ಕರ್ನಾಟಕ

karnataka

ನನ್ನ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಲಾಗಿದೆ, ಯಾರಿಗಾದರೂ ನೋವಾಗಿದ್ದರೆ ವಿಷಾದಿಸುತ್ತೇನೆ : ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ - HD KUMARASWAMY

By ETV Bharat Karnataka Team

Published : Apr 15, 2024, 1:51 PM IST

Updated : Apr 15, 2024, 2:43 PM IST

ರಾಜ್ಯದ ತಾಯಂದಿರಿಗೆ ನೋವಾಗಿದ್ದರೆ ವಿಷಾದ ವ್ಯಕ್ತಪಡಿಸುತ್ತೇನೆ ಎಂದು ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಅವರು ತಿಳಿಸಿದ್ದಾರೆ.

former-cm-hd-kumaraswamy
ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ

ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ

ಬೆಂಗಳೂರು : ರಾಜ್ಯದ ಮಹಿಳೆಯರಿಗೆ ಅಪಮಾನಕರವಾಗುವ ಹೇಳಿಕೆ ನೀಡಿಲ್ಲ. ನನ್ನ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಲಾಗುತ್ತಿದೆ. ಆದರೂ ತಾಯಂದಿರಿಗೆ ನನ್ನ ಹೇಳಿಕೆಯಿಂದ ನೋವಾಗಿದ್ದರೆ ವಿಷಾದ ವ್ಯಕ್ತಪಡಿಸುತ್ತೇನೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್. ಡಿ ಕುಮಾರಸ್ವಾಮಿ ಅವರು ತಿಳಿಸಿದ್ದಾರೆ.

ಶೇಷಾದ್ರಿಪುರದಲ್ಲಿರುವ ಪಕ್ಷದ ಕಚೇರಿ ಜೆಪಿ ಭವನದಲ್ಲಿ ಮಾಧ್ಯಮಗೋಷ್ಟಿ ನಡೆಸಿ ಮಾತನಾಡಿದ ಅವರು, ಮೊನ್ನೆ ತುಮಕೂರಿನಲ್ಲಿ ಎಲೆಕ್ಷನ್ ಪ್ರಚಾರದಲ್ಲಿ ಭಾಗಿಯಾಗಿದ್ದೆ. ಪ್ರಚಾರ ಸಭೆಯಲ್ಲಿ ಹಲವಾರು ವಿಚಾರ ಪ್ರಸ್ತಾಪ ಮಾಡಿದ್ದೆ. ಮಹಿಳಾ ತಾಯಂದಿರ ಬಗ್ಗೆ ಕ್ಷಮೆ ಕೇಳೋಕೂ ಸಾಧ್ಯವಾಗದ ರೀತಿ ಅಪಮಾನ ಮಾಡಿದ್ದೇನೆ ಅಂತಾ ಡಿ ಕೆ ಶಿವಕುಮಾರ್ ಹೇಳಿದ್ದಾರೆ. ಪಾಪ ನನ್ನ ಹೇಳಿಕೆ ನೋಡಿ ಎರಡನೇ ಬಾರಿ ಅವರು ದುಃಖ ಪಟ್ಟಿದ್ದಾರೆ ಅನ್ನಿಸುತ್ತದೆ ಎಂದರು.

ಕಾಂಗ್ರೆಸ್ ಸರ್ಕಾರ ಐದು ಗ್ಯಾರಂಟಿಗಳನ್ನ ಕೊಟ್ಟಿದೆ. ಹಳ್ಳಿ ತಾಯಂದಿರು ದಾರಿ ತಪ್ಪಿದ್ದಾರೆ ಅಂತಾ ನಾನು ಹೇಳಿದ್ದೇನೆ ಅಂತಾ ಮಾಧ್ಯಮಗಳಲ್ಲಿ ಬರೆದಿದ್ದಾರೆ. ಆದರೆ ಮಹಿಳೆಯರೇ ನಿಮ್ಮ ಯಜಮಾನರ ಜೇಬಿನಿಂದ ಪಿಕ್ ಪಾಕೆಟ್​ ಮಾಡಿ ಐದು ಸಾವಿರ ಕೊಡ್ತಾ ಇದ್ದಾರೆ. ಇದರಿಂದ ಎಚ್ಚೆತ್ತುಕೊಳ್ಳಿ ಅಂತಾ ಹೇಳಿದ್ದೇನೆ ಎಂದು ತಿಳಿಸಿದರು.

