ಕರ್ನಾಟಕ

karnataka

ಸಂಪುಟ ಸರ್ಕಸ್​.. ಸಿಎಂ-ಶಾ ಭೇಟಿ ಅಂತ್ಯ, ಬರಿಗೈಯಲ್ಲೇ ರಾಜ್ಯಕ್ಕೆ ಬೊಮ್ಮಾಯಿ ವಾಪಸ್

By

Published : May 11, 2022, 3:45 PM IST

Updated : May 11, 2022, 4:07 PM IST

karnataka-cabinet-issue-not-finalised-says-cm-basavaraj-bommai
ಅಮಿತ್ ಶಾ ಜೊತೆ ಮುಖ್ಯಮಂತ್ರಿ ಮಾತುಕತೆ

ನಾವು ಎಲ್ಲವನ್ನೂ ಅವರಿಗೆ ತಿಳಿಸಿದ್ದು, ಸುದೀರ್ಘವಾಗಿ ಕೇಳಿದ್ದಾರೆ. ಜೆ ಪಿ ನಡ್ಡಾ ಜೊತೆ ಮಾತನಾಡಿ ಸೂಕ್ತ ನಿರ್ಧಾರ ತೆಗೆದುಕೊಳ್ಳುತ್ತೇವೆ. 2-3 ದಿನಗಳ ಬೆಳವಣಿಗೆ ಆಧಾರದಲ್ಲಿ ತೀರ್ಮಾನ ಕೈಗೊಳ್ಳುವುದಾಗಿ ತಿಳಿಸಿದ್ದಾರೆ ಎಂದು ಸಿಎಂ ಬೊಮ್ಮಾಯಿ ಮಾಹಿತಿ ನೀಡಿದರು.

ನವದೆಹಲಿ/ಬೆಂಗಳೂರು:ಬಹು ನಿರೀಕ್ಷಿತ ಸಚಿವ ಸಂಪುಟ ವಿಸ್ತರಣೆ ಕುರಿತು ಕೇಂದ್ರ ಗೃಹ ಸಚಿವ ಅಮಿತ್ ಶಾ ಜೊತೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನಡೆಸಿದ ಸಭೆಯಲ್ಲಿ ತಕ್ಷಣದ ನಿರ್ಧಾರ ಕೈಗೊಳ್ಳದ ಹಿನ್ನೆಲೆಯಲ್ಲಿ ಮತ್ತೆ ಬರಿಗೈಯಲ್ಲಿ ಸಿಎಂ ರಾಜ್ಯಕ್ಕೆ ವಾಪಸಾಗಬೇಕಾಗಿದೆ.

ಮುಖ್ಯಮಂತ್ರಿ ಬೊಮ್ಮಾಯಿ ಅವರು ಇಂದು ನವದೆಹಲಿಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದರು. ಕೇಂದ್ರ ಸಂಸದೀಯ ವ್ಯವಹಾರಗಳ ಖಾತೆ ಸಚಿವ ಪ್ರಹ್ಲಾದ ಜೋಶಿ ಸಮ್ಮುಖದಲ್ಲಿ ಸಂಪುಟ ವಿಸ್ತರಣೆ ಕುರಿತು ಮಹತ್ವದ ಮಾತುಕತೆ ನಡೆಸಿದರು. ಎಲ್ಲವನ್ನು ಆಲಿಸಿದ ಅಮಿತ್ ಶಾ ನೀವು ರಾಜ್ಯಕ್ಕೆ ವಾಪಸ್​ ತೆರಳಿ, ನಾವು ಈ ಬಗ್ಗೆ ಚರ್ಚಿಸಿ ನಿರ್ಧಾರ ತಿಳಿಸುತ್ತೇವೆ ಎಂದಿದ್ದಾರೆ. ಹೀಗಾಗಿ ಮತ್ತೊಮ್ಮೆ ಸಚಿವಾಕಾಂಕ್ಷಿಗಳಿಗೆ ಮತ್ತೆ ನಿರಾಸೆಯಾಗಿದೆ. ಸಚಿವರ ಪಟ್ಟಿಯೊಂದಿಗೆ ರಾಜ್ಯಕ್ಕೆ ಸಿಎಂ ಮರಳಲಿದ್ದಾರೆ ಎನ್ನುವ ನಿರೀಕ್ಷೆ ಹುಸಿಯಾಗಿದೆ.

