ಕರ್ನಾಟಕ

karnataka

ಜಿ20 ಔತಣಕೂಟದಲ್ಲಿ ನಿತೀಶ್, ಸ್ಟಾಲಿನ್, ಮಮತಾ ಭಾಗಿ; ಗೆಹ್ಲೋಟ್​, ಕೇಜ್ರಿವಾಲ್ ಗೈರು

By ETV Bharat Karnataka Team

Published : Sep 10, 2023, 1:43 PM IST

ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಆಯೋಜಿಸಿದ್ದ ಔತಣಕೂಟದಲ್ಲಿ ದೇಶದ ಹಲವಾರು ರಾಜ್ಯಗಳ ಮುಖ್ಯಮಂತ್ರಿಗಳು ಭಾಗಿಯಾಗಿದ್ದರು.

President Draupadi Murmu, Prime Minister Narendra Modi, US President Joe Biden and Jharkhand Chief Minister Hemant Soren were among those who attended the dinner.
ಔತಣಕೂಟದಲ್ಲಿ ಉಭಕುಶಲೋಪರಿ ನಡೆಸುತ್ತಿರುವ ರಾಷ್ಟ್ರಪತಿ ದ್ರೌಪದಿ ಮುರ್ಮು, ಪ್ರಧಾನಿ ನರೇಂದ್ರ ಮೋದಿ, ಅಮೆರಿಕದ ಅಧ್ಯಕ್ಷ ಜೋ ಬೈಡನ್, ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೊರೇನ್

ನವದೆಹಲಿ:ಶನಿವಾರ ಜಿ20 ಶೃಂಗಸಭೆಯ ಅಂಗವಾಗಿ ಭಾರತದ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಆಯೋಜಿಸಿದ್ದ ಔತಣಕೂಟದಲ್ಲಿ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್, ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೊರೇನ್ ಮತ್ತು ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಸೇರಿದಂತೆ ಇನ್ನೂ ಹಲವಾರು ಮುಖ್ಯಮಂತ್ರಿಗಳು ಹಾಗೂ ಗಣ್ಯರು ಪಾಲ್ಗೊಂಡಿದ್ದು ವಿಶೇಷವಾಗಿತ್ತು.

ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೊರೇನ್ ಅವರೊಂದಿಗೆ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್

ಈ ಕಾರ್ಯಕ್ರಮದಲ್ಲಿ ವೃತ್ತಾಕಾರವಾಗಿ ಜೋಡಿಸಿದ ಊಟದ ಟೇಬಲ್​ಗಳಿಗೆ ದೇಶದ ವಿವಿಧ ನದಿಗಳ ಹೆಸರನ್ನು ಇಡಲಾಗಿತ್ತು. ಕೃಷ್ಣ, ಯಮುನಾ, ಬ್ರಹ್ಮಪುತ್ರ ಮತ್ತು ಗಂಗಾ ಹೀಗೆ ನದಿಗಳ ಹೆಸರಿನ ಲೇಬಲ್​ಗಳನ್ನು ಟೇಬಲ್​​ ಮೇಲೆ ಇಡಲಾಗಿತ್ತು.

ವಾಣಿಜ್ಯ ಮತ್ತು ಕೈಗಾರಿಕಾ ರಾಜ್ಯ ಸಚಿವೆ ಅನುಪ್ರಿಯಾ ಪಟೇಲ್ ಅವರೊಂದಿಗೆ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್

ಔತಣಕೂಟದಲ್ಲಿ ಹರಿಯಾಣ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್ ಮತ್ತು ಅಸ್ಸಾಂ ಮುಖ್ಯಮಂತ್ರಿ ಹಿಮಂತಾ ಬಿಸ್ವಾ ಕೂಡ ಉಪಸ್ಥಿತರಿದ್ದರು. ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರೊಂದಿಗೆ ಊಟ ಮಾಡುತ್ತಿರುವುದು ಚಿತ್ರಗಳಲ್ಲಿ ಕಾಣಿಸುತ್ತದೆ.

