ETV Bharat / state

ಕುದುರೆ ರೇಸ್ ಲೈಸನ್ಸ್ ಮನವಿಯನ್ನು 10 ದಿನದಲ್ಲಿ ಪರಿಗಣಿಸಿ: ಸರ್ಕಾರಕ್ಕೆ ಹೈಕೋರ್ಟ್ ಸೂಚನೆ - Horse Racing License

author img

By ETV Bharat Karnataka Team

Published : May 23, 2024, 5:10 PM IST

ಕುದುರೆ ಪಂದ್ಯಗಳ ಆಯೋಜನೆಗೆ ಅನುಮತಿ ನೀಡುವ ಕುರಿತು ಸಲ್ಲಿಸಿರುವ ಅರ್ಜಿಯನ್ನು 10 ದಿನಗಳಲ್ಲಿ ಪರಿಗಣಿಸುವಂತೆ ಸರ್ಕಾರಕ್ಕೆ ಹೈಕೋರ್ಟ್ ಸೂಚನೆ ನೀಡಿದೆ.

ಹೈಕೋರ್ಟ್
ಹೈಕೋರ್ಟ್ (ETV Bharat)

ಬೆಂಗಳೂರು: ಬೆಂಗಳೂರು ಟರ್ಫ್ ಕ್ಲಬ್ (ರೇಸ್ ಕೋರ್ಸ್) ನಲ್ಲಿ ಕುದುರೆ ಪಂದ್ಯಾವಳಿಗಳ ಆಯೋಜನೆಗೆ ಅನುಮತಿ ಕೋರಿ ಸಲ್ಲಿಸಿರುವ ಮನವಿಯನ್ನು ಮುಂದಿನ 10 ದಿನಗಳಲ್ಲಿ ಕಾನೂನು ಬದ್ಧವಾಗಿ ಪರಿಗಣಿಸಲು ಹೈಕೋರ್ಟ್ ಸರ್ಕಾರಕ್ಕೆ ಸೂಚನೆ ನೀಡಿದೆ.

ಕುದುರೆ ಪಂದ್ಯಗಳ ಆಯೋಜನೆಗೆ ಪರವಾನಿಗೆ ನೀಡದ ಸರ್ಕಾರದ ಕ್ರಮ ಪ್ರಶ್ನಿಸಿ ಬೆಂಗಳೂರು ಟರ್ಫ್‌ಕ್ಲಬ್ ಲಿಮಿಟೆಡ್, ಕರ್ನಾಟಕ ರೇಸ್ ಹಾರ್ಸ್ ಓನರ್ಸ್ ಅಸೋಸಿಯೇಷನ್ ಮತ್ತು ಕರ್ನಾಟಕ ಟ್ರೈನರ್ಸ್ ಅಸೋಸಿಯೇಷನ್ ಸಲ್ಲಿಸಿದ್ದ ಅರ್ಜಿಗಳ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ಜೆ.ಎಸ್. ಕಮಲ್ ಅವರಿದ್ದ ನ್ಯಾಯಪೀಠ ಈ ಸೂಚನೆ ನೀಡಿ ವಿಚಾರಣೆಯನ್ನು ಜೂನ್ 6ಕ್ಕೆ ಮುಂದೂಡಿದೆ.

ವಿಚಾರಣೆ ವೇಳೆ ಸರ್ಕಾರದ ಪರ ವಾದ ಮಂಡಿಸಿದ ಅಡ್ವೋಕೇಟ್ ಜನರಲ್ ಕೆ.ಶಶಿ ಕಿರಣ್ ಶೆಟ್ಟಿ, ಕುದುರೆ ಪಂದ್ಯಾವಳಿಗಳ ಆಯೋಜನೆಗೆ ಪರವಾನಿಗೆ ಕುರಿತಂತೆ ಮುಖ್ಯಮಂತ್ರಿಗಳ ನೇತೃತ್ವದಲ್ಲಿ ಸುಮಾರು 2 ತಾಸು ಚರ್ಚೆಯಾಗಿದೆ. ಜೊತೆಗೆ, ಈ ಕುರಿತ ಇತರೆ ಪಾಲುದಾರರೊಂದಿಗೆ ಚರ್ಚೆ ನಡೆಸಬೇಕಾಗಿದ್ದು, ಅಕ್ರಮಗಳ ತಡೆಗಾಗಿ ಕಾನೂನು ಬದ್ಧವಾಗಿ ಷರತ್ತುಗಳನ್ನು ವಿಧಿಸಿ ಅನುಮತಿ ನೀಡಬೇಕಾಗಿದೆ.

