ETV Bharat / sports

ಸಿಎಸ್​ಕೆ - ಆರ್​ಸಿಬಿ ಮ್ಯಾಚ್​ ಟಿಕೆಟ್​ ನೀಡುವುದಾಗಿ ಯುವಕನಿಂದ ₹2.94 ಲಕ್ಷ ಎಗರಿಸಿದ ಸೈಬರ್​ ವಂಚಕರು - Cyber fraud

author img

By ETV Bharat Karnataka Team

Published : May 16, 2024, 8:48 PM IST

ಸೈಬರ್​ ವಂಚಕರ ಬಗ್ಗೆ ಎಚ್ಚರಿಕೆ ವಹಿಸಿ ಎಂದು ಜಾಗೃತಿ ಮೂಡಿಸಿದರೂ, ಸುಶಿಕ್ಷಿತರೇ ಜಾಲಕ್ಕೆ ಸಿಕ್ಕಿ ವಂಚನೆಗೆ ಒಳಗಾಗುತ್ತಿದ್ದಾರೆ. ಸಿಎಸ್​ಕೆ- ಆರ್​ಸಿಬಿ ಪಂದ್ಯದ ಟಿಕೆಟ್​ ನೀಡುವುದಾಗಿ ಯುವಕನೊಬ್ಬನ ಖಾತೆಯಲ್ಲಿದ್ದ 2.94 ಲಕ್ಷ ರೂಪಾಯಿ ಹಣವನ್ನು ಸೈಬರ್​ ಅಪರಾಧಿಗಳು ಎಗರಿಸಿದ್ದಾರೆ.

ಸೈಬರ್​ ವಂಚನೆ
ಸೈಬರ್​ ವಂಚನೆ (File Photo ETV Bharat)

ಬೆಂಗಳೂರು: ಪ್ರಸ್ತಕ ಐಪಿಎಲ್ ಪಂದ್ಯಾವಳಿಯು ರೋಚಕತೆ ಪಡೆದಿದ್ದು, ಪ್ಲೇಆಫ್​ ಅರ್ಹತೆಗಾಗಿ ತಂಡಗಳು ಸೆಣಸಾಡುತ್ತಿವೆ. ಅದರಲ್ಲಿ ಮೇ 18 ರಂದು ಆರ್​ಸಿಬಿ ಮತ್ತು ಸಿಎಸ್​ಕೆ ನಡುವಿನ ಪಂದ್ಯ ಭಾರಿ ಕುತೂಹಲಕ್ಕೆ ಕಾರಣವಾಗಿದೆ. ಅತಿ ಮಹತ್ವದ ಪಂದ್ಯಕ್ಕೆ ನಗರದ ಚಿನ್ನಸ್ವಾಮಿ ಕ್ರೀಡಾಂಗಣ ಸಾಕ್ಷಿಯಾಗಲಿದೆ.

ಪಂದ್ಯವನ್ನು ಹತ್ತಿರದಿಂದ ಕಣ್ತುಂಬಿಕೊಳ್ಳಲು ಜನರು ಪಂದ್ಯದ ಟಿಕೆಟ್​ಗಾಗಿ ಸಾವಿರಗಟ್ಟಲೇ ಸುರಿಯುತ್ತಿದ್ದಾರೆ. ಭಾರಿ ದುಬಾರಿಯಾಗಿರುವ ಟಿಕೆಟ್​ಗಳನ್ನು ಖರೀದಿಸಲು ಅಭಿಮಾನಿಗಳು ಇನ್ನಿಲ್ಲದ ಕಸರತ್ತು ಮಾಡುತ್ತಿದ್ದಾರೆ. ಇದನ್ನೇ ಬಳಸಿಕೊಂಡ ಸೈಬರ್​ ಅಪರಾಧಿಗಳು ಯುವಕನೊಬ್ಬನ ಬಳಿ 2.94 ಲಕ್ಷ ರೂಪಾಯಿ ಹಣ ಎಗರಿಸಿದ್ದಾರೆ.

ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುವ ಶಶಾಂಕ್​ (26) ಹಣ ಕಳೆದುಕೊಂಡ ವ್ಯಕ್ತಿ. ಸಾಮಾಜಿಕ ಜಾಲತಾಣ ಇನ್​ಸ್ಟಾಗ್ರಾಮ್​ನಲ್ಲಿ ಟಿಕೆಟ್​ ಲಭ್ಯವಿರುವುದಾಗಿ ಬಂದ ನಕಲಿ ಲಿಂಕ್​ ಓಪನ್​ ಮಾಡಿ, ಹಣ ಕಳೆದುಕೊಂಡಿದ್ದಾನೆ.

ಸಿಎಸ್​ಕೆ ಮತ್ತು ಆರ್​ಸಿಬಿ ಪಂದ್ಯ ಟಿಕೆಟ್​ ಲಭ್ಯ ಇರುವ ಬಗ್ಗೆ ಮೇ 11 ರಂದು ಬಂದ ಜಾಹೀರಾತಿನ ಕೊಂಡಿಯನ್ನು ಒತ್ತಿದ್ದು, ಅಪರಿಚಿತ ಅಪರಾಧಿಯನ್ನು ಸಂಪರ್ಕಿಸಿದ್ದಾನೆ. ಪದ್ಮಾ ಸಿನ್ಹಾ ವಿಜಯ್​ಕುಮಾರ್ ಎಂದು ಪರಿಚಯಿಸಿಕೊಂಡ ಆರೋಪಿ, ಟಿಕೆಟ್ ಲಭ್ಯವಿರುವುದಾಗಿ ಹೇಳಿದ್ದಾನೆ. ಇದನ್ನು ನಂಬಿದ ಶಶಾಂಕ್​ ಮೂರು ಟಿಕೆಟ್​ಗಳಿಗೆ 7,900 ರೂಪಾಯಿ ಹಣವನ್ನು ಆನ್​ಲೈನ್ ಮೂಲಕ ಪಾವತಿಸಿದ್ದಾನೆ.

ಅನಂತರ ಟಿಕೆಟ್ ನೀಡದಿದ್ದಾಗ ಅನುಮಾನ ಬಂದು ಹಣ ನೀಡುವಂತೆ ಆರೋಪಿಯನ್ನ ಕೇಳಿದ್ದಾನೆ. ಹಣ ವಾಪಸ್​ ಕಳುಹಿಸುವುದಾಗಿ ನಂಬಿಸಿದ ಆರೋಪಿ ಹಂತ ಹಂತವಾಗಿ ಶಶಾಂಕ್​ನ ಬ್ಯಾಂಕ್ ಖಾತೆಯಲ್ಲಿದ್ದ 2.94 ಲಕ್ಷ ರೂಪಾಯಿ ವರ್ಗಾಯಿಸಿಕೊಂಡು ವಂಚಿಸಿದ್ದಾನೆ‌‌.

ತಾನು ಮೋಸ ಹೋದ ಬಗ್ಗೆ ತಿಳಿದುಕೊಂಡ ಶಶಾಂಕ್​ ಈ ಸಂಬಂಧ ಅಪರಿಚಿತ ಆರೋಪಿಯ ವಿರುದ್ಧ ನಗರದ‌ ಸೆಂಟ್ರಲ್ ಸೆನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾನೆ. ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಇದನ್ನೂ ಓದಿ: ಮೇ 18 ರ ಆರ್​ಸಿಬಿ - ಸಿಎಸ್​ಕೆ ನಡುವಿನ 'ವರ್ಚುಯಲ್​ ಫೈನಲ್'​ಗೆ ಮಳೆ ಭೀತಿ: ಹವಾಮಾನ ಇಲಾಖೆ ಹೇಳೋದೇನು? - RCB Vs CSK match

ETV Bharat Logo

Copyright © 2024 Ushodaya Enterprises Pvt. Ltd., All Rights Reserved.