ETV Bharat / state

ಬೆಳಗಾವಿ: 2D ಮೀಸಲಾತಿ ಗೆಜೆಟ್ ಪತ್ರಕ್ಕೆ ಬೆಂಕಿ ಹಚ್ಚಿ ಆಕ್ರೋಶ

author img

By

Published : Apr 3, 2023, 4:41 PM IST

Updated : Apr 3, 2023, 9:20 PM IST

ಬೆಳಗಾವಿ ಕಿತ್ತೂರು ರಾಣಿ ಚೆನ್ನಮ್ಮ ವೃತ್ತದಲ್ಲಿ ಸರ್ಕಾರ ಪಂಚಮಸಾಲಿ ಸಮುದಾಯಕ್ಕೆ ನೀಡಿರುವ ಮೀಸಲಾತಿ ಗೆಜೆಟ್​ ಪತ್ರಕ್ಕೆ ವಿಜಯಾನಂದ ಕಾಶಪ್ಪನವರ ನೇತೃತ್ವದಲ್ಲಿ ಬೆಂಕಿ ಹಚ್ಚಿ ಪ್ರತಿಭಟನೆ ನಡೆಸಲಾಯಿತು.

panchmasali-community-2d-reservation-gazette-letter-set-on-fire
ಪಂಚಮಸಾಲಿ ಸಮಾಜ 2D ಮೀಸಲಾತಿ ಗೆಜೆಟ್ ಪತ್ರಕ್ಕೆ ಬೆಂಕಿ ಹಚ್ಚಿ ಆಕ್ರೋಶ

ಬೆಳಗಾವಿ: 2D ಮೀಸಲಾತಿ ಗೆಜೆಟ್ ಪತ್ರಕ್ಕೆ ಬೆಂಕಿ ಹಚ್ಚಿ ಆಕ್ರೋಶ

ಬೆಳಗಾವಿ: ಪಂಚಮಸಾಲಿ ಸಮಾಜಕ್ಕೆ ಸರ್ಕಾರ ನೀಡಿರುವ 2D ಮೀಸಲಾತಿ ಗೆಜೆಟ್ ಪತ್ರಕ್ಕೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದ ಘಟನೆ ಬೆಳಗಾವಿ ಕಿತ್ತೂರು ರಾಣಿ ಚೆನ್ನಮ್ಮ ವೃತ್ತದಲ್ಲಿ ನಡೆದಿದೆ. ಪಂಚಮಸಾಲಿ ಮುಖಂಡರಾದ ವಿಜಯಾನಂದ ಕಾಶಪ್ಪನವರ ನೇತೃತ್ವದಲ್ಲಿ ಸಾಂಕೇತಿಕವಾಗಿ ಪ್ರತಿಭಟನೆ ನಡೆಸಿ ಸರ್ಕಾರ ನೀಡಿರುವ ಮೀಸಲಾತಿಯನ್ನು ವಿರೋಧಿಸಿ ಆಕ್ರೋಶ ವ್ಯಕ್ತಪಡಿಸಲಾಯಿತು.

ನಂತರ ಸುದ್ದಿಗೋಷ್ಠಿ ಉದ್ದೇಶಿ ಮಾತನಾಡಿದ ಅವರು, ‘‘ಸರ್ಕಾರ ಪಂಚಮಸಾಲಿ ಸಮಾಜಕ್ಕೆ 2D ಮೀಸಲಾತಿ ನೀಡಿದೆ, ಇದರಲ್ಲಿ ಯಾವುದೇ ನ್ಯಾಯವಿಲ್ಲ. ಎಲ್ಲವೂ ಚುನಾವಣೆ ದೃಷ್ಟಿಯಿಂದ ಮಾಡಿರುವ ಹುನ್ನಾರ ಎಂದು ಆರೋಪಿಸಿದರು. ಕೆಲವರು ಶ್ರೀಗಳಿಗೆ ನಾನು ಜೋರು ಮಾಡಿದ್ದೇನೆ ಎಂದು ಅಪಪ್ರಚಾರ ಮಾಡುತ್ತಿದ್ದಾರೆ. ನಾನು ಶ್ರೀಗಳ ಮುಂದೆ ಅಸಭ್ಯವಾಗಿ ವರ್ತನೆ ಮಾಡಿಲ್ಲ, ಕೆಲವರು ಸುಳ್ಳು ಆರೋಪವನ್ನು ಮಾಡುತ್ತಿದ್ದಾರೆ, ನಾನು ಪಂಚಮಸಾಲಿ ಮೀಸಲಾತಿ ವಿಚಾರದಲ್ಲಿ ಸರ್ಕಾರದ ನಡೆಯನ್ನು ವಿರೋಧ ವ್ಯಕ್ತಪಡಿಸುತ್ತೇನೆ ಎಂದು ಹೇಳಿದರು.

ಇವರು ಹಿಂದುಳಿದ ಆಯೋಗದ ಮಧ್ಯಂತರ ವರದಿಯಿಂದ ಮೀಸಲಾತಿ ನೀಡಿದ್ದಾರೆ. ಮಧ್ಯಂತರ ವರದಿಯಿಂದ ಮೀಸಲಾತಿ ಕೊಡುವುದಕ್ಕೆ ಬರುವುದಿಲ್ಲ, ಕಾನೂನಿನಲ್ಲಿ ಆ ಅವಕಾಶವಿಲ್ಲ ಆದರೆ, ಇವರು ಮೀಸಲಾತಿ ನೀಡಿದ್ದಾರೆ. ಇದು ನ್ಯಾಯಾಲಯದಲ್ಲಿ ನಿಲ್ಲುವುದಿಲ್ಲ ಎಂದು ಹೇಳಿದರು. ಮೀಸಲಾತಿ ವಿಚಾರದಲ್ಲಿ ನಮ್ಮ ಶ್ರೀಗಳಿಗೆ ಒತ್ತಾಯ ಮಾಡಿ ಪ್ರತಿಭಟನೆ ಕೈಬಿಡುವಂತೆ ಮಾಡಿದ್ದಾರೆ, ಯಾರು ಎಂಬುದು ಮುಂದೊಂದು ದಿನ ಹೇಳುತ್ತೇನೆ ಎಂದರು.

