ETV Bharat / sports

ಟಿ20 ವಿಶ್ವಕಪ್​ ತಂಡಕ್ಕೆ ಹಾರ್ದಿಕ್​ ಪಾಂಡ್ಯ ಆಯ್ಕೆಗೆ ಇತ್ತು ಭಾರಿ ಒತ್ತಡ: ವರದಿ - hardik pandya

author img

By ETV Bharat Karnataka Team

Published : May 16, 2024, 6:36 PM IST

ಮುಂದಿನ ತಿಂಗಳಿನಿಂದ ಆರಂಭವಾಗಲಿರುವ ಟಿ20 ವಿಶ್ವಕಪ್‌ಗೆ ಭಾರತ ತಂಡವನ್ನು ಬಿಸಿಸಿಐ ಈಗಾಗಲೇ ಪ್ರಕಟಿಸಿದೆ. ಹಾರ್ದಿಕ್​ ಪಾಂಡ್ಯ ಆಯ್ಕೆ ಮಾಡಿದ್ದು, ವ್ಯಾಪಕ ಟೀಕೆಗೂ ಗುರಿಯಾಗಿದೆ.

ಟಿ20 ವಿಶ್ವಕಪ್​ ತಂಡಕ್ಕೆ ಹಾರ್ದಿಕ್​ ಪಾಂಡ್ಯ ಆಯ್ಕೆ
ಟಿ20 ವಿಶ್ವಕಪ್​ ತಂಡಕ್ಕೆ ಹಾರ್ದಿಕ್​ ಪಾಂಡ್ಯ ಆಯ್ಕೆ (File Photo ETV Bharat)

ಹೈದರಾಬಾದ್​: ಮುಂಬರುವ ಟಿ20 ವಿಶ್ವಕಪ್​ ಭಾರತ ತಂಡಕ್ಕೆ ಅದೆಷ್ಟು ಮುಖ್ಯ ಎಂಬುದು ತಿಳಿದ ಸಂಗತಿ. ತವರಿನಲ್ಲಿ 2023 ರಲ್ಲಿ ನಡೆದ ಏಕದಿನ ವಿಶ್ವಕಪ್​ ಫೈನಲ್ ಸೋಲು ಅರಗಿಸಿಕೊಳ್ಳಲೂ ಸಾಧ್ಯವಾಗುತ್ತಿಲ್ಲ. ಹೀಗಾಗಿ ಚುಟುಕು ಮಾದರಿಯ ವಿಶ್ವಕಪ್ ಅನ್ನು ಶತಾಯಗತಾಯ ಗೆಲ್ಲಲೇಬೇಕು ಎಂಬ ಒತ್ತಡ ತಂಡದ ಮೇಲಿದೆ.

ಇತ್ತೀಚೆಗೆ ನಡೆದ ಆಯ್ಕೆ ಸಮಿತಿ ಸಭೆಯಲ್ಲಿ ಚರ್ಚಿಸಿ ವಿಶ್ವಕಪ್​ಗೆ ಭಾರತ ತಂಡವನ್ನು ಪ್ರಕಟಿಸಲಾಗಿದೆ. ಇದರಲ್ಲಿ ಅತಿ ಚರ್ಚಿತ ವಿಷಯವೆಂದರೆ, ಹಾರ್ದಿಕ್​ ಪಾಂಡ್ಯರ ಆಯ್ಕೆ. ಅದರಲ್ಲೂ ಉಪ ನಾಯಕನ ಸ್ಥಾನ ನೀಡಿರುವುದು ಉರಿಯುವ ಬೆಂಕಿಗೆ ಆಜ್ಯ ಹುಯ್ದದಂತಾಗಿದೆ.

ನಡೆಯುತ್ತಿರುವ ಐಪಿಎಲ್​ ಸೇರಿದಂತೆ ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಪಾಂಡ್ಯ ಪ್ರದರ್ಶನ ಉತ್ತಮವಾಗಿಲ್ಲ. ಜೊತೆಗೆ ನಾಯಕನಾಗಿಯೂ ಅಷ್ಟೇನೂ ಪ್ರಭಾವ ಬೀರಿಲ್ಲ. ಆದಾಗ್ಯೂ ಅವರಿಗೆ ರಾಷ್ಟ್ರೀಯ ತಂಡದ ಉಪ ನಾಯಕನ ಸ್ಥಾನ ನೀಡಿರುವುದು ಹಲವು ಮಾಜಿ ಕ್ರಿಕೆಟಿಗರ ಆಕ್ಷೇಪಕ್ಕೆ ಕಾರಣವಾಗಿದೆ.

17ನೇ ಆವೃತ್ತಿಯ ಐಪಿಎಲ್​ನ ಪ್ರದರ್ಶನ ನೋಡಿದಾಗ, ಆಡಿರುವ 13 ಪಂದ್ಯಗಳಲ್ಲಿ 200 ರನ್​ ಮಾತ್ರ ಗಳಿಸಿದ್ದಾರೆ. ಬೌಲಿಂಗ್​ನಲ್ಲಿ 11 ವಿಕೆಟ್​ ಉರುಳಿಸಿದ್ದಾರೆ. ಜೊತೆಗೆ ಹೆಚ್ಚು ರನ್​ ಕೂಡ ಬಿಟ್ಟುಕೊಟ್ಟಿದ್ದಾರೆ. ಇದರಿಂದ ತಂಡದಲ್ಲಿ ಸ್ಥಾನ ಪಡೆಯುವ ಬಗ್ಗೆ ಅನುಮಾನವಿತ್ತು.

