ಕರ್ನಾಟಕ

karnataka

'ಪುನೀತ್ ರಾಜ್​ಕುಮಾರ್ ಮನೆ ಮನೆಯ ಮಗ, ಸ್ಮಾರಕ ಪುನರಾಭಿವೃದ್ಧಿಗೆ ಸರ್ಕಾರ ಸಾಥ್': ಸಿಎಂ ಸಿದ್ದರಾಮಯ್ಯ

By ETV Bharat Karnataka Team

Published : Oct 17, 2023, 7:37 AM IST

ದಿ.ಡಾ. ಪುನೀತ್ ರಾಜ್​ಕುಮಾರ್ ಅವರ ಸಂಗ್ರಹಣೀಯ ಶಿಲ್ಪಗಳ ಅನಾವರಣ ಕಾರ್ಯಕ್ರಮವನ್ನು ಬೆಂಗಳೂರಿನ ಖಾಸಗಿ ಹೋಟೆಲ್​​ನಲ್ಲಿ ಹಮ್ಮಿಕೊಳ್ಳಲಾಗಿತ್ತು. ಸ್ಮಾರಕ ಪುನರಾಭಿವೃದ್ಧಿಗೆ ಸಿಎಂ ಭರವಸೆ ನೀಡಿದರು.

Puneeth Sculptures unveiling program
ಪುನೀತ್ ರಾಜ್​ಕುಮಾರ್ ಸಂಗ್ರಹಣೀಯ ಶಿಲ್ಪಗಳ ಅನಾವರಣ

'ಪುನೀತ್ ರಾಜ್​ಕುಮಾರ್ ಮನೆ ಮನೆಯ ಮಗ, ಸ್ಮಾರಕ ಪುನರಾಭಿವೃದ್ಧಿಗೆ ಸರ್ಕಾರ ಸಾಥ್': ಸಿಎಂ ಸಿದ್ದರಾಮಯ್ಯ

ಕನ್ನಡ ಚಿತ್ರರಂಗದ ಪ್ರಸಿದ್ಧ ನಟ ಪುನೀತ್ ರಾಜ್‍ಕುಮಾರ್ ನಮ್ಮನೆಲ್ಲ ಅಗಲಿ ಇದೇ ಅಕ್ಟೋಬರ್ 29ಕ್ಕೆ ಎರಡು ವರ್ಷ ಪೂರ್ಣಗೊಳ್ಳಲಿದೆ. ರಾಜರತ್ನನ ನೆನಪುಗಳು ಅಭಿಮಾನಿಗಳೆದೆಯಲ್ಲಿ ಸದಾ ಜೀವಂತ. ಈಗಾಗಲೇ ರಾಜ್ಯಾದ್ಯಂತ ಪುತ್ಥಳಿ ಅನಾವರಣ, ರಸ್ತೆಗೆ ಪುನೀತ್ ರಾಜ್‍ಕುಮಾರ್ ಹೆಸರನ್ನು ಇಡುವ ಮೂಲಕ, ಹಲವು ಸಮಾಜ ಸೇವೆ ಸೇರಿದಂತೆ ವಿಭಿನ್ನ ಸಮಾಜ ಸೇವೆ ದೊಡ್ಮನೆ ಕಿರಿ ಮಗನನ್ನು ಸ್ಮರಿಸಲಾಗುತ್ತಿದೆ. ಈ‌ ಮಧ್ಯೆ ಪಿ.ಆರ್.ಕೆ ಸ್ಟುಡಿಯೋಸ್ ಹಾಗೂ ಎನ್​​.ತ್ರಿ.ಕೆ ಡಿಸೈನ್ ಸ್ಟುಡಿಯೋ ವತಿಯಿಂದ ದಿ. ಡಾ. ಪುನೀತ್ ರಾಜ್​ಕುಮಾರ್ ಅವರ ಸಂಗ್ರಹಣೀಯ ಶಿಲ್ಪಗಳ ಅನಾವರಣ ಕಾರ್ಯಕ್ರಮವನ್ನು ಬೆಂಗಳೂರಿನ ಖಾಸಗಿ ಹೋಟೆಲ್​​ನಲ್ಲಿ ಸೋಮವಾರ ಹಮ್ಮಿಕೊಳ್ಳಲಾಗಿತ್ತು.

