ಕರ್ನಾಟಕ

karnataka

ಕಲಬುರಗಿ ಜಿಲ್ಲೆಯಲ್ಲಿ‌ ಅಕ್ರಮಗಳಿಗೆ ಕಡಿವಾಣ ಹಾಕಿ: ಸಚಿವ ಪ್ರಿಯಾಂಕ್ ಖರ್ಗೆ ಪೊಲೀಸ್ ಅಧಿಕಾರಿಗಳಿಗೆ ಖಡಕ್‌ ಸೂಚನೆ

By

Published : May 23, 2023, 12:37 PM IST

ಪ್ರಿಯಾಂಕ್​ ಖರ್ಗೆ ಪೊಲೀಸರಿಗೆ ನೀಡಿರುವ ಸೂಚನೆಯನ್ನು ನೋಡಿದರೆ ಗೃಹ ಇಲಾಖೆ ಖಾತೆ ಆಕಾಂಕ್ಷಿಯಾಗಿರುವಂತೆ ಮೇಲ್ನೋಟಕ್ಕೆ ಕಾಣುತ್ತಿದೆ.

MLA Priyank Kharge
ಶಾಸಕ ಪ್ರಿಯಾಂಕ್ ಖರ್ಗೆ

ಕಲಬುರಗಿ:ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಪುತ್ರ, ಸಚಿವ ಪ್ರಿಯಾಂಕ್ ಖರ್ಗೆ ರಾಜ್ಯ ಗೃಹ ಖಾತೆ ಮೇಲೆ ಕಣ್ಣಿಟ್ಟಿದ್ದಾರಾ? ಎಂಬ ಪ್ರಶ್ನೆ ಉದ್ಭವಿಸಿದೆ. ಯಾಕಂದ್ರೆ ಖಾತೆ ಹಂಚಿಕೆ ಮುನ್ನವೇ ಪೊಲೀಸ್ ಇಲಾಖೆ ಮೇಲೆ ಹಿಡಿತ ಸಾಧಿಸಲು ಸಚಿವ ಪ್ರಿಯಾಂಕ್​ ಖರ್ಗೆ ಮುಂದಾಗಿದ್ದಾರೆ. ಪೊಲೀಸ್ ಅಧಿಕಾರಿಗಳಿಗೆ ಕರೆ ಮಾಡಿ ಠಾಣೆಗಳಲ್ಲಿನ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕುವಂತೆ ಖಡಕ್ ಸೂಚನೆ ನೀಡುವ ಮೂಲಕ ಗೃಹ ಖಾತೆ ಮೇಲೆ ಕಣ್ಣಿಟ್ಟಂತೆ ಕಾಣುತ್ತಿದೆ.

ಕಲಬುರಗಿ ಪೊಲೀಸ್ ಕಮಿಷನರ್ ಹಾಗೂ ಎಸ್ಪಿಗೆ ಸಚಿವ ಪ್ರಿಯಾಂಕ್ ಖರ್ಗೆ ಖುದ್ದು ಕರೆ ಮಾಡುವ ಮೂಲಕ ಖಡಕ್ ಸೂಚನೆ ನೀಡಿದ್ದಾರೆ‌. ಪೊಲೀಸ್ ಠಾಣೆಗಳಲ್ಲಿನ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಬೇಕು. ಅಕ್ರಮ ಜೂಜು ಬೆಟ್ಟಿಂಗ್ ದಂಧೆಗೆ ಬ್ರೇಕ್ ಬೀಳಬೇಕು. ಅಕ್ರಮ ಮರಳು ದಂಧೆ, ಅಕ್ರಮ ಗಣಿಗಾರಿಕೆಗೆ ಕಡಿವಾಣ ಹಾಕಿ, ಡ್ರಗ್, ಗಾಂಜಾ, ಅಫೀಮ್ ನಂತಹ ಮಾದಕ ದಂಧೆ ನಿಲ್ಲಿಸುವಂತೆ ಖಡಕ್ ಸೂಚನೆ ನೀಡಿದ್ದಾರೆ.

