ETV Bharat / state

ಶೀಘ್ರದಲ್ಲೇ ನಂದಿನಿ ವಿವಾದ ತಣಿಸುವಂತೆ ರಾಜ್ಯ ಘಟಕಕ್ಕೆ ಬಿಜೆಪಿ ಹೈಕಮಾಂಡ್ ಸೂಚನೆ

author img

By

Published : Apr 10, 2023, 2:15 PM IST

ಸದ್ಯಕ್ಕೆ ರಾಜ್ಯದಲ್ಲಿ ಉಂಟಾಗಿರುವ ನಂದಿನಿ ವಿವಾದ ಬಿಜೆಪಿ ಹೈಕಮಾಂಡ್ ನಿದ್ದೆಗೆಡಿಸಿದ್ದು, ಕೂಡಲೇ ವಿವಾದ ತಣಿಸುವ ಹೊಸ ಟಾಸ್ಕ್ ಅನ್ನು ರಾಜ್ಯ ನಾಯಕರಿಗೆ ನೀಡಿದೆ.

bjp
ಕೇಂದ್ರ ಗೃಹ ಸಚಿವ ಅಮಿತ್ ಶಾ

ಬೆಂಗಳೂರು: ರಾಜ್ಯ ವಿಧಾನಸಭಾ ಚುನಾವಣೆ ಕಾವು ಶುರುವಾದ ಮೇಲೆ ಕೆಎಂಎಫ್ ವಿಚಾರದಲ್ಲಿ ಎರಡನೇ ಬಾರಿಗೆ ಬಿಜೆಪಿ ಇಕ್ಕಟ್ಟಿಗೆ ಸಿಲುಕಿದೆ. ಕಾಂಗ್ರೆಸ್​​​ನ ಟೂಲ್ ಕಿಟ್​ಗೆ ಸಮರ್ಥವಾದ ತಿರುಗೇಟು ನೀಡಿ ರಾಜ್ಯದ ಜನತೆಗೆ ವಾಸ್ತವದ ಬಗ್ಗೆ ಮಾಹಿತಿ ನೀಡಬೇಕು ಎಂದು ಬಿಜೆಪಿ ಹೈಕಮಾಂಡ್ ರಾಜ್ಯ ಘಟಕ್ಕೆ ಸಂದೇಶ ರವಾನಿಸಿ. ಹಾಗಾಗಿ ಇಡೀ ಬಿಜೆಪಿಯೇ ಇದೀಗ ನಂದಿನಿ ಪರವಾಗಿ ನಿಂತು ಕಾಂಗ್ರೆಸ್ ಮತ್ತು ಜೆಡಿಎಸ್ ವಿರುದ್ಧ ಮುಗಿಬಿದ್ದಿದೆ.

