ETV Bharat / state

ಈಟಿವಿ ಭಾರತ ಸಂದರ್ಶನ: ನನ್ನ ತಾಯಿಯೇ ನನಗೆ ಸ್ಟಾರ್ ಪ್ರಚಾರಕಿ ಎಂದ ಮೃಣಾಲ್ ಹೆಬ್ಬಾಳ್ಕರ್ - MRINAL HEBBALKAR

author img

By ETV Bharat Karnataka Team

Published : Apr 22, 2024, 12:22 PM IST

Updated : Apr 22, 2024, 1:13 PM IST

ನನಗೆ ನನ್ನ ತಾಯಿಯೇ ಸ್ಟಾರ್ ಪ್ರಚಾರಕಿ: ಮೃಣಾಲ್ ಹೆಬ್ಬಾಳ್ಕರ್
ನನಗೆ ನನ್ನ ತಾಯಿಯೇ ಸ್ಟಾರ್ ಪ್ರಚಾರಕಿ: ಮೃಣಾಲ್ ಹೆಬ್ಬಾಳ್ಕರ್

BELAGAVI CONGRESS CANDIDATE MRINAL HEBBALKAR: ಈಟಿವಿ ಭಾರತದೊಂದಿಗಿನ ಸಂದರ್ಶನದಲ್ಲಿ ಮೃಣಾಲ್​ ಹೆಬ್ಬಾಳ್ಕರ್​ ಲೋಕಸಭೆ ಚುನಾವಣೆಗೆ ಸಂಬಂಧಿಸಿದಂತೆ ಕೆಲ ವಿಚಾರಗಳನ್ನು ಹಂಚಿಕೊಂಡಿದ್ದಾರೆ. ​ಸಂದರ್ಶನದ ಆಯ್ದ ಭಾಗ ಇಲ್ಲಿದೆ..

ಮೃಣಾಲ್ ಹೆಬ್ಬಾಳ್ಕರ್ ಸಂದರ್ಶನ ​

ಬೆಳಗಾವಿ: ಇಂಥ ತಾಯಿ ನನಗೆ ಸಿಕ್ಕಿದ್ದಕ್ಕೆ ದೇವರಿಗೆ ನಾನು ಎಷ್ಟು ಬಾರಿ ಕೈ ಮುಗಿದರೂ ಕೂಡ ಕಡಿಮೆ. ಪ್ರತಿಯೊಬ್ಬರು ಚುನಾವಣೆಯಲ್ಲಿ ಸ್ಟಾರ್ ಪ್ರಚಾರಕರನ್ನು ಕರೆಸುತ್ತಾರೆ. ಆದರೆ, ನನಗೆ ನನ್ನ ತಾಯಿಯೇ ಸ್ಟಾರ್ ಪ್ರಚಾರಕಿ. ನನ್ನ‌ ಪಾಲಿನ ದೇವರು ಮತ್ತು ನನ್ನ ಹಿಂದಿರುವ ದೊಡ್ಡ ಶಕ್ತಿ. ತಾಯಿಯವರು ಮಾಡಿರುವಂತಹ ಒಳ್ಳೆಯ ಕೆಲಸವನ್ನೇ ಮಾಡುತ್ತೇನೆ. ಅವರ ಮಾರ್ಗದರ್ಶನದಲ್ಲಿ ಮುನ್ನಡೆಯುತ್ತೇನೆ ಎಂದು ಬೆಳಗಾವಿ ಲೋಕಸಭೆ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಮೃಣಾಲ್ ಹೆಬ್ಬಾಳ್ಕರ್ ಹೇಳಿದರು.

ಈಟಿವಿ ಭಾರತ ಪ್ರತಿನಿಧಿ ನಡೆಸಿದ ಸಂದರ್ಶನದಲ್ಲಿ ಮಾತನಾಡಿದ ಅವರು, ಜನ ಈ ಬಾರಿ ಬದಲಾವಣೆ ಬಯಸಿದ್ದಾರೆ. ಬೆಳಗಾವಿ ಮಣ್ಣಿನಲ್ಲಿ ಹುಟ್ಟಿದ ಯುವಕ ಚುನಾವಣೆಗೆ ನಿಂತಿದ್ದಾನೆ. ಪ್ರತಿಸ್ಪರ್ಧಿ ಯಾರಿದ್ದಾರೆ ಅಂತಾ ಜನರಿಗೆ ಗೊತ್ತಿದ್ದು, ಮನೆ ಮಗನನ್ನು ಕೈ ಹಿಡಿಯುತ್ತಾರೆ ಎಂಬ ವಿಶ್ವಾಸವಿದೆ ಎಂದು ಹೇಳಿದರು.

