ETV Bharat / sports

ಮೇ 18 ರ ಆರ್​ಸಿಬಿ - ಸಿಎಸ್​ಕೆ ನಡುವಿನ 'ವರ್ಚುಯಲ್​ ಫೈನಲ್'​ಗೆ ಮಳೆ ಭೀತಿ: ಹವಾಮಾನ ಇಲಾಖೆ ಹೇಳೋದೇನು? - RCB Vs CSK match

author img

By ETV Bharat Karnataka Team

Published : May 16, 2024, 3:31 PM IST

ಬೆಂಗಳೂರಿನಲ್ಲಿ ಮೇ 18 ರಂದು ಸಿಎಸ್​ಕೆ ಮತ್ತು ಆರ್​ಸಿಬಿ ನಡುವಿನ ಪಂದ್ಯಕ್ಕೆ ಮಳೆ ಅಡ್ಡಿಯಾಗುವ ಸಾಧ್ಯತೆ ಇದೆ.

ಆರ್​ಸಿಬಿ- ಸಿಎಸ್​ಕೆ ನಡುವಿನ ಪಂದ್ಯಕ್ಕೆ ಮಳೆ ಭೀತಿ
ಆರ್​ಸಿಬಿ- ಸಿಎಸ್​ಕೆ ನಡುವಿನ ಪಂದ್ಯಕ್ಕೆ ಮಳೆ ಭೀತಿ (IANS Photos)

ಬೆಂಗಳೂರು: ಯಾವುದೇ ಕಾರಣಕ್ಕೂ ಹೀಗಾಗಬಾರದು. ಹಾಗೊಂದು ವೇಳೆ ಇದು ನಡೆದಿದ್ದೇ ಆದಲ್ಲಿ, ರಾಯಲ್​ ಚಾಲೆಂಜರ್ಸ್​ ಬೆಂಗಳೂರು (ಆರ್​ಸಿಬಿ) ತಂಡದ ಕೋಟ್ಯಂತರ ಅಭಿಮಾನಿಗಳ ಕನಸು ನುಚ್ಚು ನೂರಾಗಲಿದೆ. ಫೀನಿಕ್ಸ್​ ಹಕ್ಕಿಯಂತೆ ಎದ್ದುಬಂದು ನಡೆಸಿದ ಹೋರಾಟ ಕೊನೆ ಕ್ಷಣದಲ್ಲಿ ಮಂಜಿನಂತೆ ಕರಗಿ ಹೋಗಲಿದೆ.

ಈ ಎಲ್ಲಾ ದುಗುಡಕ್ಕೆ ಕಾರಣವಾಗುತ್ತಿರುವುದು ವರ್ಷಧಾರೆ. ಮುಂದಿನ 5 ದಿನಗಳಲ್ಲಿ ರಾಜ್ಯದಲ್ಲಿ ಮಳೆಯಾಗಲಿದೆ ಎಂಬ ಹವಾಮಾನ ಇಲಾಖೆಯ ಮಾಹಿತಿ ಸಂತೋಷದ ವಿಚಾರವಾದರೂ, ಆರ್​ಸಿಬಿ ತಂಡಕ್ಕೆ ಮಾತ್ರ ಬರಸಿಡಿಲು ಬಡಿದಂತಾಗಿದೆ.

ಮೆಗಾ ಹಣಾಹಣಿಗೆ ಮಳೆ ಭೀತಿ: ಮೇ 18 ರಂದು ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಚೆನ್ನೈ ಸೂಪರ್​ ಕಿಂಗ್ಸ್​ (ಸಿಎಸ್​ಕೆ) ವಿರುದ್ಧ ನಡೆಯಲಿರುವ ಕೊನೆಯ ಲೀಗ್​ ಪಂದ್ಯ ಆರ್​ಸಿಬಿ ಪ್ಲೇಆಫ್​ ಸ್ಥಾನವನ್ನು ನಿರ್ಧರಿಸಲಿದೆ. ಏನೇ ಆದರೂ ಪಂದ್ಯ ನಡೆಯಲೇಬೇಕು ಎಂಬುದು ಅಭಿಮಾನಿಗಳ ನಿರೀಕ್ಷೆಯ ನಡುವೆ ಮಳೆರಾಯ ತೊಡರುಗಾಲು ಹಾಕುವ ಸಾಧ್ಯತೆ ಹೆಚ್ಚಿದೆ. ಫೈನಲ್​ಗೂ ಮುನ್ನದ ಫೈನಲ್​ ಎಂದೇ ಬಿಂಬಿತವಾಗಿರುವ ಮೆಗಾ ಹಣಾಹಣಿಯು ಮಳೆ ನೀರಲ್ಲಿ ಕೊಚ್ಚಿಹೋಗುವ ಭೀತಿ ಎದುರಾಗಿದೆ.