ಸ್ವಾತಂತ್ರ್ಯ ಬಂದು ಇಷ್ಟು ವರ್ಷ ಆಯ್ತು. ಈಗಲೂ ಕೈ ಚಾಚುವಂತೆ ಮಾಡ್ತಿದ್ದಾರೆ. ಸಾರಾಯಿ ನಿಷೇಧ ಮಾಡಲು ನಾನು ಮುಂದಾಗಿದ್ದೆ. ನಾನೇನು ಅಂತಾ ಅಶ್ಲೀಲ ಪದ ಹೇಳಿದ್ದೀನಾ?. ನನ್ನ ಬಗ್ಗೆ ಮಾತನಾಡಲು ಅವರಿಗೆ ವಿಷಯ ಇಲ್ಲ. ಮಠದ ವಿಚಾರವಾಗಿ ಮಾತನಾಡಲು ಹೋಗಿ ನಗೆಪಾಟಲಿಗೀಡಾದರು. ಕಂಗನಾ ರಣಾವತ್ ಬಗ್ಗೆ ಏನ್ ಹೇಳಿದ್ದೀರಿ? ಹೆಣ್ಣು ಮಕ್ಕಳ ರೇಟ್ ಎಷ್ಟು ಅಂತಾ ಫಿಕ್ಸ್ ಮಾಡಿದ್ರಿ. ಹೇಳ್ರಿ ಶಿವಕುಮಾರ್ ಇದಕ್ಕೆ ಎಂದು ಪ್ರಶ್ನಿಸಿದರು.

ಸದನದಲ್ಲಿ ರಮೇಶ್ ಕುಮಾರ್ ಏನ್ ಹೇಳಿಕೆ ಕೊಟ್ಟಿದ್ದರು. ನಿಮ್ಮಿಂದ ನಾನು ಕಲಿಯಬೇಕಾ?. ರಮೇಶ್ ಕುಮಾರ್ ಬಹಳ ವಾಗ್ಮಿ, ಬುದ್ಧಿವಂತರು. ಅತ್ಯಾಚಾರ ಅನಿವಾರ್ಯವಾದ್ರೆ ಆನಂದಿಸಿ ಅಂದಿದ್ದರು. ಇದು ಇವರ ಅಭಿರುಚಿಗಳು. ದಾರಿ ತಪ್ಪೋದು ಅನ್ನೋದು ಕೆಟ್ಟ ಪದವಾ? ಗಂಡು ಮಕ್ಕಳಿಗೂ ದಾರಿ ತಪ್ಪಬೇಡಿ ಅಂತಾ ಹೇಳ್ತೀವಿ. ಸಾಲದ ಹೊರೆ, ರಾಜ್ಯದ ಆಸ್ತಿಯನ್ನ ಲೂಟಿ ಮಾಡ್ತಿದ್ದಾರೆ. ಅದಕ್ಕೆ ದಾರಿ ತಪ್ಪಬೇಡಿ ಅಂತಾ ಹೇಳಿದ್ದೀನಿ. ಮಹಿಳಾ ಆಯೋಗದಿಂದ ನೋಟಿಸ್​ ಕೊಟ್ಟಿದ್ದಾರೆ. ಅವರಿಗೆ ಏನ್​ ಹೇಳಬೇಕೋ ಹೇಳುತ್ತೇನೆ ಎಂದರು.

ಶಾಮನೂರು ಶಿವಶಂಕರಪ್ಪ ಏನ್ ಹೇಳಿದ್ದರು. ಮಹಿಳೆಯರನ್ನ ಮನೆಯಲ್ಲಿಡಬೇಕು ಅಂದಿದ್ದರು. ನಾನು ಇಂತಹ ನೂರಾರು ನಿದರ್ಶನಗಳನ್ನ ಕೊಡಬಲ್ಲೆ. ನಿಮ್ಮ ದುರಾಸೆಗೆ ಏನೇನು ಮಾಡಿಕೊಂಡು ಬಂದಿದ್ದೀರಿ ಅನ್ನೋದು ಗೊತ್ತು. ಬೇಕಾದಷ್ಟು ಪ್ರಕರಣಗಳಿವೆ. ಆದರೂ ಇಂತಹ ವಿಚಾರ ಇಟ್ಟುಕೊಂಡು ಹೆದರಿಸಲಿಕ್ಕೆ ಬರ್ತೀರಾ? ಎಂದು ಡಿ.ಕೆ.ಶಿವಕುಮಾರ್ ವಿರುದ್ಧ ಕುಮಾರಸ್ವಾಮಿ ವಾಗ್ದಾಳಿ ನಡೆಸಿದರು.