ಸಿಎಂ ಬೊಮ್ಮಾಯಿ ಪ್ರತಿಕ್ರಿಯೆ

ನಡ್ಡಾ ಜೊತೆ ಚರ್ಚಿಸಿ ನಿರ್ಧಾರ:ಅಮಿತ್ ಶಾ ಭೇಟಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ ಬೊಮ್ಮಾಯಿ, ರಾಜ್ಯದ ರಾಜಕೀಯ ವಿದ್ಯಮಾನಗಳು, ಸ್ಥಿತಿಗತಿಗಳು ಮತ್ತು ಸಚಿವ ಸಂಪುಟ ವಿಸ್ತರಣೆ ಕುರಿತಂತೆ ಚರ್ಚೆ ನಡೆಸಲಾಗಿದೆ ಮತ್ತು ನಿನ್ನೆ ಸುಪ್ರೀಂಕೋರ್ಟ್ ಸ್ಥಳೀಯ ಸಂಸ್ಥೆಗಳ ಚುನಾವಣೆ ಕುರಿತು ನೀಡಿರುವ ಆದೇಶ, ಅದರ ಪರಿಣಾಮಗಳೇನು? ಯಾವ ನಿರ್ಧಾರ ತೆಗೆದುಕೊಳ್ಳಬೇಕು ಎನ್ನುವುದು ಸೇರಿದಂತೆ ಎಲ್ಲವೂ ಕೂಡ ಚರ್ಚೆಯಾಗಿದೆ. ನಾವು ಎಲ್ಲವನ್ನೂ ಅವರಿಗೆ ತಿಳಿಸಿದ್ದು, ಸುದೀರ್ಘವಾಗಿ ಕೇಳಿದ್ದಾರೆ. ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ ಪಿ ನಡ್ಡಾ ಜೊತೆ ಮಾತನಾಡಿ ಸೂಕ್ತ ನಿರ್ಧಾರ ತೆಗೆದುಕೊಳ್ಳುತ್ತೇವೆ. 2-3 ದಿನಗಳ ಬೆಳವಣಿಗೆ ಆಧಾರದಲ್ಲಿ ತೀರ್ಮಾನ ಕೈಗೊಳ್ಳುವುದಾಗಿ ತಿಳಿಸಿದ್ದಾರೆ ಎಂದು ಮಾಹಿತಿ ನೀಡಿದರು.

ಎಲ್ಲದರ ಬಗ್ಗೆಯೂ ಚರ್ಚೆ:ಮುಂಬರುವ ರಾಜ್ಯಸಭಾ ಚುನಾವಣೆ ಬಗ್ಗೆಯೂ ಸುದೀರ್ಘ ಚರ್ಚೆ ನಡೆಸಲಾಯಿತು. ಬರುವ ಸ್ಥಳೀಯ ಸಂಸ್ಥೆ ಚುನಾವಣೆ, ರಾಜ್ಯಸಭಾ, ವಿಧಾನಪರಿಷತ್ ಚುನಾವಣೆ, ಸಚಿವ ಸಂಪುಟ ವಿಸ್ತರಣೆ ಎಲ್ಲದರ ಬಗ್ಗೆಯೂ ಇಂದು ಚರ್ಚೆಯಾಗಿದೆ. ಆದರೆ ನಡ್ಡಾ ಜೊತೆ ಚರ್ಚಿಸಿ ಅಂತಿಮವಾಗಿ ಹೇಳುವುದಾಗಿ ತಿಳಿಸಿದ್ದಾರೆ. ನಮ್ಮ ಕಡೆಯಿಂದ ನಾನು ನೀಡಬೇಕಾದ ಎಲ್ಲ ವಿವರಗಳನ್ನು ನೀಡಿದ್ದೇನೆ, ಅವರ ನಿರ್ಧಾರ ಬಾಕಿ ಇದೆ ಎಂದು ಸಿಎಂ ತಿಳಿಸಿದರು.

