ETV Bharat / state

ರೇವಣ್ಣ ಜಾಮೀನು ಅರ್ಜಿ ವಿಚಾರಣೆ: ವಾದ - ಪ್ರತಿವಾದ ಆಲಿಸಿ ಮಧ್ಯಾಹ್ನಕ್ಕೆ ವಿಚಾರಣೆ ಮುಂದೂಡಿದ ನ್ಯಾಯಾಲಯ - Revanna bail application

author img

By ETV Bharat Karnataka Team

Published : May 13, 2024, 2:46 PM IST

ಎಚ್. ಡಿ ರೇವಣ್ಣ ಜಾಮೀನು‌ ಅರ್ಜಿ ವಿಚಾರಣೆ ನಡೆಸಿದ‌ ನ್ಯಾಯಾಲಯ ಮಧ್ಯಾಹ್ನಕ್ಕೆ ವಿಚಾರಣೆ ಮುಂದೂಡಿದೆ.

court
ನ್ಯಾಯಾಲಯ (ETV Bharat)

ಬೆಂಗಳೂರು : ಅಪಹರಣ ಪ್ರಕರಣದಲ್ಲಿ ಬಂಧಿತರಾಗಿರುವ ಜೆಡಿಎಸ್ ಶಾಸಕ ಎಚ್. ಡಿ. ರೇವಣ್ಣ ಜಾಮೀನು‌ ಅರ್ಜಿ ವಿಚಾರಣೆ ನಡೆಸಿದ‌ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ವಾದ - ಪ್ರತಿವಾದ ಪೂರ್ಣಗೊಳ್ಳದ ಹಿನ್ನೆಲೆಯಲ್ಲಿ ಪ್ರಕರಣ ವಿಚಾರಣೆಯನ್ನ ಇಂದು ಮಧ್ಯಾಹ್ನಕ್ಕೆ ಮುಂದೂಡಿದೆ.

ಸತತ ಎರಡು ಗಂಟೆಗಳ ಕಾಲ ಎಸ್ಐಟಿ ಪರ ಎಸ್​ಪಿಪಿ ಹಾಗೂ ರೇವಣ್ಣ ಪರ ವಕೀಲರು ನ್ಯಾಯಾಲಯದ ವಾದ - ಪ್ರತಿವಾದ ಮಂಡಿಸಿದರು. ವಾದ ಮಂಡನೆಗೆ ಸಮಯಾವಕಾಶ ನೀಡಬೇಕೆಂಬ ರೇವಣ್ಣ ಪರ ಹಿರಿಯ ವಕೀಲ ಸಿ. ವಿ ನಾಗೇಶ್ ಮಾಡಿದ ಮನವಿಯನ್ನ ಪುರಸ್ಕರಿಸಿ ವಿಚಾರಣೆಯನ್ನ ಇಂದು ಮಧ್ಯಾಹ್ನಕ್ಕೆ ನ್ಯಾಯಾಲಯ ಮುಂದೂಡಿತು.

ಅರ್ಜಿ ವಿಚಾರಣೆ ಆರಂಭವಾಗುತ್ತಿದ್ದಂತೆ ಎಸ್​ಪಿಪಿ ಜಾಯ್ನಾ ಕೊಠಾರಿ ವಾದ ಆರಂಭ ಮುನ್ನ ಪ್ರಕರಣ ತನಿಖಾಧಿಕಾರಿಯವರಿಂದ ಮುಚ್ಚಿದ ಲಕೋಟೆಯಲ್ಲಿ ತನಿಖಾ ವರದಿಯನ್ನ ನ್ಯಾಯಾಲಯಕ್ಕೆ ಸಲ್ಲಿಸಲಾಯಿತು. ವಾದ ಆರಂಭಿಸಿದ ಜಾಯ್ನಾ , ಮೊದಲು ನಾನು ವಾದ ಮಂಡಿಸಿ ನಂತರ ಅಶೋಕ್ ನಾಯಕ್ ವಾದ‌‌ ಮಂಡಿಸುತ್ತಾರೆ ಎಂದು ಹೇಳುತ್ತಿದ್ದಂತೆ ರೇವಣ್ಣ ಪರ ವಕೀಲ ಸಿ. ವಿ ನಾಗೇಶ್ ಆಕ್ಷೇಪ ವ್ಯಕ್ತಪಡಿಸಿ ಕಾನೂನಿನಲ್ಲಿ‌ ಓರ್ವ ಪ್ರಾಸಿಕ್ಯೂಟರ್ ವಾದ ಮಂಡಿಸಬಹುದು‌ ಎಂದರು‌.

