ETV Bharat / state

ಮೀಸಲಾತಿ, ಒಳ ಮೀಸಲಾತಿ ಹೆಚ್ಚಿಸಿದೆ: ಸಿದ್ದರಾಮಯ್ಯಗೆ ಜನ ಉತ್ತರ ಕೊಡ್ತಾರೆ: ಬಿಜೆಪಿ

author img

By

Published : Apr 3, 2023, 6:23 PM IST

bjp-has-increased-reservation-and-internal-reservation-says-bjp
ಬಿಜೆಪಿ ಮೀಸಲಾತಿ, ಒಳ ಮೀಸಲಾತಿ ಹೆಚ್ಚಿಸಿದೆ: ಸಿದ್ದರಾಮಯ್ಯಗೆ ಜನ ಉತ್ತರ ಕೊಡುತ್ತಾರೆ : ಬಿಜೆಪಿ

ಏಪ್ರಿಲ್​ 6ರಂದು ಹುಬ್ಬಳ್ಳಿಯ ನೆಹರು ಮೈದಾನದಲ್ಲಿ ಎಸ್ಸಿ ಎಸ್ಟಿ ಸಮುದಾಯದಿಂದ ಅಭಿನಂದನಾ ಸಮಾರಂಭವನ್ನು ಹಮ್ಮಿಕೊಳ್ಳಲಾಗಿದೆ ಎಂದು ಸಚಿವ ಗೋವಿಂದ ಕಾರಜೋಳ ಹಾಗೂ ಕೇಂದ್ರ ಸಚಿವ ಛಲವಾದಿ ನಾರಾಯಣಸ್ವಾಮಿ ತಿಳಿಸಿದರು.

ಹುಬ್ಬಳ್ಳಿ : ರಾಜ್ಯ ಸರ್ಕಾರ ಮೀಸಲಾತಿ ಹೆಚ್ಚಳ ಮಾಡಿರುವ ಸಂಬಂಧ ಎಸ್‌ಸಿ, ಎಸ್‌ಟಿ ಸಮುದಾಯದಿಂದ ಅಭಿನಂದನಾ ಸಮಾರಂಭವನ್ನು ಏಪ್ರಿಲ್​ 6 ರಂದು ಹುಬ್ಬಳ್ಳಿಯ ನೆಹರು ಮೈದಾನದಲ್ಲಿ ಹಮ್ಮಿಕೊಳ್ಳಲಾಗಿದೆ. ಈ ಸಮಾರಂಭಕ್ಕೆ ಸುಮಾರು 1 ಲಕ್ಷಕ್ಕೂ ಹೆಚ್ಚು ಜನರು ಸೇರುವ ನಿರೀಕ್ಷೆ ಇದೆ ಎಂದು ಸಚಿವ ಗೋವಿಂದ ಕಾರಜೋಳ ಹಾಗೂ ಕೇಂದ್ರ ಸಚಿವ ನಾರಾಯಣಸ್ವಾಮಿ ತಿಳಿಸಿದರು.

ನಗರದಲ್ಲಿ ಜಂಟಿ ಸುದ್ಧಿಗೋಷ್ಠಿ ನಡೆಸಿ ಮಾತನಾಡಿದ ಅವರು,‌ ಗಂಡುಮೆಟ್ಟಿನ ನಾಡಿನಲ್ಲಿ ಅಭಿನಂದನಾ ಸಮಾರಂಭ ಮಾಡಲಾಗುತ್ತಿದೆ. ರಾಜ್ಯ ಸರ್ಕಾರಕ್ಕೆ ಮತ್ತು ಮುಖ್ಯಮಂತ್ರಿಗಳಿಗೆ ಬಸವರಾಜ ಬೊಮ್ಮಾಯಿ ಅವರಿಗೆ ಕೃತಜ್ಞತೆ ಸಲ್ಲಿಸುತ್ತಿದ್ದೇವೆ. ಕಾಂಗ್ರೆಸ್ ನಾಯಕರು ಇದು ಸರಿಯಿಲ್ಲ. ನಾವು ಈ ಮೀಸಲಾತಿಯನ್ನು ವಾಪಸ್​​ ಪಡೆಯುತ್ತೇವೆ ಎಂದು ಹೇಳುತ್ತಿದ್ದಾರೆ. ಆದರೆ, ನಮ್ಮ‌ ಮುಖ್ಯಮಂತ್ರಿಗಳು ಮೀಸಲಾತಿ ಹೆಚ್ಚಿಸಿ, ಒಳ ಮೀಸಲಾತಿಗೆ ಸೇರಿಸಿದ್ದಾರೆ. ಸಿದ್ದರಾಮಯ್ಯಗೆ ರಾಜ್ಯದ ಜನರು ಉತ್ತರ ಕೊಡುತ್ತಾರೆ ಎಂದು ಹೇಳಿದರು.

