ETV Bharat / sports

"ನೀವು ಈ ರೀತಿ ಮಾಡಿದ್ರೆ ಟ್ರೋಫಿ ಗೆಲ್ಲಲ್ಲ": ಆರ್​ಸಿಬಿ ವಿರುದ್ಧ ಮತ್ತೆ ಉರಿದುಬಿದ್ದ ಅಂಬಟಿ ರಾಯುಡು - Ambati Rayudu

author img

By ETV Bharat Karnataka Team

Published : May 23, 2024, 8:18 PM IST

ಆರ್​ಸಿಬಿ ತಂಡದ ವಿರುದ್ಧ ಸದಾ ಟೀಕೆ ಮಾಡುತ್ತಲೇ ಬಂದಿರುವ ಮಾಜಿ ಕ್ರಿಕೆಟಿಗ ಅಂಬಟಿ ರಾಯುಡು, ಮತ್ತೆ ತಂಡದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಏನೆಂದರು ಎಂಬುದು ಇಲ್ಲಿದೆ.

ಆರ್​ಸಿಬಿ ವಿರುದ್ಧ ಮತ್ತೆ ಉರಿದುಬಿದ್ದ ಅಂಬಟಿ ರಾಯುಡು
ಆರ್​ಸಿಬಿ ವಿರುದ್ಧ ಮತ್ತೆ ಉರಿದುಬಿದ್ದ ಅಂಬಟಿ ರಾಯುಡು (ANI)

ಹೈದರಾಬಾದ್: ಐಪಿಎಲ್​ನ ಪ್ಲೇಆಫ್​ನಲ್ಲಿ ಸೋಲು ಕಾಣುವ ಮೂಲಕ ರಾಯಲ್​ ಚಾಲೆಂಜರ್ಸ್​ ಬೆಂಗಳೂರು (ಆರ್​ಸಿಬಿ) ಟ್ರೋಫಿ ಎತ್ತುವ ಕನಸು ಕೈಬಿಟ್ಟಿತು. ಲೀಗ್​ನ ಕೊನೆಯ ಪಂದ್ಯದಲ್ಲಿ ಚೆನ್ನೈ ಸೂಪರ್​ ಕಿಂಗ್ಸ್​ (ಸಿಎಸ್​ಕೆ) ವಿರುದ್ಧ ಗೆಲುವ ಸಾಧಿಸಿದ್ದಾಗ ಭಾರೀ ಆಘಾತಕ್ಕೆ ಒಳಗಾಗಿದ್ದ ಮಾಜಿ ಕ್ರಿಕೆಟರ್ ಅಂಬಟಿ ರಾಯುಡು ಆರ್​ಸಿಬಿ ಸೋಲಿಗೆ ಪರೋಕ್ಷವಾಗಿ ಸಂತಸ ವ್ಯಕ್ತಪಡಿಸಿದ್ದಾರೆ.

ಆರ್​ಸಿಬಿ ತಂಡ ಪ್ಲೇಆಫ್​ಗೆ ತಲುಪಿದಾಗಲೂ ಟ್ರೋಫಿ ಗೆಲ್ಲುವುದಿಲ್ಲ ಎಂದು ವ್ಯಂಗ್ಯವಾಡಿದ್ದರು. ಇದೀಗ ಮತ್ತೆ ತಂಡದ ವಿರುದ್ಧ ಹೇಳಿಕೆ ನೀಡಿದ್ದು, ಆಕ್ರಮಣಕಾರಿ ಸ್ವಭಾವ ಹೊಂದಿದ್ದರೆ ಮಾತ್ರ ಟ್ರೋಫಿ ಗೆಲ್ಲಲು ಸಾಧ್ಯವಿಲ್ಲ ಎಂದು ಛೇಡಿಸಿದ್ದಾರೆ.

ಮಾಧ್ಯಮವೊಂದರಲ್ಲಿ ಮಾತನಾಡಿರುವ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಮಾಜಿ ಬ್ಯಾಟರ್ ಅಂಬಟಿ ರಾಯುಡು, ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಆಟಗಾರರು ಅತಿಯಾದ ಉತ್ಸಾಹ ಮತ್ತು ಆಕ್ರಮಣಕಾರಿ ಮನೋಭಾವ ಹೊಂದಿದ್ದಾರೆ. ಇದು ಗೆಲುವಿಗೆ ನೆರವು ನೀಡುವುದಿಲ್ಲ. ಸಿಎಸ್​ಕೆಯನ್ನು ಸೋಲಿಸಿದ ಮಾತ್ರಕ್ಕೆ ಐಪಿಎಲ್​ ಟ್ರೋಫಿ ಗೆಲ್ಲುತ್ತೇವೆ ಎಂದು ಭಾವಿಸಬೇಡಿ. ಮುಂದಿನ ವರ್ಷ ಮತ್ತೆ ಬನ್ನಿ ಎಂದು ಹೇಳಿದ್ದಾರೆ.

