ಕರ್ನಾಟಕ

karnataka

ಮದುವೆಯಾದ ಹೆಣ್ಣು ಮಕ್ಕಳನ್ನು ಯಾರು ನೋಡಿಕೊಳ್ತಾರೆ?: ಅಸ್ಸಾಂ ಕ್ರಮದ ಬಗ್ಗೆ ಓವೈಸಿ ಆಕ್ರೋಶ

By

Published : Feb 5, 2023, 8:11 AM IST

ಗಂಡಂದಿರು ಜೈಲಿಗೆ ಹೋದಾಗ ಹೆಣ್ಣುಮಕ್ಕಳನ್ನು ನೋಡಿಕೊಳ್ಳುವವರಾರು ಎಂದು ಅಸ್ಸಾಂ ಬಾಲ್ಯ ವಿವಾಹ ತಡೆ ಕ್ರಮವನ್ನು ಒವೈಸಿ ಪ್ರಶ್ನಿಸಿದ್ದಾರೆ.

Assam CM and  Owaisi
ಅಸ್ಸಾಂ ಸಿಎಂ ಹಾಗೂ ಓವೈಸಿ

ಹೈದರಾಬಾದ್:ಬಾಲ್ಯ ವಿವಾಹಗಳ ವಿರುದ್ಧ ರಾಜ್ಯ ಸರ್ಕಾರ ಕಠಿಣ ಕ್ರಮ ಕೈಗೊಂಡ ನಂತರ ನಲುಗಿ ಹೋಗಿರುವ ಹೆಣ್ಣುಮಕ್ಕಳನ್ನು ಯಾರು ನೋಡಿಕೊಳ್ಳುತ್ತಾರೆ? ಎಂದು ಅಸ್ಸಾಂ ಸರ್ಕಾರದ ವಿರುದ್ಧ ಆಲ್ ಇಂಡಿಯಾ ಮಜ್ಲಿಸ್-ಎ-ಇತ್ತೆಹಾದುಲ್ ಮುಸ್ಲಿಮೀನ್(ಎಐಎಂಐಎಂ) ಮುಖ್ಯಸ್ಥ ಅಸಾದುದ್ದೀನ್ ಓವೈಸಿ ವಾಗ್ದಾಳಿ ನಡೆಸಿದ್ದಾರೆ. ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಕಳೆದ ಆರು ವರ್ಷಗಳಿಂದ ಅಸ್ಸಾಂನಲ್ಲಿ ಬಿಜೆಪಿ ಸರ್ಕಾರವಿದೆ. ಆಗಿನಿಂದ ನೀವು ಏನು ಮಾಡುತ್ತಿದ್ದೀರಿ?. ಇದು ನಿಮ್ಮ ವೈಫಲ್ಯ. ಬಾಲ್ಯ ವಿವಾಹ ಪ್ರಕರಣಗಳಿಗೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ನೇತೃತ್ವದ ಸರ್ಕಾರ ಕೈಗೊಂಡಿರುವ ಕ್ರಮಗಳು ಕೋಮುಪ್ರೇರಿತ" ಎಂದು ಟೀಕಿಸಿದ್ದಾರೆ.

ಎಷ್ಟು ಶಾಲೆಗಳನ್ನು ತೆರೆದಿದ್ದೀರಿ?: "ಅಸ್ಸಾಂ ಸರ್ಕಾರ ಮುಸ್ಲಿಮರ ವಿರುದ್ಧ ಪಕ್ಷಪಾತಿ ಧೋರಣೆ ಹೊಂದಿದೆ. ಹಿಮಂತ ಬಿಸ್ವಾ ಶರ್ಮಾ ಅವರೇ, ಮದರಸಾಗಳನ್ನು ಮುಚ್ಚಿ ಎಷ್ಟು ಶಾಲೆಗಳನ್ನು ತೆರೆದಿದ್ದೀರಿ?, ಏಕೆ ಹೊಸ ಶಾಲೆಗಳನ್ನು ತೆರೆಯುತ್ತಿಲ್ಲ. ಭೂರಹಿತರಿಗೆ ಭೂಮಿ ನೀಡಲು ಸರ್ಕಾರ ಏಕೆ ಕ್ರಮ ತೆಗೆದುಕೊಳ್ಳುತ್ತಿಲ್ಲ" ಎಂದು ಅವರು ಪ್ರಶ್ನಿಸಿದ್ದಾರೆ.

ಇದನ್ನೂ ಓದಿ:ಬಾಲ್ಯ ವಿವಾಹದ ವಿರುದ್ಧ ಅಸ್ಸಾಂನಲ್ಲಿ ಶಿಸ್ತು ಕ್ರಮ: ಮೌಲಾನಾ, ಪೂಜಾರಿಗಳು ಸೇರಿ 2044 ಜನರ ಬಂಧನ