ಎರಡು ಸಾವಿರ ರೂಪಾಯಿ ಕೊಟ್ಟ ತಕ್ಷಣ ಸಾಮಾಜಿಕ ನ್ಯಾಯಾನಾ?. ನನಗೆ ಪ್ರತಿಷ್ಠೆ ಇಲ್ಲ, ಪಾಪ ಕಾಂಗ್ರೆಸ್ ಮಹಿಳಾ ಕಾರ್ಯಕರ್ತೆಯರು ದುಃಖಕ್ಕೆ ಒಳಗಾಗಿದ್ದರೆ ನಾನು ವಿಷಾದ ವ್ಯಕ್ತಪಡಿಸುತ್ತೇನೆ. ನಾನು ಅಂಥ ಹೇಳಿಕೆ ಕೊಟ್ಟಿಲ್ಲ. ಅದನ್ನು ಟ್ವಿಸ್ಟ್ ಮಾಡುತ್ತಿದ್ದಾರೆ. ‌ಹೇಮಾಮಾಲಿನಿ ಬಗ್ಗೆ ಏನ್ ಮಾತಾಡಿದ್ರಿ. ಅದು ನಿಮ್ಮ ಘನಂದಾರಿ ಕೆಲ್ಸ. ಏನ್ ಮಂಡ್ಯದಲ್ಲಿ ಗೋಬ್ಯಾಕ್ ಗೋಬ್ಯಾಕ್ ಅಂತಾ ಮಾಡ್ತಿದ್ದಾರೆ. ಅದ್ಯಾವುದೋ ಅಪಾರ್ಟ್​ಮೆಂಟ್​ನಲ್ಲಿ ಭಾಷಣ ಮಾಡ್ತಾರೆ. ನನ್ನ ತಮ್ಮನಿಗೆ ಮತ ಕೊಡಿ, ಎನ್​ಒಸಿ ಕೊಡ್ತೀನಿ, ನೀರು ಕೊಡ್ತೀನಿ ಅಂತಾರೆ.

ಏನ್ ಧಮ್ಕಿ ಹಾಕ್ತೀರಾ? ಕುಮಾರಸ್ವಾಮಿನ ನೋಡಿದ್ರೆ ಏನ್ ಬ್ಲಡ್ ಬಾಯಿಲ್ ಆಗುತ್ತಂತೆ. ಆಯ್ತು ನಿಮ್ಮ‌ ಮನಸ್ಸಿಗೆ ನೋವಾಗಿದ್ಯಾ, ವಿಷಾದ ವ್ಯಕ್ತಪಡಿಸುತ್ತೇನೆ. ನಾನು ತಾಯಂದಿರು ಅಂತಾ ಹೇಳಿದ್ದೇನೆ. ರಾಜ್ಯದ ತಾಯಂದಿರಿಗೆ ನೋವಾಗಿದ್ದರೆ ವಿಷಾದ ವ್ಯಕ್ತಪಡಿಸುತ್ತೇನೆ ಎಂದು ತಿಳಿಸಿದರು.

ಐದು ಗ್ಯಾರಂಟಿ ಪಿಕ್ ಪಾಕೆಟ್ ಗ್ಯಾರಂಟಿ ಎಂದು ವ್ಯಂಗ್ಯವಾಡಿದ ಕುಮಾರಸ್ವಾಮಿ, ಹಲವಾರು ಕಾಂಗ್ರೆಸ್ ನಾಯಕರು ಮಂಡ್ಯದಲ್ಲಿ ಗೋಬ್ಯಾಕ್ ಕುಮಾರಸ್ವಾಮಿ ಅಂತಾ ಮಾಡ್ತಾ ಇದ್ದಾರೆ. ಅಲ್ಲಿ ಮಹಿಳೆಯರನ್ನ ಕೇಳಿದರೆ 200, 300 ಕೊಟ್ಟರು ಬಂದಿದ್ದೀವಿ ಅಂತಾರೆ ಎಂದರು.