ಅಷ್ಟೇ ಅಲ್ಲ, ರೌಡಿಗಳು ಮತ್ತು ದ್ವೇಷಭಾಷಣ ಮಾಡುವವರನ್ನು ನಿಯಂತ್ರಿಸುವಂತೆ ಸೂಚನೆ ನೀಡುವ ಮೂಲಕ ಪರೋಕ್ಷವಾಗಿ ಚಿತ್ತಾಪುರ ಕ್ಷೇತ್ರದ ಬಿಜೆಪಿ ಪರಾಜಿತ ಅಭ್ಯರ್ಥಿ, ರೌಡಿಶೀಟರ್ ಮಣಿಕಂಠ ರಾಠೋಡ್,‌ ಆಂದೋಲ ಶ್ರೀ ಸಿದ್ದಲಿಂಗ ಸ್ವಾಮೀಜಿಗೆ ಪ್ರಿಯಾಂಕ್​ ಖರ್ಗೆ ಕೌಂಟರ್ ಕೊಟ್ಟಿದ್ದಾರೆ‌. ಸಾರ್ವಜನಿಕರಿಗೆ ಕಿರುಕುಳ ಆದ್ರೆ ಸಹಿಸುವುದಿಲ್ಲ ಎಂದು ಪೊಲೀಸ್ ಕಮಿಷನರ್ ಆರ್ ಚೇತನ್, ಎಸ್ಪಿ ಇಶಾ ಪಂತ್​ ಅವರಿಗೆ ಖುದ್ದು ಕರೆ ಮಾಡಿ ಖಡಕ್ ಸೂಚನೆ ನೀಡಿದ್ದಾರೆ. ಇಷ್ಟರಲ್ಲೇ ಬಂದು‌ ಮೀಟಿಂಗ್ ಮಾಡಿ ಪೊಲೀಸರು ಕೈಗೊಂಡ ಕ್ರಮಗಳ ಬಗ್ಗೆ ಖುದ್ದು ಪರಿಶೀಲನೆ ನಡೆಸೋದಾಗಿಯೂ ಹೇಳುವ ಮೂಲಕ ಗೃಹ ಖಾತೆ ಆಕಾಂಕ್ಷಿ ಅನ್ನೋದನ್ನು ಪರೋಕ್ಷವಾಗಿ ಪ್ರಿಯಾಂಕ್​ ಖರ್ಗೆ ಪ್ರಸ್ತಾಪಿಸಿದ್ದಾರೆ.

ಎಂ ಬಿ ಪಾಟೀಲ್​ ಹೇಳಿಕೆಗೆ ಬೆಂಗಳೂರಿನಲ್ಲಿ ಪ್ರಿಯಾಂಕ್​ ಖರ್ಗೆ ತಿರುಗೇಟು: ಅಧಿಕಾರ ಹಂಚಿಕೆ ವಿಚಾರವನ್ನು ಪಕ್ಷದ ಹೈಕಮಾಂಡ್ ನೋಡಿಕೊಳ್ಳಲಿದೆ. ಈ ಬಗ್ಗೆ ಯಾರೂ ಗೊಂದಲ ಸೃಷ್ಟಿಸಬಾರದು ಎಂದು ಸಿದ್ದರಾಮಯ್ಯನವರೇ ಐದು ವರ್ಷ ಸಿಎಂ ಎನ್ನುವ ಸಚಿವ ಎಂ ಬಿ ಪಾಟೀಲ್ ಅವರ ಹೇಳಿಕೆಗೆ ಸಚಿವ ಪ್ರಿಯಾಂಕ್​ ಖರ್ಗೆ ತಿರುಗೇಟು ನೀಡಿದ್ದಾರೆ.

ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಾರು ಎಷ್ಟು ವರ್ಷ ಮುಖ್ಯಮಂತ್ರಿ ಎನ್ನುವ ವಿಚಾರ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಪಕ್ಷದ ಪ್ರಧಾನ ಕಾರ್ಯದರ್ಶಿ ವೇಣುಗೋಪಾಲ್, ರಾಜ್ಯ ಕಾಂಗ್ರೆಸ್​ ಉಸ್ತುವಾರಿ ಸುರ್ಜೇವಾಲ, ಸಿಎಂ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರಿಗೆ ಮಾತ್ರ ಗೊತ್ತಿದೆ. ಇದು ಆಂತರಿಕವಾಗಿ ನಡೆದಿರುವ ಚರ್ಚೆ. ಅವರನ್ನು ಬಿಟ್ಟು ಈ ವಿಚಾರ ಬೇರೆಯವರಿಗೆ ಗೊತ್ತಿಲ್ಲ. ಶಾಸಕಾಂಗ ಪಕ್ಷದ ಸಭೆಯಲ್ಲೂ ಈ ವಿಚಾರ ಚರ್ಚೆ ಆಗಿಲ್ಲ. ಈಗ ನಮ್ಮ ಮುಂದಿರುವುದು ಉತ್ತಮ ಆಡಳಿತ ನೀಡುವ ವಿಚಾರ. ಜನರ ಆಶೋತ್ತರಗಳನ್ನು ಈಡೇರಿಸುವ ವಿಚಾರ, ಆ ಬಗ್ಗೆ ನಮ್ಮ ಗಮನವಿದೆ ಎಂದರು. ಎಂ ಬಿ ಪಾಟೀಲ್ ಅವರಿಗೆ ಏನು ಮಾಹಿತಿ ಇದೆಯೋ ನನಗೆ ಗೊತ್ತಿಲ್ಲ. ಆದರೆ ನನಗೆ ಗೊತ್ತಿರುವುದನ್ನು ಹೇಳಿದ್ದೇನೆ ಎಂದು ಪ್ರಿಯಾಂಕ್ ಖರ್ಗೆ ಸ್ಪಷ್ಟಪಡಿಸಿದರು. ‌

ಇದನ್ನೂ ಓದಿ:'ಅಧಿಕಾರಕ್ಕಾಗಿ ನನ್ನ ಮನೆ, ಸಿದ್ದರಾಮಯ್ಯರ ಮನೆ ಎಂದು ಸುತ್ತಬೇಡಿ': ಡಿಕೆಶಿ ಖಡಕ್ ಸೂಚನೆ

ABOUT THE AUTHOR

...view details