ಮೇ 17ರ ಶುಕ್ರವಾರದಿಂದ ಮೇ 21ರ ಮಂಗಳವಾರದವರೆಗೆ ಅಂದರೆ ಮುಂದಿನ 5 ದಿನಗಳ ಕಾಲ ಬೆಂಗಳೂರಿನಲ್ಲಿ ಮಳೆ ಮತ್ತು ಗುಡುಗು ಸಹಿತ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಹವಾಮಾನ ಇಲಾಖೆಯ ಮಾಹಿತಿಯಂತೆ, ಮೇ 18 ರ ಸಂಜೆ ವಾತಾವರಣದಲ್ಲಿ ಆರ್ದ್ರತೆ ಮಟ್ಟವು ಹೆಚ್ಚರಲಿದ್ದು, ಸಂಜೆ ಶೇಕಡಾ 90 ರಷ್ಟು ಮಳೆಯಾಗುವ ಸಾಧ್ಯತೆಯಿದೆ. ಬೆಂಗಳೂರಿನಲ್ಲಿ ಮೇ 14 ರಿಂದ ಮೇ 17 ರವರೆಗೆ ಸಾಧಾರಣ ಮಳೆ ಮತ್ತು ಭಾಗಶಃ ಮೋಡ ಕವಿದ ವಾತಾವರಣ ಇರಲಿದೆ. ಮೇ 18 ರಿಂದ 20 ರವರೆಗೆ ಭಾಗಶಃ ಮೋಡ ಕವಿದ ವಾತಾವರಣ ಅಥವಾ ಬಿರುಗಾಳಿಯ ವಾತಾವರಣವನ್ನು ನಿರೀಕ್ಷಿಸಬಹುದು. ನೈಋತ್ಯ ಮಾನ್ಸೂನ್​ ಶುರುವಿನಿಂದಾಗಿ ಮಳೆ ಬರುವ ಸಾಧ್ಯತೆ ಹೆಚ್ಚಿದೆ ಎಂದು ಇಲಾಖೆ ತಿಳಿಸಿದೆ.

ಪಂದ್ಯ ರದ್ದಾದರೆ ಏನಾಗುತ್ತೆ?: ಆರ್​ಸಿಬಿ ಮತ್ತು ಸಿಎಸ್​ಕೆ ನಡುವಿನ ಪ್ಲೇಆಫ್ ಅರ್ಹತಾ ಪಂದ್ಯವು ವರ್ಚುವಲ್ ಫೈನಲ್​ ಎಂದೇ ಹೇಳಲಾಗುತ್ತಿದೆ. ಲೀಗ್‌ನಲ್ಲಿ ಮೊದಲ 8 ಪಂದ್ಯಗಳಲ್ಲಿ 7 ರಲ್ಲಿ ಸೋತಿದ್ದ ಆರ್​ಸಿಬಿ ಕೊನೆಯ 5 ಪಂದ್ಯಗಳಲ್ಲಿ ಗೆದ್ದು ಪುಟಿದೆದ್ದಿದೆ. ಸದ್ಯ 12 ಅಂಕಗಳೊಂದಿಗೆ 6ನೇ ಸ್ಥಾನದಲ್ಲಿದೆ. ಪ್ಲೇಆಫ್‌ಗೆ ಅರ್ಹತೆ ಪಡೆಯಲು, ಸಿಎಸ್​ಕೆ ವಿರುದ್ಧದ ಕೊನೆ ಪಂದ್ಯದಲ್ಲಿ 18 ಅಥವಾ ಅದಕ್ಕಿಂತ ಹೆಚ್ಚು ರನ್‌ಗಳಿಂದ ಗೆಲ್ಲಲೇಬೇಕು ಅಥವಾ ಸಿಎಸ್​ಕೆ ನೀಡಿದ ಗುರಿಯನ್ನು 18 ಓವರ್‌ಗಳ ಒಳಗೆ ಗುರಿ ಮುಟ್ಟಬೇಕು. ಮಳೆಯಿಂದಾಗಿ ಪಂದ್ಯ ರದ್ದಾದರೆ, ಎರಡೂ ತಂಡಗಳು ತಲಾ 1 ಅಂಕವನ್ನು ಪಡೆಯುತ್ತವೆ. ಸಿಎಸ್​ಕೆ 15 ಅಂಕಗಳೊಂದಿಗೆ ಪ್ಲೇಆಫ್​ಗೆ ತಲುಪಿದರೆ, ಆರ್​ಸಿಬಿ ಟೂರ್ನಿಯಿಂದ ಹೊರಬೀಳಲಿದೆ.

ಈಗಾಗಲೇ ಇಂಗ್ಲೆಂಡ್​ನ ವಿಲ್​ ಜಾಕ್ಸ್​, ಟಾಪ್ಲಿ ತವರಿಗೆ ಮರಳಿದ್ದು, ತಂಡಕ್ಕೆ ದೊಡ್ಡ ಹಿನ್ನಡೆ ಉಂಟು ಮಾಡಿದೆ. 17ನೇ ಆವೃತ್ತಿಯಲ್ಲಿ ಪ್ರಶಸ್ತಿ ಗೆಲ್ಲುವ ನಿರೀಕ್ಷೆ ಹುಟ್ಟಿಸಿರುವ ತಂಡಕ್ಕೆ ಮಳೆರಾಯ ಅಡ್ಡಗಾಲು ಹಾಕದಿರಲಿ ಎಂಬುದು ಅಭಿಮಾನಿಗಳ ಕೋಟಿ ಪ್ರಾರ್ಥನೆಯಾಗಿದೆ.

ಇದನ್ನೂ ಓದಿ: ಕ್ರಿಕೆಟ್ ಪ್ರೇಮಿಗಳಿಗೆ ಗುಡ್ ನ್ಯೂಸ್, ಥಿಯೇಟರ್‌ಗಳಲ್ಲಿ T20 ವಿಶ್ವಕಪ್ ಪಂದ್ಯಗಳು! - 2024 T20 World Cup

ETV Bharat Logo

Copyright © 2024 Ushodaya Enterprises Pvt. Ltd., All Rights Reserved.