ಅಮಿತ್ ಶಾ ಜೊತೆ ಮುಖ್ಯಮಂತ್ರಿ ಮಾತುಕತೆ

ಮುಂದಿನ ಒಂದು ವಾರ ಬಹಳ ಮುಖ್ಯ:ರಾಜಕೀಯದಲ್ಲಿ ಯಾವಾಗ ಏನು ಬೇಕಾದರೂ ಆಗಬಹುದು, ರಾಜಕೀಯ ಪಕ್ಷವಾಗಿ ಎಲ್ಲಾ ತೀರ್ಮಾನ ಮಾಡಬೇಕಾಗಿದೆ. ಒಟ್ಟಾರೆ ರಾಜಕೀಯ ಸ್ಥಿತಿಗತಿಗಳ ಆಧಾರದ ಮೇಲೆ ನಿರ್ಣಯಗಳು ಆಗಲಿವೆ. ಈ ಹಿನ್ನೆಲೆಯಲ್ಲಿ ಇಂದು ಸ್ಥಿತಿಗತಿ ಏನಿದೆ ಎನ್ನುವುದನ್ನು ವಿವರಿಸಿದ್ದೇನೆ. ಮುಂದಿನ ಒಂದು ವಾರ ಬಹಳ ಮುಖ್ಯವಾಗಿದೆ. ಸ್ಥಳೀಯ ಸಂಸ್ಥೆಗಳಿಗೆ ಸಂಬಂಧಿಸಿದಂತೆ ದೊಡ್ಡಪ್ರಮಾಣದಲ್ಲಿ ಇಡೀ ರಾಜ್ಯದ ತುಂಬಾ ಚುನಾವಣೆ ನಡೆಯುವುದರಿಂದ ಅದರ ಪರಿಣಾಮ ಏನು ಎನ್ನುವುದರ ಕುರಿತು ಚಿಂತನೆ ನಡೆಸಲಾಗಿದೆ ಎಂದು ಹೇಳಿದರು.

ಉತ್ತರಾಖಂಡ್​, ಗುಜರಾತ್ ಮಾದರಿ ನಮಗೆ ಅನ್ವಯವಾಗಲ್ಲ, ಆಯಾ ರಾಜ್ಯದ ಸ್ಥಿತಿಗತಿಗಳ ಮೇಲೆ ನಿರ್ಧಾರಗಳು ಆಗಲಿವೆ. ಹಾಗಾಗಿ ನಮ್ಮ ರಾಜ್ಯದ ರಾಜಕೀಯ ಸ್ಥಿತಿಗತಿ, ಆಡಳಿತಾತ್ಮಕ ಸ್ಥಿತಿಗತಿ, ರಾಜಕೀಯ ವಿದ್ಯಮಾನಗಳು ಇತ್ಯಾದಿಗಳ ಆಧಾರದಲ್ಲಿ ಸಂಪುಟ ಸರ್ಜರಿ ಕುರಿತು ನಿರ್ಧಾರವಾಗಲಿದೆ ಎಂದು ಸಿಎಂ ಸ್ಪಷ್ಟಪಡಿಸಿದರು.

ಇದನ್ನೂ ಓದಿ:ಮೇಲ್ಮನೆ ಚುನಾವಣೆ ಪ್ರಕಟ : ಸಚಿವ ಸಂಪುಟ ವಿಸ್ತರಣೆಗೆ ಮತ್ತೆ ವಿಘ್ನ!?

Last Updated :May 11, 2022, 4:07 PM IST

ABOUT THE AUTHOR

...view details