ETV Bharat / sports

ವಿಶ್ವಕಪ್​ ಟಿ20 ತಂಡದ ಉಪನಾಯಕನ ಆಫರ್​ ತಿರಸ್ಕರಿಸಿದ ಪಾಕಿಸ್ತಾನದ ವೇಗಿ ಶಾಹೀನ್​ ಅಫ್ರಿದಿ! - Shaheen Afridi

author img

By ETV Bharat Karnataka Team

Published : May 25, 2024, 8:09 PM IST

ಪಾಕಿಸ್ಥಾನದ ಎಡಗೈ ವೇಗಿ ಶಾಹೀನ್​ ಅಫ್ರಿದಿ ಟಿ20 ವಿಶ್ವಕಪ್​ ತಂಡದ ಉಪನಾಯಕನ ಆಫರ್​ ಅನ್ನು ತಿರಸ್ಕರಿಸಿದ್ದಾರೆ.

ಶಾಹೀನ್​ ಆಫ್ರಿದಿ
ಶಾಹೀನ್​ ಆಫ್ರಿದಿ (ETV Bharat)

ಹೈದರಾಬಾದ್​: ಪಾಕಿಸ್ತಾನ ಕ್ರಿಕೆಟ್​ ತಂಡದ ವೇಗದ ಬೌಲರ್ ಶಾಹೀನ್​ ಅಫ್ರಿದಿ ಟಿ20 ವಿಶ್ವಕಪ್​ ತಂಡದ ಉಪನಾಯಕನ ಆಫರ್​ ಅನ್ನು ತಿರಸ್ಕರಿಸಿದ್ದಾರೆ ಎಂದು ವರದಿಯಾಗಿದೆ. ​​

ವೆಸ್ಟ್ ಇಂಡೀಸ್ ಮತ್ತು ಅಮೆರಿಕ ಜಂಟಿಯಾಗಿ ಆತಿಥ್ಯ ವಹಿಸಲಿರುವ ಟಿ20 ವಿಶ್ವಕಪ್‌ಗೆ ಈಗಾಗಲೇ ಎಲ್ಲಾ ತಂಡಗಳನ್ನು ಪ್ರಕಟಿಸಲಾಗಿದ್ದು, ಪಾಕಿಸ್ತಾನ ಅಂತಿಮವಾಗಿ ಕೊನೆಯ ದಿನವಾದ ನಿನ್ನೆ (ಮೇ.24) ತನ್ನ 15 ಸದಸ್ಯರ ತಂಡವನ್ನು ಪ್ರಕಟಿಸಿದೆ.

ಪಾಕಿಸ್ತಾನದ ಅನುಭವಿ ಆಟಗಾರ ಬಾಬರ್ ಅಜಮ್​ಗೆ ತಂಡದ ನಾಯಕತ್ವದ ಜವಾಬ್ದಾರಿ ನೀಡಲಾಗಿದ್ದರೇ, ಉಪನಾಯಕನಾಗಲು ಶಾಹೀನ್​ ಅಫ್ರಿದಿ ಅವರನ್ನು ಪಾಕ್​ ಆಯ್ಕೆ ಸಮಿತಿ ಕೇಳಿತ್ತು. ಆದರೇ ಈ ಆಫರ್​ ಅನ್ನು ಶಾಹೀನ್​ ತಿರಸ್ಕರಿಸಿದ್ದಾರೆ ಎಂದು ಇಎಸ್​ಪಿಎನ್​ ಕ್ರಿಕ್​ಇನ್ಫೋ ವರದಿ ಮಾಡಿದೆ.​ ಹಾಗಾಗಿ ಈ ಬಾರಿ ಪಾಕಿಸ್ತಾನ ಉಪನಾಯಕನಿಲ್ಲದೇ ಪಂದ್ಯಗಳನ್ನು ​ಆಡಲಿದೆ.

ಇಎಸ್​ಪಿಎನ್​ ಕ್ರಿಕ್​​ಇನ್ಫೋ ವರದಿ ಪ್ರಕಾರ, ಪಾಕಿಸ್ತಾನ ಕ್ರಿಕಿಟ್​ ಬೋರ್ಡ್​ ಆಯ್ಕೆ ಸಮಿತಿ, ಪಾಕ್​ನ ಮಾಜಿ ನಾಯಕ ಹಾಗೂ ಎಡಗೈ ವೇಗಿ ಶಾಹೀನ್​ ಅಫ್ರಿದಿ ಅವರಿಗೆ 2024ರ ವಿಶ್ವಕಪ್​ ಟಿ20 ತಂಡದ ಉಪನಾಯಕನ ಜವಾಬ್ದಾರಿ ವಹಿಸಿಲು ಮುಂದಾಗಿತ್ತು. ಆದರೆ ಮಂಡಳಿಯ ಪ್ರಸ್ತಾಪವನ್ನು ಶಾಹೀನ್​​ ನಿರಾಕರಿಸಿದ್ದಾರೆ. ಹಾಗಾಗಿ ಉಪನಾಯಕನ ಹೆಸರಿಸದೇ 15 ಜನರ ತಂಡವನ್ನು ಪ್ರಕಟಿಸಲಾಗಿದೆ.

