ಕರ್ನಾಟಕ

karnataka

ನೂತನ ಉಪ ಸಭಾಪತಿಯಾಗಿ ಎಂ ಕೆ ಪ್ರಾಣೇಶ್ ಆಯ್ಕೆ

By

Published : Dec 23, 2022, 12:51 PM IST

ಎಂ. ಕೆ ಪ್ರಾಣೇಶ್ ಅವರು ಕ್ರಿಯಾಶೀಲ ವ್ಯಕ್ತಿ, ಸಣ್ಣ ವಯಸ್ಸಿನಲ್ಲೇ ಸಾರ್ವಜನಿಕ ಜೀವನದಲ್ಲಿ ಬಹಳ ಪರಿಣಾಮಕಾರಿಯಾಗಿ ಕೆಲಸ ಮಾಡಿ ಎಲ್ಲರ ಮನ ಗೆದ್ದಿದ್ದಾರೆ. ಸಮಸ್ಯೆಗಳಿಗೆ ಹೋರಾಟ ನಡೆಸಿ ಪರಿಹಾರ ಕಂಡುಕೊಳ್ಳುವ ರಾಜಕಾರಣಿ, ನಡೆ ಮತ್ತು ನುಡಿ ಎರಡೂ ಒಂದೇ. ಸೌಮ್ಯ ಸ್ವಭಾವದ ವ್ಯಕ್ತಿ, ಜಂಟಲ್ ಮ್ಯಾನ್ ಇನ್ ಪೊಲಿಟಿಕ್ಸ್ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೊಗಳಿದ್ದಾರೆ.

ಎಂ. ಕೆ ಪ್ರಾಣೇಶ್
ಎಂ. ಕೆ ಪ್ರಾಣೇಶ್

ಬೆಂಗಳೂರು:ವಿಧಾನ ಪರಿಷತ್ ನೂತನ ಉಪಸಭಾಪತಿಯಾಗಿ ಎಂ. ಕೆ ಪ್ರಾಣೇಶ್ ಆಯ್ಕೆಯಾದರು. ಸಭಾಪತಿ ಅವಿರೋಧವಾಗಿ ಆಯ್ಕೆ ನಡೆದರೆ ಕಾಂಗ್ರೆಸ್ ಸ್ಪರ್ಧೆಯಿಂದಾಗಿ ಮತಗಳ ಎಣಿಕೆ ಮೂಲಕ ಉಪ ಸಭಾಪತಿಯಾಗಿ ಪ್ರಾಣೇಶ್ ಅವರನ್ನು ಚುನಾಯಿಸಲಾಯಿತು.

ವಿಧಾನ ಪರಿಷತ್ ಕಲಾಪ ಆರಂಭಗೊಳ್ಳುತ್ತಿದ್ದಂತೆ ಉಪಸಭಾಪತಿ ಚುನಾವಣಾ ಪ್ರಕ್ರಿಯೆಯನ್ನು ಕೈಗೆತ್ತಿಕೊಂಡರು. ಸಭಾನಾಯಕ ಕೋಟಾ ಶ್ರೀನಿವಾಸ ಪೂಜಾರಿ ಅವರು ಪ್ರಾಣೇಶ್ ಅವರನ್ನು ಉಪ ಸಭಾಪತಿಯನ್ನಾಗಿ ಚುನಾಯಿಸಬೇಕು ಎಂದು ಸೂಚಿಸಿ, ನಾರಾಯಣಸ್ವಾಮಿ ಅನುಮೋದಿಸಿದ್ದ ಪ್ರಸ್ತಾವವನ್ನು ಸಭಾಪತಿ ಸದನಕ್ಕೆ ಮಂಡಿಸಿ ಮತಕ್ಕೆ ಹಾಕಲಾಯಿತು. ತಲೆ ಎಣಿಕೆ ಮೂಲಕ ಚುನಾವಣಾ ಪ್ರಕ್ರಿಯೆ ನಡೆಸಲಾಯಿತು. ಪ್ರಸ್ತಾವದ ಪರವಾಗಿ 39 ಮತಗಳು ಮತ್ತು ವಿರುದ್ಧವಾಗಿ 26 ಮತಗಳು ಬಂದಿವೆ ಎಂದು ಪ್ರಕಟಿಸಿದ ಸಭಾಪತಿಗಳು, ಪ್ರಾಣೇಶ್ ಅವರನ್ನು ಉಪ ಸಭಾಪತಿಯನ್ನಾಗಿ ಘೋಷಣೆ ಮಾಡಿದರು.

