ETV Bharat / state

ಪ್ರಜ್ವಲ್ ವಿಷನ್​ ಲೀಡರ್ ಅಂತಾ ಸಿದ್ದರಾಮಯ್ಯ ಹೇಳಿದ್ದರು, ಈಗ ವಿಷನ್​ ತೋರಿಸಿದ್ದಾರೆ: ಆರ್​ ಅಶೋಕ್​ - prajwal revanna case

author img

By ETV Bharat Karnataka Team

Published : May 5, 2024, 7:39 PM IST

ಕಾಂಗ್ರೆಸ್-ಜೆಡಿಎಸ್ ಹೊಂದಾಣಿಕೆಯಲ್ಲಿ ಪ್ರಜ್ವಲ್​ ಸಂಸದರಾಗಿದ್ದಾರೆ. ಹಾಗಾಗಿ ಸಿದ್ದರಾಮಯ್ಯ ಅವರೇ ಕ್ರಮ ತೆಗೆದುಕೊಳ್ಳಬೇಕು ಎಂದು ವಿಪಕ್ಷ ನಾಯಕ ಆರ್​. ಅಶೋಕ್​ ಆಗ್ರಹಿಸಿದ್ದಾರೆ.

ವಿಪಕ್ಷ ನಾಯಕ ಆರ್​. ಅಶೋಕ್
ವಿಪಕ್ಷ ನಾಯಕ ಆರ್​. ಅಶೋಕ್ (ETV Bharat)

ಬೆಂಗಳೂರು: ಕಳೆದ ಲೋಕಸಭಾ ಚುನಾವಣೆ ವೇಳೆ ಪ್ರಜ್ವಲ್ ರೇವಣ್ಣ ಯಂಗ್ ಲೀಡರ್ ಮತ್ತು ವಿಷನ್​ ಲೀಡರ್ ಅಂತಾ ಸಿದ್ದರಾಮಯ್ಯ ಅವರೇ ಹೇಳಿ ಪ್ರಚಾರ ಮಾಡಿದ್ದರು. ಅವರು ಹೇಳಿದಂತೆ ಪ್ರಜ್ವಲ್ ವಿಷನ್​ ತೋರಿಸಿದ್ದಾರೆ. ಕಾಂಗ್ರೆಸ್-ಜೆಡಿಎಸ್ ಹೊಂದಾಣಿಕೆಯಲ್ಲಿ ಅವರು ಸಂಸದರಾಗಿದ್ದಾರೆ. ಹಾಗಾಗಿ ಅವರೇ ಕ್ರಮ ತೆಗೆದುಕೊಳ್ಳಬೇಕು ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ್ ಕಾಂಗ್ರೆಸ್ ನಾಯಕರ ಆರೋಪಗಳಿಗೆ ತಿರುಗೇಟು ನೀಡಿದ್ದಾರೆ.

ಬಿಜೆಪಿ ಕಚೇರಿಯಲ್ಲಿ ಮಾಧ್ಯಮಗೋಷ್ಟಿಯಲ್ಲಿ ಮಾತನಾಡಿದ ಅವರು, ಕಡೂರು ಸಮಾವೇಶದಲ್ಲಿ ಸಿದ್ದರಾಮಯ್ಯ ಮತ್ತು ಪ್ರಜ್ವಲ್ ಒಟ್ಟಿಗೆ ಇರುವ ಫೋಟೋ ಬಿಡುಗಡೆ ಮಾಡಿದರು. 17/5/2019 ರಲ್ಲಿ ಸಿದ್ದರಾಮಯ್ಯ ಪ್ರಜ್ವಲ್ ಪರ ಪ್ರಚಾರ ಮಾಡಿದ್ದರು. ಯುವಕ, ಪ್ರತಿಭಾವಂತ ಪ್ರಜ್ವಲ್​ನ ಗೆಲ್ಲಿಸಿ ಅಂತ ಮತ ಕೇಳಿದ್ರು. ಕಾಂಗ್ರೆಸ್ ಜೆಡಿಎಸ್‌ಗೆ ಶಕ್ತಿ ನೀಡಿ ಅಂದಿದ್ದರು. ಪ್ರಜ್ವಲ್ ಪರ ಮತ ಕೇಳಿ ಪೋಸ್ಟ್ ಹಾಕಿದ್ದರು ಎಂದು ವಾಗ್ದಾಳಿ ನಡೆಸಿದರು.

