ETV Bharat / state

ನಕಲಿ ಜಾತಿ ಪ್ರಮಾಣಪತ್ರ ಮೊಕದ್ದಮೆ: ಪ್ರಕರಣ, ಆರೋಪ ಪಟ್ಟಿ ರದ್ದು ಪಡಿಸಿದ ಹೈಕೋರ್ಟ್​ - Fake caste certificate case

author img

By ETV Bharat Karnataka Team

Published : May 13, 2024, 6:23 PM IST

ನಕಲಿ ಜಾತಿ ಪ್ರಮಾಣಪತ್ರ ಪಡೆದವರ ವಿರುದ್ಧ ಜಾತಿ ಪರಿಶೀಲನಾ ಸಮಿತಿ ಶಿಫಾರಸು ಇಲ್ಲದೇ ನಾಗರಿಕ ಹಕ್ಕುಗಳ ಜಾರಿ ನಿರ್ದೇಶನಾಲಯ ಪ್ರಕರಣವನ್ನು ದಾಖಲಿಸಲಾಗದು ಎಂದು ಹೈಕೋರ್ಟ್ ಹೇಳಿದೆ.

HIGH COURT  QUASHED THE CASE  CHARGE SHEET  BENGALURU
ಹೈಕೋರ್ಟ್​ (ETV Bharat)

ಬೆಂಗಳೂರು: ನಕಲಿ ಜಾತಿ ಪ್ರಮಾಣ ಪತ್ರ ಪಡೆದ ಆರೋಪಿಗಳ ವಿರುದ್ಧ ಜಿಲ್ಲಾ ಜಾತಿ ಪರಿಶೀಲನಾ ಸಮಿತಿ ಶಿಫಾರಸು ಮಾಡದೇ ನಾಗರಿಕ ಹಕ್ಕುಗಳು ಜಾರಿ ನಿರ್ದೇಶನಾಲಯ ಪ್ರಕರಣ ದಾಖಲಿಸಲಾಗದು ಎಂದು ಸ್ಪಷ್ಟ ಪಡಿಸಿರುವ ಹೈಕೋರ್ಟ್, ಜಾರೀ ನಿರ್ದೇಶನಾಲಯ ದಾಖಲಿಸಿದ್ದ ಪ್ರಕರಣ, ಮತ್ತದರ ಕುರಿತು ದಾಖಲಾಗಿದ್ದ ಆರೋಪ ಪಟ್ಟಿಯನ್ನು ರದ್ದುಪಡಿಸಿ ಆದೇಶಿಸಿದೆ. ಶಿಪ್ಪಿಂಗ್ ಸಚಿವಾಲಯದಲ್ಲಿ ಸಹಾಯಕ ಲೈಟ್ ಕೀಪರ್ ಆಗಿ ಸೇವೆ ಸಲ್ಲಿಸುತ್ತಿದ್ದ ಎ.ಎಸ್.ಪಳನಿ ಎಂಬುವರು ತಮ್ಮ ವಿರುದ್ಧದ ಪ್ರಕರಣ ಮತ್ತು ಆರೋಪ ಪಟ್ಟಿ ರದ್ದುಪಡಿಸುವಂತೆ ಕೋರಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಹೇಮಂತ್ ಚಂದನಗೌಡರ ಅವರಿದ್ದ ನ್ಯಾಯಪೀಠ ಈ ಆದೇಶ ನೀಡಿದೆ.

ಅಲ್ಲದೆ, ಕರ್ನಾಟಕ ಪರಿಶಿಷ್ಟ ಜಾತಿ ಮತ್ತು ಪಂಗಡಗಳು ಮತ್ತು ಇತರ ಹಿಂದುಳಿದ ವರ್ಗಗಳ( ಮೀಸಲಾತಿ ಮತ್ತು ನೇಮಕಾತಿ ಇತರ) ಕಾಯಿದೆ 1990 ಅಡಿ ನಕಲಿ ಜಾತಿ ಪ್ರಮಾಣಪತ್ರ ಮತ್ತು ಆದಾಯ ಪ್ರಮಾಣ ಪತ್ರ ನೀಡುವವರಿಗೆ ಶಿಕ್ಷೆ ವಿಧಿಸುವ ಸಂಬಂಧ ವಿವರಿಸಲಿದೆ. ಅದರಂತೆ ತಪ್ಪು ಮಾಹಿತಿ ನೀಡಿ ನಕಲಿ ಜಾತಿಪ್ರಮಾಣಪತ್ರ ಪಡೆದ ಆರು ತಿಂಗಳಿಂದ ಎರಡು ವರ್ಷಗಳವರೆಗೆ ಶಿಕ್ಷೆ ವಿಧಿಸಲು ಅವಿಕಾಶವಿರಲಿದೆ. ಆದರೆ, ಇದೇ ಕಾಯಿದೆಯ ಸೆಕ್ಷನ್ 5ಎ ಪ್ರಕಾರ ಸೆಕ್ಷನ್ 6ರಲ್ಲಿ ತಿಳಿಸಿರುವಂತೆ ಆರೋಪಿಯ ವಿರುದ್ಧ ಕಾನೂನು ಕ್ರಮಕ್ಕೆ ಮುಂದಾಗಬೇಕಾದರೆ ರಾಜ್ಯ ಸರ್ಕಾರದಿಂದ ಪೂರ್ವನುಮತಿ ಪಡೆಯಬೇಕಾಗಿದೆ. ಆದರೆ, ಈ ಪ್ರಕರಣದಲ್ಲಿ ರಾಜ್ಯ ಸರ್ಕಾರ ಯಾವುದೇ ರೀತಿಯ ಪೂರ್ವಾನುಮತಿ ಪಡೆಯಲಾಗಿಲ್ಲ.

