ETV Bharat / business

ಗುಡ್​​​ ನ್ಯೂಸ್: ಭಾರತದ ಸರಕು ರಫ್ತು ಪ್ರಮಾಣ ಶೇ 1.07ರಷ್ಟು ಹೆಚ್ಚಳ; ಆರ್ಥಿಕ ಹಿಂಜರಿತದ ಮಧ್ಯೆಯೂ ಉತ್ತಮ ಸಾಧನೆ - goods exports

author img

By ETV Bharat Karnataka Team

Published : May 16, 2024, 4:12 PM IST

ಭಾರತದ ಸರಕು ರಫ್ತು ಪ್ರಮಾಣ ಏಪ್ರಿಲ್​ನಲ್ಲಿ ಶೇಕಡಾ 1.07 ರಷ್ಟು ಏರಿಕೆಯಾಗಿದೆ.

India goods exports
India goods exports (ians)

ನವದೆಹಲಿ: ಆರ್ಥಿಕ ಹಿಂಜರಿತ ಮತ್ತು ಭೌಗೋಳಿಕ ರಾಜಕೀಯ ಬಿಕ್ಕಟ್ಟುಗಳಿಂದಾಗಿ ಜಾಗತಿಕ ಮಾರುಕಟ್ಟೆಯಲ್ಲಿ ಅನಿಶ್ಚಿತತೆಯ ಪರಿಸ್ಥಿತಿ ಸೃಷ್ಟಿಯಾಗಿರುವ ಮಧ್ಯೆಯೂ ಭಾರತದ ಸರಕು ರಫ್ತು ಏಪ್ರಿಲ್​ನಲ್ಲಿ ಶೇಕಡಾ 1.07 ರಷ್ಟು ಏರಿಕೆಯಾಗಿ ಸುಮಾರು 35 ಬಿಲಿಯನ್ ಡಾಲರ್​ಗೆ ತಲುಪಿದೆ ಎಂದು ಕೇಂದ್ರ ವಾಣಿಜ್ಯ ಸಚಿವಾಲಯ ಬುಧವಾರ ಬಿಡುಗಡೆ ಮಾಡಿದ ಅಂಕಿ ಅಂಶಗಳು ತಿಳಿಸಿವೆ.

ಆದಾಗ್ಯೂ ದೇಶದ ಆಮದುಗಳು ಕೂಡ ತಿಂಗಳಲ್ಲಿ ಶೇಕಡಾ 10.25 ರಷ್ಟು ಏರಿಕೆಯಾಗಿ 54.1 ಬಿಲಿಯನ್ ಡಾಲರ್​ಗೆ ತಲುಪಿವೆ. ಚಿನ್ನದ ಖರೀದಿಯ ಹೆಚ್ಚಳದಿಂದಾಗಿ ಆಮದು ಪ್ರಮಾಣ ಹೆಚ್ಚಾಗಿದೆ. ಇದರ ಪರಿಣಾಮವಾಗಿ ತಿಂಗಳ ಸರಕು ವ್ಯಾಪಾರ ಕೊರತೆಯು ಒಂದು ವರ್ಷದ ಹಿಂದೆ ಇದ್ದುದಕ್ಕಿಂತ ಶೇಕಡಾ 32.3 ರಷ್ಟು ಹೆಚ್ಚಾಗಿ 19.1 ಬಿಲಿಯನ್ ಡಾಲರ್​ಗೆ ತಲುಪಿದೆ.

ಕಳೆದ ವರ್ಷ ಇದೇ ತಿಂಗಳಲ್ಲಿ 1.01 ಬಿಲಿಯನ್ ಡಾಲರ್ ಇದ್ದ ಚಿನ್ನದ ಆಮದು ಏಪ್ರಿಲ್​ನಲ್ಲಿ ಮೂರು ಪಟ್ಟು ಹೆಚ್ಚಾಗಿ 3.11 ಬಿಲಿಯನ್ ಡಾಲರ್​ಗೆ ತಲುಪಿದೆ. ಮಾರ್ಚ್ 2024 ರಲ್ಲಿ ಚಿನ್ನದ ಆಮದು 1.53 ಬಿಲಿಯನ್ ಡಾಲರ್ ಆಗಿತ್ತು.

