ETV Bharat / state

'ಅಧಿಕಾರಕ್ಕಾಗಿ ನನ್ನ ಮನೆ, ಸಿದ್ದರಾಮಯ್ಯರ ಮನೆ ಎಂದು ಸುತ್ತಬೇಡಿ': ಡಿಕೆಶಿ ಖಡಕ್ ಸೂಚನೆ

author img

By

Published : May 21, 2023, 2:22 PM IST

Updated : May 21, 2023, 9:30 PM IST

ಬೆಂಗಳೂರಿನ ಕ್ವೀನ್ ರಸ್ತೆಯ ಕೆಪಿಸಿಸಿ ಕಚೇರಿ ಹಿಂಭಾಗದ ಇಂದಿರಾ ಗಾಂಧಿ ಭವನದಲ್ಲಿ ರಾಜೀವ್ ಗಾಂಧಿಯವರ ಪುಣ್ಯ ಸ್ಮರಣೆ ಸಮಾರಂಭ ನಡೆಯಿತು. ಮುಖ್ಯಮಂತ್ರಿ ಸಿದ್ದರಾಮಯ್ಯ, ಡಿಸಿಎಂ ಡಿಕೆಶಿ ರಾಜೀವ್ ಗಾಂಧಿ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು.

DCM DK
ಡಿಸಿಎಂ ಡಿಕೆಶಿ

ಬೆಂಗಳೂರು: ಈ ಬಾರಿಯ ವಿಧಾನಸಭೆ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷ (ಬಿಜೆಪಿ) ಜಾತ್ಯತೀತ ಜನತಾ ದಳ ಹೀನಾಯ ಸೋಲು ಕಂಡಿದ್ದು, ಕಾಂಗ್ರೆಸ್​ ಪಕ್ಷ ಭರ್ಜರಿ ಬಹುಮತ ಪಡೆಯುವ ಮೂಲಕ ಅಧಿಕಾರ ಚುಕ್ಕಾಣಿ ಹಿಡಿದಿದೆ. ಮೇ 20 ರಂದು ನಗರದ ಕಂಠೀರವ ಸ್ಟೇಡಿಯಂನಲ್ಲಿ ನಡೆದ ಸಮಾರಂಭದಲ್ಲಿ ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿಯಾಗಿ ಡಿ ಕೆ ಶಿವಕುಮಾರ್​ ಪ್ರಮಾಣ ವಚನ ಸ್ವೀಕರಿಸಿದರು. ಇವರೊಂದಿಗೆ 8 ಮಂದಿ ಶಾಸಕರು ಸಚಿವರಾಗಿ ಪದಗ್ರಹಣ ಮಾಡಿದರು. ಇದರ ಬೆನ್ನಲ್ಲೇ ಕಾಂಗ್ರೆಸ್​ನಲ್ಲಿ ಸಚಿವ ಸ್ಥಾನಕ್ಕಾಗಿ ಆಕಾಂಕ್ಷಿಗಳು ತಮ್ಮ ತಮ್ಮ ನಾಯಕರ ಬೆನ್ನುಬಿದ್ದಿದ್ದಾರೆ. ಇಂತಹ ಆಕಾಂಕ್ಷಿಗಳಿಗೆ ಡಿಸಿಎಂ ಡಿ ಕೆ ಶಿವಕುಮಾರ್​ ತಮ್ಮದೇ ಶೈಲಿಯಲ್ಲಿ ಸೂಚನೆಯೊಂದನ್ನು ಕೊಟ್ಟಿದ್ದಾರೆ.

ಮಾಜಿ ಪ್ರಧಾನಿ ರಾಜೀವ್​ ಗಾಂಧಿಯವರ ಪುಣ್ಯ ತಿಥಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನಾವು ಅಧಿಕಾರವನ್ನು ಸಮಾನವಾಗಿ ಹಂಚಿಕೆ ಮಾಡುತ್ತೇವೆ. ಅಧಿಕಾರಕ್ಕಾಗಿ ನಮ್ಮನ್ನು ಮನೆಗೆ ಬಂದು ಭೇಟಿ ಮಾಡಬೇಡಿ. ಕಾಂಗ್ರೆಸ್‌ ಕಾರ್ಯಕರ್ತರಲ್ಲಿ ಲೀಡರ್‌ಶಿಪ್ ಬೇಕು. ಆ ಲೀಡರ್‌ಶಿಪ್​ ಇಲ್ಲಿ ತೋರಿಸುವುದು ಅಲ್ಲ. ಸ್ಥಳೀಯ ಮಟ್ಟದಲ್ಲಿ ತೋರಿಸಿ ಪಕ್ಷ ಸಂಘಟಿಸಿ ಎಂದು ಸಚಿವಾಕಾಂಕ್ಷಿಗಳಿಗೆ ಡಿಕೆಶಿ ಖಡಕ್ ಕಿವಿಮಾತು ಹೇಳಿದರು.