ಕರ್ನಾಟಕ ಪರಿಶಿಷ್ಟ ಜಾತಿ ಮತ್ತು ಪಂಗಡಗಳು ಮತ್ತು ಇತರೆ ಹಿಂದುಳಿದ ವರ್ಗಗಳ (ಮೀಸಲಾತಿ ಮತ್ತು ನೇಮಕಾತಿ ಇತರ) ನಿಯಮ 1992ರ ನಿಯಮ 7ರ ಪ್ರಕಾರ ನಕಲಿ ಜಾತಿ ಪ್ರಮಾಣ ಪತ್ರವನ್ನು ಪಡೆದವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವುದರ ಕುರಿತು ತಿಳಿಸಲಿದ್ದೂ, ಅದರಂತೆ ಜಾತಿ ಪರಿಶೀಲನಾ ಸಮಿತಿ ಅಥಾವ ವಿಭಾಗೀಯ ಆಯುಕ್ತರು ಆರೋಪಿತರು/ಅರ್ಜಿದಾರರು ಸುಳ್ಳು ಜಾತಿ ಪ್ರಮಾಣ ಪತ್ರದ ಸಿಂಧುತ್ವ ಕೋರಿರುವ ಮನವಿ ತಿರಸ್ಕರಿಸಿರುವ ಸಂಬಂಧ ಪ್ರತಿಯನ್ನು ನಾಗರಿಕ ಹಕ್ಕುಗಳ ಜಾರಿ ನಿರ್ದೇಶನಾಲಯಕ್ಕೆ ಕಳುಹಿಸಬೇಕು. ಇದಾದ ಬಳಿಕ ನಾಗರಿಕರ ಹಕ್ಕುಗಳ ಜಾರಿ ನಿರ್ದೇಶನಾಲಯ ಆರೋಪಿತರ ವಿರುದ್ಧ ಕಾನೂನು ಕ್ರಮ ಜರುಗಿಸಲು ಮುಂದಾಗಬೇಕು. ಆದರೆ, ಈ ಪ್ರಕರಣದಲ್ಲಿ ಅಕ್ರಮವಾಗಿ ಜಾತಿ ಪ್ರಮಾಣ ಪತ್ರ ಪಡೆದಿರುವ ಅರ್ಜಿದಾರರ ವಿರುದ್ಧ ಕಾನೂನು ಕ್ರಮ ಜರುಗಿಸುವಂತೆ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕರು ಶಿಫಾರಸು ಮಾಡಿದ್ದಾರೆ. ಆದರೆ, ಜಿಲ್ಲಾ ಜಾತಿ ಪರಿಶೀಲನಾ ಸಮಿತಿ ಅರ್ಜಿದಾರರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವ ಸಂಬಂಧ ಯಾವುದೇ ಶಿಫಾರಸು ಮಾಡಿಲ್ಲ. ಆದ್ದರಿಂದ ನಾಗರಿಕ ಹಕ್ಕುಗಳ ಜಾರಿ ನಿರ್ದೇಶನಾಲಯ ದಾಖಲಿಸಿರುವ ಎಫ್‌ಐಆರ್ ಮತ್ತು ಅದರ ಆಧಾರದಲ್ಲಿ ದಾಖಲಿಸಿರುವ ಆರೋಪ ಪಟ್ಟಿ ಅಮಾನ್ಯಗೊಳ್ಳಲಿದೆ ಎಂದು ನ್ಯಾಯಪೀಠ ತಿಳಿಸಿದೆ.