ಅಲ್ಲದೆ, ಕುದುರೆ ಪಂದ್ಯಾವಳಿಗಳಲ್ಲಿ ಕೆಲ ಆಕ್ಷೇಪಾರ್ಹ ಚಟುವಟಿಕೆಗಳನ್ನು ನಡೆಸುತ್ತಿರುವ ಸಂಬಂಧ ಸರ್ಕಾರದ ಗಮನಕ್ಕೆ ಬಂದಿದ್ದರಿಂದ ಪರವಾನಿಗೆ ವಿಳಂಬವಾಗಿದೆ. ಅಲ್ಲದೆ, 161 ವರ್ಷಗಳಿಂದ ರೇಸ್ ಕೋರ್ಸ್‌ನಲ್ಲಿ ಕುದುರೆ ಪಂದ್ಯಾವಳಿಗಳು ನಡೆಯುತ್ತಿವೆ. ಕಳೆದ 72 ವರ್ಷಗಳಿಂದ ಪಂದ್ಯಗಳ ಆಯೋಜನೆಗೆ ಸರ್ಕಾರ ಪರವಾನಿಗೆ ನೀಡುತ್ತಿದೆ. ಆದರೆ, ಆಕ್ಷೇಪಾರ್ಹ ಚಟುವಟಿಕೆಗಳನ್ನು ಸರಿಪಡಿಸುವ ಉದ್ದೇಶದಿಂದ ವಿಳಂಬವಾಗಿದ್ದು, ಅಕ್ರಮಗಳಿಗೆ ಕಡಿವಾಣ ಹಾಕಿ ಕಾನೂನು ಬದ್ಧವಾಗಿ ಷರತ್ತುಗಳನ್ನು ವಿಧಿಸಿ ಪರವಾನಿಗೆ ನೀಡಬೇಕಾಗಿದೆ. ಹೀಗಾಗಿ ನಾಲ್ಕು ವಾರ ಕಾಲಾವಕಾಶ ನೀಡಬೇಕು ಎಂದು ಮನವಿ ಮಾಡಿದರು.

ಈ ಅಂಶವನ್ನು ದಾಖಲಿಸಿಕೊಂಡ ನ್ಯಾಯಪೀಠ, ನಾಲ್ಕು ವಾರ ವಿಳಂವಾಗಲಿದ್ದು ಮುಂದಿನ 10 ದಿನಗಳಲ್ಲಿ ಅರ್ಜಿದಾರರ ಮನವಿಯನ್ನು ಪರಿಗಣಿಸಬೇಕು ಎಂದು ಸೂಚನೆ ನೀಡಿ ವಿಚಾರಣೆಯನ್ನು ಜೂನ್ 6ಕ್ಕೆ ಮುಂದೂಡಿತು. ವಿಚಾರಣೆ ವೇಳೆ ಅರ್ಜಿದಾರರ ಪರ ಹಿರಿಯ ವಕೀಲರಾದ ಶ್ರೀರಂಗ, ರೇಸ್‌ ಕೋರ್ಸ್ ಆಡಳಿತ ಮಂಡಳಿಯಲ್ಲಿ ಸರ್ಕಾರದ ಹಣಕಾಸು ಕಾರ್ಯದರ್ಶಿಗಳು, ಬೆಂಗಳೂರು ನಗರ ಪೊಲೀಸ್ ಆಯುಕ್ತರು ಸದಸ್ಯರಾಗಿದ್ದಾರೆ. ಕುದುರೆ ಪಂದ್ಯಗಳ ಆಯೋಜನೆಯ ಎಲ್ಲಾ ಚಟುವಟಿಕೆಗಳು ಸರ್ಕಾರಕ್ಕೆ ಗೊತ್ತಾಗುತ್ತಿರುತ್ತಿದ್ದು, ಅಕ್ರಮ ನಡೆಸುವ ಸಾಧ್ಯತೆಗಳು ಇಲ್ಲ ಎಂದು ವಿವರಿಸಿದರು.