ತಾಯಿ ಕುರಿತ ಟೀಕೆಗೆ ಮೃಣಾಲ್​ ಬೇಸರ; ತಾಯಿ ಲಕ್ಷ್ಮೀ ಹೆಬ್ಬಾಳ್ಕರ್​ ಬಗ್ಗೆ ಕೆಲವರು ಮಾಡುತ್ತಿರುವ ಕೀಳು ಮಟ್ಟದ ಟೀಕೆಗಳಿಗೆ ಉತ್ತರಿಸಿದ ಮೃಣಾಲ್, ಒಬ್ಬ ಮಗನಾಗಿ ಯೋಚನೆ ಮಾಡಿದರೆ ಕೆಲವೊಂದು ಬಾರಿ ಬಹಳಷ್ಟು ಬೇಸರವಾಗುತ್ತದೆ. ಯಾಕೆಂದರೆ ಭೂಮಿ ಮೇಲಿನ ಪ್ರತಿಯೊಬ್ಬರಿಗೂ ಅವರ ತಾಯಿ ಬಗ್ಗೆ ಯಾರಾದ್ರೂ ಕೆಟ್ಟದಾಗಿ ಮಾತನಾಡಿದರೆ ಸಹಜವಾಗಿ ಬೇಜಾರಾಗುತ್ತದೆ. ಈ ಟೀಕೆ-ಟಿಪ್ಪಣಿಗಳನ್ನು ಬಹಳ ವರ್ಷಗಳಿಂದ ಕೇಳಿದ್ದೇನೆ. ಆದರೆ, ಮೊನ್ನೆ ಓರ್ವ ಮಾಜಿ ಶಾಸಕರು ತಾಯಿ ಬಗ್ಗೆ ಬಹಳ ಕೀಳು ಮಟ್ಟದಿಂದ ಮಾತನಾಡಿದಾಗ, ಅನೇಕ ಹಿರಿಯ ಮುಖಂಡರು ವೇದಿಕೆ ಮೇಲಿದ್ದರು.

ಅಲ್ಲದೇ ಮಾಜಿ ಸಿಎಂ ಜಗದೀಶ್​ ಶೆಟ್ಟರ್ ಅವರು ಆಗ ಚಪ್ಪಾಳೆ ತಟ್ಟಿ, ನಕ್ಕಿದ್ದು ನೋಡಿದರೆ ಇದೇ ಅವರ ಹಿಡನ್ ಅಜೆಂಡಾ ಎಂಬ ಅನುಮಾನ ನನಗೆ ಮೂಡಿದೆ ಎಂದು ಬೇಸರ ವ್ಯಕ್ತಪಡಿಸಿದರು. ಯಾರೇ ಆಗಲಿ ಮಹಿಳೆಯರ ಬಗ್ಗೆ ಟೀಕಿಸಬಾರದು. ಬಿಜೆಪಿಯವರು ಬೇಟಿ ಬಚಾವ್, ಬೇಟಿ ಪಡಾವೊ ಎಂದು ಹೇಳುತ್ತೀರಿ. ಭಾರತೀಯ ನಾರಿ ನಮ್ಮ ಸಂಸ್ಕೃತಿ ಎನ್ನುತ್ತೀರಿ. ನೀವು ಟೀಕಿಸುವ ಪದಗಳು ನಮ್ಮ ಸಂಸ್ಕೃತಿಯಲ್ಲಿ ಬರೋದಿಲ್ಲ. ಹಾಗಾಗಿ, ರಾಜಕಾರಣದಲ್ಲಿ ಯಾವುದೇ ಮಹಿಳೆಯರಿಗೂ ಈ ರೀತಿ ಪದಗಳನ್ನು ಬಳಸಬಾರದು ಎಂದರು.