ಅಲ್ಲದೇ ಎಸ್ಐಟಿ ತನಿಖಾಧಿಕಾರಿ ಅವರು ಮುಚ್ಚಿದ ಲಕೋಟೆಯಲ್ಲಿ ಸಲ್ಲಿಸಿದ ತನಿಖಾ ವರದಿಯ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿ, ಮುಚ್ಚಿದ ಲಕೋಟೆಯಲ್ಲಿ ತನಿಖಾ ವರದಿಯನ್ನ ಸಲ್ಲಿಸಿದರೆ ನಾನು ಹೇಗೆ ವಾದ ಮಂಡಿಸಲಿ. ಸುಪ್ರೀಂಕೋರ್ಟ್ ಮುಚ್ಚಿದ ಲಕೋಟೆಯಲ್ಲಿ ವರದಿ ನೀಡಕೂಡದು ಎಂದಿದೆ. ಬಳಿಕ ಎಸ್ಐಟಿ ತನಿಖಾಧಿಕಾರಿಯಿಂದ ತನಿಖಾ ವರದಿ ನೀಡಲಾಯಿತು.

ವಾದ ಆರಂಭಿಸಿದ ಜಾಯ್ನಾ ಕೊಠಾರಿ ಐಪಿಸಿ 364 ಎ ಸೆಕ್ಷನ್ ನಡಿ ಪ್ರಕರಣ ದಾಖಲಾದಾಗ ಅಪರಾಧ ತೀವ್ರತೆ ಅರಿಯಬೇಕು.‌ ಈ‌ ಸೆಕ್ಷನ್​ನಡಿ ಆರೋಪ ಸಾಬೀತಾದರೆ ಮರಣದಂಡನೆ ವಿಧಿಸಬಹುದಾಗಿದೆ. ಅಲ್ಲದೇ, ರೇವಣ್ಣ ಪುತ್ರ ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ತಲೆಮರೆಸಿಕೊಂಡಿದ್ದಾರೆ.

ಒಂದು ವೇಳೆ ಜಾಮೀನು ನೀಡಿದರೆ ಸಾಕ್ಷ್ಯ ನಾಶಪಡಿಸಬಹುದು. ಆರೋಪಿ ಪ್ರಭಾವಿ ಎಂದು ಅಂಶವನ್ನ ಪರಿಗಣಿಸಬೇಕು. ‌ಮಹಿಳೆಯನ್ನ ಅಪಹರಿಸಿ ಬೆದರಿಕೆ ಹಾಕಿದ ಪ್ರಕರಣವಲ್ಲ.‌ ಅಪಹರಣವಾದ ಮಹಿಳೆ ಅತ್ಯಾಚಾರ ಪ್ರಕರಣ ಸಂತ್ರಸ್ತೆಯಾಗಿದ್ದು, ದೂರು ನೀಡದಂತೆ ಮಾಡಿದ ಯತ್ನವಿದು. ಅಲ್ಲದೆ ಇತರೆ ಮಹಿಳೆ ದೂರು ನೀಡಿದರೆ ತಮಗೆ ತೊಡಕಾಗಬಹುದು ಎಂಬ ಅಪಹರಿಸಲಾಗಿತ್ತು. ಸಾಕ್ಷಿಗಳ ಹೇಳಿಕೆ‌ ಇನ್ನೂ ದಾಖಲಿಸಿಕೊಳ್ಳಬೇಕು.‌ ಇತರೆ ಮಹಿಳೆಯರು ದೂರು ಕೊಡಬೇಕಾದರೆ ರೇವಣ್ಣಗೆ ಜಾಮೀನು ನೀಡಕೂಡದು ಎಂದರು.

