ETV Bharat / state

'ಶಿಗ್ಗಾಂವಿ ಕ್ಷೇತ್ರದಿಂದಲೇ ನನ್ನ ಸ್ಪರ್ಧೆ': ವದಂತಿಗಳಿಗೆ ತೆರೆ ಎಳೆದ ಸಿಎಂ ಬೊಮ್ಮಾಯಿ

author img

By

Published : Mar 21, 2023, 6:51 AM IST

Updated : Mar 21, 2023, 10:06 AM IST

''ಶಿಗ್ಗಾಂವಿ ಕ್ಷೇತ್ರದ ಜನರ ನಿರೀಕ್ಷೆಗೆ ಅನುಗುಣವಾಗಿ ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದೇನೆ. ಹೀಗಾಗಿ ಇದೇ ಕ್ಷೇತ್ರದಿಂದ ನಾನು ಸ್ಪರ್ಧಿಸುತ್ತೇನೆ'' ಎಂದು ಸಿಎಂ ಬೊಮ್ಮಾಯಿ ಹೇಳಿದರು.

CM Basavaraj Bommai
ಸಿಎಂ ಬಸವರಾಜ್ ಬೊಮ್ಮಾಯಿ

ಹಾವೇರಿ: ಶಿಗ್ಗಾಂವಿ ಕ್ಷೇತ್ರ ಬಿಟ್ಟು ಬೇರೆ ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ ಎಂಬ ವದಂತಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪೂರ್ಣವಿರಾಮ ಇಟ್ಟಿದ್ದಾರೆ. ಈ ಕುರಿತು ಜಿಲ್ಲೆಯ ಸವಣೂರಲ್ಲಿ ಸೋಮವಾರ ಮಾಧ್ಯಮದವರು ಕೇಳಿದ ಪ್ರಶ್ನೆಗೆ ಕೊಂಚ ಗರಂ ಆಗಿಯೇ ಪ್ರತಿಕ್ರಿಯಿಸಿದ ಅವರು, ''ಯಾವನು ಹೇಳಿದ್ದು?'' ಎಂದರು.

''ಯಾವುದೇ ಕಾರಣಕ್ಕೂ ಶಿಗ್ಗಾಂವಿ ಬಿಡೋದಿಲ್ಲ'' ಎಂದು ಇದೇ ವೇಳೆ ಸಿಎಂ ಸ್ಪಷ್ಟಪಡಿಸಿದರು. ''ಶಿಗ್ಗಾಂವಿ ಕ್ಷೇತ್ರದಲ್ಲಿ ಆರೋಗ್ಯ ಮತ್ತು ಶಿಕ್ಷಣ ರಂಗದಲ್ಲಿ ಬಹಳಷ್ಟು ಅಭಿವೃದ್ಧಿ ಕೆಲಸ ಮಾಡಿದ್ದೇನೆ. ಈ ಹಿಂದೆಂದೂ ಆಗದ ಅಭಿವೃದ್ಧಿ ಕಾರ್ಯಗಳು ಕ್ಷೇತ್ರದಲ್ಲಿ ಆಗಿವೆ. ಜನರ ನಿರೀಕ್ಷೆಗೆ ತಕ್ಕಂತೆ ಅಭಿವೃದ್ಧಿ ಮಾಡಿದ್ದೇನೆ. ಹೀಗಾಗಿ ಇಲ್ಲಿಂದಲೇ ನನ್ನ ಸ್ಪರ್ಧೆ'' ಎಂದರು. ಇದೇ ವೇಳೆ, ಶೀಘ್ರದಲ್ಲಿಯೇ ಹಾವೇರಿ ಮೆಡಿಕಲ್ ಕಾಲೇಜ್ ಉದ್ಘಾಟನೆ ಮಾಡಲಾಗುವುದು ಎಂದು ತಿಳಿಸಿದರು.

ಶಿಗ್ಗಾಂವಿಗೆ ಕಾಂಗ್ರೆಸ್ ರಣತಂತ್ರ: ಬಿಜೆಪಿ ವಿಧಾನಸಭೆ ಚುನಾವಣೆ ಪ್ರಚಾರ ಸಮಿತಿ ಅಧ್ಯಕ್ಷರೂ ಆಗಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವಿರುದ್ಧ ಪ್ರಬಲ ಅಭ್ಯರ್ಥಿಯನ್ನು ಕಣಕ್ಕಿಳಿಸಿ ಆಡಳಿತ ಪಕ್ಷದ ಸಾರಥಿಯನ್ನೇ ಚುನಾವಣಾ ಸಮರದಲ್ಲಿ ಪರಾಭವಗೊಳಿಸಲು ಕಾಂಗ್ರೆಸ್ ಬಲವಾದ ರಾಜಕೀಯ ರಣತಂತ್ರ ರೂಪಿಸುತ್ತಿದೆ. ಲಿಂಗಾಯತ (ಸಾದರ) ಸಮುದಾಯಕ್ಕೆ ಸೇರಿದ ಬೊಮ್ಮಾಯಿ ವಿರುದ್ಧ ಅದೇ ಸಮುದಾಯದ ಅಭ್ಯರ್ಥಿಯನ್ನು ಕಣಕ್ಕಿಳಿಸಿ ಲಿಂಗಾಯತ ಮತ ವಿಭಜಿಸಿ ಕಾಂಗ್ರೆಸ್ ಅಭ್ಯರ್ಥಿಯ ಗೆಲುವಿಗಾಗಿ ರಹಸ್ಯ ಲೆಕ್ಕಾಚಾರ ನಡೆಯುತ್ತಿದೆ.