2022ರ ವರ್ಷಾಂತ್ಯದ ವೇಳೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಮಂಡ್ಯದ ಮೆಗಾ ಡೇರಿ ಉದ್ಘಾಟನೆ ವೇಳೆ ಅಮುಲ್ ಮತ್ತು ನಂದಿನಿ ಒಟ್ಟಾಗಿ ತಂತ್ರಜ್ಞಾನ ವಿನಿಮಯ ಮಾಡಿಕೊಂಡು ಮತ್ತಷ್ಟು ಬೆಳೆಯಬೇಕು ಎನ್ನುವ ಹೇಳಿಕೆ ನೀಡಿದ್ದು ದೊಡ್ಡ ವಿವಾದಕ್ಕೆ ಕಾರಣವಾಗಿತ್ತು. ಗುಜರಾತ್ ಮೂಲದ ಅಮುಲ್ ಜೊತೆ ರಾಜ್ಯದ ಕೆಎಂಎಫ್ ಅನ್ನು ವಿಲೀನ ಮಾಡುವ ಹುನ್ನಾರ ನಡೆಸಲಾಗಿದೆ ಎನ್ನುವ ಆಪಾದನೆ ಬಿಜೆಪಿ ಮೇಲೆ ಬಂದಿತ್ತು. ಆ ವೇಳೆ, ಈ ವಿವಾದದಿಂದ ಹೊರಬರಲು ರಾಜ್ಯ ಬಿಜೆಪಿ ಸಾಕಷ್ಟು ಪ್ರಯಾಸ ಪಡಬೇಕಾಯಿತು. ಮುಖ್ಯಮಂತ್ರಿ ಆದಿಯಾಗಿ ಇಡೀ ಸರ್ಕಾರವೇ ನಂದಿನಿ ಅಮುಲ್ ಜೊತೆ ವಿಲೀನ ಆಗಲ್ಲ, ಅಂತಹ ಪ್ರಸ್ತಾಪವೇ ಇಲ್ಲ ಎಂದು ಸ್ಪಷ್ಟೀಕರಣ ನೀಡಿತ್ತು. ರಾಜ್ಯ ಬಿಜೆಪಿ ನಾಯಕರು ಕೂಡ ಪ್ರತಿಪಕ್ಷ ಕಾಂಗ್ರೆಸ್ ಮತ್ತು ಜೆಡಿಎಸ್ ವಿರುದ್ಧ ವಾಗ್ದಾಳಿ ನಡೆಸಿ ಅಮುಲ್ ಜೊತೆ ಕೆಎಂಎಫ್ ವಿಲೀನ ಇಲ್ಲ ಎಂದು ರಾಜ್ಯದ ಜನತೆಗೆ ಸಂದೇಶ ರವಾನಿಸಿ ವಿವಾದವನ್ನು ತಣಿಸುವಲ್ಲಿ ಸಫಲರಾಗಿದ್ದರು.

ಇದರ ನಡುವೆ ಮತ್ತೊಮ್ಮೆ ನಂದಿನಿ ಸುದ್ದಿಯಲ್ಲಿದೆ. ಇ ಕಾಮರ್ಸ್ ಮೂಲಕ ನಂದಿನಿ ಹಾಲು ಮತ್ತು ಮೊಸರು ಸಿಲಿಕಾನ್ ಸಿಟಿಗೆ ಪ್ರವೇಶ ಮಾಡುವ ಪ್ರಕಟಣೆ ಹೊರಡಿಸುತ್ತಿದ್ದಂತೆಯೇ ಇದರ ಹಿಂದೆ ಅಮಿತ್ ಶಾ ಇದ್ದಾರೆ, ಅಮುಲ್ ಜೊತೆ ಕೆಎಂಎಫ್ ವಿಲೀನ ವಿಫಲವಾದ ಹಿನ್ನೆಲೆಯಲ್ಲಿ ನಂದಿನಿ ಮಾರುಕಟ್ಟೆ ಕುಸಿಯುವಂತೆ ಮಾಡಿ ಆ ಮೂಲಕ ವಿಲೀನಗೊಳಿಸುವ ಪ್ರಯತ್ನ ನಡೆಸಲಾಗುತ್ತಿದೆ ಎನ್ನುವ ಮತ್ತೊಂದು ಆಪಾದನೆ ಇದೀಗ ಬಿಜೆಪಿ ಮೇಲೆ ಬಂದಿದೆ. ಇದು ಬಿಜೆಪಿಗೆ ಮತ್ತೊಂದು ನುಂಗಲಾರದ ತುತ್ತಾಗಿ ಪರಿಣಮಿಸಿದೆ. ಮೂರು ತಿಂಗಳ ಹಿಂದಷ್ಟೇ ಸಿಲುಕಿದ್ದ ಮತ್ತದೇ ಕೆಎಂಎಫ್​ನ ಹೊಸ ವಿವಾದದಲ್ಲಿ ತಳುಕು ಹಾಕಿಕೊಂಡಿದೆ.

