ಮುಂಬೈ : ಭಾರತೀಯ ಇಕ್ವಿಟಿ ಬೆಂಚ್ ಮಾರ್ಕ್ ಸೂಚ್ಯಂಕಗಳಾದ ಬಿಎಸ್ಇ ಸೆನ್ಸೆಕ್ಸ್ ಮತ್ತು ಎನ್ಎಸ್ಇ ನಿಫ್ಟಿ - 50 ಆರಂಭದಲ್ಲಿ ನಷ್ಟದೊಂದಿಗೆ ವಹಿವಾಟು ಆರಂಭಿಸಿದರೂ ನಂತರ ಏರಿಕೆಯಾಗಿ ದಿನದ ಕೊನೆಯಲ್ಲಿ ಸುಮಾರು 1 ಪ್ರತಿಶತದಷ್ಟು ಹೆಚ್ಚಾಗಿದೆ. ಬಿಎಸ್ಇ ಸೆನ್ಸೆಕ್ಸ್ 676.69 ಪಾಯಿಂಟ್ ಅಥವಾ ಶೇಕಡಾ 0.93 ರಷ್ಟು ಏರಿಕೆ ಕಂಡು 73,663.72 ರಲ್ಲಿ ಕೊನೆಗೊಂಡಿದ್ದರೆ, ನಿಫ್ಟಿ 203.30 ಪಾಯಿಂಟ್ ಅಥವಾ ಶೇಕಡಾ 0.92 ರಷ್ಟು ಏರಿಕೆ ಕಂಡು 22,403.85 ರಲ್ಲಿ ಕೊನೆಗೊಂಡಿದೆ.
ಸೆನ್ಸೆಕ್ಸ್ನಲ್ಲಿ ಭಾರ್ತಿ ಏರ್ಟೆಲ್, ಟೆಕ್ ಮಹೀಂದ್ರಾ, ಟೈಟಾನ್, ಇನ್ಫೋಸಿಸ್, ಮಹೀಂದ್ರಾ & ಮಹೀಂದ್ರಾ, ಜೆಎಸ್ ಡಬ್ಲ್ಯೂ ಸ್ಟೀಲ್, ಬಜಾಜ್ ಫಿನ್ ಸರ್ವ್, ಎಚ್ಡಿಎಫ್ಸಿ ಬ್ಯಾಂಕ್ ಲಾಭ ಗಳಿಸಿದ ಪ್ರಮುಖ ಶೇರುಗಳಾಗಿವೆ. ಎಸ್ಬಿಐ, ಮಾರುತಿ, ಪವರ್ ಗ್ರಿಡ್, ಟಾಟಾ ಮೋಟಾರ್ಸ್ ಮತ್ತು ಇಂಡಸ್ ಇಂಡ್ ಬ್ಯಾಂಕ್ ಪ್ರಮುಖವಾಗಿ ನಷ್ಟ ಅನುಭವಿಸಿದವು.
ವಲಯ ಸೂಚ್ಯಂಕಗಳಲ್ಲಿ, ಐಟಿ ಮತ್ತು ರಿಯಾಲ್ಟಿ ಇಂದಿನ ವಹಿವಾಟಿನಲ್ಲಿ ಸುಮಾರು 1 ಪ್ರತಿಶತದಷ್ಟು ಹೆಚ್ಚಾಗಿವೆ. ಮತ್ತೊಂದೆಡೆ, ಇಂಧನ ಮತ್ತು ಸರಕು ಸೂಚ್ಯಂಕಗಳು ಚೇತರಿಕೆ ಕಂಡ ನಂತರ ಪಿಎಸ್ಯು ಬ್ಯಾಂಕ್ ಸೂಚ್ಯಂಕ ನಷ್ಟದಲ್ಲಿ ಕೊನೆಗೊಂಡಿತು.
ವಿದೇಶಿ ಸಾಂಸ್ಥಿಕ ಹೂಡಿಕೆದಾರರು (ಎಫ್ಐಐ) ಮೇ 15 ರಂದು 2,832.83 ಕೋಟಿ ಮೌಲ್ಯದ ಷೇರುಗಳನ್ನು ಮಾರಾಟ ಮಾಡಿದ್ದಾರೆ ಎಂದು ವಿನಿಮಯ ಕೇಂದ್ರದ ಅಂಕಿ ಅಂಶಗಳು ತಿಳಿಸಿವೆ.
ಡಾಲರ್ ಎದುರು ರೂಪಾಯಿ 2 ಪೈಸೆ ಏರಿಕೆ ಕಂಡು 83.44 ಕ್ಕೆ ತಲುಪಿತ್ತು. ಅಂತಿಮವಾಗಿ ಯುಎಸ್ ಕರೆನ್ಸಿ ವಿರುದ್ಧ ಭಾರತೀಯ ಕರೆನ್ಸಿ 83.50 ರಲ್ಲಿ ಕೊನೆಗೊಂಡಿತು. ವಿದೇಶಿ ವಿನಿಮಯ ವ್ಯಾಪಾರಿಗಳ ಪ್ರಕಾರ, ದೇಶದಲ್ಲಿ ನಡೆಯುತ್ತಿರುವ ಚುನಾವಣೆಗಳು ಮತ್ತು ವಿದೇಶಿ ನಿಧಿಯ ಹೊರಹರಿವಿನಿಂದಾಗಿ ರೂಪಾಯಿ ಒತ್ತಡದಲ್ಲಿದೆ.
ಗುರುವಾರದಂದು ಕಚ್ಚಾ ತೈಲ ಬೆಲೆಗಳು ಏರಿಕೆಯಾಗಿವೆ. ಬ್ರೆಂಟ್ ಫ್ಯೂಚರ್ಸ್ 25 ಸೆಂಟ್ಸ್ ಅಥವಾ ಶೇಕಡಾ 0.32 ರಷ್ಟು ಏರಿಕೆಯಾಗಿ ಬ್ಯಾರೆಲ್ಗೆ 82.49 ಡಾಲರ್ಗೆ ತಲುಪಿದ್ದರೆ, ಯುಎಸ್ ವೆಸ್ಟ್ ಟೆಕ್ಸಾಸ್ ಇಂಟರ್ ಮೀಡಿಯೆಟ್ ಕ್ರೂಡ್ (ಡಬ್ಲ್ಯುಟಿಐ) 29 ಸೆಂಟ್ಸ್ ಅಥವಾ ಶೇಕಡಾ 0.37 ರಷ್ಟು ಏರಿಕೆಯಾಗಿ 78.26 ಡಾಲರ್ಗೆ ತಲುಪಿದೆ. ದೇಶೀಯವಾಗಿ ಉತ್ಪಾದಿಸುವ ಕಚ್ಚಾ ತೈಲದ ಮೇಲಿನ ವಿಂಡ್ಫಾಲ್ ತೆರಿಗೆಯನ್ನು ಕೇಂದ್ರವು ಪ್ರತಿ ಟನ್ ಗೆ 8,400 ರೂ.ಗಳಿಂದ 5,700 ರೂ.ಗೆ ಇಳಿಸಿದೆ.
ಇದನ್ನೂ ಓದಿ : ಗುಡ್ ನ್ಯೂಸ್: ಭಾರತದ ಸರಕು ರಫ್ತು ಪ್ರಮಾಣ ಶೇ 1.07ರಷ್ಟು ಹೆಚ್ಚಳ; ಆರ್ಥಿಕ ಹಿಂಜರಿತದ ಮಧ್ಯೆಯೂ ಉತ್ತಮ ಸಾಧನೆ - goods exports