Opposition leader R Ashok
ಪ್ರಜ್ವಲ್ ಪರ ಮತ ಕೇಳಿದ್ದ ಪೋಸ್ಟ್​ ಬಿಡುಗಡೆ (ETV bharat)

ಪ್ರಜ್ವಲ್​ಗೆ ಯಂಗ್ ಲೀಡರ್ ಮತ್ತು ವಿಷನ್​ ಲೀಡರ್ ಅಂದಿದ್ದ ಸಿದ್ದರಾಮಯ್ಯ ಈಗ ಮಾತಾಡಲಿ. ಅವರೇ ಗೆಲ್ಲಿಸಿದ ಸಂಸದ ಪ್ರಜ್ವಲ್. ಅವರು ಟಿಕೆಟ್ ಕೊಟ್ಟಿದ್ದು ಐದು ವರ್ಷದ ಅವಧಿಗೆ‌. ಈ ಚುನಾವಣೆಯಲ್ಲಿ ಪ್ರಜ್ವಲ್ ಗೆದ್ದರೆ ನಾವು ಅವರನ್ನು ಎನ್‌ಡಿಎ ಮೈತ್ರಿಕೂಟದಿಂದ ಅಮಾನತು ಮಾಡುತ್ತೇವೆ. ಆದರೆ ಪ್ರಜ್ವಲ್ ಘಟನೆ ನಡೆದಿದ್ದು ಯಾವಾಗ? ಅದನ್ನು ಸಿದ್ದರಾಮಯ್ಯ ಯೋಚನೆ ಮಾಡಬೇಕು. ಅವರದ್ದೂ ಆಗ ಸರ್ಕಾರ ಇತ್ತು, ಅವರೂ ಕ್ರಮ ತಗೋಬೇಕಿತ್ತು. ಎಸ್ಐಟಿ ನವರು ಪ್ರಜ್ವಲ್ ಘಟನೆ ಯಾವಾಗ ನಡೀತು ಅಂತ ಇನ್ನೂ ರಿಪೋರ್ಟ್ ಕೊಟ್ಟಿಲ್ಲ ಎಂದು ಹೇಳಿದರು.

ಜೆಡಿಎಸ್ ಜತೆ ಹೊಸದಾಗಿ ನಮ್ಮ ಮೈತ್ರಿ ಆಗಿದೆ. ಪ್ರಜ್ವಲ್​ಗೆ ಟಿಕೆಟ್ ಕೊಡಲಾಗಿದೆ, ಜೆಡಿಎಸ್ ಅವರನ್ನು ಸಸ್ಪೆಂಡ್ ಮಾಡಿದೆ. ಪ್ರಜ್ವಲ್ ಗೆದ್ದ ಮೇಲೆ ಜೆಡಿಎಸ್ ಸಂಸದ ಆಗ್ತಾರಾ?. ಎನ್‌ಡಿಎ ಸಂಸದ ಆಗ್ತಾರಾ ಅಂತ ಗೊಂದಲ ಇದೆ. ಇದರ ಬಗ್ಗೆ ವರಿಷ್ಠರಿಂದ ಸ್ಪಷ್ಟನೆ ಪಡೆಯುತ್ತೇವೆ. ಮೈತ್ರಿ ಮೇಲೆ ಪರಿಣಾಮ ವಿಚಾರ ಇಲ್ಲ, ಈಗಾಗಲೇ ಕುಮಾರಸ್ವಾಮಿ ಇದಕ್ಕೂ ಬಿಜೆಪಿಗೂ ಸಂಬಂಧ ಇಲ್ಲ ಅಂದಿದ್ದಾರೆ. ಹೀಗಾಗಿ ಪ್ರಜ್ವಲ್ ಕೇಸ್ ರೇವಣ್ಣ ಬಂಧನದಿಂದ ಬಿಜೆಪಿಗೆ ಮುಜುಗರ ಆಗಿದೆ ಎಂಬ ಪ್ರಶ್ನೆ ಉದ್ಭವ ಆಗಲ್ಲ ಎಂದರು.

