ಕರ್ನಾಟಕ

karnataka

ಲೈಂಗಿಕ ದೌರ್ಜನ್ಯ ಆರೋಪ: ಹೆಚ್​.ಡಿ.ರೇವಣ್ಣ, ಪ್ರಜ್ವಲ್​ ರೇವಣ್ಣ ವಿರುದ್ಧ ದೂರು - Sexual Assault Allegation

By ETV Bharat Karnataka Team

Published : Apr 28, 2024, 8:39 PM IST

ಲೈಂಗಿಕ ದೌರ್ಜನ್ಯ ಆರೋಪದ ಮೇಲೆ ಸಂಸದ ಪ್ರಜ್ವಲ್ ರೇವಣ್ಣ ಹಾಗೂ ಶಾಸಕ ಹೆಚ್​.ಡಿ. ರೇವಣ್ಣ ವಿರುದ್ಧ ಪ್ರಕರಣ ದಾಖಲಾಗಿದೆ.

prajwal-revanna
ಲೈಂಗಿಕ ದೌರ್ಜನ್ಯ ಆರೋಪ: ಹೆಚ್​.ಡಿ.ರೇವಣ್ಣ, ಪ್ರಜ್ವಲ್​ ರೇವಣ್ಣ ವಿರುದ್ಧ ದೂರು

ಹಾಸನ:ಹಾಸನ ಸಂಸದ ಪ್ರಜ್ವಲ್ ರೇವಣ್ಣ ಹಾಗೂ ಹೊಳೆನರಸೀಪುರ ಶಾಸಕ ಹೆಚ್​.ಡಿ. ರೇವಣ್ಣ ವಿರುದ್ಧ ಲೈಂಗಿಕ ದೌರ್ಜನ್ಯ ಆರೋಪ ಕೇಳಿಬಂದಿದೆ. ಈ ಬಗ್ಗೆ ಮಹಿಳೆಯೊಬ್ಬರು ನೀಡಿದ ದೂರಿನ ಅನ್ವಯ ಇಬ್ಬರೂ ನಾಯಕರ ವಿರುದ್ಧ ಹೊಳೆನರಸೀಪುರ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಈ ಹಿಂದೆ ರೇವಣ್ಣ ಮನೆಯಲ್ಲಿ ಕೆಲಸ ಮಾಡುತ್ತಿದ್ದ ಮಹಿಳೆಯೊಬ್ಬರು ತಮ್ಮ ಮೇಲೆ ಲೈಂಗಿಕ ದೌರ್ಜನ್ಯ ಎಸಗಿರುವ ಬಗ್ಗೆ ದೂರು ನೀಡಿದ್ದು, ಅದರ ಮೇರೆಗೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಎಫ್​ಐಆರ್​ನಲ್ಲಿ ಹೆಚ್.ಡಿ. ರೇವಣ್ಣ ಎ1 ಹಾಗೂ ಪ್ರಜ್ವಲ್ ರೇವಣ್ಣ ಅವರನ್ನು ಎ2 ಆರೋಪಿಯಾಗಿ ನಮೂದಿಸಲಾಗಿದೆ. ಐಪಿಸಿ ಸೆಕ್ಷನ್​ 354A, 354D, 506, 509 ರ ಅಡಿ ಪ್ರಕರಣ ದಾಖಲಾಗಿದೆ.

ಪ್ರಜ್ವಲ್​ ರೇವಣ್ಣ ದೂರು:ಏಪ್ರಿಲ್ 21ರಂದು ಹಾಸನದಲ್ಲಿ ಪೆನ್ ಡ್ರೈವ್ ವಿಡಿಯೋ ವೈರಲ್​ ಆದ ಬೆನ್ನಲ್ಲೇ ಸಂಸದ ಪ್ರಜ್ವಲ್ ರೇವಣ್ಣ ಸಿಇಎನ್​​ ಪೊಲೀಸರಿಗೆ ದೂರು ನೀಡಿದ್ದರು. ಚುನಾವಣೆ ಹೊಸ್ತಿಲಿನಲ್ಲಿ ರಾಜಕೀಯವಾಗಿ ಹಾನಿಮಾಡಲು ತಮ್ಮ ವಿರುದ್ಧ ಮಾರ್ಫಿಂಗ್ ಮಾಡಿ ವಿಡಿಯೋ ಹರಿಯಬಿಡಲಾಗಿದೆ ಎಂದು ಆರೋಪಿಸಿ ಬೇಲೂರಿನ ವ್ಯಕ್ತಿಯೊಬ್ಬರ ವಿರುದ್ಧ ಪ್ರಜ್ವಲ್​ ದೂರು ದಾಖಲಿಸಿದ್ದರು. ಈ ಬಗ್ಗೆ ಹಾಸನದ ಸಿಇಎನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ವಿಶೇಷ ತನಿಖಾ ತಂಡ ರಚನೆ:ಅಶ್ಲೀಲ ವಿಡಿಯೋ ವೈರಲ್​ ಪ್ರಕರಣ ಗಂಭೀರ ಸ್ವರೂಪ ಪಡೆದುಕೊಂಡ ಹಿನ್ನೆಲೆಯಲ್ಲಿ ಕೆಲವು ಸಂಘಟನೆಗಳು ಮತ್ತು ನೊಂದ ಸಂತ್ರಸ್ತೆ ಮಹಿಳಾ ಆಯೋಗಕ್ಕೆ ದೂರು ಸಲ್ಲಿಸಿದ್ದರು. ದೂರಿನ ಬಳಿಕ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮೀ ಚೌಧರಿ ಅವರು ವೈರಲ್​ ಆಗುತ್ತಿರುವ ಅಶ್ಲೀಲ ವಿಡಿಯೋ ಹಾಗೂ ಮಹಿಳೆಯರ ಮೇಲಿನ ಲೈಂಗಿಕ ದೌರ್ಜನ್ಯ ಕುರಿತಂತೆ ತನಿಖೆ ನಡೆಸುವಂತೆ ಕೋರಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿದ್ದರು. ಅದರ ಅನ್ವಯ ರಾಜ್ಯ ಸರ್ಕಾರವು ಪ್ರಕರಣದ ತನಿಖೆಗೆ ವಿಶೇಷ ತಂಡ ರಚನೆ ಮಾಡಿ ಆದೇಶಿಸಿದೆ. ಮೂವರು ಐಪಿಎಸ್ ಅಧಿಕಾರಿಗಳನ್ನು ಒಳಗೊಂಡ ವಿಶೇಷ ತಂಡಕ್ಕೆ ತನಿಖೆಯನ್ನು ವಹಿಸಲಾಗಿದೆ.

ಇದನ್ನೂ ಓದಿ:ಹಾಸನ ಅಶ್ಲೀಲ ವಿಡಿಯೋ ಪ್ರಕರಣ: ವಿಶೇಷ ತನಿಖಾ ತಂಡ ರಚಿಸಿ ರಾಜ್ಯ ಸರ್ಕಾರ ಆದೇಶ - Hassan Video Case

ABOUT THE AUTHOR

...view details