ಅರ್ಜಿದಾರರ ಜಾತಿ ಪ್ರಮಾಣ ಪತ್ರ ರದ್ದುಪಡಿಸಿರುವ ಕ್ರಮವನ್ನು ಪ್ರಶ್ನಿಸಿ ಮೇಲ್ಮನವಿ ಪ್ರಾಧಿಕಾರದ ಮುಂದೆ ಸಲ್ಲಿಸಿರುವ ಅರ್ಜಿ ವಿಚಾರಣಾ ಹಂತದಲ್ಲಿರುವಾಗಲೇ ನಾಗರಿಕ ಹಕ್ಕುಗಳ ಜಾರಿ ನಿರ್ದೇಶನಾಲಯ ಎಫ್‌ಐಆರ್ ಅಧಿಕಾರವನ್ನು ಮೀರಿ ಎಫ್‌ಐಆರ್ ದಾಖಲಿಸಿದೆ ಎಂದು ನ್ಯಾಯಪೀಠ ತನ್ನ ಆದೇಶಲ್ಲಿ ಉಲ್ಲೇಖಿಸಿದೆ. ಪರಿಶಿಷ್ಟ ಜಾತಿ ಮತ್ತು ಪಂಗಡಗಳ (ದೌರ್ಜನ್ಯ ತಡೆ) ಕಾಯಿದೆ 1989ರ ಸೆಕ್ಷನ್ 3(1)(ಕ್ಯೂ) ರ ಪ್ರಕಾರ ಅರ್ಜಿದಾರರ ವಿರುದ್ಧ ಕಾನೂನು ಕ್ರಮ ಜರುಗಿಸುವುದಕ್ಕೆ ಅಗತ್ಯವಿರುವ ಅಂಶಗಳು ಸ್ಪಷ್ಟವಾಗಿಲ್ಲ. ಆದ್ದರಿಂದ ಅರ್ಜಿದಾರರ ವಿರುದ್ಧದ ಕ್ರಿಮಿನಲ್ ಪ್ರಕ್ರಿಯೆ ಮುಂದುವರಿಸುವುದು ಕಾನೂನು ಪ್ರಕ್ರಿಯೆಯ ದುರುಪಯೋಗವಾಗಲಿದೆ ಎಂದು ಪೀಠ ತಿಳಿಸಿ ಅರ್ಜಿಯನ್ನು ಪುರಸ್ಕರಿಸಿದ್ದು, ಪ್ರಕರಣವನ್ನು ರದ್ದುಪಡಿಸಿ ಆದೇಶಿಸಿದೆ.

ಪ್ರಕರಣದ ಹಿನ್ನೆಲೆ: ಅರ್ಜಿದಾರರಾದ ಪಳನಿ ಅವರು ಮೊದಲಿಯಾರ್ ಸಮುದಾಯಕ್ಕೆ ಸೇರಿದ್ದು, ಸರ್ಕಾರದ ಪ್ರಾಧಿಕಾರಗಳಿಗೆ ತಪ್ಪು ಮಾಹಿತಿ ನೀಡಿ ಪರಿಶಿಷ್ಟ ಪಂಗಡಕ್ಕೆ ಸೇರಿದ ವಾಲ್ಮೀಕಿ ಸಮುದಾಯಕ್ಕೆ ಸೇರಿದವರು ಎಂದು ತಿಳಿಸಿ ಜಾತಿ ಪ್ರಮಾಣ ಪತ್ರವನ್ನು ಪಡೆದುಕೊಂಡಿದ್ದರು. ಇದೇ ಪ್ರಮಾಣ ಪತ್ರವನ್ನು ನೀಡಿ ಶಿಪ್ಪಿಂಗ್ ಮತ್ತು ಸಾರಿಗೆ ಸಚಿವಾಲಯದಲ್ಲಿ ಲೈಟ್ ಕೀಪರ್ ಆಗಿ ಸೇವೆಗೆ ಸೇರಿಕೊಂಡಿದ್ದರು. ಈ ಜಾತಿ ಪ್ರಮಾಣ ಪತ್ರವನ್ನು ತಹಸೀಲ್ದಾರ್ ರದ್ದುಪಡಿಸಿದ್ದರು. ಇದನ್ನು ಪ್ರಶ್ನಿಸಿ ಪಳನಿ ಮೇಲ್ಮವಿ ಪ್ರಾಧಿಕಾರದ ಮುಂದೆ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿ ವಿಚಾರಣಾ ಹಂತದಲ್ಲಿರುವಾಗಲೇ ನಾಗರಿಕ ಹಕ್ಕುಗಳ ಜಾರಿ ನಿರ್ದೇಶನಾಲಯ ಅರ್ಜಿದಾರರ ವಿರುದ್ಧ ಕೆ.ಆರ್.ಪುರ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಿದ್ದು, ತನಿಖೆ ನಡೆಸಿದ್ದ ಪೊಲೀಸರು ಆರೋಪ ಪಟ್ಟಿಯನ್ನು ವಿಚಾರಣಾ ನ್ಯಾಯಾಲಯಕ್ಕೆ ಸಲ್ಲಿಸಿದ್ದರು. ಇದನ್ನು ಪ್ರಶ್ನಿಸಿ ಅರ್ಜಿದಾರರು ಹೈಕೋರ್ಟ್ ಮೆಟ್ಟಿಲೇರಿದ್ದರು.

ಓದಿ: ರೇವಣ್ಣ ಜಾಮೀನು ಅರ್ಜಿ ವಿಚಾರಣೆ: ವಾದ - ಪ್ರತಿವಾದ ಆಲಿಸಿ ಮಧ್ಯಾಹ್ನಕ್ಕೆ ವಿಚಾರಣೆ ಮುಂದೂಡಿದ ನ್ಯಾಯಾಲಯ - Revanna bail application

ETV Bharat Logo

Copyright © 2024 Ushodaya Enterprises Pvt. Ltd., All Rights Reserved.