ನನಗೆ ಮಂತ್ರಿಯಾಗಿ 30 ವರ್ಷ ಅನುಭವ ಇದೆ. ನನ್ನ‌ದೇ ಆದ ವಿಚಾರಗಳಲ್ಲಿ ತೀರ್ಮಾನ ಮಾಡುತ್ತೇನೆ. ಮೊದಲು ನೀವು ಬೂತ್ ಮಟ್ಟದಲ್ಲಿ ಬಲಿಷ್ಠರಾಗಿ. ಸಿದ್ದರಾಮಯ್ಯ ಮನೆ, ನನ್ನ ಮನೆ ಎಂದೆಲ್ಲ ಸುತ್ತುತ್ತಾ ಇರಬೇಡಿ. 135 ಸ್ಥಾನ ಬಂದಿದ್ದರೂ ಸಹ ನನಗೆ ಖುಷಿಯಾಗಿಲ್ಲ. ಏಕೆಂದರೆ ನಮ್ಮ ಮುಂದಿನ ಗುರಿ ಪಾರ್ಲಿಮೆಂಟ್‌ ಚುನಾವಣೆ. ಈ ಎಲೆಕ್ಷನ್​ನಲ್ಲೂ ಸಹ ಪಕ್ಷವನ್ನು ಬೂತ್ ಮಟ್ಟದಲ್ಲಿ ಸಿದ್ಧಪಡಿಸಿ. ಪಾರ್ಲಿಮೆಂಟ್​ಗೂ ಅಸೆಂಬ್ಲಿಗೂ ವ್ಯತ್ಯಾಸ ಇರುತ್ತೆ. ಚುನಾವಣೆಯನ್ನು ತಿಳಿದುಕೊಳ್ಳಿ ಎಂದು ಡಿ ಕೆ ಶಿವಕುಮಾರ್​ ಕರೆ ಕೊಟ್ಟರು.

cng
ರಾಜೀವ್ ಗಾಂಧಿಯವರ ಪುಣ್ಯ ಸ್ಮರಣೆ ಸಮಾರಂಭ

ನಾನು ಬಂಗಾರಪ್ಪನವರ ಶಿಷ್ಯ, ಎಸ್. ಎಂ. ಕೃಷ್ಣರ ಶಿಷ್ಯ ಅಲ್ಲ. ಬಂಗಾರಪ್ಪನವರ ಜೊತೆ ರಾಜಕಾರಣ ಶುರು ಮಾಡಿದವನು. ಎಲ್ಲರೂ ವೀರೇಂದ್ರ ಪಾಟೀಲ್​ರನ್ನು ಇಳಿಸಿದರು, ಹಾಗೆ ಹೀಗೆ ಅಂತಾರೆ. ಆದರೆ ಆವತ್ತು ಅವರ ಆರೋಗ್ಯ ಸ್ಥಿತಿ ಹಾಗಿತ್ತು. ಆದ್ದರಿಂದ ತೀರ್ಮಾನ ಕೈಗೊಂಡರು. ವೀರೇಂದ್ರ ಪಾಟೀಲ್ ಅವರೇ ಕೆಪಿಸಿಸಿ ಅಧ್ಯಕ್ಷರಾಗಿದ್ದರು. ಅವರ ನೇತೃತ್ವದಲ್ಲಿ ಚುನಾವಣೆಗೆ ಹೋಗಿದ್ದೆವು. ಗೆದ್ದಾಗ ಅವರೇ ಮುಖ್ಯಮಂತ್ರಿ ಆಗಿದ್ದರು ಎಂದು ಪಾಟೀಲ್‌ ಅವರನ್ನು ಸಿಎಂ ಸ್ಥಾನದಿಂದ ಯಾಕೆ ಇಳಿಸಲಾಗಿತ್ತು ಎಂಬುದರ ಕುರಿತು ಡಿಕೆಶಿ ಇದೇ ಸಂದರ್ಭದಲ್ಲಿ ಸ್ಪಷ್ಟನೆ ಕೊಟ್ಟರು.

ಎಂ. ಬಿ. ಪಾಟೀಲ್ ವಿರುದ್ಧ ಗರಂ: ಕಾರ್ಯಕ್ರಮದ ಆರಂಭದಲ್ಲಿ ಡಿ. ಕೆ. ಶಿವಕುಮಾರ್ ಅವರು ಸಚಿವ ಎಂ. ಬಿ. ಪಾಟೀಲ್​ ವಿರುದ್ಧ ಸ್ವಲ್ಪ ಗರಂ ಆದರು. ಡಿಕೆಶಿ ಭಾಷಣದ ವೇಳೆ ಸಿಎಂ ಸಿದ್ದರಾಮಯ್ಯನವರ ಜೊತೆ ಎಂ. ಬಿ. ಪಾಟೀಲ್ ಮಾತನಾಡುತ್ತಿದ್ದರು. ಇದನ್ನು ಗಮನಿಸಿದ 'ಡಿಕೆಶಿ ಡೋಂಟ್‌ ಡಿಸ್ಟರ್ಬ್' ಎಂದು ಸುಮ್ಮನಿರುವಂತೆ ಸೂಚನೆ ಕೊಟ್ಟರು.

ಕಾರ್ಯಕ್ರಮದಲ್ಲಿ ಉಪ ಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್ ಸಚಿವರಾದ ಎಂ. ಬಿ. ಪಾಟೀಲ್, ಸತೀಶ್ ಜಾರಕಿಹೊಳಿ, ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಬಿ. ಕೆ. ಹರಿಪ್ರಸಾದ್, ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹಮದ್ ಮತ್ತಿತರ ಗಣ್ಯರು ಭಾಗವಹಿಸಿದ್ದರು.

ಇದನ್ನೂ ಓದಿ: ರಾಜೀವ್ ಗಾಂಧಿ 32ನೇ ಪುಣ್ಯತಿಥಿ: ಖರ್ಗೆ, ಸೋನಿಯಾ ಸೇರಿದಂತೆ ಗಣ್ಯರಿಂದ ಶ್ರದ್ಧಾಂಜಲಿ

Last Updated :May 21, 2023, 9:30 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.