ಚುನಾವಣೆ ನಡೆಯುವ ವೇಳೆ ಇಂತಹ ಆರೋಪ ಬಿಜೆಪಿಗೆ ಪ್ರತಿಕೂಲ ಪರಿಣಾಮ ಬೀರುವ ಸಾಧ್ಯತೆ ಹೆಚ್ಚು. ಅದರಲ್ಲಿಯೂ ಹಳೆ ಮೈಸೂರು ಭಾಗದಲ್ಲಿ ಬಿಜೆಪಿ ಪ್ರಾಬಲ್ಯ ಇಲ್ಲ, ಈ ಬಾರಿ ಹಳೆ ಮೈಸೂರಿನಲ್ಲಿ ಪ್ರಾಬಲ್ಯ ಮೆರೆಯಲು ಬಿಜೆಪಿ ಮಾಸ್ಟರ್ ಪ್ಲಾನ್ ರೂಪಿಸಿದೆ. ಆದರೆ, ಇದೀಗ ಹಳೆ ಮೈಸೂರು ಭಾಗದಲ್ಲಿ ಸದೃಢವಾಗಿ ಬೆಳೆದು ನಿಂತಿರುವ ಕೆಎಂಎಫ್ ರೈತರ ಜೀವನದ ಭಾಗವಾಗಿಯೇ ಹೋಗಿದೆ. ಹಾಗಾಗಿ, ಕೆಎಂಎಫ್ ವಿರುದ್ಧ ಬಿಜೆಪಿ ಇದೆ ಎನ್ನುವ ನಂಬಿಕೆ ಜನರಲ್ಲಿ ಬೇರೂರಿದಲ್ಲಿ, ಈ ಭಾಗದಲ್ಲಿ ಬಿಜೆಪಿ ಭರವಸೆ ಭರವಸೆಯಾಗಿಯೇ ಉಳಿಯಲಿದೆ.
ಅಲ್ಲದೆ, ಇಡೀ ರಾಜ್ಯದಲ್ಲಿ ಕೆಎಂಎಫ್ ನಂಬಿ ಲಕ್ಷಾಂತರ ಕುಟುಂಬ ಜೀವನ ಸಾಗಿಸುತ್ತಿದ್ದು, ಅತಿ ದೊಡ್ಡ ವರ್ಗದ ವಿರೋಧಕ್ಕೆ ಸಿಲುಕಿ ಚುನಾವಣೆಯಲ್ಲಿ ಹಿನ್ನಡೆ ಅನುಭವಿಸಬೇಕಾಗಲಿದೆ. ಇದನ್ನು ಅರಿತ ಬಿಜೆಪಿ ಹೈಕಮಾಂಡ್ ಪಕ್ಷದ ರಾಜ್ಯ ಘಟಕ್ಕೆ ನಂದಿನಿ ವಿವಾದ ಕಾಂಗ್ರೆಸ್​ನ ಟೂಲ್ ಕಿಟ್​ನ ಭಾಗವಾಗಿದ್ದು, ಜೆಡಿಎಸ್​ನ ದಾಳವೂ ಇದರಲ್ಲಿದೆ. ಇದನ್ನು ಜನರಿಗೆ ಸ್ಪಷ್ಟವಾಗಿ ತಿಳಿಯುವಂತೆ ಸತ್ಯವನ್ನು ಎಳೆ ಎಳೆಯಾಗಿ ಬಿಚ್ಚಿಡಬೇಕು, ಆರೋಪ ಮಾಡುತ್ತಿರುವ ಪ್ರತಿಪಕ್ಷಗಳ ನಾಯಕರ ವಿರುದ್ಧವೂ ವಾಗ್ದಾಳಿ ನಡೆಸಿ ವಿವಾದವನ್ನು ತಣಿಸಬೇಕು ಎಂದು ಸಂದೇಶ ನೀಡಿದೆ.