ಪ್ರಕರಣ ಕೇಸ್ ಡೈರಿ ಇನ್ನೂ ಯಾಕೆ ಸಲ್ಲಿಸಿಲ್ಲ ಎಂಬ ನ್ಯಾಯಾಧೀಶರ ಪ್ರಶ್ನೆಗೆ ಈಗ ಡೈರಿ ಕೇಸ್ ಸಲ್ಲಿಸುತ್ತೇವೆ ಎಂದು ಎಸ್ ಪಿಪಿ ತಿಳಿಸಿದರು. ಸಿಆರ್​ಒಸಿ 161‌ಕಲಂ‌ನಡಿ ನೀಡಿದ ಹೇಳಿಕೆ ಎಷ್ಟರ ಮಟ್ಟಿಗೆ ಅವಲಂಬಿಸಬಹುದು ಎಂದು ನ್ಯಾಯಾಧೀಶರು ಪ್ರಶ್ನಿಸಿದರು.‌ ಪ್ರಕರಣವೊಂದರಲ್ಲಿ ಸುಪ್ರೀಂಕೋರ್ಟ್ ನೀಡಿದ ತೀರ್ಪನ್ನು ಪ್ರಸ್ತಾಪಿಸಿದರು.

ಮತ್ತೊರ್ವ ಎಸ್​ಪಿಪಿ ಅಶೋಕ್ ನಾಯಕ್ ವಾದ ಮಂಡಿಸಿ ಸಂತ್ರಸ್ತೆ ಎನ್ನಲಾದ ಮಹಿಳೆಯ ವಿಡಿಯೊ ವೈರಲ್ ಮಾಡಲಾಗಿದ್ದು, ತನಿಖೆಯ‌‌ ದಿಕ್ಕು ತಪ್ಪಿಸಲು ವಿಡಿಯೊ ಹರಿಬಿಡಲಾಗಿದೆ. ದೈನಂದಿನ ಆಗು ಹೋಗುಗಳ ಬಗ್ಗೆ ನ್ಯಾಯಾಲಯ ಗಮನಿಸಬೇಕು. ಸಂತ್ರಸ್ತೆಯನ್ನ ಒಂದು ದ್ವಿಚಕ್ರ ವಾಹನದಿಂದ ಕಾರಿನಿಂದ‌ ಕರೆದೊಯ್ದು ಅಪಹರಿಸಿದ್ದಾರೆ‌. ದೂರುದಾರರಿಗೆ ಗೊತ್ತಿರುವಷ್ಟು ಹೇಳಿದ್ದಾರೆ. ವಯಸ್ಸಾಗಿರುವ ಸಂತ್ರಸ್ತೆಯನ್ನ ತೋಟದ ಮನೆಗೆ ಬಲವಂತವಾಗಿ ಕರೆದೊಯ್ದಿದ್ದಾರೆ. ನಾಲ್ಕೈದು ದಿನ ಆಕೆಯನ್ನ ತೊಂದರೆ‌ ಕೊಟ್ಟಿದ್ದಾರೆ.

