ETV Bharat / state

ವಿಚ್ಚೇದನ ಆದೇಶ ಮೇಲ್ಮನವಿ ವಿಚಾರಣಾ ಹಂತದಲ್ಲಿ ಪತಿ ಮೃತಪಟ್ಟರೆ ಅರ್ಜಿ ಕೊನೆಗೊಳ್ಳುವುದಿಲ್ಲ: ಹೈಕೋರ್ಟ್ - High Court

author img

By ETV Bharat Karnataka Team

Published : May 23, 2024, 10:35 PM IST

ಪತ್ನಿ ಸಲ್ಲಿಸಿದ್ದ ಮೇಲ್ಮನವಿ ಆಲಿಸಿದ ಹೈಕೋರ್ಟ್​ ವಿಭಾಗೀಯ ಪೀಠವು ಕೌಟುಂಬಿಕ ನ್ಯಾಯಾಲಯ ನೀಡಿದ್ದ ವಿಚ್ಚೇದನವನ್ನು ರದ್ದುಗೊಳಿಸಿ ಪತಿಯ ಆಸ್ತಿಯಲ್ಲಿ ಬರಬೇಕಾದ ಪರಿಹಾರ ಮತ್ತು ಅನುಕಂಪದ ಹುದ್ದೆಗೆ ಪತ್ನಿಯನ್ನು ಪರಿಗಣಿಸಬೇಕಾಗುತ್ತದೆ ಎಂದು ಆದೇಶಿಸಿದೆ.

high court
ಹೈಕೋರ್ಟ್ (ETV Bharat)

ಬೆಂಗಳೂರು: ಕೌಟುಂಬಿಕ ನ್ಯಾಯಾಲಯ ಮಂಜೂರು ಮಾಡಿದ್ದ ವಿಚ್ಚೇದನ ಆದೇಶ ಪ್ರಶ್ನಿಸಿ ಪತ್ನಿ ಸಲ್ಲಿಸಿದ್ದ ಮೇಲ್ಮನವಿ ವಿಚಾರಣಾ ಹಂತದಲ್ಲಿರುವಾಗಲೇ ಪತಿ ಸಾವನ್ನಪ್ಪಿದರೆ ಮೇಲ್ಮನವಿ ವಿಚಾರಣಾ ಪ್ರಕ್ರಿಯೆ ರದ್ದಾಗದು ಎಂದು ಹೈಕೋರ್ಟ್ ಸ್ಪಷ್ಟಪಡಿಸಿದೆ.

ಪತ್ನಿ ಸಲ್ಲಿಸಿದ್ದ ಮೇಲ್ಮನವಿಯನ್ನು ಆಲಿಸಿದ ನ್ಯಾಯಮೂರ್ತಿ ಅನು ಸಿವರಾಮನ್ ಮತ್ತು ನ್ಯಾಯಮೂರ್ತಿ ಅನಂತ ರಾಮನಾಥ ಹೆಗಡೆ ಅವರಿದ್ದ ವಿಭಾಗೀಯ ಪೀಠ, 2022ರಲ್ಲಿ ಪತಿ ನಿಧನರಾಗಿದ್ದರೂ ಸಹ ಮೇಲ್ಮನವಿಯನ್ನು ಇತ್ಯರ್ಥಪಡಿಸಿದೆ.

ಅಲ್ಲದೇ, ಕೌಟುಂಬಿಕ ನ್ಯಾಯಾಲಯ ನೀಡಿದ್ದ ವಿಚ್ಚೇದನವನ್ನು ರದ್ದುಗೊಳಿಸಿ ಪತಿಯ ಆಸ್ತಿಯಲ್ಲಿ ಬರಬೇಕಾದ ಪರಿಹಾರ ಮತ್ತು ಅನುಕಂಪದ ಹುದ್ದೆಗೆ ಪತ್ನಿಯನ್ನು ಪರಿಗಣಿಸಬೇಕಾಗುತ್ತದೆ ಎಂದು ಆದೇಶಿಸಿದೆ. ಜತೆಗೆ, ಪತಿ ನಿಧನರಾಗಿದ್ದರೂ ಸಹ ಪತಿ ವಿಧವೆಯಾಗುವುದರಿಂದ ಕಾನೂನು ಪ್ರಕಾರ ಅವರಿಗೆ ಸೇರಬೇಕಾದ ಸವಲತ್ತುಗಳು ಸೇರಬೇಕಾಗುತ್ತದೆ ಎಂದು ಆದೇಶಿಸಿದೆ.

