ETV Bharat / state

ಒಂದೇ ಆರೋಪದಲ್ಲಿ ಎರಡು ಪ್ರಕರಣಗಳನ್ನು ಒಂದೇ ಕೋರ್ಟ್​ನಲ್ಲಿ ವಿಚಾರಣೆ ನಡೆಸಬಹುದು: ಹೈಕೋರ್ಟ್ - High Court

author img

By ETV Bharat Karnataka Team

Published : May 13, 2024, 8:34 PM IST

ಒಂದೇ ಆರೋಪಕ್ಕೆ ಸಂಬಂಧಪಟ್ಟಂತೆ ದಾಖಲಾದ ಎರಡು ಪ್ರಕರಣಗಳನ್ನು ಒಂದೇ ನ್ಯಾಯಾಲಯದಲ್ಲಿ ವಿಚಾರಣೆ ನಡೆಸಬಹುದು ಎಂದು ಹೈಕೋರ್ಟ್ ಹೇಳಿದೆ.

high court
ಹೈಕೋರ್ಟ್ (ETV Bharat)

ಬೆಂಗಳೂರು: ಒಂದೇ ಆರೋಪಕ್ಕೆ ಸಂಬಂಧಿಸಿದಂತೆ ಎರಡು ನ್ಯಾಯಾಲಯಗಳ ವ್ಯಾಪ್ತಿಯಲ್ಲಿ ದೂರು ದಾಖಲಾಗಿದ್ದಾಗ ಎರಡೂ ಪ್ರಕರಣಗಳನ್ನು ಒಂದೇ ನ್ಯಾಯಾಲಯಕ್ಕೆ ವರ್ಗಾಯಿಸಿ ಜಂಟಿ ವಿಚಾರಣೆ ನಡೆಸಬಹುದು ಎಂದು ಹೈಕೋರ್ಟ್ ಆದೇಶಿಸಿದೆ.

ಭಾರತ್ ಎಲೆಕ್ಟ್ರಾನಿಕ್ಸ್ ಎಂಪ್ಲಾಯೀಸ್ ಕೋ ಆಪರೇಟಿವ್ ಹೌಸ್ ಬಿಲ್ಡಿಂಗ್ ಸೊಸೈಟಿ ಲಿಮಿಟೆಡ್ ಹಾಗೂ ಶ್ರೀಮಾಯಿ ಬಿಲ್ಡರ್ಸ್ ಸಲ್ಲಿಸಿದ್ದ ಎರಡು ಪ್ರತ್ಯೇಕ ಅರ್ಜಿಗಳನ್ನು ಆಲಿಸಿದ ನ್ಯಾಯಮೂರ್ತಿ ಸಚಿನ್ ಶಂಕರ್ ಮಗದಂ ಅವರಿದ್ದ ಏಕ ಸದಸ್ಯ ಪೀಠ ಈ ಆದೇಶ ನೀಡಿದೆ.

ಅಲ್ಲದೇ, ನ್ಯಾಯಾಂಗದ ದಕ್ಷತೆ ಎತ್ತಿಹಿಡಿಯಲು, ವೈರುಧ್ಯ ತೀರ್ಪುಗಳನ್ನು ತಪ್ಪಿಸಲು ಮತ್ತು ಸೌಹಾರ್ದಯುತ ಕಾನೂನು ಪ್ರಕ್ರಿಯೆ ಉದ್ದೇಶದಿಂದ ರಾಮನಗರದ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯದ ಮುಂದಿರುವ ಖಾಸಗಿ ದೂರಿನ ವಿಚಾರಣಾ ಪ್ರಕ್ರಿಯೆ ಮತ್ತು ಬೆಂಗಳೂರಿನ 39ನೇ ಹೆಚ್ಚುವರಿ ಎಸಿಎಂಎಂ ನ್ಯಾಯಾಲಯದಲ್ಲಿರುವ ವಿಚಾರಣಾ ಪ್ರಕ್ರಿಯೆಗಳನ್ನು ಒಂದೇ ನ್ಯಾಯಾಲಯ ವಿಚಾರಣೆ ನಡೆಸುವುದು ಸೂಕ್ತ ಎಂದು ಪೀಠ ಹೇಳಿದೆ.