ತೆರಿಗೆ ವಂಚನೆಗಾಗಿ ಅಕ್ರಮವಾಗಿ ಬೆಟ್ಟಿಂಗ್ ಮಾಡಿದ ಆರೋಪದಲ್ಲಿ ಆರೋಪ ಪಟ್ಟಿ ದಾಖಲಿಸಿರುವ ಬುಕ್ಕಿಗಳ ಪರವಾನಿಗೆಯನ್ನು ರದ್ದು ಪಡಿಸುವುದಕ್ಕಾಗಿ ಮಂಡಳಿಯ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಗಿದೆ. ಅಲ್ಲದೆ, ಕುದುರೆ ಪಂದ್ಯಗಳ ಆಯೋಜನೆಯಲ್ಲಿ ಬುಕ್ಕಿ ಕಂಪೆನಿಗಳಿಗೆ ಯಾವುದೇ ಸಂಬಂಧವಿರುವುದಿಲ್ಲ. ಹೀಗಾಗಿ ಕುದುರೆ ಪಂದ್ಯಗಳ ಆಯೋಜನೆಗೆ ಅವಕಾಶ ಕಲ್ಪಿಸಬೇಕು ಎಂದು ಪೀಠಕ್ಕೆ ಕೋರಿದರು.

ಪ್ರಕರಣದ ಹಿನ್ನೆಲೆ: ಪ್ರತಿ ವರ್ಷ ಕುದುರೆ ಪಂದ್ಯಗಳ ಆಯೋಜನೆಗೆ ತಿಂಗಳಿಗೊಮ್ಮೆ ಪರವಾನಿಗೆ ಪಡೆಯುವುದು ಸಾಮಾನ್ಯವಾಗಿದೆ. ಆದರೆ, ಮಾರ್ಚ್ ತಿಂಗಳ ಬಳಿಕ ಕುದುರೆ ಪಂದ್ಯಗಳ ಆಯೋಜನೆಗೆ ಸರ್ಕಾರ ಅನುಮತಿ ನೀಡಿರಲಿಲ್ಲ. ಇದಾದ ಬಳಿಕ ಹಲವು ಬಾರಿ ಮನವಿ ಸಲ್ಲಿಸಿದ್ದರೂ, ಮನವಿಯ ಕುರಿತಂತೆ ಯಾವುದೇ ಪ್ರತಿಕ್ರಿಯೆ ನೀಡಿರಲಿಲ್ಲ. ಈ ಹಿನ್ನೆಲೆಯಲ್ಲಿ ಕುದುರೆ ಪಂದ್ಯಾವಳಿ ಆಯೋಜಿಸದಿದ್ದಲ್ಲಿ ಸುಮಾರು 2000 ಸಿಬ್ಬಂದಿ ಜೀವನೋಪಾಯಕ್ಕೆ ತೊಂದರೆಯಾಗಿದೆ. ಕುದುರೆ ಪಂದ್ಯಗಳ ಆಯೋಜನೆಗೆ ಅನುಮತಿ ನೀಡುವಂತೆ ಸರ್ಕಾರಕ್ಕೆ ಸೂಚನೆ ನೀಡುವಂತೆ ಕೋರಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಲಾಗಿದೆ.

ಇದನ್ನೂ ಓದಿ: ತಾಳ್ಮೆ ಪರೀಕ್ಷಿಸಬೇಡ, ದೇಶಕ್ಕೆ ಬಂದು ವಿಚಾರಣೆ ಎದುರಿಸು: ಪ್ರಜ್ವಲ್​ಗೆ ದೇವೇಗೌಡ ಎಚ್ಚರಿಕೆ ಪತ್ರ - DEVEGOWDA wrote letter to Prajwal

ETV Bharat Logo

Copyright © 2024 Ushodaya Enterprises Pvt. Ltd., All Rights Reserved.