ಈ ಪ್ರಕರಣದಲ್ಲಿ ಪತಿ ಎಲ್ಲೂ ಸಹಜೀವನ ಮುಂದುವರಿಸಬೇಕು ಅಥವಾ ಪತ್ನಿ ತನ್ನ ತಾಯಿಯ ಮನೆಯಿಂದ ವಾಪಸ್ ಬರುವಂತೆ ಕೋರಿಲ್ಲ. ಪತ್ನಿ ಪರಸ್ಪರ ಸಮ್ಮತಿಯ ಮೇರೆಗೆ ವಿವಾಹ ವಿಚ್ಚೇದನ ಮಂಜೂರು ಮಾಡುವಂತೆ ಕೋರಿದ್ದಾರೆ. ಪ್ರಕರಣದಲ್ಲಿ ವಿವಾಹ ವಿಚ್ಚೇದನ ಮಂಜೂರು ಮಾಡಲು ಕೌಟುಂಬಿಕ ಕ್ರೌರ್ಯ ಎಂಬುದನ್ನು ಸಾಬೀತುಪಡಿಸಬೇಕಿದೆ. ಆದರೆ, ಈ ಪ್ರಕರಣದಲ್ಲಿ ಅದು ಸಾಬೀತಾಗಿಲ್ಲ. ಆದರೂ ಕೌಟುಂಬಿಕ ನ್ಯಾಯಾಲಯ ವಿಚ್ಚೇದನ ಮಂಜೂರು ಮಾಡಿರುವುದು ಸರಿಯಲ್ಲ ಎಂದು ಹೇಳಿದೆ.

ಪ್ರಕರಣದ ಹಿನ್ನೆಲೆ : ಬೆಂಗಳೂರಿನ ವ್ಯಕ್ತಿ ಮತ್ತು ಮಹಿಳೆ 2002ರ ಏ.19ರಂದು ವಿವಾಹವಾದರು. ಆನಂತರ 10 ತಿಂಗಳಲ್ಲಿ ಪತ್ನಿ ತನ್ನ ತಾಯಿ ಮತ್ತು ಸಹೋದರಿಯನ್ನು ಕೆಟ್ಟ ಶಬ್ಧಗಳಿಂದ ನಿಂದಿಸಿ ಮನೆ ಬಿಟ್ಟು ಹೋಗಿದ್ದರು ಎಂದು ಆರೋಪಿಸಿದ್ದರು. ಆದರೆ ಪತ್ನಿ, ಗರ್ಭಿಣಿಯಾಗಿದ್ದಾಗ ತಾಯಿ ಮನೆಗೆ ಹೋಗಿದ್ದೆ, ಆನಂತರ ಪತಿ ತಿರುಗಿ ನೋಡಲಿಲ್ಲ, ಮಗು ಜನಿಸಿದಾಗಲೂ ಬರಲಿಲ್ಲ ಎಂದು ಆರೋಪಿಸಿದ್ದರು.

2005ರಲ್ಲಿ ಪತ್ನಿ ಜೀವನಾಂಶ ಕೋರಿ ಕೌಟುಂಬಿಕ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ನ್ಯಾಯಾಲಯ ಜೀವನಾಂಶ ನೀಡಲು ಆದೇಶಿಸಿತ್ತು. ಈ ಮಧ್ಯೆ ಪತಿ 2007ರಲ್ಲಿ ವಿವಾಹ ವಿಚ್ಚೇದನ ಕೋರಿ ಅರ್ಜಿ ಸಲ್ಲಿಸಿದ್ದರು, ಆದರೆ ಅವರು ಜೀವನಾಂಶ ಪಾವತಿಸದ ಕಾರಣ ಆ ಅರ್ಜಿ ವಜಾಗೊಂಡಿತ್ತು. 2015ರಲ್ಲಿ ಪತಿ ಮತ್ತೆ ಅರ್ಜಿ ಸಲ್ಲಿಸಿದ್ದಾಗ ನ್ಯಾಯಾಲಯ ಕ್ರೌರ್ಯದ ಆಧಾರದ ಮೇಲೆ ವಿಚ್ಚೇದನ ಮಂಜೂರು ಮಾಡಿತ್ತು. ಅದನ್ನು ಪ್ರಶ್ನಿಸಿ ಪತ್ನಿ ಹೈಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಿದ್ದರು. ಆದರ ವಿಚಾರಣೆ ಬಾಕಿ ಇದ್ದಾಗ ಪತಿ ನಿಧನರಾದರು. ಆನಂತರ ಪತಿ ಅಕೌಂಟೆಂಟ್ ಜನರಲ್ ಕಚೇರಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದರು, ಅವರ ನಿವೃತ್ತಿ ಭತ್ಯೆ ಹಾಗೂ ಅನುಕುಂಪದ ಉದ್ಯೋಗ ಸೇರಿ ಕಾನೂನಾತ್ಮಕ ಪರಿಹಾರ ತನಗೆ ದೊರಕಬೇಕು. ಅದಕ್ಕಾಗಿ ಕೌಟುಂಬಿಕ ನ್ಯಾಯಾಲಯ ನೀಡಿದ್ದ ವಿಚ್ಚೇದನ ಆದೇಶ ರದ್ದುಗೊಳಿಸಬೇಕೆಂದು ಕೋರಿದ್ದರು.

ಇದನ್ನೂಓದಿ:ಗೋಮಾಳ ಜಮೀನು ಒತ್ತುವರಿ: ಸರ್ಕಾರಕ್ಕೆ ನೋಟಿಸ್​ ಜಾರಿ ಮಾಡಿದ ಹೈಕೋರ್ಟ್ - High court Notice

ETV Bharat Logo

Copyright © 2024 Ushodaya Enterprises Pvt. Ltd., All Rights Reserved.