ಈ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ, ನಗರಾಭಿವೃದ್ಧಿ ಸಚಿವ ಬೈರತಿ ಬಸವರಾಜ್, ಪುನೀತ್ ಹಿರಿಯ ಸಹೋದರ ರಾಘವೇಂದ್ರ ರಾಜ್​ಕುಮಾರ್, ಪತ್ನಿ ಅಶ್ವಿನಿ ಪುನೀತ್ ರಾಜ್‍ಕುಮಾರ್ ಹಾಗೂ ಮಗಳು ವಂದಿತಾ ಸೇರಿದಂತೆ ಹಲವರು ಸಾಕ್ಷಿ ಆಗಿದ್ದರು. ಗಣ್ಯರ ಸಮ್ಮುಖದಲ್ಲಿ ಸಿಎಂ ಸಿದ್ದರಾಮಯ್ಯ ಪುನೀತ್ ಸಂಗ್ರಹಣೀಯ ಶಿಲ್ಪಗಳನ್ನು ದೀಪ ಬೆಳಗಿಸುವ ಮೂಲಕ ಅನಾವರಣಗೊಳಿಸಿದರು.

ಬಳಿಕ ಮಾತನಾಡಿದ ಸಿಎಂ ಸಿದ್ದರಾಮಯ್ಯ ಅವರು, ಪುನೀತ್ ರಾಜ್​​ಕುಮಾರ್ ಅವರ ಸ್ಮಾರಕ ಪುನರಾಭಿವೃದ್ಧಿ ಸೇರಿದಂತೆ ಅಶ್ವಿನಿ ಪುನೀತ್ ರಾಜ್​ಕುಮಾರ್ ಅವರು ಮಾಡಿರುವ ಮನವಿಗೆ ಸರ್ಕಾರ ಸಕಾರಾತ್ಮಕವಾಗಿ ಸ್ಪಂದಿಸಲಿದೆ ಎಂದು ಭರವಸೆ ನೀಡಿದರು. ಅಪ್ಪು ಸಾವು ಕರುನಾಡಿಗೆ ಆಗಿರುವ ದೊಡ್ಡ ನಷ್ಟ. ನನ್ನನ್ನೂ ಅವರು ಬಹಳ ಗೌರವದಿಂದ ಕಾಣುತ್ತಿದ್ದರು. ದೊಡ್ಡವರನ್ನು, ಸಹ ಕಲಾವಿದರನ್ನು ಗೌರವದಿಂದ ಕಾಣುವ ಗುಣ ಬೆಳೆಸಿಕೊಂಡಿದ್ದರು. ಕಿರಿಯ ಕಲಾವಿದರಿಗೆ ಪ್ರೋತ್ಸಾಹ ನೀಡುತ್ತಿದ್ದರು. ಆದ್ರೀಗ ಕರುನಾಡಿಗೆ ಆಗಿರುವ ಆ ನಷ್ಟವನ್ನು ತುಂಬಲು ಸಾಧ್ಯವಿಲ್ಲ. ಉತ್ತಮ ನಟ ಹಾಗೂ ಮಾನವೀಯತೆಯುಳ್ಳ ವ್ಯಕ್ತಿಯನ್ನು ನಾಡು ಕಳೆದುಕೊಂಡಿದೆ. ಅವರ ಪ್ರತಿಮೆಗಳಿಂದ ಅವರನ್ನು ಇನ್ನಷ್ಟು ಸ್ಮರಿಸುವ ಕೆಲಸವಾಗುತ್ತಿದೆ ಎಂದು ತಿಳಿಸಿದರು.

ಇದನ್ನೂ ಓದಿ:'ಎಮರ್ಜೆನ್ಸಿ' ರಿಲೀಸ್​ ಡೇಟ್ ಮುಂದೂಡಿಕೆ; 'ಕ್ಷಮೆಯಿರಲಿ' ಎಂದ ನಟಿ ಕಂಗನಾ ರಣಾವತ್​

