ETV Bharat / state

ದಾವಣಗೆರೆ: ಭದ್ರಾ ಕಾಲುವೆಗಳ ಬಳಿ ಅಕ್ರಮ ಪಂಪ್ ಸೆಟ್ ಹಾಕಿ ನೀರು ಕದಿಯದಂತೆ 144 ಸೆಕ್ಷನ್ ಜಾರಿ

author img

By ETV Bharat Karnataka Team

Published : Feb 25, 2024, 4:00 PM IST

ಭದ್ರಾ ಕಾಲುವೆ
ಭದ್ರಾ ಕಾಲುವೆ

ತುಂಗಭದ್ರಾ ನದಿ ಕಾಲುವೆ ಕಾಲುವೆ ಬಳಿ ಯಾರೂ ಬಾರದಂತೆ ದಾವಣಗೆರೆ ಜಿಲ್ಲಾಡಳಿತ 144 ಸೆಕ್ಷನ್ ಜಾರಿ ಮಾಡಿದೆ.

ದಾವಣಗೆರೆ : ತುಂಗಭದ್ರಾ ನದಿ ಕಾಲುವೆಗಳ ಅಕ್ಕ-ಪಕ್ಕದಲ್ಲಿ ಅಕ್ರಮ ಪಂಪ್ ಸೆಟ್​ಗಳ ಮೂಲಕ ಕೆಲ ತೋಟದ ಮಾಲೀಕರು ನೀರು ಕದಿಯುತ್ತಿದ್ದಾರೆ. ಇದಕ್ಕೆ ಜಿಲ್ಲಾಡಳಿತ ಬ್ರೇಕ್​ ಹಾಕಲು ಎಲ್ಲಿ ಅನಧಿಕೃತ ಪಂಪ್ ಸೆಟ್​ಗಳಿವೆಯೋ ಅಲ್ಲಿ ಸೆಕ್ಷನ್ 144 ಜಾರಿ ಮಾಡಿದೆ.

ದಾವಣಗೆರೆ ರೈತರ ಹೋರಾಟದ ಫಲವಾಗಿ ರಾಜ್ಯ ಸರ್ಕಾರ ಕುಡಿಯಲು ಹಾಗು ಕೃಷಿಗೆ ತುಂಗಭದ್ರಾ ನದಿಯಿಂದ ಕಾಲುವೆಗಳಿಗೆ 13 ದಿನ ನೀರನ್ನು ಹರಿಸಿದೆ. ನೀರು ಹರಿಸಿ ಒಂದು ವಾರ ಆಗಿದ್ದರೂ ಕೂಡ ಕೊನೆ ಭಾಗದ ರೈತರಿಗೆ ನೀರು ತಲುಪದೆ ಇರುವುದು ರೈತರ ಆಕ್ರೋಶಕ್ಕೆ ಕಾರಣವಾಗಿದೆ. ಜಿಲ್ಲೆಯಲ್ಲಿ ಒಟ್ಟು 25 ಸಾವಿರ ಅಕ್ರಮ ಪಂಪ್ ಸೆಟ್​ಗಳ ಹಾವಳಿಯಿಂದ ನೀರು ಕೊನೆ ಭಾಗದ ರೈತರಿಗೆ ತಲುಪಿತ್ತಿಲ್ಲ ಎಂದು ಜಿಲ್ಲಾಡಳಿತಕ್ಕೆ ಸೂಕ್ತ ಕ್ರಮ ತೆಗೆದುಕೊಳ್ಳಬೇಕು ಎಂದು ನೀರು ಸಿಗದ ರೈತರು ಆಗ್ರಹಿಸಿದ್ದರು.

ಹೀಗಾಗಿ ಜಿಲ್ಲಾಡಳಿತ ಮತ್ತು ಜಲಸಂಪನ್ಮೂಲ ಇಲಾಖೆಯ ಅಧಿಕಾರಿಗಳು ಕೂಡ ಅಕ್ರಮ ಪಂಪ್ ಸೆಟ್ ಹಾವಳಿ ತಡೆಯಲು ಭದ್ರಾ ಕಾಲುವೆ ಹಾಗು ತುಂಗಭದ್ರಾ ನದಿಯ ಅಕ್ಕಪಕ್ಕದಲ್ಲಿ ಯಾರೂ ಸುಳಿಯದಂತೆ 144 ಸೆಕ್ಷನ್ ಜಾರಿ ಮಾಡಿದೆ. ಆದರೂ ಆಕ್ರಮ ಪಂಪ್ ಸೆಟ್​ಗಳಿಗೆ ಕಡಿವಾಣ ಹಾಕಲು ಅಧಿಕಾರಿಗಳಿಂದ ಸಾಧ್ಯವಾಗುತ್ತಿಲ್ಲ. ಕೊನೆ ಭಾಗದ ರೈತರಿಗೆ ನೀರು ತಲುಪುತ್ತಿಲ್ಲ. ಅಲ್ಲದೆ ಸುಪ್ರೀಂ ಕೋರ್ಟ್ ಆದೇಶ ಇದ್ದರೂ ಇಲಾಖೆ ಪಾಲಿಸುವಂತೆ ಕಾಣಿಸುತ್ತಿಲ್ಲ ಎಂದು ನೀರು ಸಿಗದ ರೈತರು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.