ಬೊಮ್ಮಾಯಿ ಪ್ರತಿನಿಧಿಸುವ ಶಿಗ್ಗಾಂವಿಯಲ್ಲಿ ಲಿಂಗಾಯತ ಸಮುದಾಯದ ಪಂಚಮಸಾಲಿ ಮತಗಳೇ ಅತ್ಯಧಿಕ ಸಂಖ್ಯೆಯಲ್ಲಿದೆ. ಆ ಮತಗಳು ಗೆಲುವಿಗೆ ನಿರ್ಣಾಯಕವಾಗಿವೆ. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪಕ್ಷವು ಪಂಚಮಸಾಲಿ ಸಮುದಾಯಕ್ಕೆ ಸೇರಿದ ಮತ್ತು ಪಂಚಮಸಾಲಿ ಮೀಸಲು ಹೋರಾಟದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದ ಮಾಜಿ ಸಚಿವ ವಿನಯ ಕುಲಕರ್ಣಿಯವರನ್ನು ಬೊಮ್ಮಾಯಿ ವಿರುದ್ಧ ಕಣಕ್ಕಿಳಿಸಲು ಚಿಂತನೆ ನಡೆಸಿರುವ ಮಾಹಿತಿ ಲಭ್ಯವಾಗಿದೆ.

ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕರಾಗಿರುವ, ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯನವರ ವಿರುದ್ಧ ಪ್ರಬಲ ಅಭ್ಯರ್ಥಿಯನ್ನು ನಿಲ್ಲಿಸಲು ಬಿಜೆಪಿ ಒಂದೆಡೆ ಸಿದ್ಧತೆ ನಡೆಸುತ್ತಿದೆ. ಇದಕ್ಕೆ ಪ್ರತಿಯಾಗಿ ಮತ್ತೊಂದೆಡೆ ಬಿಜೆಪಿಯ ಚುನಾವಣೆ ಸಾರಥ್ಯ ವಹಿಸಿರುವ ಬೊಮ್ಮಾಯಿಗೆ ಕಠಿಣ ಸ್ಪರ್ಧೆವೊಡ್ಡುವಂತಹ ವಿನಯ್ ಕುಲಕರ್ಣಿ ಅವರನ್ನು ಪ್ರತಿಸ್ಪರ್ಧಿಯಾಗಿ ಅಖಾಡಕ್ಕಿಳಿಸಲು ಭೂಮಿಕೆ ತಯಾರು ಮಾಡುತ್ತಿದೆ.

ವಿನಯ್ ಕುಲಕರ್ಣಿಯೇ ಯಾಕೆ ಸ್ಪರ್ಧಿಸಬೇಕು?: ಬೊಮ್ಮಾಯಿ ಎದುರಾಳಿಯಾಗಿ ವಿನಯ್ ಕುಲಕರ್ಣಿಯನ್ನು ಅಖಾಡಕ್ಕಿಳಿಸಲು ಕಾಂಗ್ರೆಸ್ ಹಲವಾರು ಆಯಾಮಗಳಿಂದ ಯೋಚಿಸುತ್ತಿದೆ. ಶಿಗ್ಗಾಂವಿಯಲ್ಲಿ ಪಂಚಮಸಾಲಿ ಸಮುದಾಯದವರೇ ಅತ್ಯಧಿಕ ಸಂಖ್ಯೆಯಲ್ಲಿದ್ದಾರೆ. ಲಿಂಗಾಯತ ಸಮುದಾಯದ ಪ್ರಮುಖ ಒಳಪಂಗಡವಾದ ಪಂಚಮಸಾಲಿ ಮತಗಳು ಇಲ್ಲಿ ಅಭ್ಯರ್ಥಿಯ ಗೆಲುವಿನಲ್ಲಿ ನಿರ್ಣಾಯಕವಾಗಿವೆ. 2ಎ ಮೀಸಲಾತಿಗಾಗಿ ರಾಜ್ಯಾದ್ಯಂತ ನಡೆದ ಹೋರಾಟಕ್ಕೆ ನಿರೀಕ್ಷಿತ ಸ್ಪಂದನೆ ಸಿಗದ ಕಾರಣ ಪಂಚಮಸಾಲಿ ಲಿಂಗಾಯತ ಸಮುದಾಯದವರಿಗೆ ಬೇಸರವಿದೆ. ಇದನ್ನೇ ಬಂಡವಾಳ ಮಾಡಿಕೊಂಡು ಪಂಚಮಸಾಲಿ ಮೀಸಲಾತಿ ಹೋರಾಟಗಾರರೂ ಆದ ಕುಲಕರ್ಣಿ ಅವರನ್ನು ಶಿಗ್ಗಾಂವಿಯಿಂದ ಕಣಕ್ಕಿಳಿಸಲು ಕೈ ಪಕ್ಷ ಯೋಚಿಸುತ್ತಿದೆ.