ಬಿಹಾರದಲ್ಲಿ ಮಹಾಘಟಬಂಧನ್ ಸರ್ಕಾರದ ರಚನೆಯ ನಂತರ ಇದೇ ಮೊದಲ ಬಾರಿಗೆ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ಶನಿವಾರದ ಔತಣಕೂಟದಲ್ಲಿ ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿಯಾದರು. ಔತಣಕೂಟದ ಸಮಯದಲ್ಲಿ, ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ಕೇಂದ್ರ ಸಚಿವ ಅಶ್ವಿನಿ ಚೌಬೆ ಸೇರಿದಂತೆ ಹಲವಾರು ಬಿಜೆಪಿ ನಾಯಕರನ್ನು ಭೇಟಿಯಾದರು.

ಛತ್ತೀಸ್ ಗಢದ ಮುಖ್ಯಮಂತ್ರಿ ಭೂಪೇಶ್ ಬಘೇಲ್, ರಾಜಸ್ಥಾನದ ಅಶೋಕ್ ಗೆಹ್ಲೋಟ್, ಒಡಿಶಾದ ನವೀನ್ ಪಟ್ನಾಯಕ್ ಮತ್ತು ದೆಹಲಿಯ ಅರವಿಂದ್ ಕೇಜ್ರಿವಾಲ್ ಸೇರಿದಂತೆ ವಿರೋಧ ಪಕ್ಷಗಳ ನಾಯಕರು ಈ ಕಾರ್ಯಕ್ರಮಕ್ಕೆ ಗೈರು ಹಾಜರಾಗಿದ್ದರು. ಹಾಗೆಯೇ ತಮಗೆ ಆಹ್ವಾನ ಬಂದಿಲ್ಲವೆಂದು ಹೇಳಿರುವ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಕೂಡ ಗೈರಾಗಿದ್ದರು.

ಗಮನ ಸೆಳೆದ ಸಿಎಂ ಸ್ಟಾಲಿನ್ ಟ್ವೀಟ್: ದೆಹಲಿಯಲ್ಲಿ ನಡೆದ ಜಿ 20 ಶೃಂಗಸಭೆಯ ಔತಣಕೂಟದಲ್ಲಿ ಭಾಗವಹಿಸಿದ ನಂತರ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಭಾನುವಾರ ಎಕ್ಸ್‌ನಲ್ಲಿ ಪೋಸ್ಟ್​ ಮಾಡಿದ್ದಾರೆ. ರಾಷ್ಟ್ರಪತಿ ದ್ರೌಪದಿ ಮುರ್ಮು ಆಯೋಜಿಸಿದ್ದ ಔತಣಕೂಟದಲ್ಲಿ ತಾವು ಯುಎಸ್ ಅಧ್ಯಕ್ಷ ಜೋ ಬೈಡನ್ ಅವರೊಂದಿಗೆ ಇರುವ ಚಿತ್ರವನ್ನು ಹಂಚಿಕೊಂಡಿದ್ದಾರೆ.