Opposition leader R Ashok
ಫೋಟೋ ಬಿಡುಗಡೆ ಮಾಡಿದ ಆರ್​ ಅಶೋಕ್ (ETV bharat)

ನಿನ್ನೆ ಕುಮಾರಸ್ವಾಮಿ ಮತ್ತು ಅಮಿತ್ ಶಾ ಮಾತನಾಡಿದ್ದಾರೆ. ಏನು ಮಾತಾಡಿದ್ದಾರೋ ಗೊತ್ತಿಲ್ಲ, ಕೇಂದ್ರದ ಮಟ್ಟದಲ್ಲಿ ಮೈತ್ರಿ ಆಗಿದೆ. ಮೈತ್ರಿ ಮುಂದುವರೆಸುವ ಬಗ್ಗೆ ವರಿಷ್ಠರೇ ತೀರ್ಮಾನ ಮಾಡ್ತಾರೆ. ಪದವೀಧರ, ಶಿಕ್ಷಕರ ಕ್ಷೇತ್ರಗಳ ಚುನಾವಣೆಯಲ್ಲಿ ಮೈತ್ರಿ ಮಾಡಿಕೊಳ್ಳುವ ಬಗ್ಗೆ ಕೇಂದ್ರದ ನಾಯಕರ ಜತೆ ಚರ್ಚೆ ಮಾಡುತ್ತೇವೆ. ಚರ್ಚೆಯ ನಂತರ ಗೊತ್ತಾಗುತ್ತದೆ ಎಂದು ಹೇಳಿದರು.

ಪ್ರಜ್ವಲ್​ಗೆ ಡಿಪ್ಲೊಮ್ಯಾಟಿಕ್ ಪಾಸ್‌ಪೋರ್ಟ್ ಮೋದಿಯವ್ರು ಕೊಟ್ಟಿಲ್ಲ. ಸಹಜವಾಗಿ ಅದು ಅವರಿಗೆ ಸಿಗುತ್ತದೆ. ಪ್ರಜ್ವಲ್ ಪ್ರಕರಣ 15 ದಿನಗಳ ಮೊದಲೇ ಬಂದಿತ್ತು, ಏರ್‌ಪೋರ್ಟ್‌‌ ಅಥಾರಿಟಿಗೆ ಕರ್ನಾಟಕದ ಪೊಲೀಸರು, ಗುಪ್ತಚರದವ್ರು ಪತ್ರ ಬರೆದಿದ್ರಾ?. ಗುಪ್ತಚರ ವಿಭಾಗ ಸತ್ತು ಹೋಗಿತ್ತಾ?. ಹೋಗೋಕ್ಕೆ ಮುಂಚೆ ಪತ್ರ ಬರೆದಿದ್ರೆ ಪ್ರಜ್ವಲ್​ನ ತಡೆಯುತ್ತಿದ್ರು. ಈಗ ಪಾತಾಳದಲ್ಲಿದ್ರೂ ಪ್ರಜ್ವಲ್​ನ ಹಿಡಿದುಕೊಂಡು ಬರ್ತೀವಿ ಅಂತಿದಾರೆ. ಪ್ರಜ್ವಲ್ ಭೂಮಿಯಲ್ಲಿ ಇರುವಾಗಲೇ ಬಂಧಿಸದೇ ಬಿಟ್ಟಿದ್ದೇಕೆ? ಎಂದು ಪ್ರಶ್ನಿಸಿದರು. ಹೆಚ್‌ಡಿ ರೇವಣ್ಣ ಬಂಧನದ ಕುರಿತು ಪ್ರತಿಕ್ರಿಯಿಸಿ, ರೇವಣ್ಣ ಅವರನ್ನು ಬಂಧನ ಮಾಡಿದ ಪೊಲೀಸರ ಕಾರ್ಯ ಶ್ಲಾಘಿಸುತ್ತೇನೆ. ಪೊಲೀಸರು ರೇವಣ್ಣ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದರು.

ರೈತರ ಸಂಕಷ್ಟಕ್ಕೆ ಸ್ಪಂದಿಸದ ಕಾಂಗ್ರೆಸ್: ಬರಗಾಲದ ಪರಿಹಾರದ ವಿಚಾರದಲ್ಲಿ ಕರ್ನಾಟಕದ ಕಾಂಗ್ರೆಸ್ ಸರ್ಕಾರ ಇನ್ನೂ ಕುಂಭಕರ್ಣ ನಿದ್ರೆಯಲ್ಲಿದೆ. ತಕ್ಷಣವೇ ಜಿಲ್ಲಾ ಉಸ್ತುವಾರಿ ಸಚಿವರ ನೇತೃತ್ವದಲ್ಲಿ ಟಾಸ್ಕ್ ಫೋರ್ಸ್ ರಚಿಸಬೇಕು. ಶಾಸಕರ ನೇತೃತ್ವದ ಟಾಸ್ಕ್ ಫೋರ್ಸ್ ಕೂಡಲೇ ಕಾರ್ಯಪ್ರವೃತ್ತ ಆಗುವಂತೆ ಆದೇಶ ಹೊರಡಿಸಬೇಕು ಎಂದು ಅಶೋಕ್ ಆಗ್ರಹಿಸಿದರು.