ಸಿಎಸ್​ಕೆ ಸೋಲು ಅರಗಿಸಿಕೊಳ್ಳದ ಅಂಬಟಿ: ಲೀಗ್​ನ ಕೊನೆಯ ಪಂದ್ಯದಲ್ಲಿ ಸಿಎಸ್​ಕೆ ತಂಡವನ್ನು ಆರ್​ಸಿಬಿ ಸೋಲಿಸಿದಾಗ ಅಂಬಟಿ ರಾಯುಡು ಶಾಕ್​ಗೆ ಒಳಗಾಗಿದ್ದರು. ಕ್ರಿಕೆಟ್​ ಮಾಧ್ಯಮವೊಂದರ ಕಾಮೆಂಟೇಟರ್ ಆಗಿದ್ದ ಅವರು ಸಿಎಸ್​ಕೆ ಸೋತಾಗ ಬಾಯಿ ಮುಚ್ಚಿಕೊಂಡು ಆಶ್ಚರ್ಯಚಕಿತರಾಗಿದ್ದರು. ಇದರ ಬಳಿಕವೂ ಅವರು ಆರ್​ಸಿಬಿ ವಿರುದ್ಧ ವಾಗ್ದಾಳಿ ಮುಂದುವರಿಸಿ, ಈ ಬಾರಿ ದಕ್ಷಿಣ ಭಾರತದ ತಂಡಕ್ಕೆ ಟ್ರೋಫಿ ಸಿಗಲಿದೆ. ಆದರೆ, ಆರ್​ಸಿಬಿ ತಂಡ ಯಾವುದೇ ಕಾರಣಕ್ಕೂ ಐಪಿಎಲ್​ ಗೆಲ್ಲುವುದಿಲ್ಲ ಎಂದಿದ್ದರು.

ತಂಡದ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ 61.75 ಸರಾಸರಿಯೊಂದಿಗೆ 741 ರನ್ ಗಳಿಸುವ ಮೂಲಕ ತಂಡದ ಟೂರ್ನಿಯಲ್ಲಿ ಅತ್ಯಧಿಕ ರನ್​ ಬಾರಿಸಿದ ಆಟಗಾರರಾಗಿದ್ದಾರೆ. ಭಾರತೀಯ ಆಟಗಾರರಿಗೆ ತಂಡ ಹೆಚ್ಚಿನ ಮನ್ನಣೆ ನೀಡಬೇಕು. ವಿರಾಟ್​ ಅವರನ್ನು ಹೊರತುಪಡಿಸಿ ಆ ತಂಡದ ಯಾವೊಬ್ಬ ಭಾರತೀಯ ಬ್ಯಾಟರ್​ ಕೂಡ 1 ಸಾವಿರ ರನ್​ ಪೂರೈಸಿಲ್ಲ. ಇದು ಭಾರತೀಯ ಆಟಗಾರರ ಮೇಲೆ ತಂಡ ವಿಶ್ವಾಸ ಹೊಂದಿಲ್ಲ ಎಂದು ತೋರಿಸುತ್ತದೆ ಎಂದರು.

ಪ್ಲೇಆಫ್​ನಲ್ಲಿ ಸೋತ ಆರ್​ಸಿಬಿ: ಇಂಡಿಯನ್ ಪ್ರೀಮಿಯರ್ ಲೀಗ್‌ನ ಎಲಿಮಿನೇಟರ್‌ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ವಿರುದ್ಧ ಆರ್​ಸಿಬಿ ಸೋಲು ಕಂಡು ಟೂರ್ನಿಯಿಂದ ಹೊರಬಿದ್ದಿತು. ಲೀಗ್​ನಲ್ಲಿ ಆಡಿದ 14 ಪಂದ್ಯಗಳಲ್ಲಿ ತಲಾ 7 ಗೆಲುವು, ಸೋಲು ಕಂಡು ಪ್ಲೇಆಫ್​ಗೆ ಬಂದಿತ್ತು. ಮೊದಲಾರ್ಧದ ಲೀಗ್​ನಲ್ಲಿ ಆಡಿದ 8 ರ ಪೈಕಿ 7 ರಲ್ಲಿ ಸೋತು 1 ಪಂದ್ಯದಲ್ಲಿ ಗೆಲುವು ಸಾಧಿಸಿತ್ತು. ಬಳಿಕ ಫೀನಿಕ್ಸ್​ ಹಕ್ಕಿಯಂತೆ ಎದ್ದು ಬಂದು ಉಳಿದ 6 ಪಂದ್ಯಗಳಲ್ಲಿ ಸತತ ಗೆಲುವು ಸಾಧಿಸಿ ಎಲ್ಲ ತಂಡಗಳನ್ನು ಹಿಮ್ಮೆಟ್ಟಿ ಪಾಯಿಂಟ್​​ ಪಟ್ಟಿಯಲ್ಲಿ ನಾಲ್ಕನೇ ಸ್ಥಾನ ಪಡೆದು ಪ್ಲೇಆಫ್​ಗೆ ತಲುಪಿತ್ತು.

ಇದನ್ನೂ ಓದಿ; ಐಪಿಎಲ್​ಗೆ ದಿನೇಶ್‌ ಕಾರ್ತಿಕ್ ಕಣ್ಣೀರ ವಿದಾಯ: ತಬ್ಬಿ ಸಂತೈಸಿದ ಕೊಹ್ಲಿ, ಆಟಗಾರರಿಂದ ವಿಶೇಷ ಗೌರವ - Dinesh Karthik

ETV Bharat Logo

Copyright © 2024 Ushodaya Enterprises Pvt. Ltd., All Rights Reserved.