ಯಾಂಕ್ ಮ್ಯಾನೇಜರ್ ಸೇರಿ ಮೂವರನ್ನು ಸಿಐಡಿ ಪೊಲೀಸರು ಬಂಧಿಸಿ, ಅವರ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪಪಟ್ಟಿ ಸಲ್ಲಿಸಿದ್ದಾರೆ.

2013 ಫೆಬ್ರವರಿ 15ರಂದು ಮಹಿಳೆಯನ್ನು ಸಾಮೂಹಿಕವಾಗಿ ಅತ್ಯಾಚಾರವೆಸಗಿ ಹತ್ಯೆ ಮಾಡಿದ ಆರೋಪದಡಿ ನಿವೃತ್ತ ಬ್ಯಾಂಕ್ ಮ್ಯಾನೇಜರ್ ನರಸಿಂಹಮೂರ್ತಿ (65), ದೀಪಕ್ (38) ಹಾಗೂ ಹರಿಪ್ರಸಾದ್ (45) ಎಂಬುವರನ್ನ ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಮೃತರ ಪತಿ ದೂರು ನೀಡಿರುವ ಮೇರೆಗೆ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ.

ಬಂಧಿತರೆಲ್ಲರೂ ಸಂಜಯನಗರ ಪೊಲೀಸ್ ಠಾಣಾ ವ್ಯಾಪ್ತಿಯ ಸಹಕಾರನಗರದಲ್ಲಿ ವಾಸವಾಗಿದ್ದರು. ಪ್ರಮುಖ ಆರೋಪಿ ನರಸಿಂಹಮೂರ್ತಿ ಮಹಾಲಕ್ಷ್ಮೀ ಲೇಔಟ್​ನಲ್ಲಿರುವ ಕೆನರಾ ಬ್ಯಾಂಕ್​ವೊಂದರಲ್ಲಿ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದ. ಇದೇ ಬ್ಯಾಂಕ್​ನಲ್ಲಿ ದೂರುದಾರ ಕೆಲಸ ಮಾಡುತ್ತಿದ್ದರು. ಅವರ ಪತ್ನಿ ಎಲೆಕ್ಟ್ರಾನಿಕ್ ಸಿಟಿಯಲ್ಲಿರುವ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದರು.

2013ರ ಫೆ. 15ರಂದು ಚಿಕ್ಕಜಾಲ ಪೊಲೀಸ್ ಠಾಣಾ ವ್ಯಾಪ್ತಿಯ ಮುತ್ತಕದಹಳ್ಳಿಯ ನೀಲಗಿರಿ ತೋಪಿಯಲ್ಲಿ ಮಹಿಳೆ ಶವ ಪತ್ತೆಯಾಗಿತ್ತು. ಅನುಮಾನಾಸ್ಪದ ಸಾವು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದ ಪೊಲೀಸರು, ಆರಂಭದಲ್ಲಿ ಕೃತ್ಯವೆಸಗಿರುವ ಶಂಕೆ ಮೇರೆಗೆ ಪತಿಯನ್ನ ಬಂಧಿಸಿದ್ದರು.

ಸೂಕ್ತ ಪುರಾವೆ ಇಲ್ಲದಿದ್ದರಿಂದ ಪ್ರಕರಣವನ್ನ ಎರಡು ಬಾರಿ ಸಿ (Closing Report) ರಿಪೋರ್ಟ್ ಸಲ್ಲಿಸಿದ್ದರು. ಇದನ್ನ ಪ್ರಶ್ನಿಸಿ ಅವರ ಪತಿ ಹೈಕೋರ್ಟ್ ಮೊರೆ ಹೋಗಿದ್ದರು. 2022ರಲ್ಲಿ ಪ್ರಕರಣ ಸಿಐಡಿಗೆ ವರ್ಗಾವಣೆಯಾಗಿತ್ತು. ಈ ಬಗ್ಗೆ ತನಿಖೆ ಕೈಗೊಂಡ ಸಿಐಡಿ ತನಿಖಾಧಿಕಾರಿ ನರೇಂದ್ರಬಾಬು ಅವರು ಸಮಗ್ರ ತನಿಖೆ ನಡೆಸಿ, ಮೂವರು ಆರೋಪಿಗಳನ್ನ ಬಂಧಿಸಿದ್ದಾರೆ.

ನರಸಿಂಹಮೂರ್ತಿ ಬ್ಯಾಂಕ್ ಮ್ಯಾನೇಜರ್​ ಆಗಿದ್ದರಿಂದ ಅವರ ಆಹ್ವಾನದ ಮೇರೆಗೆ ಮನೆಯ ಕಾರ್ಯಕ್ರಮಗಳಿಗೆ ಹಲವು ಬಾರಿ ಮೃತ ಸಂತ್ರಸ್ತೆ ಪತಿ ತನ್ನ ಪತ್ನಿ ಸಮೇತ ಹೋಗಿ ಬರುತ್ತಿದ್ದರು. ಈ ವೇಳೆ ಮಹಿಳೆ ಮೇಲೆ ಆರೋಪಿ ಕಣ್ಣುಹಾಕಿದ್ದ. ಈ ವೇಳೆ ಮೊಬೈಲ್ ನಂಬರ್ ಪಡೆದು ಆಕೆಯ ಚಲನವಲನದ ಬಗ್ಗೆ ನಿಗಾ ಇಟ್ಟಿದ್ದ.