ಕಾಂಗ್ರೆಸ್‌ನ ನಿಜಬಣ್ಣ ಈಗ ಬಯಲಾಗಿದೆ. ಜನರನ್ನು ವೋಟ್ ಬ್ಯಾಂಕ್ ಮಾಡಿಕೊಂಡು ರಾಜಕಾರಣ ಮಾಡಿದವರಿಗೆ ಜನರ ಬಗ್ಗೆ ಏನು ಗೊತ್ತಿರಲು ಸಾಧ್ಯ ಎಂದು ಕಾಂಗ್ರೆಸ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಈ ಸಂದರ್ಭ ಮಾತನಾಡಿದ ಸಚಿವ ಗೋವಿಂದ ಕಾರಜೋಳ, ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಹಿಂದುಳಿದವರನ್ನು ಮೇಲೆತ್ತಲು ಅಂದು ಬಾಬಾ ಸಾಹೇಬ್​ ಅಂಬೇಡ್ಕರ್​ ಮತ್ತು ಇತರರು ಸೇರಿ ಎಸ್ಸಿ ಎಸ್ಟಿ ಸಮುದಾಯಕ್ಕೆ ಮೀಸಲಾತಿ ನೀಡಿದ್ದರು. ಇದೀಗ ಈ ಮೀಸಲಾತಿಗೆ ಹಲವು ಸಮುದಾಯಗಳು ಸೇರಿಕೊಂಡಿವೆ. ಈ ಸಮುದಾಯಗಳು ಮತ್ತೆ ತಮ್ಮ ಮೀಸಲಾತಿಯನ್ನು ಹೆಚ್ಚಳ ಮಾಡುವಂತೆ ಕಳೆದ 32 ವರ್ಷಗಳಿಂದ ಹೋರಾಟ ಮಾಡುತ್ತಿದೆ. ಜೊತೆಗೆ ಒಳ ಮೀಸಲಾತಿ ನೀಡುವಂತೆ ಒತ್ತಾಯ ಕೇಳಿಬಂದಿದ್ದು, ಇಂದು ಸಿಎಂ ಬಸವರಾಜ ಬೊಮ್ಮಾಯಿ ನೇತೃತ್ವದ ರಾಜ್ಯ ಬಿಜೆಪಿ ಸರ್ಕಾರ ಸಾಮಾಜಿಕ ನ್ಯಾಯದ ಮೇಲೆ ಎಲ್ಲಾ ಸಮುದಾಯಕ್ಕೆ ಮೀಸಲಾತಿ ನೀಡಿದೆ ಎಂದು ಹೇಳಿದರು.

ಸವಾಲು ಸ್ವೀಕರಿಸಿ ಮೀಸಲಾತಿ ಹೆಚ್ಚಳ ಮಾಡಿದ್ದೇವೆ.. ಛಲವಾದಿ ನಾರಾಯಣಸ್ವಾಮಿ : ಮೀಸಲಾತಿ ವಿಚಾರಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ನಾಯಕರು ಬಂಜಾರ ಸಮಾಜದ ಕೆಲವು ಕಿಡಗೇಡಿಗಳ ಮೂಲಕ ಯಡಿಯೂರಪ್ಪ ಮನೆ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ. ಕಾಂಗ್ರೆಸ್ ಪಕ್ಷಕ್ಕೆ ಹಾಗೂ ಕಾಂಗ್ರೆಸ್ ನಾಯಕರಿಗೆ ನೈತಿಕತೆಯೇ ಎಂಬುದು ಇಲ್ಲ ಎಂದು ಬಿಜೆಪಿ ಮುಖಂಡ ಛಲವಾದಿ ನಾರಾಯಣ ಸ್ವಾಮಿ ಆಕ್ರೋಶ ವ್ಯಕ್ತಪಡಿಸಿದರು.

ಸಿದ್ಧರಾಮಯ್ಯ ಸಿಎಂ ಬಸವರಾಜ ಬೊಮ್ಮಾಯಿಯವರಿಗೆ ಗಂಡಸ್ಥನ ಇದ್ದರೆ ಮೀಸಲಾತಿ ಹೆಚ್ಚಳ ಮಾಡುವಂತೆ ಸವಾಲು ಹಾಕಿದ್ದರು. ಈ ನಿಟ್ಟಿನಲ್ಲಿ ಮೀಸಲಾತಿ ಹೆಚ್ಚಳ ಮಾಡಿದ್ದೇವೆ. ಮೊದಲಿಗೆ ಕೇವಲ ಆರು ಜಾತಿಗಳಿದ್ದವು. ಆದರೆ, ಈಗ ಸುಮಾರು 101 ಜಾತಿಗಳಿವೆ. ಈ ಜಾತಿಗಳನ್ನು ಹುಟ್ಟು ಹಾಕಿದ್ದೇ ಕಾಂಗ್ರೆಸ್, ಆದರೆ ಬಿಜೆಪಿ ಸರ್ಕಾರ ಅವರೆಲ್ಲರಿಗೂ ಅನ್ಯಾಯ ಮಾಡದಂತೆ ನ್ಯಾಯಯುತವಾಗಿ ಮೀಸಲಾತಿ ನೀಡಿದೆ ಎಂದರು.

ಮೀಸಲಾತಿಗೆ ಮೊದಲು ವಿರೋಧ ಕೇಳಿ ಬಂದಿತ್ತು. ಆದರೆ ಈ ಮೀಸಲಾತಿ ವಿಚಾರ ಮನವರಿಕೆಯಾದ ಬೆನ್ನಲ್ಲೇ ಎಲ್ಲೆಡೆಯೂ ಪ್ರಶಂಸೆ ವ್ಯಕ್ತವಾಗುತ್ತಿದೆ. ಆದರೆ ಇದನ್ನು ಸಹಿಸಿಕೊಳ್ಳಲು ಸಾಧ್ಯವಾಗದ ಕಾಂಗ್ರೆಸ್ ಪಕ್ಷ ಕೆಲ ಸಮುದಾಯವನ್ನು ಎತ್ತಿಕಟ್ಟಿ ದಾರಿ ತಪ್ಪಿಸುವ ಕಾರ್ಯವನ್ನು ಮಾಡುತ್ತಿದೆ ಎಂದು ಅವರು ಆರೋಪಿಸಿದರು.

ಇದನ್ನೂ ಓದಿ : ಬೆಳಗಾವಿ: 2D ಮೀಸಲಾತಿ ಗೆಜೆಟ್ ಪತ್ರಕ್ಕೆ ಬೆಂಕಿ ಹಚ್ಚಿ ಆಕ್ರೋಶ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.