ಚುನಾವಣಾ ಪ್ರಕ್ರಿಯೆ ಮುಗಿದ ನಂತರ ಮಾತನಾಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಕ್ರಿಯಾಶೀಲ ವ್ಯಕ್ತಿ, ಸಣ್ಣ ವಯಸ್ಸಿನಲ್ಲೇ ಸಾರ್ವಜನಿಕ ಜೀವನದಲ್ಲಿ ಬಹಳ ಪರಿಣಾಮಕಾರಿಯಾಗಿ ಕೆಲಸ ಮಾಡಿ ಎಲ್ಲರ ಮನ ಗೆದ್ದಿದ್ದಾರೆ. ಸಮಸ್ಯೆಗಳಿಗೆ ಹೋರಾಟ ನಡೆಸಿ ಪರಿಹಾರ ಕಂಡುಕೊಳ್ಳುವ ರಾಜಕಾರಣಿ, ನಡೆ ಮತ್ತು ನುಡಿ ಎರಡೂ ಒಂದೇ. ಸೌಮ್ಯ ಸ್ವಭಾವದ ವ್ಯಕ್ತಿ, ಜಂಟಲ್ ಮ್ಯಾನ್ ಇನ್ ಪೊಲಿಟಿಕ್ಸ್. ಪಕ್ಷವನ್ನು ಮೀರಿ ಅವರು ಎಲ್ಲರೊಂದಿಗೆ ಸ್ನೇಹ ಬೆಳೆಸಿಕೊಂಡಿದ್ದಾರೆ.

ದಶಕದ ಕಾಲ ಕೆಲಸ ಮಾಡಿದ್ದಾರೆ: ಚಿಕ್ಕಮಗಳೂರು ಅಭಿವೃದ್ಧಿಗೆ ತಮ್ಮದೇ ಆದ ಪಾತ್ರ ವಹಿಸಿದ್ದಾರೆ. ರೈತರ, ಕಾಡಂಚಿನ ಜನರ ಸಮಸ್ಯೆ, ಬುಡಕಟ್ಟು ಜನರ, ಕಾಫಿ ಬೆಳೆಗಾರರ ಸಮಸ್ಯೆ, ಎಸ್ಸಿ, ಎಸ್ಟಿ ಜನರ ಒಡನಾಡಿಯಾಗಿ ಅವರ ಸಮಸ್ಯೆಗಳಿಗೆ ಸ್ಪಂದಿಸುವ ವ್ಯಕ್ತಿ. ದಶಕದ ಕಾಲ ಕೆಲಸ ಮಾಡಿದ್ದಾರೆ. ಕಳೆದ ಬಾರಿ ಉಪ ಸಭಾಪತಿಯಾಗಿ ಅತ್ಯುತ್ತಮವಾಗಿ ದಕ್ಷತೆಯಿಂದ ಕೆಲಸ ಮಾಡಿದ್ದಾರೆ. ಸಭಾಪತಿ ಭಾರ ಕಡಿಮೆ ಮಾಡಲಿದ್ದಾರೆ. ಕಲಾಪ ಯಶಸ್ವಿಯಾಗಿ ನಡೆಸಲು ಅನುಕೂಲವಾಗಲಿದೆ ಎಂದರು.

ನಾಡಿನ ನೆಲ, ಜಲ, ಜ್ವಲಂತ ಸಮಸ್ಯೆ ಪರಿಹರಿಸುವ ವೇಳೆ ಎತ್ತರದಲ್ಲಿ ನಿಂತು ಪರಿಹಾರ ಕೈಗೊಳ್ಳುವುದು ಮುಖ್ಯ. ನಿಮ್ಮ ಜವಾಬ್ದಾರಿ ದೊಡ್ಡದಿದೆ. ಮೇಲ್ಮನೆಯಿಂದ ಜನ ವಿಭಿನ್ನ ನಿರೀಕ್ಷೆ ಇರಿಸಿಕೊಂಡಿರುತ್ತಾರೆ. ಒಳ್ಳೆಯ ಚರ್ಚೆ, ಆಳವಾಗಿ ವಿಷಯಾಧಾರಿತ ಚರ್ಚೆಯಾಗಲಿದೆ. ಕಾನೂನು ರಚನೆ ವೇಳೆ ಹೊಸ ಆಯಾಮ, ಹೊಸ ಬೆಳಕು ಚೆಲ್ಲಲು ಅವಕಾಶವಿದೆ. ಒಂದು ರೀತಿಯಲ್ಲಿ ಅಧ್ಯಯನಪೂರ್ಣ ಚರ್ಚೆಯಾಗಬೇಕು, ಅದಕ್ಕೆ ಹೆಚ್ಚಿನ ಒತ್ತು ಕೊಡುವ ಅವಶ್ಯಕತೆ ಇದೆ ಎಂದು ಹೇಳಿದರು.

