ETV Bharat / state

ಬಿಸಿಲಿನ ತಾಪಕ್ಕೆ ಮೃತಪಟ್ಟ 17 ಸಾವಿರ ಮೀನುಗಳು; ಕಂಗಾಲಾದ ರೈತ, ಸೂಕ್ತ ಪರಿಹಾರಕ್ಕೆ ಮನವಿ - fish dead

author img

By ETV Bharat Karnataka Team

Published : May 12, 2024, 10:05 PM IST

Updated : May 12, 2024, 10:27 PM IST

ಬಿಸಿಲಿನ ತಾಪ ಹಾಗೂ ಕೃಷಿ ಹೊಂಡದಲ್ಲಿ ನೀರು ಕಡಿಮೆಯಾಗಿ ಮೀನುಗಳು ಸಾವನ್ನಪ್ಪಿರುವ ಘಟನೆ ವಿಜಯಪುರದಲ್ಲಿ ನಡೆದಿದೆ.

vijayapur
ವಿಜಯಪುರ (ETV Bharat)

ಮೀನುಗಳು ಸಾವು (ETV Bharat)

ವಿಜಯಪುರ : ತಾಲೂಕಿನ ಮಧಬಾವಿ ತಾಂಡಾ 2ರಲ್ಲಿ ಹೆಚ್ಚಿನ ತಾಪಮಾನ ಹಾಗೂ ಕೃಷಿ ಹೊಂಡದಲ್ಲಿ ನೀರಿನ‌ ಪ್ರಮಾಣ ಕಡಿಮೆಯಾದ ಕಾರಣ, ಮೀನುಗಳ ಸಾವು ಸಂಭವಿಸಿದೆ. ಜಿಲ್ಲೆಯಲ್ಲಿ ಕಳೆದ ತಿಂಗಳಿಂದ ಬಿಸಿಲಿನ‌ ತಾಪ ಹೆಚ್ಚಾಗುತ್ತಲೇ ಇದೆ. 40 ರಿಂದ 46 ಡಿಗ್ರಿ ಸೆಲ್ಶಿಯಸ್​ ದಾಟುತ್ತಿದೆ. ಇದರಿಂದ ನಾನಾ ತೊಂದರೆಗಳನ್ನ ಜನರು ಅನುಭವಿಸುವಂತಾಗಿದೆ. ಇದರ ಜೊತೆಗೆ ಇದು ಮೂಕ ಪ್ರಾಣಿಗಳ, ಜಲಚರಗಳ ಸಾವಿಗೂ ಕಾರಣವಾಗಿದೆ.‌

ವಿಜಯಪುರ ತಾಲೂಕಿನ ಮಧಬಾವಿ ತಾಂಡಾ 2ರಲ್ಲಿ ತಮ್ಮ ತೋಟದಲ್ಲಿ ವಿರೇಶ ಕವಟಗಿ ಎಂಬುವರು ಬಯೋಫ್ಲಾಕ್ ಮಾದರಿಯ ಕೃಷಿ ಹೊಂಡದಲ್ಲಿ ಬರೋಬ್ಬರಿ 17 ಸಾವಿರ ಮೀನುಗಳನ್ನು ಸಾಕಿದ್ದರು. 20 ಲಕ್ಷಕ್ಕೂ ಅಧಿಕ ಖರ್ಚು ಮಾಡಿ 17 ಸಾವಿರ ಮುರ್ಲ್ ತಳಿಯ ಮೀನು ಸಾಕಿದ್ದರು.

ಇನ್ನೆರಡು ದಿನಗಳಲ್ಲಿ ಮೀನುಗಳು ಹೈದರಾಬಾದ್‌ಗೆ ಮಾರಾಟವಾಗಬೇಕಿತ್ತು. ಅಷ್ಟರಲ್ಲಿ ಹೆಚ್ಚಿನ ತಾಪಮಾನ ಹಾಗೂ ಕೃಷಿ ಹೊಂಡದಲ್ಲಿ ನೀರಿನ‌ ಪ್ರಮಾಣ ಒಂದಿಷ್ಟು ಕಡಿಮೆಯಾದ ಕಾರಣ, ಮೀನುಗಳು ಮೃತಪಟ್ಟಿವೆ. ಸುಮಾರು 30 ರಿಂದ 35 ಲಕ್ಷಕ್ಕೆ ಮೀನುಗಳು ಮಾರಾಟವಾಗಬೇಕಿದ್ದವು. ಈ ಘಟನೆಯಿಂದ ರೈತ ಕಂಗಾಲಾಗಿದ್ದಾರೆ.

