ಕರ್ನಾಟಕ

karnataka

'ದಿ ಕೇರಳ ಸ್ಟೋರಿ' ನೋಡಿ ಅತ್ಯಾಚಾರ, ಮತಾಂತರಕ್ಕೆ ಬಲವಂತ: ಪ್ರೇಮಿ ವಿರುದ್ಧ ಯುವತಿ ಕೇಸ್​, ಅರೆಸ್ಟ್​

By

Published : May 23, 2023, 2:20 PM IST

ದಿ ಕೇರಳ ಸ್ಟೋರಿ ಸಿನಿಮಾ ವೀಕ್ಷಣೆಯ ಬಳಿಕ ಪ್ರೇಮಿಗಳಿಬ್ಬರ ಮಧ್ಯೆ ಕಿತ್ತಾಟವಾಗಿ, ಹಲ್ಲೆ ಮಾಡಿದ ಆರೋಪದ ಮೇಲೆ ಯುವತಿ ಪೊಲೀಸರಿಗೆ ದೂರು ನೀಡಿದ್ದಾಳೆ. ಇದೀಗ ಪ್ರೇಮಿಯನ್ನು ಬಂಧಿಸಲಾಗಿದೆ.

ದಿ ಕೇರಳ ಸ್ಟೋರಿ ನೋಡಿ ಮತಾಂತರಕ್ಕೆ ಬಲವಂತ ಆರೋಪ
ದಿ ಕೇರಳ ಸ್ಟೋರಿ ನೋಡಿ ಮತಾಂತರಕ್ಕೆ ಬಲವಂತ ಆರೋಪ

ಇಂದೋರ್ (ಮಧ್ಯಪ್ರದೇಶ):ಮತಾಂತರ ಆಧಾರದ ಮೇಲೆ ಚಿತ್ರಿಸಲಾಗಿರುವ 'ದಿ ಕೇರಳ ಸ್ಟೋರಿ' ಸಿನಿಮಾದ ಪ್ರಭಾವ ಎಷ್ಟಿದೆ ಅಂದ್ರೆ, ಮೊನ್ನೆಯಷ್ಟೇ ಉತ್ತರಾಖಂಡದಲ್ಲಿ ಬಿಜೆಪಿ ಮುಖಂಡರೊಬ್ಬರು ಮುಸ್ಲಿಂ ಯುವಕನ ಜೊತೆಗೆ ನಿಶ್ಚಯವಾಗಿದ್ದ ತನ್ನ ಮಗಳ ಮದುವೆಯನ್ನೇ ರದ್ದು ಮಾಡಿದ್ದರು. ಇದೀಗ, ಸಿನಿಮಾ ನೋಡಿದ ಬಳಿಕ ನಡೆದ ಕಿತ್ತಾಟದಲ್ಲಿ ಪ್ರೇಯಸಿ ನೀಡಿದ ದೂರಿನ ಮೇರೆಗೆ ಪ್ರಿಯಕರನನ್ನು ಬಂಧಿಸಲಾಗಿದೆ.

4 ವರ್ಷಗಳಿಂದ ಪ್ರೀತಿಯಲ್ಲಿದ್ದ ಜೋಡಿ ಈಚೆಗೆ ದಿ ಕೇರಳ ಸ್ಟೋರಿ ಸಿನಿಮಾ ವೀಕ್ಷಿಸಿದ್ದರು. ಹೊರಬಂದ ಬಳಿಕ ಮತಾಂತರ ವಿಚಾರವಾಗಿ ಇಬ್ಬರ ನಡುವೆ ಜಗಳವಾಗಿದೆ. ಆಗ ಪ್ರಿಯಕರ ಆಕೆಯ ಮೇಲೆ ಹಲ್ಲೆ ಮಾಡಿ ಪರಾರಿಯಾಗಿದ್ದ ಎಂಬ ಆರೋಪ ಕೇಳಿಬಂದಿದೆ. ಇಬ್ಬರೂ ಅನ್ಯಕೋಮಿಗೆ ಸೇರಿದವರಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರಕರಣದ ಹಿನ್ನೆಲೆ:ಮಧ್ಯಪ್ರದೇಶದ ಇಂದೋರ್​ನಲ್ಲಿ ಈ ಘಟನೆ ಬೆಳಕಿಗೆ ಬಂದಿದೆ. ತನ್ನನ್ನು ಮತಾಂತರವಾಗುವಂತೆ ಪ್ರಿಯಕರ ಒತ್ತಾಯ ಮಾಡುತ್ತಿದ್ದಾನೆ. ತನ್ನ ಮೇಲೆ ಅತ್ಯಾಚಾರ ನಡೆಸಿದ್ದಾನೆ ಎಂದು ಯುವತಿ ದೂರು ನೀಡಿದ್ದು, 23 ವರ್ಷದ ಯುವಕನನ್ನು ಸೋಮವಾರ ಬಂಧಿಸಲಾಗಿದೆ.