ಕಳೆದ ತಿಂಗಳು ನಾಯಕತ್ವದ ಸ್ಥಾನದಿಂದ ಶಾಹೀನ್​ ಅವರನ್ನು ಕೆಳಗಿಳಿಸಿ ಮತ್ತೇ ಬಾಬರ್​ ಅವರನ್ನು ಮರು ನೇಮಕ ಮಾಡಲಾಗಿತ್ತು. ಹೀಗಾಗಿ ಶಾಹೀನ್​ ಆಫರ್​ ನಿರಾಕರಿಸಲು ಕಾರಣವಾಗಿರುಬಹುದು ಎಂದು ಹೇಳಲಾಗುತ್ತಿದೆ. ಅದಾಗ್ಯೂ ಉಪನಾಯಕತ್ವ ಸ್ಥಾನಕ್ಕೆ ಆಲ್‌ರೌಂಡರ್ ಶಾದಾಬ್ ಖಾನ್ ಮತ್ತು ಅನುಭವಿ ವಿಕೆಟ್‌ ಕೀಪರ್ ಮೊಹಮ್ಮದ್ ರಿಜ್ವಾನ್ ಹೆಸರುಗಳು ಕೇಳಿ ಬಂದಿದ್ದವು.

2023ರ ICC ಏಕದಿನ ವಿಶ್ವಕಪ್‌ನಲ್ಲಿ ರಾಷ್ಟ್ರೀಯ ತಂಡದ ನಿರಾಶಾದಾಯಕ ಪ್ರದರ್ಶನದ ನಂತರ ಬಾಬರ್ ಅಜಮ್​ ಅವರನ್ನು ನಾಯಕತ್ವದಿಂದ ಕೆಳಗಿಳಿಸಿ ಅವರ ಸ್ಥಾನಕ್ಕೆ ವೇಗಿ ಶಾಹೀನ್ ಅವರನ್ನು ನೇಮಿಸಲಾಗಿತ್ತು. ನಂತರ ಶಾಹೀನ್​ ನಾಯಕತ್ವದಲ್ಲಿ ನ್ಯೂಜಿಲೆಂಡ್ ವಿರುದ್ಧದ ಸರಣಿ ಸೋಲು ಮತ್ತು ಪಾಕಿಸ್ತಾನ ಸೂಪರ್ ಲೀಗ್‌ನಲ್ಲಿ ಶಾಹೀನ್‌ ಅವರ ಕಳಪೆ ಬೌಲಿಂಗ್​ ನಿಂದ ಲಾಹೋರ್ ತಂಡವು ನಾಯಕತ್ವದಿಂದ ಕೆಳಗಿಳಿಸಿತ್ತು. ಇದನ್ನು ಕಂಡ ಪಿಸಿಬಿ ಬಾಬರ್ ಅವರನ್ನು ನಾಯಕನಾಗಿ ಮರು ನೇಮಕ ಮಾಡಿದೆ.

ಪಂದ್ಯಗಳು: ಪಾಕಿಸ್ತಾನವು ಜೂನ್ 6 ರಂದು ತನ್ನ ಮೊದಲ ಟಿ20 ವಿಶ್ವಕಪ್​ ಪಂದ್ಯವನ್ನು ಆತಿಥೇಯ ಅಮೆರಿಕದ ವಿರುದ್ಧ ಆಡಲಿದೆ. ಇದರ ನಂತರ, ಜೂನ್ 9 ರಂದು ಭಾರತವನ್ನು ಎದುರಿಸಲಿದೆ, ಬಳಿಕ ಜೂನ್ 11 ಮತ್ತು 16 ರಂದು ಕೆನಡಾ ಮತ್ತು ಐರ್ಲೆಂಡ್ ವಿರುದ್ಧ ಸೆಣಸಲಿದೆ.

ಪಾಕಿಸ್ತಾನ ​ತಂಡ: ಬಾಬರ್ ಅಜಮ್ (ನಾಯಕ), ಅಜಮ್ ಖಾನ್, ಅಬ್ರಾರ್ ಅಹ್ಮದ್, ಹ್ಯಾರಿಸ್ ರೌಫ್, ಫಖರ್ ಜಮಾನ್, ಇಮಾದ್ ವಾಸಿಮ್, ಇಫ್ತಿಕರ್ ಅಹ್ಮದ್, ಮೊಹಮ್ಮದ್ ಅಮೀರ್, ಮೊಹಮ್ಮದ್ ರಿಜ್ವಾನ್, ಮೊಹಮ್ಮದ್ ಅಬ್ಬಾಸ್ ಅಫ್ರಿದಿ, ಶಾದಾಬ್ ಖಾನ್, ಸೈಮ್ ಅಯೂಬ್, ಶಾಹೀನ್ ಅಫ್ರಿದಿ, ನಸೀಮ್ ಶಾ, ಉಸ್ಮಾನ್ ಖಾನ್.

ಇದನ್ನೂ ಓದಿ: ಟಿ20 ವಿಶ್ವಕಪ್ ಟೂರ್ನಿಗಾಗಿ 15 ಸದಸ್ಯರ ತಂಡ ಪ್ರಕಟಿಸಿದ ಪಾಕಿಸ್ತಾನ: ಬಾಬರ್ ಅಜಮ್ ನಾಯಕ - Pakistan Team

ETV Bharat Logo

Copyright © 2024 Ushodaya Enterprises Pvt. Ltd., All Rights Reserved.