ಮಿಸ್ಟರ್ ಶಿವಕುಮಾರ್, ನಿಮ್ಮ ಉಸ್ತುವಾರಿ ಇದ್ದಾರಲ್ಲಪ್ಪಾ. ಅವ್ರು ಏನ್ ಹೇಳಿಕೆ ಕೊಟ್ಟಿದ್ರು. ಹೇಮಾಮಾಲಿನಿ ಈ ದೇಶದ ಪ್ರತಿಭಾನ್ವಿತ ಕಲಾವಿದೆ. ಅವರು ಹೇಳಿರೋದನ್ನ ಕನ್ನಡ ಪದದಲ್ಲಿ ಹೇಳೋಕೆ ಆಗಲ್ಲ. ಮಹಿಳೆಯರಿಗೆ ಅತ್ಯಂತ ಗೌರವ ಕೊಡೋ ಮಹಾನುಭವರು ನೀವು ಅಲ್ವೇ? ಹೇಮಾಮಾಲಿನಿಗೆ ಬಿಜೆಪಿ ಟಿಕೆಟ್ ಕೊಟ್ಟಿದ್ದು ಲಿಫ್ಟ್ ಮಾಡಲಿಕ್ಕೆ ಅಂತಾ ಹೇಳಿದ್ದರು. ಸಿಎಂ ಅವರೇ ಇದು ಅತ್ಯಂತ ಸಂಸ್ಕಾರ ಅಲ್ಲವೇ? ಎಂದು ಪ್ರಶ್ನಿಸಿದರು.

ದೇವೇಗೌಡರನ್ನ ಪ್ರಧಾನಿ ಮಾಡಿದ್ದು ಬೇರೆ ಪಕ್ಷದವರು. ಅದಕ್ಕೆ ನೀವು ಬೆಂಬಲ ಕೊಟ್ಟಿರಿ ಅಷ್ಟೆ. ದೇವೇಗೌಡರನ್ನ ಯಾವ ತಪ್ಪಿಗೆ ಇಳಿಸಿದ್ರಿ ಸಿದ್ದರಾಮಯ್ಯನವರೇ? ನಾಯಿ ಹಸಿದಿತ್ತು ಅನ್ನ ಹಳಸಿತ್ತು ಅಂತೀರಿ. ನಮ್ಮ ಮನೆ ಬಾಗಿಲಿಗೆ ಬಂದಿದ್ರಲ್ಲಾ, ಆಗ ಯಾವ ನಾಯಿ ಸ್ಥಾನದಲ್ಲಿ ಇದ್ದಿರಿ ಎಂದು ತಿರುಗೇಟು ನೀಡಿದರು.

ನನ್ನ ತೋಟ ಬಂದು ನೋಡಪ್ಪಾ, ನಾನೇನು ರೆಸಾರ್ಟ್ ಮಾಡಿಲ್ಲ. ಕಲ್ಲಂಗಡಿ ಐವತ್ತು ಟನ್ ಬೆಳೆದಿದ್ದೀನಿ. ಬಾಳೆಹಣ್ಣು ಐವತ್ತು ಲಕ್ಷ ಮೌಲ್ಯದಷ್ಟು ಬೆಳೆ ‌ಮಾಡಿದ್ದೇನೆ. ಎಲ್ಲಾ ವಿಡಿಯೋ ಮಾಡಿದ್ದೇನೆ. ಏನು ಕಷ್ಟ ಪಟ್ಟಿದ್ದಾರೆ ಅವರು. ಕಲ್ಲು ಬಂಡೆ ಕದ್ದು ವಿದೇಶಕ್ಕೆ ಸಾಗಿಸೋದು ಕಷ್ಟ ಪಡೋ ಕೆಲಸನಾ?. ಪೇಪರ್, ಪೆನ್ನು ತಗೊಂಡು ತಮಿಳುನಾಡಿಗೆ ನೀರು ಕಳಿಸ್ತಿಲ್ವಾ?. ಅದಕ್ಕೆ ಇನ್ನೊಂದು ಬಾರಿ ಪೆನ್ನು ಪೇಪರ್ ಕೇಳ್ತಿದ್ದಾರೆ ಎಂದು ಹೆಚ್​ಡಿಕೆ ಟೀಕಿಸಿದರು.

ಇದನ್ನೂ ಓದಿ :ಮಹಿಳೆಯರಿಗೆ ಅಪಮಾನ ಆಗುವ ರೀತಿಯಲ್ಲಿ ಮಾತನಾಡಿಲ್ಲ: ಹೆಚ್ ಡಿ ಕುಮಾರಸ್ವಾಮಿ ಸ್ಪಷ್ಟನೆ - HD Kumaraswamy

Last Updated :Apr 15, 2024, 2:43 PM IST

ABOUT THE AUTHOR

...view details