ಇಬ್ಬರೂ ಇತ್ತೀಚೆಗೆ 'ದಿ ಕೇರಳ ಸ್ಟೋರಿ' ಸಿನಿಮಾ ವೀಕ್ಷಣೆ ಮಾಡಿದ್ದರು. ನಂತರ ಯುವತಿ ಮತ್ತು ಪ್ರಿಯಕರನ ಮಧ್ಯೆ ಸಿನಿಮಾದ ಕತೆಯ ವಿಚಾರವಾಗಿ ವಾಗ್ವಾದ ನಡೆದಿದೆ. ಸರಿ ತಪ್ಪುಗಳ ವಾದದ ವೇಳೆ ಯುವಕ, ಆಕೆಯ ಮೇಲೆ ಹಲ್ಲೆ ನಡೆಸಿ, ಅಲ್ಲಿಂದ ಪರಾರಿಯಾಗಿದ್ದ. ಇದಾದ ಬಳಿಕ ಯುವತಿ ಮೇ 19 ರಂದು ಪೊಲೀಸ್​ ಠಾಣೆಗೆ ದೂರು ನೀಡಿದ್ದರು. ಕೇಸ್​ ದಾಖಲಿಸಿಕೊಂಡ ಪೊಲೀಸರು ನಿನ್ನೆ ಆರೋಪಿ ಯುವಕನನ್ನು ಬಂಧಿಸಿದ್ದಾರೆ.

ಬಲವಂತ ಅಥವಾ ಮೋಸದ ಮತಾಂತರ ನಿಷೇಧಿಸುವ ಕಾಯ್ದೆ, ಧಾರ್ಮಿಕ ಸ್ವಾತಂತ್ರ್ಯ ಕಾಯ್ದೆ- 2021 ಮತ್ತು ಭಾರತೀಯ ದಂಡ ಸಂಹಿತೆ (ಐಪಿಸಿ) ಅಡಿಯಲ್ಲಿ ಕೇಸ್​ ದಾಖಲಿಸಿದ್ದು, ವ್ಯಕ್ತಿಯನ್ನು ಬಂಧಿಸಲಾಗಿದೆ. ಮತಾಂತರ ಹೊಂದಲು ಒತ್ತಾಯಿಸಿ, ಹಲ್ಲೆ ಮಾಡಿದ್ದಾನೆ ಎಂದು ಯುವತಿ ದೂರು ನೀಡಿದ್ದಳು ಎಂದು ಖಜ್ರಾನಾ ಪೊಲೀಸ್ ಠಾಣೆಯ ಉಸ್ತುವಾರಿ ದಿನೇಶ್ ವರ್ಮಾ ಮಾಧ್ಯಮಗಳಿಗೆ ತಿಳಿಸಿದರು.

4 ವರ್ಷಗಳ ಪರಿಚಯ:ಆರೋಪಿ 12ನೇ ತರಗತಿವರೆಗೆ ಓದಿದ್ದು, ನಿರುದ್ಯೋಗಿಯಾಗಿದ್ದಾನೆ. ಯುವತಿ ಉನ್ನತ ಶಿಕ್ಷಣ ಪಡೆದು ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಾಳೆ. ನಾಲ್ಕು ವರ್ಷಗಳ ಹಿಂದೆ ಕೋಚಿಂಗ್ ಇನ್‌ಸ್ಟಿಟ್ಯೂಟ್‌ನಲ್ಲಿ ಓದುತ್ತಿದ್ದಾಗ ಇಬ್ಬರ ಪರಿಚಯವಾಗಿತ್ತು. ಮದುವೆಯಾಗುವುದಾಗಿ ಯುವಕ ಮನವೊಲಿಸಿದ್ದ. ಇದರಿಂದ ಇಬ್ಬರೂ ಪ್ರೀತಿಯಲ್ಲಿದ್ದರು. ಇಬ್ಬರೂ ಒಟ್ಟಾಗಿಯೇ ವಾಸಿಸುತ್ತಿದ್ದಳು ಎಂದು ಎಫ್‌ಐಆರ್​ನಲ್ಲಿ ಉಲ್ಲೇಖಿಸಲಾಗಿದೆ.

ಇದೀಗ ಪ್ರಿಯಕರ ತನ್ನ ಧರ್ಮವನ್ನು ಬದಲಾಯಿಸುವಂತೆ ಒತ್ತಡ ಹೇರುತ್ತಿದ್ದು, ಮಾನಸಿಕವಾಗಿ ಕಿರುಕುಳ ನೀಡುತ್ತಿದ್ದಾನೆ ಎಂದು ಯುವತಿ ಗಂಭೀರ ಆರೋಪ ಮಾಡಿದ್ದಾಳೆ. ಎಲ್ಲ ಆರೋಪಗಳನ್ನು ಕೂಲಂಕಷವಾಗಿ ತನಿಖೆ ಮಾಡಲಾಗುತ್ತಿದೆ ಎಂದು ಪೊಲೀಸರು ತಿಳಿಸಿದರು.

ದೇಶಾದ್ಯಂತ ತೆರೆ ಕಂಡ ದಿ ಕೇರಳ ಸಿನಿಮಾ ಇದೀಗ 200 ಕೋಟಿ ರೂಪಾಯಿಗೂ ಅಧಿಕ ಗಳಿಕೆ ಮಾಡಿದೆ. ಮತಾಂತರ ಸೂಕ್ಷ್ಮ ವಿಚಾರದ ಮೇಲೆ ಹೆಣೆಯಲಾದ ಸಿನಿಮಾದ ವಿರುದ್ಧ ಆಕ್ಷೇಪ ಕೇಳಿ ಬಂದರೆ, ಇನ್ನೊಂದು ಸಮುದಾಯದಿಂದ ಭಾರಿ ಬೆಂಬಲ ವ್ಯಕ್ತವಾಗಿದೆ.

ಇದನ್ನೂ ಓದಿ:ಮುಸ್ಲಿಂ ಯುವಕನೊಂದಿಗೆ ನಡೆಯಬೇಕಿದ್ದ ಮಗಳ ಮದುವೆ ರದ್ದುಗೊಳಿಸಿದ ಬಿಜೆಪಿ ನಾಯಕ

ABOUT THE AUTHOR

...view details