4 ಸಾವಿರಕ್ಕೂ ಹೆಚ್ಚು ಪ್ರಕರಣ: ಅಸ್ಸಾಂನಲ್ಲಿ ನಾಲ್ಕು ಸಾವಿರಕ್ಕೂ ಹೆಚ್ಚು ಬಾಲ್ಯ ವಿವಾಹ ಪ್ರಕರಣಗಳು ದಾಖಲಾಗಿದ್ದು, ಇದುವರೆಗೆ 2000ಕ್ಕೂ ಹೆಚ್ಚು ಜನರನ್ನು ಬಂಧಿಸಲಾಗಿದೆ. ಬಂಧನ ಕಾರ್ಯಾಚರಣೆಯು ಶುಕ್ರವಾರ ಬೆಳಿಗ್ಗೆ ಆರಂಭವಾಗಿದ್ದು, ಮುಂದಿನ ನಾಲ್ಕೈದು ದಿನಗಳ ಕಾಲ ಮುಂದುವರಿಯಲಿದೆ ಎಂದು ಸಿಎಂ ತಿಳಿಸಿದ್ದರು. ರಾಜ್ಯ ಸಚಿವ ಸಂಪುಟವು ಜನವರಿ 23ರಂದು ಬಾಲ್ಯವಿವಾಹ ಪ್ರಕರಣಗಳ ಅಪರಾಧಿಗಳ ವಿರುದ್ಧ ಕ್ರಮ ಕೈಗೊಳ್ಳಲು ನಿರ್ಧಾರ ಕೈಗೊಂಡಿತ್ತು. ಈ ಹಿನ್ನೆಲೆಯಲ್ಲಿ ಪೊಲೀಸರು 4,004 ಬಾಲ್ಯ ವಿವಾಹ ಪ್ರಕರಣಗಳನ್ನು ದಾಖಲಿಸಿದ್ದಾರೆ.

ಸರ್ಕಾರದ ಹೇಳಿಕೆಯಂತೆ,ಬಾಲ್ಯವಿವಾಹ ತಡೆಗೆ ಶನಿವಾರದವರೆಗೆ ರಾಜ್ಯದಲ್ಲಿ 2,250ಕ್ಕೂ ಹೆಚ್ಚು ಜನರನ್ನು ಬಂಧಿಸಲಾಗಿದೆ. ಬಾಲ್ಯವಿವಾಹಗಳ ವಿರುದ್ಧ ದಾಖಲಾದ 4,074 ಎಫ್‌ಐಆರ್‌ಗಳನ್ನು ಆಧರಿಸಿ ಇದುವರೆಗೆ ಒಟ್ಟು 2,258 ಜನರನ್ನು ಬಂಧಿಸಲಾಗಿದೆ. 14-18 ವರ್ಷಕ್ಕಿಂತ ಕಡಿಮೆ ವಯಸ್ಸಿನ ಹೆಣ್ಣುಮಕ್ಕಳನ್ನು ಮದುವೆಯಾದವರ ವಿರುದ್ಧ ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (ಪೋಕ್ಸೊ) ಕಾಯ್ದೆಯಡಿ ಮತ್ತು ವಿವಾಹವಾದವರ ವಿರುದ್ಧ ಬಾಲ್ಯ ವಿವಾಹ ನಿಷೇಧ ಕಾಯ್ದೆ- 2006 ರ ಅಡಿಯಲ್ಲಿ ಪ್ರಕರಣಗಳನ್ನು ದಾಖಲಿಸಲಾಗುತ್ತದೆ.

ಇದನ್ನೂ ಓದಿ:ಅಪ್ರಾಪ್ತ ಹುಡುಗಿಯರ ವಿವಾಹವಾದ ಗಂಡಂದಿರಿಗೆ ಜೈಲು: ಅಸ್ಸಾಂ ಸಿಎಂ ಹಿಮಂತ್​

ಕಠಿಣ ನಿಯಮ ಏಕೆ?:ತಾಯಿ-ಶಿಶು ಮರಣ, ಬಾಲ್ಯ ವಿವಾಹಗಳು ಅಧಿಕವಿರುವ ಅಸ್ಸಾಂನಲ್ಲಿ ಕಠಿಣ ನಿಯಮ ರೂಪಿಸಲು ಸರ್ಕಾರ ಮುಂದಾಗಿದೆ. 18ಕ್ಕಿಂತ ಕಡಿಮೆ ವಯಸ್ಸಿನ ಹೆಣ್ಣುಮಕ್ಕಳನ್ನು ವಿವಾಹವಾದ ಗಂಡಂದಿರನ್ನು ಬಂಧಿಸಲಾಗುವುದು ಎಂದು ಸಿಎಂ ಹಿಮಂತ್​ ಬಿಸ್ವಾ ಶರ್ಮಾ ಘೋಷಿಸಿದ್ದಾರೆ. ಅಸ್ಸಾಂನಲ್ಲಿ 14 ವರ್ಷಕ್ಕಿಂತ ಕಡಿಮೆ ವಯಸ್ಸಿನ ಹೆಣ್ಣುಮಕ್ಕಳ ವಿವಾಹಗಳು ವಿಪರೀತ ಹೆಚ್ಚಾಗುತ್ತಿವೆ. ಈ ಬೆಳವಣಿಗೆಯನ್ನು ತಡೆಯಲು ಸರ್ಕಾರ ಕಠಿಣ ನಿಯಮ ರೂಪಿಸಿದೆ.

"ರಾಜ್ಯದಲ್ಲಿ ಶೇ. 31ರಷ್ಟು ವಿವಾಹಗಳು ಹೆಣ್ಣುಮಕ್ಕಳಿಗೆ 18 ವರ್ಷ ತುಂಬುವ ಮೊದಲೇ ಆಗುತ್ತಿವೆ. ಇದು ತಾಯಂದಿರು ಮತ್ತು ಶಿಶು ಮರಣಕ್ಕೆ ಕಾರಣವಾಗಿದೆ. ಹೀಗಾಗಿ 14 ವಯಸ್ಸಿನ ಹುಡುಗಿಯರೊಂದಿಗೆ ದೈಹಿಕ ಸಂಪರ್ಕ ಸಾಧಿಸುವುದು ಅಪರಾಧ. ಕಾನೂನುಬದ್ಧವಾಗಿ ವಿವಾಹವಾಗಿದ್ದರೂ ಅವರನ್ನು ಜೈಲಿಗಟ್ಟಲಾಗುವುದು" ಎಂದು ಸಿಎಂ ಶರ್ಮಾ ಎಚ್ಚರಿಸಿದ್ದರು.

ABOUT THE AUTHOR

...view details