ETV Bharat / sports

T20 ವಿಶ್ವಕಪ್​ಗಾಗಿ ವೀಕ್ಷಕ ವಿವರಣೆಗಾರರ ಪಟ್ಟಿ ಬಿಡುಗಡೆ ಮಾಡಿದ ಐಸಿಸಿ - T20 World Cup 2024

author img

By ETV Bharat Karnataka Team

Published : May 24, 2024, 8:09 PM IST

T20 World Cup 2024: ಇನ್ನು ಕೆಲವೇ ದಿನಗಳಲ್ಲಿ ಐಸಿಸಿ ಟಿ20 ವಿಶ್ವಕಪ್ 2024 ಆರಂಭವಾಗಲಿದ್ದು ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿಯು ವೀಕ್ಷಕ ವಿವರಣೆಗಾರರ ಪಟ್ಟಿಯನ್ನು ಬಿಡುಗಡೆ ಮಾಡಿದೆ.

aICC Announces Panel of Commentators for Men's T20 World Cup 2024; Gavaskar, DK, Shastri Among Them
ವೀಕ್ಷಕ ವಿವರಣೆಗಾರರು (ETV Bharat)

ಹೈದರಾಬಾದ್: ಮುಂಬರುವ ಟಿ20 ವಿಶ್ವಕಪ್​ನಲ್ಲಿ ವೀಕ್ಷಕ ವಿವರಣೆಗಾರರ ಪಟ್ಟಿಯನ್ನು ಐಸಿಸಿ (ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ) ಇಂದು ಬಿಡುಗಡೆ ಮಾಡಿದೆ. ವೆಸ್ಟ್ ಇಂಡೀಸ್‌ ಹಾಗೂ ಅಮೆರಿಕ ಜಂಟಿ ಆತಿಥ್ಯದಲ್ಲಿ ಜೂನ್‌ 2 ರಿಂದ ಟಿ20 ವಿಶ್ವಕಪ್‌ ಟೂರ್ನಿಗಳು ಆರಂಭವಾಗಲಿದ್ದು, ಭಾರತ ಸೇರಿ ಹಲವು ದೇಶಗಳ ತಾರಾ ಕಾಮೆಂಟೇಟರ್​ಗಳನ್ನು ಐಸಿಸಿ ಹೆಸರಿಸಿದೆ. ಪಟ್ಟಿಯಲ್ಲಿ ಮಾಜಿ ಟಿ20 ಚಾಂಪಿಯನ್ ದಿನೇಶ್ ಕಾರ್ತಿಕ್ ಅವರ ಹೆಸರು ಕೂಡ ಇದೆ.

ರವಿಶಾಸ್ತ್ರಿ, ನಾಸರ್ ಹುಸೇನ್, ಇಯಾನ್ ಸ್ಮಿತ್, ಮೆಲ್ ಜೋನ್ಸ್, ಹರ್ಷಾ ಭೋಗ್ಲೆ ಮತ್ತು ಇಯಾನ್ ಬಿಷಪ್ ಅವರಂತಹ ದಿಗ್ಗಜರು ಕಾಮೆಂಟರಿ ತಂಡವನ್ನು ಮುನ್ನಡೆಸಲಿದ್ದಾರೆ. ಹೆಚ್ಚುವರಿಯಾಗಿ, ಮಾಜಿ ಟಿ20 ಚಾಂಪಿಯನ್​ಗಳಾದ ದಿನೇಶ್ ಕಾರ್ತಿಕ್, ಸ್ಯಾಮ್ಯುಯೆಲ್ ಬದ್ರಿ, ಕಾರ್ಲೋಸ್ ಬ್ರಾಥ್‌ವೈಟ್, ಸ್ಟೀವ್ ಸ್ಮಿತ್, ಆರನ್ ಫಿಂಚ್ ಕಾಮೆಂಟೇಟರ್​ಗಳ ಪಟ್ಟಿಗೆ ಸೇರಿಕೊಳ್ಳಲಿದ್ದಾರೆ.

