ETV Bharat / bharat

ವಾಕಿಂಗ್​ಗೆ​ ಹೋದ ಬಾಲಕಿ ಮೇಲೆ ಸ್ನೇಹಿತರಿಂದ ಸಾಮೂಹಿಕ ಅತ್ಯಾಚಾರ: ಹರಿದ ಬಟ್ಟೆಯಲ್ಲೇ ಪೊಲೀಸ್​ ಠಾಣೆಗೆ ಬಂದ ಸಂತ್ರಸ್ತೆ

author img

By ETV Bharat Karnataka Team

Published : Oct 18, 2023, 7:53 PM IST

Updated : Oct 18, 2023, 7:59 PM IST

ಜಾರ್ಖಂಡ್​ನ ರಾಂಚಿ ಜಿಲ್ಲೆಯಲ್ಲಿ ಆರು ಜನ ಸ್ನೇಹಿತರೊಂದಿಗೆ ವಾಕಿಂಗ್​ಗೆ​ ಹೋದ ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ ಘಟನೆ ಬೆಳಕಿಗೆ ಬಂದಿದೆ.

JHARKHAND: Girl who was out with six friends, gang raped by them and left in the forest
ವಾಕಿಂಗ್​ಗೆ​ ಹೋದ ಬಾಲಕಿ ಮೇಲೆ ಸ್ನೇಹಿತರಿಂದ ಸಾಮೂಹಿಕ ಅತ್ಯಾಚಾರ

ರಾಂಚಿ (ಜಾರ್ಖಂಡ್): ವಾಕಿಂಗ್​ಗೆಂದು ಹೋಗಿದ್ದಾಗ ಅಪ್ರಾಪ್ತ ಬಾಲಕಿ ಮೇಲೆ ಆರು ಜನರು ಸ್ನೇಹಿತರು ಸಾಮೂಹಿಕ ಅತ್ಯಾಚಾರ ಎಸಗಿದ ಘಟನೆ ಜಾರ್ಖಂಡ್​ ರಾಜಧಾನಿ ರಾಂಚಿ ಜಿಲ್ಲೆಯಲ್ಲಿ ವರದಿಯಾಗಿದೆ. ಸಂತ್ರಸ್ತೆ ಕೂಡ ಆರೋಪಿಗಳ ಸ್ನೇಹಿತೆಯಾಗಿದ್ದು, ಎಲ್ಲರೂ ಒಟ್ಟಾಗಿ ವಾಕಿಂಗ್​ಗೆ ತೆರಳಿದ್ದರು. ಈ ಸಮಯದಲ್ಲಿ ಆಕೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಲಾಗಿದೆ. ಇದರಲ್ಲಿ ಐವರು ಅಪ್ರಾಪ್ತ ಬಾಲಕರಾಗಿದ್ದು, ಓರ್ವ ವಯಸ್ಕನಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಇಲ್ಲಿನ ಇಟ್ಕಿ ಪ್ರದೇಶದಲ್ಲಿ ಅಕ್ಟೋಬರ್ 15ರಂದು ರಾತ್ರಿ ಈ ಘಟನೆ ಬೆಳಕಿಗೆ ಬಂದಿದೆ. ನಾಗಡಿ ಪೊಲೀಸ್ ಠಾಣೆ ವ್ಯಾಪ್ತಿಯ ನಿವಾಸಿಯಾದ 15 ವರ್ಷದ ಬಾಲಕಿ ಅಂದು ರಾತ್ರಿ ತನ್ನ ಆರು ಜನ ಸ್ನೇಹಿತರೊಂದಿಗೆ ವಾಕಿಂಗ್​ಗೆಂದು ಮನೆಯಿಂದ ಹೊರ ಹೋಗಿದ್ದಳು. ಮನೆಗೆ ಮರಳಬೇಕಾದರೆ ತಡವಾಗಿದ್ದು, ಇಟ್ಕಿ ಪ್ರದೇಶದ ವಿಂಧಾನಿಪಾತ್ರ ಅರಣ್ಯದ ಮೂಲಕ ಬರುತ್ತಿದ್ದಾಗ ದುಷ್ಟ ಸ್ನೇಹಿತರು, ಇದೇ ಅವಕಾಶ ಬಳಸಿಕೊಂಡು ಆಕೆಯನ್ನು ಕಾಡಿಗೆ ಎಳೆದೊಯ್ದಿದ್ದಾರೆ. ಅಲ್ಲಿ ಎಲ್ಲರೂ ಸೇರಿಕೊಂಡು ಸಾಮೂಹಿಕವಾಗಿ ದುಷ್ಕೃತ್ಯ ಎಸಗಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: ಕೌಟುಂಬಿಕ ಕಲಹ : ಪತ್ನಿಯ ಕತ್ತು ಸೀಳಿ ಬರ್ಬರವಾಗಿ ಹತ್ಯೆಗೈದ ಪತಿ