ಇದನ್ನೂ ಓದಿ : ನಮಗೆ ನಂದಿನಿ, ಗೋವು ಎರಡೂ ಮುಖ್ಯ; ಕೆಎಂಎಫ್ ವಿಚಾರದಲ್ಲಿ ಆಧಾರರಹಿತ ಆರೋಪ: ರವಿಕುಮಾರ್

ಟಿಕೆಟ್ ಘೋಷಣೆ ಸಮಯದಲ್ಲಿ ಈ ರೀತಿಯ ವಿವಾದ ಪಕ್ಷಕ್ಕೆ ನಕಾರಾತ್ಮಕ ಫಲಿತಾಂಶ ತಂದುಕೊಡುವ ಸಾಧ್ಯತೆಯೇ ಹೆಚ್ಚು.ಕನ್ನಡದ ಅಸ್ಮಿತೆ ವಿಚಾರದಲ್ಲಿ ಜನತೆ ಬಹಳ ಸೂಕ್ಷ್ಮ. ಹಾಗಾಗಿ, ಕರ್ನಾಟಕದ ಕೆಎಂಎಫ್​ಗೆ ಬಿಜೆಪಿಯಿಂದ ಧಕ್ಕೆಯಾಗಲಿದೆ ಎನ್ನುವ ಆರೋಪದಿಂದ ಈಗಲೇ ಹೊರಬರಬೇಕು. ಇಲ್ಲದೇ ಇದ್ದಲ್ಲಿ ಚುನಾವಣೆಯಲ್ಲಿ ಇದೇ ವಿಷಯ ಹೈಲೈಟ್ ಆಗಲಿದ್ದು, ಬಿಜೆಪಿ ದೊಡ್ಡ ಬೆಲೆ ತೆರಬೇಕಾಗಲಿದೆ. ಕೂಡಲೇ ಎಲ್ಲ ನಾಯಕರು ನಂದಿನಿ ವಿವಾದಕ್ಕೆ ತೆರೆ ಎಳೆಯಲು ಮುಂದಾಗಿ ಎನ್ನುವ ಖಡಕ್ ಸಂದೇಶ ರವಾನಿಸಿದೆ.

ಸದ್ಯದಲ್ಲೇ ನರೇಂದ್ರ ಮೋದಿ, ಅಮಿತ್ ಶಾ ಹಾಗೂ ಯೋಗಿ ಆದಿತ್ಯನಾಥ್ ಸೇರಿದಂತೆ ರಾಷ್ಟ್ರೀಯ ನಾಯಕರ ರಾಜ್ಯ ಪ್ರವಾಸ ಆರಂಭವಾಗಲಿದ್ದು, ಚುನಾವಣಾ ದಿನಾಂಕ ಘೋಷಣೆಯಾದ ನಂತರ ಮೊದಲ ಚುನಾವಣಾ ಪ್ರಚಾರ ಇದಾಗಲಿದೆ. ಅಷ್ಟರಲ್ಲಿ ಈ ವಿವಾದ ತಣ್ಣಗಾಗಿರಬೇಕು, ಈ ವಿವಾದದಿಂದ ಬಿಜೆಪಿ ಪ್ರಚಾರಕ್ಕೆ ಅದರಲ್ಲಿಯೂ ರಾಷ್ಟ್ರೀಯ ನಾಯಕರು ಪ್ರಚಾರಕ್ಕೆ ಆಗಮಿಸಿದಾಗ ಮುಜುಗರದ ಸನ್ನಿವೇಶ ಎದುರಾಗಬಾರದು ಎನ್ನುವ ಸೂಚನೆ ನೀಡಿದೆ.