2024-25ರ ಹಣಕಾಸು ವರ್ಷದ ಮೊದಲ ತಿಂಗಳಲ್ಲಿ ಸರಕುಗಳ ರಫ್ತು ಹೆಚ್ಚಳವು ಮುಂಬರುವ ತಿಂಗಳುಗಳಿಗೆ ಶುಭ ಸುದ್ದಿಯಾಗಿದೆ ಎಂದು ವಾಣಿಜ್ಯ ಕಾರ್ಯದರ್ಶಿ ಸುನಿಲ್ ಬರ್ತವಾಲ್ ಹೇಳಿದ್ದಾರೆ. ಮುಖ್ಯವಾಗಿ ಎಲೆಕ್ಟ್ರಾನಿಕ್ಸ್, ಔಷಧಿಗಳು, ರಾಸಾಯನಿಕಗಳು ಮತ್ತು ಪೆಟ್ರೋಲಿಯಂ ಉತ್ಪನ್ನಗಳ ಕ್ಷೇತ್ರದ ಸರಕುಗಳ ರಫ್ತು ಹೆಚ್ಚಾಗಿವೆ.

ಈ ಬಗ್ಗೆ ಮಾತನಾಡಿದ ಫೆಡರೇಶನ್ ಆಫ್ ಇಂಡಿಯನ್ ಎಕ್ಸ್ ಪೋರ್ಟ್ ಆರ್ಗನೈಸೇಷನ್ಸ್ (ಎಫ್ಐಇಒ) ಅಧ್ಯಕ್ಷ ಅಶ್ವನಿ ಕುಮಾರ್, 2024-25ರ ಹೊಸ ಹಣಕಾಸು ವರ್ಷವು ಶೇಕಡಾ 1 ಕ್ಕಿಂತ ಹೆಚ್ಚು ಬೆಳವಣಿಗೆಯೊಂದಿಗೆ ಆರಂಭವಾಗಿರುವುದು ಇಂತಹ ಸವಾಲಿನ ಸಮಯದಲ್ಲೂ ಉತ್ತಮ ಸಂಕೇತವಾಗಿದೆ ಎಂದು ಹೇಳಿದರು.

ಯುಎಸ್ ಮತ್ತು ಚೀನಾ ನಡುವಿನ ತೆರಿಗೆ ಪೈಪೋಟಿಯು ಭಾರತದ ರಫ್ತು ಕ್ಷೇತ್ರಕ್ಕೆ ಒಂದು ಅವಕಾಶವಾಗಿ ಬರಬಹುದು ಎಂದು ಕುಮಾರ್ ತಿಳಿಸಿದರು.

ಐಸಿಆರ್​ಎ ಮುಖ್ಯ ಅರ್ಥಶಾಸ್ತ್ರಜ್ಞ ಅದಿತಿ ನಾಯರ್ ಮಾತನಾಡಿ, "ಒಟ್ಟಾರೆಯಾಗಿ ಏಪ್ರಿಲ್ 2023 ಮತ್ತು ಏಪ್ರಿಲ್ 2024 ರ ನಡುವೆ ಒಟ್ಟು ಸರಕು ವ್ಯಾಪಾರ ಕೊರತೆಯಲ್ಲಿ ಅರ್ಧದಷ್ಟು ಹೆಚ್ಚಳವು ಜಾಗತಿಕ ಬೆಲೆಗಳ ಏರಿಕೆಯ ಮಧ್ಯೆ ಚಿನ್ನದ ಆಮದು ಮೌಲ್ಯದ ಹೆಚ್ಚಳದಿಂದಾಗಿದೆ." ಎಂದರು. ಪ್ರಸ್ತುತ 2025 ರ ಹಣಕಾಸು ವರ್ಷದಲ್ಲಿ ಚಾಲ್ತಿ ಖಾತೆ ಕೊರತೆಯು ಜಿಡಿಪಿಯ ಶೇಕಡಾ 1.2 ರಷ್ಟಿದೆ.

ಇದನ್ನೂ ಓದಿ : ಬಿಎಂಡಬ್ಲ್ಯು ಹೊಸ ಶ್ಯಾಡೋ ಎಡಿಶನ್ ಸ್ಪೋರ್ಟ್ಸ್​​ ಕಾರು ಬಿಡುಗಡೆ: ವೈಶಿಷ್ಟ್ಯ, ಬೆಲೆ ಎಷ್ಟು ಗೊತ್ತೇ? - BMW Launches New Car

ETV Bharat Logo

Copyright © 2024 Ushodaya Enterprises Pvt. Ltd., All Rights Reserved.