ETV Bharat / state

ಬೆಳಗಾವಿ; ಟಿಕೆಟ್​ ತೋರಿಸು ಎಂದಿದ್ದಕ್ಕೆ ರೈಲಿನಲ್ಲಿ ಟಿಸಿ ಸೇರಿ ಐವರ ಮೇಲೆ ಚಾಕುವಿನಿಂದ ಹಲ್ಲೆ, ಟ್ರೇನ್​ ಅಟೆಂಡರ್​ ಸಾವು - A MASKED MAN ATTACKED

author img

By ETV Bharat Karnataka Team

Published : May 16, 2024, 6:44 PM IST

Updated : May 16, 2024, 8:05 PM IST

ಖಾನಾಪುರ ತಾಲೂಕಿನ ಲೋಂಡಾದಲ್ಲಿ ಟಿಸಿ ಸೇರಿ ಐವರ ಮೇಲೆ ಅಪರಿಚಿತ ಮುಸುಕುಧಾರಿ ವ್ಯಕ್ತಿಯೋರ್ವ ಮಾರಣಾಂತಿಕ ಹಲ್ಲೆ ಮಾಡಿರುವ ಘಟನೆ ನಡೆದಿದೆ.

MASKED MAN ATTACKED
ಸಂಗ್ರಹ ಚಿತ್ರ (ETV Bharat)

ಟಿಸಿ ಅಶ್ರಫ್ ಅಲಿ (ETV Bharat)

ಬೆಳಗಾವಿ : ರೈಲ್ವೆ ಟಿಕೆಟ್ ತೋರಿಸು ಎಂದಿದ್ದಕ್ಕೆ ಟಿಸಿ ಸೇರಿ ಐವರ ಮೇಲೆ ಅಪರಿಚಿತ ಮುಸುಕುಧಾರಿ ವ್ಯಕ್ತಿಯೋರ್ವ ಮಾರಣಾಂತಿಕ ಹಲ್ಲೆ ಮಾಡಿರುವ ಘಟನೆ ಖಾನಾಪುರ ತಾಲೂಕಿನ ಲೋಂಡಾದಲ್ಲಿ ಇಂದು ನಡೆದಿದೆ. ಘಟನೆಯಲ್ಲಿ ಓರ್ವ ವ್ಯಕ್ತಿ ಸಾವನ್ನಪ್ಪಿದ್ದಾರೆ.

ನಾಲ್ವರು ಪ್ರಯಾಣಿಕರು ಸೇರಿ ಟಿಸಿ ಮೇಲೆ ಚಾಕುವಿನಿಂದ ಮಾರಣಾಂತಿಕ ಹಲ್ಲೆ ನಡೆದಿದೆ. ಅಪರಿಚಿತ ಮುಸುಕುಧಾರಿಯಿಂದ ಈ ಕೃತ್ಯ ನಡೆದಿದ್ದು, ಬಳಿಕ ಆರೋಪಿ ಅಲ್ಲಿಂದ ಪರಾರಿಯಾಗಿದ್ದಾನೆ. ಟಿಸಿ ಸೇರಿ ನಾಲ್ವರು ಗಾಯಾಳುಗಳನ್ನು ಬೆಳಗಾವಿ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಚಿಕಿತ್ಸೆ ಫಲಕಾರಿಯಾಗದೇ ಓರ್ವ ಗಾಯಾಳು ಸಾವನ್ನಪ್ಪಿದ್ದಾರೆ. ಮೃತರನ್ನು ಝಾನ್ಸಿ ಮೂಲದ ಟ್ರೇನ್ ಅಟೆಂಡರ್ ದೇವಋಷಿ ವರ್ಮಾ(23) ಎಂದು ಗುರುತಿಸಲಾಗಿದೆ.