ಕಳೆದ ಮುಂಗಾರು, ಹಿಂಗಾರು ಮಳೆ ಕೈಕೊಟ್ಟಿತ್ತು. ಇಂಥ ಸಂದರ್ಭದಲ್ಲಿ ಉರಿಯುವ ಮನೆಯಲ್ಲಿ ಗಳ ಹಿಡಿಯುವ ಕೆಲಸವನ್ನು ಸಿದ್ದರಾಮಯ್ಯನವರು ಮಾಡುತ್ತಿದ್ದಾರೆ. ಇವರ ಯೋಗ್ಯತೆಗೆ ಇದುವರೆಗೆ ಒಂದು ನಯಾಪೈಸೆಯನ್ನೂ ಬಿಡುಗಡೆ ಮಾಡಿಲ್ಲ. ಬರಪೀಡಿತ ಪ್ರದೇಶ ಘೋಷಣೆಯನ್ನೂ ವಿಳಂಬ ಮಾಡುತ್ತ ಹೋಗಿದ್ದರು. ಮೂರೂವರೆ ತಿಂಗಳ ಬಳಿಕ ಬರ ಪರಿಹಾರ ಘೋಷಿಸಿದ್ದಾರೆ ಎಂದು ದೂರಿದರು.

ಈಗ ಕೇಂದ್ರ ಸರ್ಕಾರ ಹಣ ಬಿಡುಗಡೆ ಮಾಡಿದರೂ ಕೂಡ ರೈತರಿಗೆ ಕೊಟ್ಟಿಲ್ಲ. ಖಜಾನೆ ಬರಿದಾಗಿದೆ. ಈ ಹಣವನ್ನು ಗ್ಯಾರಂಟಿಗೆ ಬಳಸಿಕೊಳ್ಳುವಂತಿದೆ. 2 ಸಾವಿರವನ್ನು 2-3 ತಿಂಗಳಿನಿಂದ ಕೊಟ್ಟಿಲ್ಲ. ಒಂದೇ ಸಾರಿ ಬಿಡುಗಡೆ ಮಾಡಿ ರಾಜಕಾರಣ ಮಾಡುವ ದೃಷ್ಟಿಯಿಂದ ಈ ಹಣವನ್ನು ಉಪಯೋಗಿಸುವ ಅನಿವಾರ್ಯತೆ ಕಾಂಗ್ರೆಸ್ಸಿಗೆ ಇದೆ. ಇವರೊಂಥrರಾ ಬಂಡವಾಳ ಇಲ್ಲದ ಬಡಾಯಿಗಳು ಎಂದು ಟೀಕಿಸಿದರು.

ರಾಜ್ಯದಲ್ಲಿ ಸಾಲ ಮಾಡಿ ಬೆಳೆ ಕೈಸೇರದೆ 900ಕ್ಕೂ ಹೆಚ್ಚು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆದರೆ, ಸರ್ಕಾರ ತನ್ನ ಪರಿಹಾರ ನೀಡುವ ಜವಾಬ್ದಾರಿಯನ್ನು ನಿಭಾಯಿಸಿಲ್ಲ. ಕೇಂದ್ರದ ಹಣವನ್ನು ಸದ್ಬಳಕೆ ಮಾಡುವಂತೆ ಒತ್ತಾಯಿಸಿ ನಾನು ಇವತ್ತೇ ಸಿದ್ದರಾಮಯ್ಯನವರಿಗೆ ಒಂದು ಪತ್ರ ಬರೆಯುತ್ತೇನೆ ಎಂದು ಅವರು ಹೇಳಿದರು.

ಇದನ್ನೂ ಓದಿ: ಇದು ಸತ್ಯ-ಸುಳ್ಳಿನ‌ ನಡುವೆ ನಡೆಯುವ ಚುನಾವಣೆ : ಸಿಎಂ ಸಿದ್ದರಾಮಯ್ಯ - CM Siddaramaiah

ETV Bharat Logo

Copyright © 2024 Ushodaya Enterprises Pvt. Ltd., All Rights Reserved.