ರಾಜ್ ಕುಮಾರ್ ಕುಟುಂಬದವರು ಎಂದಿಗೂ ಕೆಟ್ಟದ್ದನ್ನು ಬಯಸಿಲ್ಲ. ಕೆಟ್ಟ ಪದ ಬಳಸಿಲ್ಲ. ಪುನೀತ್ ರಾಜ್​​ಕುಮಾರ್, ಅವರ ತಂದೆ ರಾಜ್​ಕುಮಾರ್ ಅವರಿಗಿಂತ ಒಂದು ಹೆಜ್ಜೆ ಮುಂದೆ ಹೋಗಿದ್ದರು. ರಾಜ್​ಕುಮಾರ್ ಮೇರುನಟ. ಆದ್ರೆ ಪುನೀತ್ ತೀರಿಕೊಂಡಾಗ ಜನರ ಭಾವನೆಗಳನ್ನು ಕಂಡಾಗ, ರಾಜ್ ಕುಮಾರ್ ಅವರಿಗಿಂತಲೂ ಅಪ್ಪು ಜನಪ್ರಿಯರಾಗಿದ್ದರು ಎಂಬ ಭಾವನೆ ಬಂದಿತು. ಪುನೀತ್ ಮರಣ ಹೊಂದಿದಾಗ ನಮ್ಮ ಮನೆಯಲ್ಲಿಯೇ ಯಾರೋ ಒಬ್ಬರು ತೀರಿಕೊಂಡಿದ್ದಾರೆ ಎಂಬಂತಿತ್ತು. ಎಲ್ಲಾ ಊರುಗಳಲ್ಲಿಯೂ ಪ್ರತಿಮೆ ಸ್ಥಾಪಿಸಿ, ಕಟೌಟ್ ಹಾಕಿ ಗೋಳಾಡಿದ್ದು ಕಂಡಾಗ ಪುನೀತ್ ಅವರ ಜನಪ್ರಿಯತೆ ಎಂತದ್ದು ಎಂಬುದು ತಿಳಿಯಿತು. ಅವರು ಬಹಳ ಬೇಗ ನಮ್ಮನ್ನು ಅಗಲಿದರು. ಬದುಕಿದ್ದರೆ, ನಾವು ನಿರೀಕ್ಷೆ ಮಾಡದಷ್ಟು ಎತ್ತರಕ್ಕೆ ಬೆಳೆಯುತ್ತಿದ್ದರು. ಪುನೀತ್ ರಾಜ್​ಕುಮಾರ್ ಮನೆ ಮನೆಯ ಮಗ. ಅವರನ್ನು ಗೌರವಿಸದವರೇ ಇಲ್ಲ ಎಂದು ಪ್ರಶಂಸನೀಯ ಮಾತುಗಳನ್ನಾಡಿದರು.

ಇದನ್ನೂ ಓದಿ:69ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ: ದೆಹಲಿ ತಲುಪಿದ ಅಲ್ಲು ಅರ್ಜುನ್​, ರಾಜಮೌಳಿ, ಕೀರವಾಣಿ

ಅವರ ಪ್ರತಿಮೆಯನ್ನು ಇಂದು ಅನಾವರಣಗೊಳಿಸಲಾಗಿದೆ. ಅಪರೂಪದ ವ್ಯಕ್ತಿತ್ವ. ಸರಳ, ಸಜ್ಜನಿಕೆ, ವಿನಯಪೂರ್ಣ ವ್ಯಕ್ತಿತ್ವ. ಸಾಮಾನ್ಯ ಜನರು, ಸಂಕಷ್ಟದಲ್ಲಿದವರಿಗೆ ಸ್ಪಂದಿಸುವ ಉದಾತ್ತ ಭಾವನೆಯ ಪುನೀತ್‍ ಅವರಿಗಿದ್ದ ಅಭಿಮಾನಿ ಬಳಗ ಬಹಳ ದೊಡ್ಡದು. ಅಕಾಲಿಕ ಮರಣಕ್ಕೆ ಜನರು ತಮ್ಮ ಮನೆಯ ಸದಸ್ಯನನ್ನೇ ಕಳೆದುಕೊಂಡಷ್ಟು ದು:ಖಿಸಿದ್ದರು. ಕರ್ನಾಟಕ ಜನರ ಮನಸ್ಸನ್ನು ಗೆದಿದ್ದರು. ರಾಜ್ಯದ ಪ್ರತಿ ಮನೆಯಲ್ಲಿಯೂ ಪುನೀತ್ ಅವರರ ಭಾವಚಿತ್ರವಿದ್ದು, ಇಂದಿಗೂ ಜನರ ಮನಸ್ಸಿನಲ್ಲಿ ಅಚ್ಚಳಿಯದೇ ಉಳಿದಿದ್ದಾರೆ. ಬಹುಶಃ ಪುನೀತ್ ಅಂತಹ ಇನ್ನೊಬ್ಬ ವ್ಯಕ್ತಿಯನ್ನು ಕಾಣುವುದು ಕಷ್ಟ. ರಾಜ್​​ಕುಮಾರ್ ಕುಟುಂಬದವರು ಸದಾ ವಿನಯವಂತರು. ರಾಜ್​​ಕುಮಾರ್, ಅವರ ಮಕ್ಕಳು ಮಾನವೀಯತೆಯ ಪ್ರತಿರೂಪ. ಮಾನವೀಯತೆಯುಳ್ಳವರು ಮತ್ತೊಬ್ಬರನ್ನು ಪ್ರೀತಿ, ಗೌರವದಿಂದ ಕಾಣುತ್ತಾರೆ. ಆ ಕುಟುಂಬದೊಂದಿಗೆ ತಮಗೆ ಉತ್ತಮ ಒಡನಾಟವಿದೆ ಎಂದು ಸಿಎಂ‌ ಸಿದ್ದರಾಮಯ್ಯ ತಿಳಿಸಿದರು.

ABOUT THE AUTHOR

...view details