ಪಾಂಡಿಚೇರಿ-ಮುಂಬೈ ಚಾಲುಕ್ಯ ಎಕ್ಸ್​ಪ್ರೆಸ್​ ರೈಲಿನಲ್ಲಿ ಈ ಘಟನೆ ನಡೆದಿದೆ. ಧಾರವಾಡದಿಂದ ಬೆಳಗಾವಿಯತ್ತ ಬರುತ್ತಿದ್ದ ಚಾಲುಕ್ಯ ರೈಲು ಇದಾಗಿದ್ದು, ಚಿಂತಾಜನಕ ಸ್ಥಿತಿಯಲ್ಲಿರುವ ನಾಲ್ವರಿಗೆ ತೀವ್ರ ನಿಗಾಘಟಕದಲ್ಲಿ ಚಿಕಿತ್ಸೆ ಮುಂದುವರಿದಿದೆ. ಬೆಳಗಾವಿ ರೈಲ್ವೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಈ ಕುರಿತು ಗಾಯಾಳು ಟಿಕೆಟ್​​ ಚೆಕ್ಕರ್ ಅಶ್ರಫ್ ಅಲಿ ಕಿತ್ತೂರು ಮಾಧ್ಯಮಗಳ ಜೊತೆಗೆ ಮಾತನಾಡಿ, ರೈಲಿನಲ್ಲಿ ಟಿಕೆಟ್ ಚೆಕ್ ಮಾಡುತ್ತಿರುವಾಗ, ಒಬ್ಬರದ್ದು ಟಿಕೆಟ್ ಇರಲಿಲ್ಲ. ಅವರಿಂದ ದಂಡ ಕಟ್ಟಿಸಿಕೊಂಡು ವಾಪಸ್​ ಬರುವಾಗ, ಬಾಗಿಲಲ್ಲಿ ನಿಂತಿದ್ದ ವ್ಯಕ್ತಿಗೆ ನಾನು ಟಿಕೆಟ್ ಕೇಳಿದೆ. ಆಗ ಆತ ನನ್ನ ಟಿಕೆಟ್ ಅಲ್ಲಿ ತೆಗೆದುಕೊಂಡಿದ್ದಾರೆ ಎಂದು ಉತ್ತರಿಸಿ ಓಡಲು ಪ್ರಯತ್ನಿಸಿದ್ದ. ಆ ವೇಳೆ ಆತನ ಬಳಿ ಇದ್ದ ಪ್ರಯಾಣಿಕರು ಮತ್ತು ಕ್ಲೀನರ್​ ಟಿಕೆಟ್ ತೋರಿಸು ಎನ್ನುತ್ತಿದ್ದಂತೆ ಕಿಸೆಯಲ್ಲಿದ್ದ ಚಾಕುವಿನಿಂದ ಇರಿಯಲು ಮುಂದಾದ. ನನಗೆ ಹೊಟ್ಟೆಗೆ ಚುಚ್ಚಲು ಬಂದಾಗ, ಕೈ ಮುಂದೆ ಮಾಡಿದೆ. ಕೈಗೆ ಚುಚ್ಚಿದ. ಅದೇ ರೀತಿ ಇನ್ನೂ ಮೂವರಿಗೂ ಚುಚ್ಚಿ ಅಲ್ಲಿಂದ ಪರಾರಿಯಾಗಿದ್ದಾನೆ ಎಂದು ಘಟನೆ ಬಗ್ಗೆ ವಿವರಿಸಿದರು.

ಪ್ರತ್ಯಕ್ಷದರ್ಶಿ ಶಿವಾನಂದ ಎಂಬುವವರು ಮಾತನಾಡಿ, ನಾನು ಲೋಂಡಾದಿಂದ ಬೆಳಗಾವಿಗೆ ಹೋಗುತ್ತಿದ್ದೆ. ಟಿಸಿ ಚೆಕ್ಕರ್​ಗೆ ಚಾಕುವಿನಿಂದ ಚುಚ್ಚಿ ನನಗೆ ಇರಿಯಲು ಬಂದಾಗ ನಾನು ಆತನನ್ನು ಕಾಲಿನಿಂದ ಒದ್ದೆ. ಆಗ ಅಲ್ಲಿಂದ ಆತ ಓಡಿ ಹೋದ. ಆತನ ಕೈಯಲ್ಲಿ ದೊಡ್ಡ ಚಾಕು ಇತ್ತು. ಚೂರಿ ಇರಿತದಿಂದ ರೈಲು ಸಿಬ್ಬಂದಿಯೊಬ್ಬರು ಮೃತಪಟ್ಟಿದ್ದಾರೆ ಎಂದು ವಿವರಿಸಿದರು.

ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಬಳಿಕ ಮಾಧ್ಯಮಗಳ ಜೊತೆಗೆ ಮಾತನಾಡಿದ ನಗರ ಪೊಲೀಸ್ ಆಯುಕ್ತ ಯಡಾ ಮಾರ್ಟಿನ್, ಆರೋಪಿ ಟಿಕೆಟ್ ಇಲ್ಲದೇ ಪ್ರಯಾಣಿಸುತ್ತಿದ್ದ. ಆಗ ಟಿಕೆಟ್ ಚೆಕ್ಕರ್ ಟಿಕೆಟ್ ಎಲ್ಲಿ ಅಂತಾ ಕೇಳಿದಾಗ ಗಲಾಟೆ ಆಗಿದೆ. ಘಟನೆಯಲ್ಲಿ ಯುಪಿ ಮೂಲದ ಟ್ರೇನ್ ಕ್ಲೀನರ್ ದೇವಋಷಿ ಎಂಬುವವರು ಮೃತರಾಗಿದ್ದಾರೆ. ಟಿಟಿ ಮತ್ತು ಇಬ್ಬರು ಪ್ರಯಾಣಿಕರಿಗೂ ಗಾಯಗಳಾಗಿವೆ. ಇನ್ನು, ಆರೋಪಿ ತಮಿಳುನಾಡಿನಿಂದ ಬಂದಿದ್ದಾನೆ ಎಂಬ ಶಂಕೆ ವ್ಯಕ್ತವಾಗಿದ್ದು, ವಿವರವಾದ ಮಾಹಿತಿ ಈಗಷ್ಟೇ ಕಲೆ ಹಾಕಬೇಕಿದೆ ಎಂದರು.

ಇದನ್ನೂ ಓದಿ : ಚಿಕ್ಕಬಳ್ಳಾಪುರ: ಭುಜ ತಾಗಿದ್ದಕ್ಕೆ ವ್ಯಕ್ತಿಗೆ ಮನಸ್ಸೋ ಇಚ್ಛೆ ಚಾಕು ಇರಿತ, ಇಬ್ಬರ ಬಂಧನ - Assault On A Person

Last Updated :May 16, 2024, 8:05 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.