ಒಳಸಂಚು ಆರೋಪದಡಿ ರಾಜತಾಂತ್ರಿಕ ಪಾಸ್ ಪೋರ್ಟ್ ಬಳಸಿ ಪ್ರಜ್ವಲ್ ರೇವಣ್ಣ ದೇಶ ತೊರೆದಿದ್ದಾರೆ. ದೌರ್ಜನ್ಯದ ವಿಡಿಯೊ ವೈರಲ್ ಆಗುತ್ತಿದ್ದಂತೆ ರೇವಣ್ಣ ಪತ್ನಿ ಕರೆಯಿಸಿಕೊಂಡಿದ್ದಾರೆ. ತಾಯಿಯು ಅತ್ಯಾಚಾರದ ವಿಡಿಯೋ ನೀಡಿ ತಾಯಿಯ ಅತ್ಯಾಚಾರದ ವಿಡಿಯೊ ನೋಡಿ ಪುತ್ರ ದೂರು ಕೊಟ್ಟಿದ್ದರು. ಪೊಲೀಸ್ ಕಸ್ಟಡಿಯಲ್ಲಿರುವ ಜಾಮೀನು ಅರ್ಜಿ ಪರಿಗಣಿಸಬಾರದು ಎಂದು ವಾದಿಸಿದರು.

ವಾದ ಮುಂದುವರೆಸಿದ ಎಸ್​ಪಿಪಿ ರಾಹುಕಾಲ, ಗುಳಿಕ ಕಾಲ ನೋಡಿ ಹೊಟ್ಟೆನೋವು ಎಂದು‌ ರೇವಣ್ಣ ಕುಳಿತಿದ್ದರು. 2019ರಲ್ಲಿ ರೇವಣ್ಣ ಕುಟುಂಬ ಚುನಾವಣಾ ಅಕ್ರಮದಲ್ಲಿ ಭಾಗಿಯಾಗಿತ್ತು. ಮತದಾರರನ್ನ ಬೆದರಿಸಿ ಮತ ಹಾಕಿಕೊಂಡಿದ್ದರು. ಇವರನ್ನ ಯಾರು ಹೇಳುವಂತಿಲ್ಲ..‌ಕೇಳುವಂತಿಲ್ಲ.. ಸಂತ್ರಸ್ತೆಯನ್ನ ನಾವು ಸೇಫ್ ಹೋಮ್ ನಲ್ಲಿಟ್ಟಿದ್ದೇವೆ. ಈ ವೇಳೆ ಜಾಮೀನು ನೀಡಿದರೆ ಸಂತ್ರಸ್ತೆಯರ ಪರಿಸ್ಥಿತಿ ಏನಾಗಲಿದೆ ಎಂದು ಪ್ರಶ್ನಿಸಿದರು. ಇದೇ ವೇಳೆ ಪ್ರಜ್ವಲ್ ಆಯ್ಕೆ ಅಸಿಂಧುಗೊಳಿಸಿದ್ದ ಹೈಕೋರ್ಟ್ ಆದೇಶ ಉಲ್ಲೇಖಿಸಿದರು.

ರೇವಣ್ಣ ಪರ ವಕೀಲರು ವಾದಿಸಿದ ಅಂಶಗಳೇನು ?: ರೇವಣ್ಣ ಪರ ವಕೀಲ ಪ್ರತಿವಾದ ಮಂಡಿಸಿದ ಸಿ. ವಿ ನಾಗೇಶ್, ಪ್ರಕರಣದಲ್ಲಿ ಯಾಕೆ ದೂರು ನೀಡಲಾಗಿದೆ. ಇದಕ್ಕೆ‌ ಎಸ್ಐಟಿಯಿಂದ ಸ್ಪಷ್ಟನೆಯಿಲ್ಲ. ಮೇ 2 ರಂದು ಅಪಹರಣದ ದೂರು ಯಾಕೆ ನೀಡಿಲ್ಲ. ಮಹಿಳೆಯು ಎಚ್. ಡಿ ರೇವಣ್ಣ ಕುಟುಂಬಕ್ಕೆ‌ ರಕ್ತ ಸಂಬಂಧಿಯಾಗಬೇಕು. ದೂರುದಾರನ ತಾಯಿ ಮನೆಗೆ ಬಂದಿಲ್ಲ ಎಂಬುದನ್ನ ಎಫ್ಐಆರ್​ನಲ್ಲಿ ಉಲ್ಲೇಖಿಸಿದ್ದಾನೆ. ಮಹಿಳೆಯನ್ನ ಅಪಹರಣ ಮಾಡಿದ್ದಾರೆ ಎಂಬುದು ದೂರುದಾರನ ಊಹೆಯಾಗಿದೆ. ಟಿವಿಯಲ್ಲಿ ವಿಡಿಯೊ ಬಂದಿದೆ ಅಂದುಕೊಂಡು ದೂರು ನೀಡಲಾಗಿದೆ. ಚುನಾವಣಗೆ ಮುನ್ನ‌ ಮನೆಗೆ ಕರೆದಿದ್ದಾರೆ. ಬನ್ನಿ ಅಂದ ಮಾತ್ರಕ್ಕೆ ಅಪಹರಣ ಹೇಗೆ ಆಗುತ್ತದೆ? ಎಂದು ಪ್ರಶ್ನಿಸಿದರು.

