ETV Bharat / bharat

ಪ್ಲೈವುಡ್​ ಕಾರ್ಖಾನೆಯಲ್ಲಿ ವಲಸೆ ಕಾರ್ಮಿಕ ಕುಟುಂಬದ ಪುಟ್ಟ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ

author img

By ETV Bharat Karnataka Team

Published : Oct 21, 2023, 6:19 PM IST

ಕೇರಳದ ಎರ್ನಾಕುಲಂ ಜಿಲ್ಲೆಯ ಪ್ಲೈವುಡ್​ ಕಾರ್ಖಾನೆಯೊಂದರಲ್ಲಿ ಮೂರೂವರೆ ವರ್ಷದ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಘಟನೆ ನಡೆದಿದೆ.

Sexual assault on girl child in Kerala
ಕೇರಳದಲ್ಲಿ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ

ಎರ್ನಾಕುಲಂ (ಕೇರಳ): ಪ್ಲೈವುಡ್​ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದ ವಲಸೆ ಕಾರ್ಮಿಕ ಕುಟಂಬದ ಮೂರೂವರೆ ವರ್ಷದ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಘಟನೆ ಕೇರಳದ ಎರ್ನಾಕುಲಂ ಜಿಲ್ಲೆಯಲ್ಲಿ ವರದಿಯಾಗಿದೆ. ಈ ಕೃತ್ಯದ ಸಂಬಂಧ ಅಸ್ಸೋಂ ಮೂಲದ ಇಬ್ಬರನ್ನು ಪೊಲೀಸರು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸುತ್ತಿದ್ದಾರೆ.

ಇಲ್ಲಿನ ಪೆರುಂಬವೂರ್‌ನಲ್ಲಿರುವ ಪ್ಲೈವುಡ್​ ಕಾರ್ಖಾನೆಯೊಂದರಲ್ಲಿ ಶುಕ್ರವಾರ ಸಂಜೆ ಈ ಘಟನೆ ನಡೆದಿದೆ. ಪುಟ್ಟ ಬಾಲಕಿ ತನ್ನ ಪೋಷಕರೊಂದಿಗೆ ಕಂಪನಿಗೆ ಬಂದಿತ್ತು. ಈ ಸಂದರ್ಭದಲ್ಲಿ ಇಲ್ಲಿನ ಸಹೋದ್ಯೋಗಿಗಳೇ ಈ ದುಷ್ಕೃತ್ಯ ಎಸಗಿದ್ದಾರೆ ಎಂದು ತಿಳಿದು ಬಂದಿದೆ. ಈ ಹೀನ ಕೃತ್ಯದಿಂದಾಗಿ ಸಂತ್ರಸ್ತೆಯ ಆರೋಗ್ಯದಲ್ಲಿ ಏರುಪೇರಾಗಿದೆ. ಬಳಿಕ ಆತಂಕಗೊಂಡ ಪೋಷಕರು ಬಾಲಕಿಯನ್ನು ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆಗ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ನಡೆದಿರುವ ಆಘಾತಕಾರಿ ಮಾಹಿತಿ ಹೊರಬಿದ್ದಿದೆ.

ಇದನ್ನೂ ಓದಿ: ವಾಕಿಂಗ್​ಗೆ​ ಹೋದ ಬಾಲಕಿ ಮೇಲೆ ಸ್ನೇಹಿತರಿಂದ ಸಾಮೂಹಿಕ ಅತ್ಯಾಚಾರ: ಹರಿದ ಬಟ್ಟೆಯಲ್ಲೇ ಪೊಲೀಸ್​ ಠಾಣೆಗೆ ಬಂದ ಸಂತ್ರಸ್ತೆ

ಅಂತೆಯೇ, ಆಸ್ಪತ್ರೆಯ ಅಧಿಕಾರಿಗಳು ಈ ವಿಷಯದ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಆಗ ಸ್ಥಳಕ್ಕೆ ಬಂದ ಪೊಲೀಸರು ಮಾಹಿತಿ ಕಲೆ ಹಾಕಿ ತನಿಖೆ ಆರಂಭಿಸಿದ್ದಾರೆ. ಜೊತೆಗೆ ಸಿಸಿಟಿವಿ ದೃಶ್ಯಾವಳಿಗಳನ್ನೂ ಸಂಗ್ರಹಿಸಿ ಆರೋಪಿಗಳ ಗುರುತು ಪತ್ತೆಹಚ್ಚುವ ಕೆಲಸ ಮಾಡಿದ್ದಾರೆ. ಈ ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಅಸ್ಸೋಂ ಮೂಲದ ಇಬ್ಬರನ್ನು ವಶಕ್ಕೆ ತೆಗೆದುಕೊಂಡಿದ್ದಾರೆ. ಅಲ್ಲದೇ, ಈ ಸಂಬಂಧ ಸಂತ್ರಸ್ತೆಯ ತಾಯಿ ದೂರು ದಾಖಲಿಸಿದ್ದಾರೆ.