ದೇಶದ ಹೆಸರಿನ ಬಗ್ಗೆ ಚರ್ಚೆ ನಡೆಯುತ್ತಿರುವ ಈ ಸಮಯದಲ್ಲಿ ಸ್ಟಾಲಿನ್ ತಮ್ಮ ಪೋಸ್ಟ್​ನಲ್ಲಿ 'President of India' ಪದಗಳನ್ನು ಉಲ್ಲೇಖಿಸಿರುವುದು ವಿಶೇಷವಾಗಿ ಕಾಣಿಸಿದೆ. ತಮ್ಮ ಪೋಸ್ಟ್​ನಲ್ಲಿ ಅವರು ಪ್ರಧಾನಿ ಮೋದಿ ಅಥವಾ ಯುಎಸ್ ಅಧ್ಯಕ್ಷ ಬಿಡೆನ್ ಅವರ ಹೆಸರುಗಳನ್ನು ಉಲ್ಲೇಖಿಸಿಲ್ಲ. "ಭಾರತದ ಗೌರವಾನ್ವಿತ ರಾಷ್ಟ್ರಪತಿಗಳು ಆಯೋಜಿಸಿದ್ದ ಕಾವೇರಿ ಟೇಬಲ್​ನಲ್ಲಿ ನಡೆದ #G20Dinner ಭಾಗವಹಿಸಿದ್ದೆ" ಎಂದು ಅವರು ತಮ್ಮ ಟ್ವೀಟ್​ನಲ್ಲಿ ಸರಳವಾಗಿ ಹೇಳಿದ್ದಾರೆ. ಇದರೊಂದಿಗೆ ಬೈಡನ್ ಮತ್ತು ಪಿಎಂ ಮೋದಿಯವರೊಂದಿಗೆ ತಾವು ಇರುವ ಚಿತ್ರವನ್ನು ಶೇರ್ ಮಾಡಿದ್ದಾರೆ.

ಕಳೆದ ಕೆಲವು ದಿನಗಳಿಂದ ದೇಶಕ್ಕೆ ಭಾರತ್ ಎಂದು ಮರುನಾಮಕರಣ ಮಾಡುವ ಪ್ರಶ್ನೆಯ ಬಗ್ಗೆ ತೀವ್ರ ಚರ್ಚೆ ನಡೆಯುತ್ತಿದೆ. ಇಂಡಿಯಾ ಎಂಬ ಶಬ್ದವನ್ನು ಭಾರತ ಎಂಬುದಾಗಿ ಬದಲಾಯಿಸಲು ಕೇಂದ್ರ ಸರ್ಕಾರ ಪ್ರಯತ್ನಗಳನ್ನು ಪ್ರಾರಂಭಿಸಿದೆ ಎಂಬ ವರದಿಗಳ ಮಧ್ಯೆ, ಸ್ಟಾಲಿನ್ ಪಾಲುದಾರರಾಗಿರುವ ಪ್ರತಿಪಕ್ಷಗಳ ಮೈತ್ರಿಕೂಟವಾದ I.N.D.I.A ದ ನಾಯಕರು ಇದಕ್ಕೆ ಪ್ರಬಲ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಪ್ರಸ್ತುತ ದೆಹಲಿಯಲ್ಲಿ ನಡೆಯುತ್ತಿರುವ 2023 ರ ಶೃಂಗಸಭೆಗಾಗಿ ಜಿ 20 ವಿಶ್ವ ನಾಯಕರಿಗೆ ಕಳುಹಿಸಲಾದ ಅಧಿಕೃತ ಆಹ್ವಾನಗಳಲ್ಲಿ ಭಾರತದ ಹೆಸರನ್ನು ಭಾರತ್ ಎಂದು ಬದಲಾಯಿಸುವ ಕ್ರಮವನ್ನು ಅವರು ಆಕ್ಷೇಪಿಸಿದ್ದರು. ಹೀಗಾಗಿ ಸಿಎಂ ಸ್ಟಾಲಿನ್ ಅವರು ತಮ್ಮ ಎಕ್ಸ್​ ಪೋಸ್ಟ್​ನಲ್ಲಿ President of India ಎಂಬುದನ್ನು ಉಲ್ಲೇಖಿಸಿರುವುದು ವಿಶೇಷವಾಗಿದೆ.

ಇದನ್ನೂ ಓದಿ : ಕ್ರಿಪ್ಟೊ ಕರೆನ್ಸಿ ಅಪಾಯ ತಡೆಗೆ ಒಗ್ಗಟ್ಟಾದ ವಿಶ್ವನಾಯಕರು; ಭಾರತದ ನಿಲುವಿಗೆ ಜಿ20 ಅನುಮೋದನೆ

ABOUT THE AUTHOR

...view details