ಸ್ನೇಹಿತರ ದುಷ್ಕೃತ್ಯಕ್ಕೆ ಬಲಿಯಾದ ಬಾಲಕಿ ತನ್ನನ್ನು ಬಿಡುವಂತೆ ಸ್ನೇಹಿತರ ಬಳಿ ಗೋಗರೆಯುತ್ತಿದ್ದಳು. ಆದರೂ, ದುರುಳರು ಕೇಳಿಲ್ಲ. ರಾತ್ರಿಯಿಡೀ ಕಾಡಿನಿಂದ ಹೊರಗೆ ಬರಲು ಬಿಡದೇ ಹಲವಾರು ಬಾರಿ ಆಕೆ ಮೇಲೆ ದೌರ್ಜನ್ಯ ಎಸಗಿದ್ದಾರೆ. ತನ್ನ ಆರು ಮಂದಿ ಸ್ನೇಹಿತರ ಕ್ರೌರ್ಯಕ್ಕೆ ತುತ್ತಾದ ಅಪ್ರಾಪ್ತ ಪ್ರಜ್ಞೆ ಹೋಗಿದ್ದಾಳೆ. ನಂತರ ಆಕೆಗೆ ಪ್ರಜ್ಞೆ ಬಂದಾಗ ಕಾಡಿನಲ್ಲಿ ಒಂಟಿಯಾಗಿದ್ದ ಬಿದ್ದಿದ್ದಾಳೆ. ಆಕೆಯ ಬಟ್ಟೆಯನ್ನೂ ಆರೋಪಿಗಳು ಹರಿದು ಹಾಕಿದ್ದರು. ಹೇಗೋ ಕಾಡಿನಿಂದ ತಪ್ಪಿಸಿಕೊಂಡು ಹರಿದ ಬಟ್ಟೆಯಲ್ಲೇ ಇಟ್ಕಿ ಪೊಲೀಸ್​ ಠಾಣೆಗೆ ತಲುಪಿದ್ದಳು. ಸಂತ್ರಸ್ತೆಯ ಸ್ಥಿತಿಯನ್ನು ನೋಡಿದ ಪೊಲೀಸ್​ ಸಿಬ್ಬಂದಿ ಮೊದಲು ಆಕೆಗೆ ಚಿಕಿತ್ಸೆ ಕೊಡಿಸಿದ್ದಾರೆ. ನಂತರ ಆಕೆಯ ಹೇಳಿಕೆ ದಾಖಲಿಸಿಕೊಂಡಿದ್ದಾರೆ. ಇದರ ಆಧಾರದ ಮೇಲೆ ಪೋಕ್ಸೋ ಮತ್ತು ಇತರ ಸೆಕ್ಷನ್‌ಗಳ ಅಡಿ ಎಫ್‌ಐಆರ್ ದಾಖಲಿಸಿದ್ದಾರೆ ಎಂದು ಅಧಿಕಾರಿಗಳು ವಿವರಿಸಿದ್ದಾರೆ.

ಈ ಕುರಿತು ಡಿಎಸ್​ಪಿ ರಜತ್ ಮಣಿ ಬಖಾಲಾ ಪ್ರತಿಕ್ರಿಯಿಸಿ, ''ಬಾಲಕಿ ಮೇಲಿನ ಅತ್ಯಾಚಾರ ಪ್ರಕರಣ ಸಂಬಂಧ ಈಗಾಗಲೇ ಕ್ರಮ ಕೈಗೊಂಡು ಎಲ್ಲ ಆರು ಆರೋಪಿಗಳನ್ನು ಬಂಧಿಸಲಾಗಿದೆ. ಈ ಪೈಕಿ ಐವರು ಅಪ್ರಾಪ್ತರಾಗಿದ್ದು, ಇವರನ್ನು ಬಾಲಾಪರಾಧಿ ಗೃಹಕ್ಕೆ ಕಳುಹಿಸಲಾಗಿದೆ. ಆರನೇ ಆರೋಪಿ ವಯಸ್ಕನಾಗಿದ್ದು, ಈತ ಇಟ್ಕಿ ನಿವಾಸಿ. ಆತನನ್ನು ಬಿರ್ಸಾ ಮುಂಡಾ ಕೇಂದ್ರ ಕಾರಾಗೃಹಕ್ಕೆ ರವಾನಿಸಲಾಗಿದೆ. ಪ್ರಕರಣದ ಬಗ್ಗೆ ಹೆಚ್ಚಿನ ತನಿಖೆ ಮುಂದುವರೆದಿದೆ'' ಎಂದು ಹೇಳಿದ್ದಾರೆ.

ಇದನ್ನೂ ಓದಿ: ಅಪ್ರಾಪ್ತ ವಿದ್ಯಾರ್ಥಿನಿ ಮೇಲೆ ಶಿಕ್ಷಕನಿಂದ ಅತ್ಯಾಚಾರ: ಬಾಲಕಿ ಮಗುವಿಗೆ ಜನ್ಮ ನೀಡುತ್ತಿದ್ದಂತೆ ಬೆಳಕಿಗೆ ಬಂದ ಪ್ರಕರಣ

Last Updated : Oct 18, 2023, 7:59 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.