ಮೃಣಾಲ್ ಹೆಬ್ಬಾಳ್ಕರ್ ಸಂದರ್ಶನ ​

ಶೆಟ್ಟರ್​ ಆಧಾರ್​ ಕಾರ್ಡ್​ ವಿಳಾಸ ಪ್ರಶ್ನಿಸಿದ ಮೃಣಾಲ್​; ಜಗದೀಶ್​ ಶೆಟ್ಟರ್ ಹೊರಗಿನವರು ಅನ್ನೋದನ್ನು ಜನ ಮರೆತಿದ್ದಾರೆ ಎಂಬ ಬಿಜೆಪಿ ನಾಯಕರ ಹೇಳಿಕೆಗೆ ಪ್ರತಿಕ್ರಿಯಿಸಿದ ಮೃಣಾಲ್, ಶೆಟ್ಟರ್ ಹೊರಗಿನವರು ಅಂತಾ ಹೇಳಿದ್ದೇ ಬಿಜೆಪಿಯವರು. ಗೋಬ್ಯಾಕ್ ಶೆಟ್ಟರ್ ಅಭಿಯಾನ ಶುರು ಮಾಡಿದ್ದು ಇವರೇ ಅಲ್ಲವಾ? ಹಾಗಾಗಿ, ಇದನ್ನು ಅರಗಿಸಿಕೊಳ್ಳಲು ಅವರಿಗೆ ಆಗುತ್ತಿಲ್ಲ. ಹೇಗಾದರೂ ಸಮರ್ಥಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ. ಆದ್ದರಿಂದ ನಾನು ಅವರಿಗೆ ಕೇಳುತ್ತೇನೆ, ಶೆಟ್ಟರ್ ಅವರ ಆಧಾರ್ ಕಾರ್ಡ್ ಬೆಳಗಾವಿಯಲ್ಲಿ ಇದೆಯಾ? ಜನ ಬಹಳ ಹುಷಾರಾಗಿದ್ದಾರೆ. ಸ್ಥಳೀಯವಾಗಿ ಕೆಲಸ ಮಾಡುವ ವ್ಯಕ್ತಿಗೆ ಮತ ಹಾಕುತ್ತಾರೆ ಎನ್ನುವ ವಿಶ್ವಾಸ ನನಗಿದೆ ಎಂದು ಹೇಳಿದರು.

ರಾಜ್ಯ ಸರ್ಕಾರದ ಎಲ್ಲ ಯೋಜನೆಗಳನ್ನು ಪ್ರತಿ ತಾಲೂಕಿಗೆ ಮುಟ್ಟಿಸಬೇಕಿದೆ. ಕೇಂದ್ರ ಸರ್ಕಾರದ ಬಹಳಷ್ಟು ಯೋಜನೆಗಳ ಬಗ್ಗೆ ಜನರಿಗೆ ಗೊತ್ತೇ ಇಲ್ಲ. ಮೊನ್ನೆ ರಾಮದುರ್ಗ, ಸವದತ್ತಿ ಕಡೆ ಹೋದಾಗ ಜನರು ಈ ರೀತಿಯೂ ಬದುಕುತ್ತಿದ್ದಾರಾ ಎಂಬುದನ್ನು ಕಣ್ಣಾರೆ ಕಂಡಿದ್ದೇನೆ. ಬಿಜೆಪಿಯವರು ಭಾರತ ಒಳ್ಳೆಯ ರೀತಿಯಲ್ಲಿ ಅಭಿವೃದ್ಧಿ ಸಾಧಿಸುತ್ತಿದೆ ಎನ್ನುವ ರೀತಿ ಭಾಷಣ ಮಾಡುತ್ತಾರೆ. ಆದರೆ, ವಾಸ್ತವ ಸ್ಥಿತಿಯೇ ಬೇರೆ ಇದೆ. ಜನರ ತಲಾ ಆದಾಯ ಹೆಚ್ಚಿಸುತ್ತೇವೆ, ರೂಪಾಯಿ ಮೌಲ್ಯ ಸುಧಾರಿಸುತ್ತೇವೆ, ಪ್ರತಿ ಮನೆಗೆ ಶೌಚಾಲಯ ನಿರ್ಮಿಸುತ್ತೇವೆ ಎಂದಿದ್ದರು. ಆದರೆ, ಇವುಗಳನ್ನು ಈಡೇರಿಸಿದ್ದಾರಾ..? ಆಯುಷ್ಮಾನ್ ಕಾರ್ಡ್​ನಲ್ಲಿ ಕೋವಿಡ್ ಚಿಕಿತ್ಸೆ ಯಾಕೆ ಸಿಗಲಿಲ್ಲ. ಹಾಗಾಗಿ, ಬಿಜೆಪಿಯ ಬಹಳಷ್ಟು ವೈಫಲ್ಯಗಳನ್ನು ತೆಗೆದುಕೊಂಡು ಜನರ ಬಳಿಗೆ ಹೋಗುತ್ತಿದ್ದೇನೆ ಎಂದು ಮೃಣಾಲ್ ತಿಳಿಸಿದರು.