ಬಿಜೆಪಿ ಚುನಾವಣಾ ಮೀಸಲಾತಿ: ಶ್ರೀಗಳು ಮೀಸಲಾತಿ ಸಿಕ್ಕಿರುವುದಕ್ಕೆ ಸಂತೋಷ ವ್ಯಕ್ತಪಡಿಸಿ ಕಣ್ಣಿರು ಹಾಕಿಲ್ಲ, ಬದಲಾಗಿ ಮೀಸಲಾತಿ ಸರಿಯಾಗಿ ಸಿಗಲಿಲ್ಲ ಎಂದು ಕಣ್ಣೀರು ಹಾಕಿದ್ದಾರೆ ಎಂದು ಹೇಳಿದರು. ನಾವು ಯಾವುದೇ ಕಾರಣಕ್ಕೂ ಈ ಮೀಸಲಾತಿಯನ್ನು ಒಪ್ಪಿಕೊಳ್ಳುವುದಿಲ್ಲ. ಐದರಿಂದ ಏಳು ಪ್ರತಿಶತ ಮೀಸಲಾತಿ ಹೆಚ್ಚಳ ಮಾಡಿದ್ದಾರೆ, ಇದು ಬಿಜೆಪಿ ಚುನಾವಣಾ ಮೀಸಲಾತಿ, ಇದು ನಮ್ಮ ಸಮುದಾಯ ಮಾಡಿದ ಹೋರಾಟಕ್ಕೆ ಸಿಕ್ಕ ನ್ಯಾಯವಲ್ಲ ಎಂದು ಕಾಶಪ್ಪನವರ ಆಕ್ರೋಶ ವ್ಯಕ್ತಪಡಿಸಿದರು.

ಅಲ್ಪಸಂಖ್ಯಾತರಾದ ಮುಸ್ಲಿಂ ಸಮುದಾಯ ಮೀಸಲಾತಿಯನ್ನು ಲಿಂಗಾಯತ ಸಮುದಾಯಕ್ಕೆ 2 ಪ್ರತಿಶತ ಹಾಗೂ ಒಕ್ಕಲಿಗ ಸಮುದಾಯಕ್ಕೆ 2 ಪ್ರತಿಶತ ಮೀಸಲಾತಿ ಹೆಚ್ಚಳ ಮಾಡಿದ್ದಾರೆ. ಪಂಚಮಸಾಲಿ ಸಮಾಜಕ್ಕೆ 2 ಪ್ರತಿಶತ ಮೀಸಲಾತಿ ನೀಡಿಲ್ಲ, ಇಲ್ಲಿ 40ಕ್ಕೂ ಹೆಚ್ಚು ಸಮುದಾಯಗಳನ್ನು ಒಳಗೊಂಡಂತೆ ಸರ್ಕಾರ ಮೀಸಲಾತಿ ನೀಡಿದೆ. ಸಮುದಾಯ ಇದನ್ನು ಒಪ್ಪುವುದಿಲ್ಲ, ಪಂಚಮಸಾಲಿ ಸಮಾಜ ಸರಿಯಾಗಿ ಬಿಜೆಪಿ ಅವರಿಗೆ ಬುದ್ದಿ ಕಲಿಸುತ್ತಾರೆ ಎಂದು ಪಂಚಮಸಾಲಿ ಹೋರಾಟದ ನೇತೃತ್ವ ವಹಿಸಿದ್ದ ಕಾಶಪ್ಪನವರ ಆಕ್ರೋಶ ವ್ಯಕ್ತಪಡಿಸಿದರು.

ಹೋರಾಟ ಮುಂದುವರೆಸುತ್ತೇವೆ: ರಾಜ್ಯದಲ್ಲಿ ಚುನಾವಣೆ ನೀತಿ ಸಂಹಿತೆ ಜಾರಿಯಾಗಿದೆ. ಚುನಾವಣೆ ಮುಗಿದ ನಂತರ ಮತ್ತೆ ನಾವು ಸಭೆ ಕರೆಯುತ್ತೇವೆ. ಮೀಸಲಾತಿ ಪ್ರಮಾಣ ಪತ್ರ ಪಡೆಯುವವರೆಗೂ ಈ ಹೋರಾಟವನ್ನು ನಡೆಸುತ್ತೇವೆ ಎಂದು ಮಾಜಿ ಶಾಸಕ ಕಾಶಪ್ಪನವರ್ ಇದೇ ವೇಳೆ ಹೇಳಿದರು.

ಇದನ್ನೂ ಓದಿ : ಸರ್ಕಾರವನ್ನು ಬಿಡದೆ ಕಾಡಿದ ಪಂಚಮಸಾಲಿ 2ಎ: ಇಂದಿನ ಸಂಪುಟ ಸಭೆಯಲ್ಲಿ ಸಿಗುತ್ತಾ ಮೀಸಲಾತಿ ಘೋಷಣೆ ಭಾಗ್ಯ?

Last Updated : Apr 3, 2023, 9:20 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.