ಜಿಲ್ಲಾಧಿಕಾರಿ ಹೇಳಿದ್ದೇನು? : ಈ ವಿಚಾರವಾಗಿ ಈಟಿವಿ ಭಾರತದೊಂದಿಗೆ ಮಾತನಾಡಿದ ಜಿಲ್ಲಾಧಿಕಾರಿ ಡಾ ಎಂ.ವಿ ವೆಂಕಟೇಶ್ ಅವರು "ತುಂಗಭದ್ರಾ ನದಿ ಹಾಗು ಭದ್ರಾ ಕಾಲುವೆಗಳ ಅಕ್ಕಪಕ್ಕದಲ್ಲಿ 144 ಸೆಕ್ಷನ್ ಜಾರಿ ಮಾಡಿದ್ದೇವೆ. ಎಲ್ಲಿ ಅನಧಿಕೃತ ಪಂಪ್ ಸೆಟ್​ಗಳಿವೆಯೋ ಅಲ್ಲಿ ಮಾತ್ರ ಈ ಸೆಕ್ಷನ್​ ಜಾರಿಯಲ್ಲಿರುತ್ತದೆ. ನೀರು ಹರಿಸಿದರು ಕೂಡ ಕೊನೆ ಭಾಗದ ರೈತರಿಗೆ ನೀರು ತಲುಪುತ್ತಿಲ್ಲ ಎಂಬ ಆರೋಪ ಇತ್ತು. ಜಿಲ್ಲೆಯಲ್ಲಿ ಅಂದಾಜು 10 ಸಾವಿರ ಎಕರೆಯಲ್ಲಿ ಅಡಿಕೆ, ತೆಂಗು ಕೃಷಿ ಭೂಮಿ ಇದೆ. ಇದೀಗ ನೀರನ್ನು ಕೊನೆಯ ಭಾಗಕ್ಕೆ ತಲುಪಿಸಲಿಲ್ಲ ಎಂದರೆ ಬೆಳೆ ಒಣಗಿ ಹೋಗುವ ಸಾಧ್ಯತೆ ದಟ್ಟವಾಗಿದೆ. ಕೊನೆ ಭಾಗದ ರೈತರಿಗೆ ನೀರು ತಲುಪಿಸಿದ ಬಳಿಕ ಉಳಿದವರಿಗೂ ನೀರು ತಲುಪಿಸಲು ಪ್ರಯತ್ನ ಮಾಡುತ್ತೇವೆ. ಅದ್ದರಿಂದ ಜಿಲ್ಲಾಡಳಿತದೊಂದಿಗೆ ಸಾರ್ವಜನಿಕರು ಮತ್ತು ರೈತರು ಸಹಕಾರಿಸಬೇಕೆಂದು ಮನವಿ ಮಾಡುತ್ತೇನೆ. ಅಕ್ರಮ ಪಂಪ್ ಸೆಟ್​ಗಳನ್ನು ತೆಗೆಯಲ್ಲ ಎನ್ನುತ್ತಿರುವ ಕೆಲ ರೈತರೊಂದಿಗೆ ಚರ್ಚಿಸಿ ಮುಂದಿನ ಕ್ರಮ ಕೈಗೊಳ್ಳುತ್ತೇವೆ ಎಂದರು.

ರೈತ ಮುಖಂಡ ನಾಗೇಶ್ವರ್ ರಾವ್ ಆಕ್ರೋಶ : ರೈತ ಮುಖಂಡ ನಾಗೇಶ್ವರ್ ರಾವ್ ಅವರು ಈ ಕುರಿತು ಮಾತನಾಡಿ, " ಕುಡಿಯಲು ಹಾಗು ತೋಟಗಳಿಗಾಗಿ 13 ದಿನಗಳ ಕಾಲ ಸರ್ಕಾರ ನೀರು ಹರಿಸಿದೆ. ಪಂಪ್ ಸೆಟ್ ಹಾವಳಿ ಹೆಚ್ಚಾಗಿದೆ. ಸೆಕ್ಷನ್ ಜಾರಿ ಮಾಡಿರುವುದು ಅರ್ಥ ಆಗುತ್ತಿಲ್ಲ. ನೀರು ಹೊಡೆದುಕೊಳ್ಳಿ ಎಂದು ಹೇಳುತ್ತಿದ್ದಾರೆ ಹೊರೆತು ಪಂಪ್ ಸೆಟ್​ಗೆ ಕಡಿವಾಣ ಹಾಕುತ್ತಿಲ್ಲ. ಅವರು ಹರಿಸಿದ ನೀರು ನಮ್ಮ ಬಳಿ ಬರುವುದಿಲ್ಲ. ಪಂಪ್ ಸೆಟ್​ಗಳನ್ನು ತೆಗೆಯಬೇಕೆಂದು ಸುಪ್ರೀಂ ಕೋರ್ಟ್ ಆದೇಶ ಇದ್ದರೂ ಇಲಾಖೆ ಪಾಲಿಸುತ್ತಿಲ್ಲ. ಪಂಪ್ ಸೆಟ್​ಗಳನ್ನು ತೆರವು ಮಾಡಲು ಸೇನೆ ಬಂದರು ಆಗುವುದಿಲ್ಲ ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ. ಅದಷ್ಟು ಬೇಗ ಕೊನೆ ಭಾಗದ ರೈತರಿಗೆ ನೀರನ್ನು ಪೂರೈಸಬೇಕೆಂದು ಒತ್ತಾಯಿಸಿದರು.

ಇದನ್ನೂ ಓದಿ : ದಾವಣಗೆರೆ: ಬೇಸಿಗೆ ಮುನ್ನವೇ 126 ಗ್ರಾಮಗಳಲ್ಲಿ ಕುಡಿಯುವ ನೀರಿಗೆ ತತ್ವಾರ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.