ಟಿಕೆಟ್​ ಹಂಚಿಕೆಗೆ ಸಮರ್ಥನೆ; ಸಚಿವರ ಮಕ್ಕಳಿಗೆ ಟಿಕೆಟ್ ಕೊಟ್ಟಿದ್ದನ್ನು ಹೇಗೆ ಸಮರ್ಥಿಸಿಕೊಳ್ಳುತ್ತೀರಿ ಎಂಬ ಪ್ರಶ್ನೆಗೆ, ಕಾಂಗ್ರೆಸ್ ಪಕ್ಷದಲ್ಲಿ ಟಿಕೆಟ್ ಕೊಡಲು ಒಂದು ಪ್ರಕ್ರಿಯೆ ಇದೆ. ಬೂತ್ ಮತ್ತು ಬ್ಲಾಕ್ ಅಧ್ಯಕ್ಷರು, ಪರಾಜಿತ ಅಭ್ಯರ್ಥಿ, ಶಾಸಕರಿಂದ ಹಿಡಿದು ಹೈಕಮಾಂಡ್​ ವರೆಗೂ ಪ್ರತಿಯೊಬ್ಬರೂ ನಮ್ಮ ಹೆಸರು ಶಿಫಾರಸ್ಸು ಮಾಡಬೇಕು. ಅಂದಾಗ ಮಾತ್ರ ಟಿಕೆಟ್ ಸಿಗುತ್ತದೆ. ಹಾಗಾಗಿ, ಈ ಎಲ್ಲ ಪ್ರಕ್ರಿಯೆ, ಸಭೆಗಳ ಬಳಿಕ ಎಲ್ಲರ ಒಮ್ಮತದ ಮೇರೆಗೆ ನನಗೆ ಟಿಕೆಟ್ ಕೊಟ್ಟಿದ್ದಾರೆ.

ವಿರೋಧಿಗಳು ತಮ್ಮ ಪಕ್ಷದಲ್ಲಿ ಕುಟುಂಬ ರಾಜಕಾರಣ ಇದೆಯೋ ಇಲ್ಲವೋ ಎಂಬುದನ್ನು ನೋಡಬೇಕು. ತಮ್ಮ ಪಕ್ಷದ ರಾಜ್ಯಾಧ್ಯಕ್ಷರು ಯಾರಿದ್ದಾರೆ? ಕೇಂದ್ರ ಸಚಿವರ ಅನೇಕ ಮಕ್ಕಳು ಲೋಕಸಭೆ ಚುನಾವಣೆಗೆ ಸ್ಪರ್ಧಿಸುತ್ತಿದ್ದಾರೆ. ಬೇರೆಯವರ ಬಗ್ಗೆ ಆರೋಪಿಸುವ ಮೊದಲು ತಮ್ಮ‌ ಮನೆಯಲ್ಲಿ ಹೇಗಿದೆ ಎನ್ನುವುದನ್ನು ತಿಳಿದುಕೊಳ್ಳಲಿ ಎಂದು ಟಿಕೆಟ್​ ವಿಚಾರವನ್ನು ಮೃಣಾಲ್​ ಸಮರ್ಥಿಸಿಕೊಂಡರು.