ಹೈಕಮಾಂಡ್​ನ ಸಂದೇಶ ಬರುತ್ತಿದ್ದಂತೆ ಮತ್ತೆ ಕೆಎಂಎಫ್ ಪರ ಬ್ಯಾಟಿಂಗ್ ಆರಂಭಿಸಿರುವ ಬಿಜೆಪಿ ನಾಯಕರು ಪ್ರತಿ ದಿನವೂ ನಿರಂತರವಾಗಿ ಕೆಎಂಎಫ್ ವಿಚಾರದ ಕುರಿತು ಸುದ್ದಿಗೋಷ್ಠಿ ನಡೆಸಿ ಸ್ಪಷ್ಟೀಕರಣ ನೀಡುತ್ತಿದ್ದಾರೆ. ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, ರಾಜ್ಯ ಸಹಕಾರಿ ಸಚಿವ ಎಸ್.ಟಿ ಸೋಮಶೇಖರ್, ಸಚಿವರಾದ ಸುಧಾಕರ್, ಅಶ್ವತ್ಥ ನಾರಾಯಣ, ರಾಜ್ಯ ಪ್ರಧಾನ ಕಾರ್ಯದರ್ಶಿ ರವಿಕುಮಾರ್ ಸೇರಿದಂತೆ ರಾಜ್ಯದ ನಾಯಕರು ಕೆಎಂಎಫ್ ವಿಚಾರದಲ್ಲಿ ಸ್ಪಷ್ಟೀಕರಣ ನೀಡುತ್ತಿದ್ದಾರೆ. ಕಾಂಗ್ರೆಸ್ ಮತ್ತು ಜೆಡಿಎಸ್ ವಿರುದ್ಧ ತೀವ್ರ ವಾಗ್ದಾಳಿ ನಡೆಸುತ್ತಿದ್ದಾರೆ. ಜನರ ಗಮನ ಬೇರೆಡೆ ಸೆಳೆದು ಬಿಜೆಪಿ ವರ್ಚಸ್ಸು ಕುಸಿಯುವಂತೆ ಮಾಡುವ ಪ್ರಯತ್ನಕ್ಕೆ ತಡೆ ಒಡ್ಡಲು ಇನ್ನಿಲ್ಲದ ಕಸರತ್ತು ನಡೆಸುತ್ತಿದ್ದಾರೆ.

ಇದನ್ನೂ ಓದಿ : ವೋಟ್ ಬ್ಯಾಂಕ್ ರಾಜಕಾರಣಕ್ಕಾಗಿ ನಂದಿನಿ ಬಗ್ಗೆ ಕೆಲವರಿಂದ ಅಪಪ್ರಚಾರ: ಕೇಂದ್ರ ಸಚಿವೆ ಕರಂದ್ಲಾಜೆ