ಅಜಿತ್​, ರೋಹಿತ್​ ವಿರೋಧ?: ವಿಶ್ವಕಪ್​ ತಂಡದಲ್ಲಿ ಹಾರ್ದಿಕ್​ ಪಾಂಡ್ಯಗೆ ಅವಕಾಶ ನೀಡುವ ಬಗ್ಗೆ ನಾಯಕ ರೋಹಿತ್​ ಶರ್ಮಾ ಮತ್ತು ಆಯ್ಕೆ ಸಮಿತಿ ಅಧ್ಯಕ್ಷ ಅಜಿತ್​ ಅಗರ್ಕರ್​ಗೆ ಒಲುವು ಇರಲಿಲ್ಲ ಎಂಬ ಮಾತುಗಳು ಕೇಳಿಬಂದಿದ್ದವು. ಹಲವು ಮಾಜಿ ಕ್ರಿಕೆಟಿಗರು ಕೂಡ ಪಾಂಡ್ಯ ಆಯ್ಕೆಯಾಗಲಾರ ಎಂದೂ ಭವಿಷ್ಯ ನುಡಿದಿದ್ದರು.

ಆದರೆ, ಮಹತ್ವದ ವಿದ್ಯಮಾನದಲ್ಲಿ ಘೋಷಿಸಲಾದ ತಂಡದಲ್ಲಿ ಹಾರ್ದಿಕ್‌ಗೆ ಸ್ಥಾನ ಸಿಕ್ಕಿದ್ದಲ್ಲದೇ, ಉಪನಾಯಕತ್ವ ಪಟ್ಟವನ್ನೂ ನೀಡಲಾಗಿದೆ. ಇದಕ್ಕೆ ಕಾರಣ ಪಾಂಡ್ಯ ಆಯ್ಕೆಗಾಗಿ ರೋಹಿತ್ ಶರ್ಮಾ ಮತ್ತು ಅಜಿತ್ ಅಗರ್ಕರ್ ಮೇಲೆ ಸಾಕಷ್ಟು ಒತ್ತಡವಿತ್ತು ಎಂದು ಹೇಳಲಾಗ್ತಿದೆ.

ವೇಗದ ಬೌಲಿಂಗ್​ ಆಲ್​ರೌಂಡರ್​ ವಿಭಾಗದಲ್ಲಿ ಹಾರ್ದಿಕ್​ ಹೊರತಾಗಿ ದೊಡ್ಡ ಆಯ್ಕೆಗಳಿರಲಿಲ್ಲ. ಶಿವಂ ದುಬೆ ತಂಡದಲ್ಲಿ ಸ್ಥಾನ ಪಡೆದರೂ, ಮತ್ತೊಬ್ಬರ ಆಯ್ಕೆ ಸಿಗಲಿಲ್ಲ ಎಂಬ ವರದಿಗಳಿವೆ. ಇದರಿಂದಾಗಿ ಪಾಂಡ್ಯರನ್ನು ಆಯ್ಕೆ ಮಾಡಲಾಗಿದೆ ಎಂದು ಹೇಳಲಾಗಿದೆ. ತಂಡದಲ್ಲಿ ಸ್ಥಾನ ಪಡೆದಿದ್ದರೂ, ಉತ್ತಮ ಆಟ ಪ್ರದರ್ಶಿಸದಿದ್ದರೆ ಬೆಂಚ್ ಕಾಯುವ ಸ್ಥಿತಿ ಬರಬಹುದು ಎಂದು ವರದಿಯಾಗಿದೆ.

ಟಿ20 ರೋಹಿತ್ ವಿದಾಯ ಹೇಳ್ತಾರಾ?: ಜೂನ್ 2 ರಿಂದ ವೆಸ್ಟ್ ಇಂಡೀಸ್ ಮತ್ತು ಅಮೆರಿಕದಲ್ಲಿ ಟಿ20 ವಿಶ್ವಕಪ್ ಆರಂಭವಾಗಲಿದ್ದು, ಈ ಟೂರ್ನಿಯ ಬಳಿಕ ನಾಯಕ ರೋಹಿತ್ ಚುಟುಕು ಮಾದರಿಯ ಕ್ರಿಕೆಟ್​ಗೆ ವಿದಾಯ ಹೇಳಲಿದ್ದಾರೆ ಎಂದು ಕ್ರಿಕೆಟ್ ಮೂಲಗಳು ತಿಳಿಸಿವೆ. ಈ ಬಾರಿಯ ವಿಶ್ವಕಪ್ ಗೆಲ್ಲಲು ಎಲ್ಲ ಕಸರತ್ತು ನಡೆಸುವುದರಲ್ಲಿ ಅನುಮಾನವೇ ಇಲ್ಲ.

ಇದನ್ನೂ ಓದಿ: "ನಿವೃತ್ತಿ ಬಳಿಕ ನಿಮಗೆ ಕಾಣಿಸಲ್ಲ": ಅಭಿಮಾನಿಗಳಲ್ಲಿ ದುಗುಡ ಹುಟ್ಟಿಸಿದ ಟೀಂ ಇಂಡಿಯಾ ಆಟಗಾರನ ಹೇಳಿಕೆ - VIRAT KOHLI

ETV Bharat Logo

Copyright © 2024 Ushodaya Enterprises Pvt. Ltd., All Rights Reserved.