ಈ ಬಗ್ಗೆ ರೈತ ವಿರೇಶ ಕವಟಗಿ ಅವರು ಮಾತನಾಡಿದ್ದು, ''ಕೋವಿಡ್​ ಸಮಯದಲ್ಲಿ ನಾನು ಕಂಪನಿ ರಿಸೈನ್ ಮಾಡಿ ಇಲ್ಲಿ ಬಂದು ಮೀನುಗಾರಿಕೆ ಪ್ರಾರಂಭಿಸಿದ್ದೆ. ಪ್ರಧಾನ ಮಂತ್ರಿ ಮತ್ಸ್ಯ ಸಂಪದ ಯೋಜನೆಯಡಿಯಲ್ಲಿ 0.1 ಹೆಕ್ಟೇರ್​ ಬಯೋಫ್ಲಾಕ್​ನಲ್ಲಿ ಪ್ರಾರಂಭಿಸಿ ಮೊದ ಬ್ಯಾಚ್ ಕಳಿಸಿ ಲಾಭ ಗಳಿಸಿದ್ದೆವು. 7 ರಿಂದ 8 ಲಕ್ಷ ಖರ್ಚು ವೆಚ್ಚ ತೆಗೆದು ನಾನು ಲಾಭ ಪಡೆದುಕೊಂಡಿದ್ದೆ. ಅದೇ ರೀತಿ ಎರಡನೇ ಬಾರಿ 17 ಸಾವಿರ ಸೀಡ್ಸ್​ಗಳನ್ನ ಹಾಕಿದ್ವಿ. ಪ್ರತಿಮರಿಗೆ ನಮಗೆ 15 ರೂ. ಬೀಳುತ್ತೆ. ಅದನ್ನು ನಾವೆಲ್ಲ ಆಂಧ್ರದಿಂದಲೇ ತರಿಸುತ್ತೇವೆ. ಇಲ್ಲಿಗೆ ಬರುವಾಗ ಪ್ರತಿ ಕೆಜಿಗೆ ರೂ. 102 ರಿಂದ 105 ಬೀಳುತ್ತೆ. ಈ ಬಾರಿ 18 ರಿಂದ 20 ಲಕ್ಷ ರೂ. ಫುಡ್​ಗೆ ಖರ್ಚು ಮಾಡಿದ್ದೇವೆ.

ಪ್ರತಿಮೀನು ಸರಾಸರಿ ಕೆ ಜಿ ಒಂದೂವರೆಯಿಂದ ಎರಡು ಕೆಜಿ ಇತ್ತು. ಇವುಗಳನ್ನು ಶನಿವಾರ ಕಳುಹಿಸಬೇಕಿತ್ತು. ಆದರೆ ಈಗ ಎಲ್ಲಾ ಮೀನುಗಳು ಸತ್ತಿವೆ. ಇಲ್ಲಿ ಬಿಸಿಲು 45 ರಿಂದ 46 ಡಿಗ್ರಿ ಸೆಲ್ಶಿಯಸ್​ಗೆ ಹೋಗುತ್ತೆ. ಹೀಗಾಗಿ ನೀರಿನ ತಾಪಮಾನವೂ 35 ರಿಂದ 36 ಇರುತ್ತೆ. ಹೀಗಾಗಿ ನಮ್ಮ ಇಳುವರಿಯನ್ನು ಪೂರ್ತಿ ಕಳೆದುಕೊಂಡಿದ್ದೇವೆ. ಸಾಲ ಮಾಡಿ ದುಡಿದ ಹಣವನ್ನು ಇದಕ್ಕೆ ಹಾಕಿದ್ದೆ. ಸ್ನೇಹಿತರಿಂದಲೂ ಸಾಲ ಮಾಡಿದ್ದೆ. ಕೈಗೆ ಬಂದ ತುತ್ತು ಬಾಯಿಗೆ ಬಂದಿಲ್ಲ. ಮೀನುಗಾರಿಕೆಗೆ ಯಾವುದೇ ಇನ್ಶೂರೆನ್ಸ್​ ಇಲ್ಲ. ಹೀಗಾಗಿ ಬೇರೆ ಯಾವುದಾದರೂ ಫಂಡ್​ನಲ್ಲಿ ಜಿಲ್ಲಾಡಳಿತ ನಮಗೆ ಸಹಾಯ ಮಾಡಬೇಕು'' ಎಂದು ಮನವಿ ಮಾಡಿದ್ದಾರೆ.

ಈ ಬಗ್ಗೆ ವಿರೇಶನ ಗೆಳೆಯ ಪ್ರಶಾಂತ ಮುಂಚಣ್ಣಿ ಅವರು ಮಾತನಾಡಿ, ''ಸರ್ಕಾರದಿಂದ ರೈತರಿಗೆ ಇನ್ಶೂರೆನ್ಸ್ ಅಥವಾ ಬೇರೆ ಏನಾದ್ರು ಹೆಲ್ಪ್​​ ಮಾಡಿ. ಈಗ 35 ರಿಂದ 40 ಲಕ್ಷ ನಷ್ಟ ಮಾಡಿಕೊಂಡಿದ್ದೇವೆ. ಇದಕ್ಕೆ ಏನಾದ್ರು ಒಂದಿಷ್ಟು ಪರಿಹಾರ ಒದಗಿಸಿ'' ಎಂದರು.

ಇದನ್ನೂ ಓದಿ : ವಿಜಯಪುರ: ಬತ್ತಿದ ಕೃಷ್ಣಾ ನದಿ, ಮೀನುಗಳ ಮಾರಣಹೋಮ

Last Updated :May 12, 2024, 10:27 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.