ಮನೆ ಮಗನ ಕೈ ಹಿಡಿಯುತ್ತಾರೆ ಎಂಬ ವಿಶ್ವಾಸ; ಮಾಜಿ ಮುಖ್ಯಮಂತ್ರಿಗಳ ವಿರುದ್ಧ ಸ್ಪರ್ಧಿಸಿದ್ದೀರಿ ಏನಾದರೂ ಅಳುಕಿದೆಯಾ..? ಎಂಬ ಪ್ರಶ್ನೆಗೆ, ಹೆಚ್ಚಿನ ಸಂಖ್ಯೆಯಲ್ಲಿ ಯುವಕರು ರಾಜಕಾರಣಕ್ಕೆ ಬರಬೇಕು. ವಯಸ್ಸಾದವರು ನಿವೃತ್ತಿ ತೆಗೆದುಕೊಳ್ಳಬೇಕು ಅಂತಾ ಜನ ಚರ್ಚೆ ಮಾಡುತ್ತಾರೆ. ಇಂಥ ಸಂದರ್ಭದಲ್ಲಿ ಹುಬ್ಬಳ್ಳಿ-ಧಾರವಾಡ ಸ್ವಕ್ಷೇತ್ರ ಬಿಟ್ಟು, ಇಷ್ಟು ದಿನ ನಮ್ಮ ಜಿಲ್ಲೆಗೆ ಮಾಡಬಾರದ ಅನ್ಯಾಯ ಮಾಡಿ‌ ಈಗ ಬೆಳಗಾವಿ ನನ್ನ ಕರ್ಮಭೂಮಿ ಎಂದು ಹೇಳಿಕೊಂಡು, ಇಲ್ಲಿರುವ ಸಮರ್ಥ ಆಕಾಂಕ್ಷಿಗಳಿಗೆ ಟಿಕೆಟ್ ತಪ್ಪಿಸಿ ಚುನಾವಣೆಗೆ ನಿಂತಿದ್ದಾರೆ. ಇದನ್ನು ಗಮನಿಸಿದರೆ ಅವರಿಗೆ ಅಧಿಕಾರದ ದಾಹ ಎಷ್ಟಿದೆ ಎಂಬುದು ಎಲ್ಲರಿಗೂ ಅರ್ಥವಾಗುತ್ತದೆ. ಆದ್ದರಿಂದ ಬೆಳಗಾವಿ ಜನ ಬಹಳ ಪ್ರಬುದ್ಧರಿದ್ದು, ಮನೆ ಮಗನ ಕೈ ಹಿಡಿಯುತ್ತಾರೆ ಎಂದು ಮೃಣಾಲ್ ಹೆಬ್ಬಾಳ್ಕರ್​ ವಿಶ್ವಾಸ ವ್ಯಕ್ತಪಡಿಸಿದರು‌.

ಎಷ್ಟು ಮತಗಳ ಅಂತರದಿಂದ ಗೆಲ್ಲುತ್ತಿರಿ ಎಂಬ ಪ್ರಶ್ನೆಗೆ, ಎಷ್ಟು ಮತಗಳ ಅಂತರ ಅಂತಾ ಈಗಲೇ ಹೇಳಲು ಬರಲ್ಲ. ಆದರೆ, ಪ್ರತಿಯೊಬ್ಬ ಮತದಾರರ ಆಶೀರ್ವಾದಿಂದ ಬಹಳ ದೊಡ್ಡ ಅಂತರದಲ್ಲಿ ಗೆದ್ದೇ ಗೆಲ್ಲುತ್ತೇನೆ. ಇನ್ನೂ 15 ದಿನ ಪ್ರಚಾರ ಬಾಕಿ ಇದೆ. ಅಷ್ಟರಲ್ಲೇ ಫಲಿತಾಂಶ ಎಲ್ಲರಿಗೂ ಗೊತ್ತಾಗುತ್ತದೆ ಎಂದು ಹೇಳಿದರು.

ನಾನು ಬೆಳಗಾವಿ ಮನೆ ಮಗ, ಯುವಕನಿದ್ದೇನೆ. ಇಲ್ಲಿನ ಪ್ರತಿಯೊಂದು ಕಷ್ಟ ಸುಖಗಳನ್ನು ಅರಿತಿದ್ದೇನೆ. ಬೆಳಗಾವಿಯನ್ನು ಸುಂದರ ನಗರವನ್ನಾಗಿ ಅಭಿವೃದ್ಧಿ ಪಡಿಸುವ ಕನಸು ಕಂಡಿದ್ದೇನೆ. ಈ ಬಾರಿ ಮನೆ ಮಗನನ್ನು ಕೈ ಬಿಡಬೇಡಿ. ತಮ್ಮೆಲ್ಲರ ಆಶೀರ್ವಾದ ನನಗೆ ಬೇಕು ಎಂದು ಮೃಣಾಲ್ ಕ್ಷೇತ್ರದ ಜನತೆಗೆ ಕೇಳಿಕೊಂಡರು.

ಇದನ್ನೂ ಓದಿ: 10 ವರ್ಷದಲ್ಲಿ ಅಚ್ಛೆ ದಿನ್ ಬರಲಿಲ್ಲ, 2047ರ ವರೆಗೆ ಸಮಯ ಕೇಳುತ್ತಿರುವುದು ಹಾಸ್ಯಾಸ್ಪದ: ದಿನೇಶ್ ಗುಂಡೂರಾವ್ - Lok Sabha Election 2024

Last Updated :Apr 22, 2024, 1:13 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.