ರೇವಣ್ಣ ಅವರು ಬಂಧನವಾದ ಮೇ 4ರಂದೇ ಮೈಸೂರಿನ ಹುಣಸೂರು‌ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮಹಿಳೆ ಪತ್ತೆಯಾಗಿದ್ದರು. ಸಿಆರ್ಪಿಸಿ 164ನಡಿ ಹೇಳಿಕೆ ದಾಖಲಿಸಲು ಒಂದು ವಾರಗಳ ಕಾಲ ಆಪ್ತ ಸಮಾಲೋಚನೆ ಅಗತ್ಯವಿತ್ತಾ? 364 ಎ ನಡಿ ಪ್ರಕರಣದಡಿ ಯಾಕೆ ಸಾಕ್ಷ್ಯ ಸಂಗ್ರಹಿಸಿಲ್ಲ. ವೈರಲ್ ಆದ ವಿಡಿಯೊದಲ್ಲಿ ರೇವಣ್ಣ ಅವರು ಕಿಡ್ನ್ಯಾಪ್ ಮಾಡಿದ್ದಾರೆ ಎಂದು‌ ಸಂತ್ರಸ್ತೆ ಹೇಳಿಲ್ಲ. ಮಾಧ್ಯಮಗಳಲ್ಲಿ ಬಂದ ಮಹಿಳೆಯ ಹೇಳಿಕೆ ಸತ್ಯಾಸತ್ಯತೆಯನ್ನ ಪರಿಗಣಿಸಲ್ಲ ಎಂದು‌ ನ್ಯಾಯಾಧೀಶರು ಆಕ್ಷೇಪ ವ್ಯಕ್ತಪಡಿಸಿದರು.

ಸುದೀರ್ಘವಾದ ಮಂಡನೆಗೆ ಅವಕಾಶ ನೀಡಬೇಕೆಂದು ಮಾಡಿದ ಮನವಿಗೆ ನ್ಯಾಯಾಲಯವು ಪುರಸ್ಕರಿಸಿ ಇಂದು ಮಧ್ಯಾಹ್ನಕ್ಕೆ 2.45ಕ್ಕೆ ವಿಚಾರಣೆ ಮುಂದೂಡಿತು.

ಇದನ್ನೂ ಓದಿ : ಮದ್ಯಪೂರೈಕೆಗೆ ಅನುಮತಿ ನೀಡಿ ಬಳಿಕ ದಾಳಿ, ಅಬಕಾರಿ ಇಲಾಖೆ ಕ್ರಮಕ್ಕೆ ಹೈಕೋರ್ಟ್ ಅಸಮಾಧಾನ - High Court

ETV Bharat Logo

Copyright © 2024 Ushodaya Enterprises Pvt. Ltd., All Rights Reserved.