ಪ್ರಸಕ್ತ ಪ್ರಕರಣದಲ್ಲಿ ಖಾಸಗಿ ದೂರು ಮತ್ತು ಪೊಲೀಸರು ದಾಖಲಿಸಿರುವ ಎರಡೂ ಪ್ರಕರಣಗಳು ಒಂದೇ ವಿಷಯ ಹಾಗೂ ಸಂಗತಿಗಳನ್ನು ಆಧರಿಸಿವೆ. ಎರಡೂ ವಿಚಾರಣೆಗಳನ್ನು ಪ್ರತ್ಯೇಕವಾಗಿ ನಡೆಯಲು ಬಿಟ್ಟರೆ ಸಿಆರ್​​ಪಿಸಿ ಸೆಕ್ಷನ್ 300ರ ಅನ್ವಯ ಒಂದು ವಿಚಾರಣೆಗೆ ನಿರ್ಬಂಧ ವಿಧಿಸಬೇಕಾಗುತ್ತದೆ. ಜೊತೆಗೆ ಇದು ಗೊಂದಲಕ್ಕೆ ಕಾರಣವಾಗುತ್ತದೆ. ಎರಡೂ ಪ್ರಕರಣಗಳ ವಿಚಾರಣೆಗಳನ್ನು ಒಟ್ಟಿಗೆ ನಡೆಸುವುದರಿಂದ ಎಲ್ಲ ಪಕ್ಷಗಾರರ ಹಕ್ಕುಗಳನ್ನು ಮತ್ತು ಹಿತಾಸಕ್ತಿಗಳನ್ನು ರಕ್ಷಿಸುವ ಉದ್ದೇಶವನ್ನು ಕೋರ್ಟ್ ಹೊಂದಿದೆ ಪೀಠ ತನ್ನ ಆದೇಶದಲ್ಲಿ ಉಲ್ಲೇಖಿಸಿದೆ.

ಪ್ರಕರಣದ ಹಿನ್ನೆಲೆ: ಮೆಸರ್ಸ್ ಶ್ರೀಮಾಯ ಬಿಲ್ಡರ್ ಮತ್ತು ಡೆವಲಪರ್ಸ್, ಭಾರತ್ ಎಲೆಕ್ಟ್ರಾನಿಕ್ ಎಂಪ್ಲಾಯೀಸ್ ಹೌಸ್ ಬಿಲ್ಡಿಂಗ್ ಸೊಸೈಟಿ ಹಾಗೂ ಅದರ ಪದಾಧಿಕಾರಿಗಳ ವಿರುದ್ಧ ಮಾಗಡಿಯಲ್ಲಿ ಹೊಸ ಬಡಾವಣೆ ನಿರ್ಮಾಣ ಸಂಬಂಧ ಒಪ್ಪಂದ ಮಾಡಿಕೊಳ್ಳಲಾಗಿತ್ತು. ಆದರೆ, 2018ರಲ್ಲಿ ಸೊಸೈಟಿ ತಮ್ಮನ್ನು ಕತ್ತಲಲ್ಲಿಟ್ಟು ಬಸವೇಶ್ವರ ಎಂಟರ್​​ಪ್ರೈಸಸ್ ಜೊತೆ ಒಪ್ಪಂದ ಮಾಡಿಕೊಂಡಿದ್ದಾರೆ ಎಂದು ಶ್ರೀಮಾಯಿ ಬಿಲ್ಡರ್ ಆರೋಪಿಸಿದ್ದರು. ಅದೇ ವಿಷಯದ ಬಗ್ಗೆ ಸಹಕಾರ ಇಲಾಖೆ ಜಿಲ್ಲಾ ರಿಜಿಸ್ಟ್ರಾರ್​​​ನಿಂದ ನಕಲಿ ಸ್ಟಾಂಪ್ ಮುದ್ರಿಸಲಾಗಿದೆ ಎಂದು ರಾಮನಗರದಲ್ಲಿ ಖಾಸಗಿ ದೂರು ದಾಖಲಿಸಲಾಗಿತ್ತು. ಇದೀಗ ಎರಡೂ ಪ್ರಕರಣಗಳನ್ನು ಒಟ್ಟಿಗೆ ವಿಚಾರಣೆ ನಡೆಸಬಹುದೆಂದು ನ್ಯಾಯಾಲಯ ಹೇಳಿದೆ.

ಇದನ್ನೂ ಓದಿ: ನಕಲಿ ಜಾತಿ ಪ್ರಮಾಣಪತ್ರ ಮೊಕದ್ದಮೆ: ಪ್ರಕರಣ, ಆರೋಪ ಪಟ್ಟಿ ರದ್ದು ಪಡಿಸಿದ ಹೈಕೋರ್ಟ್​ - Fake caste certificate case

ETV Bharat Logo

Copyright © 2024 Ushodaya Enterprises Pvt. Ltd., All Rights Reserved.