ಆಕೆಯನ್ನ ಸಂಪರ್ಕಿಸಿ, ಸಹಕಾರನಗರದಲ್ಲಿ ತೆರೆದಿದ್ದ ನೂತನ ಕ್ಲಬ್​ಗೆ ಕರೆದುಕೊಂಡಿದ್ದ. ಕಚೇರಿಯಲ್ಲಿ ಆಕೆಯ ಮೇಲೆ ಹಲ್ಲೆ ಮಾಡಿ ಲೈಂಗಿಕ ದೌರ್ಜನ್ಯವೆಸಗಿದ್ದ. ಇದೇ ಕ್ಲಬ್​ನಲ್ಲಿ ಕೆಲಸ ಮಾಡುತ್ತಿದ್ದ ಆಫೀಸ್ ಬಾಯ್ ದೀಪಕ್, ಸ್ನೂಕರ್​ ಟ್ರೈನರ್ ಆಗಿದ್ದ ಹರಿಪ್ರಸಾದ್ ಸೇರಿ ಮೂವರು ಸಾಮೂಹಿಕ ಅತ್ಯಾಚಾರವೆಸಗಿದ್ದರು. ಮಹಿಳೆ ಪ್ರತಿರೋಧ ತೋರಿಸಿದ್ದಕ್ಕೆ ಆಕೆಯನ್ನ ವೇಲ್​ನಿಂದ ಕುತ್ತಿಗೆ ಬಿಗಿದು ಹತ್ಯೆ ಮಾಡಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಕೃತ್ಯವೆಸಗಿದ ಬಳಿಕ ನರಸಿಂಹಮೂರ್ತಿ ಅಣತಿ ಮೇರೆಗೆ ಶವವನ್ನ ಕಾರಿನಲ್ಲಿ ಇರಿಸಿ ಚಿಕ್ಕಜಾಲದ ಬಳಿಯ ನೀಲಗಿರಿ ತೋಪಿನಲ್ಲಿ ಆರೋಪಿಗಳು ಶವವನ್ನ ಬಿಸಾಕಿ ಬಂದಿದ್ದರು. ಪತ್ನಿ ಕಾಣೆಯಾಗಿರುವುದಾಗಿ ಸಂಜಯನಗರ ಪೊಲೀಸ್ ಠಾಣೆಯಲ್ಲಿ ಪತಿ ದೂರು ನೀಡಿದ್ದರು. ಬಳಿಕ ಚಿಕ್ಕಜಾಲ ಠಾಣೆಯ ಪೊಲೀಸರು ಮಹಿಳೆಯ ಶವವನ್ನ ಪತ್ತೆ ಹಚ್ಚಿ, ಅನುಮಾನಸ್ಪಾದ ಸಾವು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡ ಪೊಲೀಸರು ನ್ಯಾಯಾಲಯಕ್ಕೆ ಸಿ ರಿಪೋರ್ಟ್ ಸಲ್ಲಿಸಿದ್ದರು.

ಹೈಕೋರ್ಟ್ ಆದೇಶದ ಮೇರೆಗೆ ತನಿಖೆ ಕೈಗೊಂಡ ಸಿಐಡಿ ಪೊಲೀಸರಿಗೆ ಕಗ್ಗಂಟಾಗಿದ್ದ ಪ್ರಕರಣವನ್ನ ಆಳವಾಗಿ ತನಿಖೆ ನಡೆಸಿದಾಗ ನರಸಿಂಹಮೂರ್ತಿ ಮೇಲೆ ಅನುಮಾನ ವ್ಯಕ್ತವಾಗಿತ್ತು. ತಾಂತ್ರಿಕ ತನಿಖೆಯಲ್ಲಿ ಕೊಲೆಯಾದ ದಿನ ನರಸಿಂಹಮೂರ್ತಿ ಸಹ ಆರೋಪಿ ದೀಪಕ್​ಗೆ 12 ಬಾರಿ ಸಂದೇಶ ಕಳುಹಿಸಿರುವ ಬಗ್ಗೆ ಗುಮಾನಿ ವ್ಯಕ್ತವಾಗಿತ್ತು.

ಇದೇ ಆರೋಪದ ಮೇರೆಗೆ ದೀಪಕ್​ನನ್ನ ಕರೆಯಿಸಿ ತೀವ್ರ ವಿಚಾರಣೆ ನಡೆಸಿದಾಗ ಕೃತ್ಯದ ಬಗ್ಗೆ ಬಾಯ್ಬಿಟ್ಟಿದ್ದ. ಈತನ ಹೇಳಿಕೆ ಆಧರಿಸಿ ಇನ್ನಿಬ್ಬರನ್ನ ಬಂಧಿಸಲಾಯಿತು. ಬಂಧಿತರ ವಿರುದ್ಧ 1277 ಪುಟಗಳ ಚಾರ್ಜ್ ಶೀಟ್ ಸಲ್ಲಿಸಲಾಗಿದ್ದು, 84 ಮಂದಿ ಹೈ ವಿಟ್ನೆಸ್​ ಆಗಿ ಪರಿಗಣಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಇದನ್ನೂ ಓದಿ : ಇಬ್ಬರು ಅಪ್ರಾಪ್ತ ಸಹೋದರಿಯರ ಮೇಲೆ ಗ್ಯಾಂಗ್​ರೇಪ್​: ಆರೋಪಿಗಳಲ್ಲಿ ಇಬ್ಬರು ಅಪ್ತಾಪ್ತರು! - Gang Rape

ETV Bharat Logo

Copyright © 2024 Ushodaya Enterprises Pvt. Ltd., All Rights Reserved.