ಬಿಜೆಪಿ ರಾಷ್ಟ್ರೀಯ ನಾಯಕ ಅಮಿತ್ ಮಾಳವಿಯಾ ಸರಣಿ ಟ್ವೀಟ್ ಮಾಡುವ ಮೂಲಕ ರಾಜ್ಯ ಬಿಜೆಪಿ ಸರ್ಕಾರ ಕೆಎಂಎಫ್ ಬೆಳೆಯಲು ನೀಡಿದ ಕೊಡುಗೆಯನ್ನು ಪ್ರಸ್ತಾಪಿಸಿದ್ದಾರೆ. ಬಿಜೆಪಿ ಅಧಿಕಾರಕ್ಕೆ ಬರುವವರೆಗೂ 10 ಸಾವಿರ ಕೋಟಿ ರೂ.ಗಳ ವಹಿವಾಟ ನಡೆಸುತ್ತಿದ್ದ ಕೆಎಂಎಫ್, ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ನಂತರ 25 ಸಾವಿರ ಕೋಟಿ ವಹಿವಾಟು ನಡೆಸುತ್ತಿದೆ. ಇದರಲ್ಲಿ 20 ಸಾವಿರ ಕೋಟಿ ಹಣ ರೈತರಿಗೆ ವಾಪಸ್ ಹೋಗುತ್ತಿದೆ ಎಂದು ರಾಜ್ಯ ಬಿಜೆಪಿ ಪರ ಬ್ಯಾಟಿಂಗ್ ಮಾಡಿದ್ದಾರೆ. ಕೆಎಂಎಫ್ ದೇಶದ ಎರಡನೇ ಅತಿದೊಡ್ಡ ಹಾಲು ಒಕ್ಕೂಟವಾಗಿದೆ. ರಾಜ್ಯ ಮಾತ್ರವಲ್ಲದೆ ನೆರೆಯ ಮಹಾರಾಷ್ಟ್ರ, ಗೋವಾ, ಆಂಧ್ರಪ್ರದೇಶ, ತೆಲಂಗಾಣ, ತಮಿಳುನಾಡು ರಾಜ್ಯಗಳಿಗೂ ನಂದಿನಿ ಉತ್ಪನ್ನಗಳ ಮಾರಾಟ ಮಾಡುತ್ತಿದೆ. ರಾಜ್ಯದ ಹೊರಗಡೆ ಶೇ.15 ರಷ್ಟು ವಹಿವಾಟು ಹೊಂದಿದೆ. ಸಿಂಗಾಪುರ,ಯುಎಇ ಸೇರಿದಂತೆ ಹಲವು ದೇಶಗಳಿಗೆ ನಂದಿನಿ ಉತ್ಪನ್ನಗಳ ರಫ್ತು ಮಾಡುತ್ತಿದೆ. ಅಮುಲ್ ಮತ್ತು ಕೆಎಂಎಫ್ ವಿಲೀನ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಇದನ್ನೂ ಓದಿ : ಅಮುಲ್ ಉತ್ಪನ್ನ ಮಾರಾಟಕ್ಕೆ ಅನುಮತಿ ನೀಡಿದರೆ ನಂದಿನಿ ಬಾಗಿಲು ಹಾಕುವುದರಲ್ಲಿ ಆಶ್ಚರ್ಯವಿಲ್ಲ: ಹೆಚ್.ಆರ್. ಬಸವರಾಜಪ್ಪ

ಒಟ್ಟಿನಲ್ಲಿ ನಂದಿನಿ ವಿವಾದದ ವಿಷಯ ಬಿಜೆಪಿ ಹೈಕಮಾಂಡ್ ನಿದ್ದೆಗೆಡಿಸಿದ್ದು, ವಿವಾದ ತಣಿಸುವ ಹೊಸ ಟಾಸ್ಕ್ ಅನ್ನು ರಾಜ್ಯದ ನಾಯಕರಿಗೆ ನೀಡಿದೆ. ಹಾಗಾಗಿ, ಕಾಂಗ್ರೆಸ್ ಜೆಡಿಎಸ್ ವಿರುದ್ಧ ಮುಗಿಬಿದ್ದಿರುವ ರಾಜ್ಯ ನಾಯಕರು ಕೆಎಂಎಫ್ ಸಮರ್ಥಿಸಿಕೊಂಡು ವಿಲೀನ ವಿಷಯವನ್ನು ತಳ್ಳಿಹಾಕುತ್ತಾ ವಿವಾದಕ್ಕೆ ಬ್ರೇಕ್ ಹಾಕಲು ಹರಸಾಹಸ ಪಡುತ್ತಿದ್ದಾರೆ. ಇಷ್ಟಾದರೂ ರಾಜ್ಯದ ಜನತೆ ಈ ವಿಷಯವನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದು, ಬಿಜೆಪಿ ಸ್ಪಷ್ಟೀಕರಣಕ್ಕೆ ಒಪ್ಪುತ್ತಾರಾ? ಅಥವಾ ಬಿಜೆಪಿಗೆ ಈ ವಿವಾದವೇ ತಿರುಗು ಬಾಣವಾಗಲಿದೆಯಾ ಕಾದು ನೋಡಬೇಕಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.