ಸಭಾ ನಾಯಕ ಕೋಟಾ ಶ್ರೀನಿವಾಸ ಪೂಜಾರಿ ಮಾತನಾಡಿ, ಎರಡನೇ ಬಾರಿ ಸದಸ್ಯರಾಗಿ ಎರಡನೇ ಬಾರಿ ಉಪ ಸಭಾಪತಿಯಾಗಿ ಆಯ್ಕೆಯಾಗಿದ್ದಾರೆ. ಬಹಳ ದಿನಗಳಿಂದ ಉಪ ಸಭಾಪತಿಯಾಗಬೇಕು ಎಂದು ಕನಸು ಕಂಡಿದ್ದರು. ಈಗ ಅವರು ಕನಸು ಈಡೇರಿದೆ. ಅವರಿಗೆ ಶುಭವಾಗಲಿ ಎಂದರು.

ದೊಡ್ಡ ಜವಾಬ್ದಾರಿ ಸಿಕ್ಕಿದೆ:ಪ್ರತಿಪಕ್ಷ ನಾಯಕ ಹರಿಪ್ರಸಾದ್ ಮಾತನಾಡಿ, ಪ್ರಜಾಪ್ರಭುತ್ವದಲ್ಲಿ ಸಂಖ್ಯೆಯೇ ಮುಖ್ಯ. ಆದರೂ ನಮ್ಮ ಸಂಖ್ಯೆ ಕಡಿಮೆ ಇದ್ದರೂ ನಮ್ಮ ನಿಲುವಿಗೆ ಸ್ಪಂದಿಸಬೇಕು. ಈ ಸದನ ವಿಷಯ ತಜ್ಞರು, ಅನುಭವಿಗಳು, ಮುತ್ಸದ್ದಿಗಳು ಪ್ರತಿನಿಧಿಸಿದ್ದನ್ನು ನೋಡಬಹುದು. ನಾವು ಏನಾದರೂ ಹೇಳುವ ವೇಳೆ ಆಳವಾಗಿ ಕೇಳಿ ಉತ್ತರ ಕೊಡಬೇಕು. ಉಪ ಸಭಾಪತಿ ಪ್ರತಿಪಕ್ಷಕ್ಕೆ ಕೊಡುವ ಪರಂಪರೆ ನಿಧಾನಕ್ಕೆ ನಶಿಸಿದೆ. ಸಂಖ್ಯಾ ಬಲದಲ್ಲಿ ಸರ್ಕಾರ ನಡೆಸಲಾಗಲ್ಲ. ಪ್ರತಿಪಕ್ಷವನ್ನೂ ವಿಶ್ವಾಸಕ್ಕೆ ಪಡೆದು ಸರ್ಕಾರವನ್ನು ನಡೆಸಬೇಕು. ಸಣ್ಣ ವಯಸ್ಸಿನಲ್ಲೇ ಪ್ರಾಣೇಶ್ ಗೆ ದೊಡ್ಡ ಜವಾಬ್ದಾರಿ ಸಿಕ್ಕಿದೆ. ವಿರೋಧ ಪಕ್ಷಕ್ಕೆ ಕೊಡಬೇಕಾದ ಆದ್ಯತೆ ಕೊಡಿ ಎನ್ನುತ್ತ ಶುಭ ಕೋರಿದರು.

ಜೆಡಿಎಸ್ ಸದಸ್ಯ ತಿಪ್ಪೇಸ್ವಾಮಿ ಮಾತನಾಡಿ, ಯಾರ ಭಾವನೆಗಳಿಗೂ ಧಕ್ಕೆ ತರುವುದಾಗಿ ಬೋಜೇಗೌಡರು ಹೇಳಲಿಲ್ಲ. ಅವಿರೋಧ ಆಯ್ಕೆಗೆ ಕೇಳಬಹುದಿತ್ತು ಎನ್ನುವ ಅಪೇಕ್ಷೆ ವ್ಯಕ್ತಪಡಿಸಿದ್ದರು ಅಷ್ಟೇ. ಆದರೆ ಅದು ಎಲ್ಲಿಯೋ ಹೋಯಿತು. ಹಾಗಾಗಿ ನಾವು ಕ್ಷಮೆ ಕೇಳುತ್ತೇವೆ ಎಂದರು.

ಓದಿ:ಭೂ ಪರಿವರ್ತನೆ ಕಾಲಾವಧಿ 7 ದಿನಕ್ಕೆ ಇಳಿಸುವ ಕರ್ನಾಟಕ ಭೂ ಕಂದಾಯ ವಿಧೇಯಕ ಅಂಗೀಕಾರ

ABOUT THE AUTHOR

...view details