ಸಂತ್ರಸ್ತ ಬಾಲಕಿಯ ಪೋಷಕರು ಸಹ ಅಸ್ಸೋಂ ಮೂಲದ ವಲಸೆ ಕಾರ್ಮಿಕರಾಗಿದ್ದು, ಇದೇ ಪ್ಲೈವುಡ್​ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ಪೋಷಕರೊಂದಿಗೆ ಕಂಪನಿಗೆ ಮಗು ಬಂದಿತ್ತು. ಆಗ ಪೋಷಕರ ಸಹೋದ್ಯೋಗಿಗಳೇ ಆಟವಾಡುತ್ತಿದ್ದ ಬಾಲಕಿಯನ್ನು ಕರೆದೊಯ್ದು ಲೈಂಗಿಕ ಕಿರುಕುಳಕ್ಕೆ ಒಳಪಡಿಸಿದ್ದಾರೆ ಎಂದು ಪೊಲೀಸ್​ ತನಿಖೆಯಲ್ಲಿ ತಿಳಿದು ಬಂದಿದೆ. ಸದ್ಯ ಈ ಘಟನೆ ಸಂಬಂಧ ಪೊಲೀಸರು ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ.

ಒಂದೂವರೆ ತಿಂಗಳಲ್ಲಿ ಎರಡನೇ ಘಟನೆ: ಎರ್ನಾಕುಲಂ ಜಿಲ್ಲೆಯಲ್ಲಿ ಕಳೆದ ಒಂದೂವರೆ ತಿಂಗಳಲ್ಲಿ ನಡೆದ ಹೀನ ಕೃತ್ಯ ಇದಾಗಿದೆ. ಸೆಪ್ಟೆಂಬರ್​ನಲ್ಲಿ ಅಲುವಾದಲ್ಲಿ ವಲಸೆ ಕುಟುಂಬದ ಎಂಟು ವರ್ಷದ ಬಾಲಕಿಯನ್ನು ಅಪಹರಿಸಿ ಅತ್ಯಾಚಾರ ಎಸಗಿದ ಘಟನೆ ನಡೆದಿತ್ತು. ತನ್ನ ತಾಯಿಯೊಂದಿಗೆ ಮಲಗಿದ್ದ ಬಾಲಕಿಯನ್ನು ಹೊತ್ತೊಯ್ದು ದುಷ್ಕೃತ್ಯ ಎಸಗಲಾಗಿತ್ತು.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಓರ್ವ ಆರೋಪಿಯನ್ನು ಬಂಧಿಸಲಾಗಿತ್ತು. ಆರೋಪಿಯು ಬಾಲಕಿಯನ್ನು ಹೊತ್ತೊಯ್ಯುವಾಗ ಆಕೆ ಅಳುವುದನ್ನು ಗಮನಿಸಿದ ವ್ಯಕ್ತಿಯೊಬ್ಬರು ತಡೆಯಲು ಮುಂದಾಗಿದ್ದರು. ಈ ವೇಳೆ ವ್ಯಕ್ತಿಗೆ ಥಳಿಸಿ ಬಾಲಕಿಯನ್ನು ಅಪಹರಣ ಮಾಡಿದ್ದ. ಈ ಪ್ರತ್ಯಕ್ಷದರ್ಶಿ ಪೊಲೀಸರಿಗೆ ಮಾಹಿತಿ ನೀಡಿದ್ದರು. ಬಾಲಕಿಗಾಗಿ ಹುಡುಕಾಟ ಆರಂಭಿಸಿದಾಗ ಗದ್ದೆಯೊಂದರಲ್ಲಿ ಸಂತ್ರಸ್ತೆ ಪತ್ತೆಯಾಗಿದ್ದಳು.

ಇದನ್ನೂ ಓದಿ: ತಾಯಿಯೊಂದಿಗೆ ಮಲಗಿದ್ದ 8 ವರ್ಷದ ಬಾಲಕಿಯ ಅಪಹರಿಸಿ ಅತ್ಯಾಚಾರ: ಆರೋಪಿ ಬಂಧನ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.