ಮಹಿಳಾ ವಿಭಾಗದಿಂದ ಲಿಸಾ ಸ್ಥಾಲೇಕರ್ ಮತ್ತು ಎಬೊನಿ ರೈನ್‌ಫೋರ್ಡ್-ಬ್ರೆಂಟ್ ಕೂಡ ಹಾಜರಿರಲಿದ್ದಾರೆ. ಮಾಜಿ ಏಕದಿನ ವಿಶ್ವಕಪ್ ವಿಜೇತರಾದ ರಿಕಿ ಪಾಂಟಿಂಗ್, ಸುನಿಲ್ ಗವಾಸ್ಕರ್, ಮ್ಯಾಥ್ಯೂ ಹೇಡನ್, ರಮಿಜ್ ರಾಜಾ, ಇಯಾನ್ ಮಾರ್ಗನ್, ಟಾಮ್ ಮೂಡಿ ಮತ್ತು ವಾಸಿಮ್ ಅಕ್ರಮ್ ಕೂಡ ತಮ್ಮ ಪರಿಣಿತ ವಿಶ್ಲೇಷಣೆಯನ್ನು ನೀಡಲಿದ್ದಾರೆ. ಜಾಮ್ಬಾಯ್ ಎಂದು ಪ್ರಸಿದ್ಧರಾಗಿರುವ ಅಮೆರಿಕನ್ ನಿರೂಪಕ ಜೇಮ್ಸ್ ಒ’ಬ್ರೇನ್ ಎಂಬುವರು ಕೂಡ ಕಾಣಿಸಿಕೊಳ್ಳಲಿದ್ದಾರೆ.

ಉಳಿದಂತೆ ಪ್ರಸಿದ್ಧ ವೀಕ್ಷಕ ವಿವರಣೆಗಾರರಾದ ಡೇಲ್ ಸ್ಟೇಯ್ನ್, ಗ್ರೇಮ್ ಸ್ಮಿತ್, ಮೈಕೆಲ್ ಅಥರ್ಟನ್, ವಕಾರ್ ಯೂನಿಸ್, ಸೈಮನ್ ಡೌಲ್, ಶಾನ್ ಪೊಲಾಕ್, ಕೇಟಿ ಮಾರ್ಟಿನ್, ಎಂಪುಮೆಲೆಲೊ ಎಂಬಾಂಗ್ವಾ, ನಟಾಲಿ ಜರ್ಮನೋಸ್, ಡ್ಯಾನಿ ಮಾರಿಸನ್, ಅಲಿಸನ್ ಮಿಚೆಲ್, ಅಲನ್ ವಿಲ್ಕಿನ್ಸ್, ಬ್ರಿಯಾನ್ ಮುರ್ಗಟ್ರಾಯ್ಡ್, ಮೈಕ್ ಹೇಸ್‌ಮನ್, ಇಯಾನ್ ವಾರ್ಡ್, ಅಥರ್ ಅಲಿ ಖಾನ್, ರಸೆಲ್ ಅರ್ನಾಲ್ಡ್, ನಿಯಾಲ್ ಒ’ಬ್ರಿಯಾನ್, ಕಾಸ್ ನೈಡೋ ಮತ್ತು ಡ್ಯಾರೆನ್ ಗಂಗಾ ಕೂಡ ಇರಲಿದ್ದಾರೆ. ಇವರೆಲ್ಲರೂ ಟಿ-20 ವಿಶ್ವಕಪ್​​ನಲ್ಲಿ 28 ದಿನಗಳ ಕಾಲ ಕಾಮೆಂಟರಿ ಮಾಡುವ ಜೊತೆಗೆ ತಮ್ಮ ಅನುಭವ ಹಂಚಿಕೊಳ್ಳಲಿದ್ದಾರೆ.

ಜೂನ್‌ 1 ರಂದು ಉದ್ಘಾಟನಾ ಪಂದ್ಯ ಆತಿಥೇಯ ಯುಎಸ್​ಎ ಹಾಗೂ ಕೆನಡಾ ನಡುವೆ ನಡೆದರೆ, ಬಹು ನಿರೀಕ್ಷಿತ ಭಾರತ ಹಾಗೂ ಪಾಕಿಸ್ತಾನ ನಡುವಿನ ಪಂದ್ಯ ಜೂನ್ 9 ರಂದು ನ್ಯೂಯಾರ್ಕ್‌ನಲ್ಲಿ ನಡೆಯಲಿದೆ. ಭಾರತದಲ್ಲಿ ಸ್ಟಾರ್ ಸ್ಪೋರ್ಟ್ಸ್ ನಲ್ಲಿ ಕೂಟದ ನೇರಪ್ರಸಾರ ಇರಲಿದೆ.

ಇದನ್ನೂ ಓದಿ: ಟಿ20 ವಿಶ್ವಕಪ್: ಆಡುವ ತಂಡಗಳು ಬದಲಾವಣೆ ಬಯಸಿದ್ದಲ್ಲಿ ಇದು ಕೊನೆ ಅವಕಾಶ! - T20 World Cup 2024

ETV Bharat Logo

Copyright © 2024 Ushodaya Enterprises Pvt. Ltd., All Rights Reserved.