ಶಿಗ್ಗಾಂವಿ ಕ್ಷೇತ್ರದಲ್ಲಿ ಬೊಮ್ಮಾಯಿ ವಿರುದ್ಧ ತಾವು ಸ್ಪರ್ಧೆ ಮಾಡಬೇಕೆನ್ನುವುದು ಕಾಂಗ್ರೆಸ್ ಪಕ್ಷದ ಅಪೇಕ್ಷೆಯಾಗಿದೆ. ಈ ನಿಟ್ಟಿನಲ್ಲಿ ಒತ್ತಡವೂ ಇದೆ ಎಂದು ವಿನಯ್ ಕುಲಕರ್ಣಿ ಈಟಿವಿ ಭಾರತಕ್ಕೆ ಖಚಿತಪಡಿಸಿದ್ದರು. ಶಿಗ್ಗಾಂವಿ ಬದಲು ಸ್ವಕ್ಷೇತ್ರ ಧಾರವಾಡದಲ್ಲಿಯೇ ಸ್ಪರ್ಧೆ ಮಾಡುವ ಅಭಿಲಾಷೆಯನ್ನೂ ಹೊಂದಿದ್ದೇನೆ. ಪಕ್ಷದ ಅಂತಿಮ ತೀರ್ಮಾನದಂತೆ ಸ್ಪರ್ಧೆ ಬಗ್ಗೆ ನಿರ್ಧಾರ ತಗೆದುಕೊಳ್ಳಲಾಗುತ್ತದೆ. ಆದ್ರೆ ಕ್ಷೇತ್ರದಲ್ಲಿ ಸಿಎಂಗೆ ಪ್ರಬಲ ಸ್ಪರ್ಧೆ ನೀಡುವ ಆಕಾಂಕ್ಷಿತರು ಸಹ ನಮ್ಮ ಪಕ್ಷದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆಂದು ವಿನಯ್ ಹೇಳಿದ್ದರು.

ಶಿಗ್ಗಾಂವಿಯಿಂದ 3 ಬಾರಿ ಗೆದ್ದಿರುವ ಬೊಮ್ಮಾಯಿ: ಶಿಗ್ಗಾಂವಿ ಕ್ಷೇತ್ರದಿಂದ ಬಸವರಾಜ ಬೊಮ್ಮಾಯಿ ಸತತವಾಗಿ 3 ಬಾರಿ ಬಿಜೆಪಿಯಿಂದ ಚುನಾಯಿತರಾಗಿದ್ದಾರೆ. ಅದಕ್ಕಿಂತ ಮುಂಚೆ ಈ ಕ್ಷೇತ್ರದಲ್ಲಿ ರಾಜಶೇಖರ ಸಿಂಧೂರ ಸೇರಿದಂತೆ ಪಂಚಮಸಾಲಿ ಸಮುದಾಯದವರೇ ಹೆಚ್ಚಿನ ಸಂಖ್ಯೆಯಲ್ಲಿ ಚುನಾಯಿತರಾಗಿದ್ದಾರೆ. ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿರುವ ಅಜ್ಜಂಪೀರ್ ಖಾದ್ರಿ ಸಹ ಗೆಲುವು ಸಾಧಿಸಿದ್ದರು. 2018ರಲ್ಲಿ ನಡೆದ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದ ಅಜ್ಜಂಪೀರ್ ಖಾದ್ರಿ 74 ಸಾವಿರ ಮತ ಪಡೆದು ಸುಮಾರು 9 ಸಾವಿರ ಮತಗಳ ಅಂತರದಿಂದ ಪರಾಭವಗೊಂಡಿದ್ದರು. ಬಿಜೆಪಿಯಿಂದ ಸ್ಪರ್ಧಿಸಿದ್ದ ಬೊಮ್ಮಾಯಿ 83 ಸಾವಿರ ಮತಗಳನ್ನು ಗಳಿಸಿ ಗೆಲವು ಸಾಧಿಸಿದ್ದರು.

ಇದನ್ನೂ ಓದಿ: ಚುನಾವಣೆ ಬಂದಾಗ ಬೋಗಸ್ ಕಾರ್ಡ್ ಸರಣಿ ಆರಂಭ: ಕಾಂಗ್ರೆಸ್ ವಿರುದ್ಧ ಸಿಎಂ ಗರಂ

ಉರಿಗೌಡ, ನಂಜೇಗೌಡ ಸಿನಿಮಾ ವಿಚಾರ, ಗುರುಗಳು ಹೇಳಿದಂತೆ ಕೇಳಬೇಕು: ಸಿಎಂ ಬೊಮ್ಮಾಯಿ

Last Updated :Mar 21, 2023, 10:06 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.