ETV Bharat / state

ಜಾತಿಗಣತಿ ವರದಿ ಸಲ್ಲಿಕೆಗೆ ಕ್ಷಣಗಣನೆ; ಇಂದೇ ಸಿಎಂ ಸಿದ್ದರಾಮಯ್ಯ ಕೈಸೇರಲಿದೆ ರಿಪೋರ್ಟ್​

author img

By ETV Bharat Karnataka Team

Published : Feb 29, 2024, 12:30 PM IST

Updated : Feb 29, 2024, 12:39 PM IST

jayaprakash hegde will submit caste census report to CM Siddaramaiah
jayaprakash hegde will submit caste census report to CM Siddaramaiah

ಸಾಕಷ್ಟು ಪರ-ವಿರೋಧ ಚರ್ಚೆಗೆ ಕಾರಣವಾಗಿದ್ದ ಈ ಜಾತಿಗಣತಿ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಲು ಕ್ಷಣಗಣನೆ ಆರಂಭವಾಗಿದೆ.

ಬೆಂಗಳೂರು: ಬಹು ನಿರೀಕ್ಷಿತ ಜಾತಿವಾರು ಜನಗಣತಿಯ ವರದಿಯನ್ನು ಶಾಶ್ವತ ಹಿಂದುಳಿದ ವರ್ಗಗಳ ಆಯೋಗ ಇಂದು ಸರ್ಕಾರಕ್ಕೆ ಸಲ್ಲಿಸಲಿದ್ದಾರೆ. ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರಾಗಿರುವ ಕೆ ಜಯಪ್ರಕಾಶ್​ ಹೆಗ್ಡೆ ಅವರು ಇಂದು ವಿಧಾನಸೌಧದಲ್ಲಿ ಮಧ್ಯಾಹ್ನ 2.45ಕ್ಕೆ ಮುಖ್ಯಮಂತ್ರಿಗಳನ್ನು ಭೇಟಿಯಾಗಿ, 2015ರಲ್ಲಿ ನಡೆಸಿದ್ದ ಸಾಮಾಜಿಕ ಮತ್ತು ಶೈಕ್ಷಣಿಕ ವರದಿ ಮತ್ತು ಸಮೀಕ್ಷೆಯ ದತ್ತಾಂಶಗಳು ಸೇರಿದ ಬೃಹತ್​ ಪೆಟ್ಟಿಗೆಯನ್ನು ಸರ್ಕಾರದ ಕೈಗೆ ಒಪ್ಪಿಸಲಿದ್ದಾರೆ.

8 ವರ್ಷದ ಕಾಂತರಾಜು ವರದಿ: ಸಿದ್ದರಾಮಯ್ಯ ನೇತೃತ್ವದ ಮೊದಲ ಸರ್ಕಾರದ ಅವಧಿಯಲ್ಲಿ 2015ರಲ್ಲಿ ರಾಜ್ಯದ ಎಲ್ಲಾ ಕುಟುಂಬಗಳ ಸಾಮಾಜಿಕ ಮತ್ತು ಶೈಕ್ಷಣಿಕ ಸ್ಥಿತಿಯನ್ನು ತಿಳಿಯುವ ಉದ್ದೇಶದಿಂದ ಎಚ್​ ಕಾಂತರಾಜ ನೇತೃತ್ವದ ಹಿಂದುಳಿದ ವರ್ಗಗಳ ಆಯೋಗ 158.74 ಕೋಟಿ ವೆಚ್ಚದಲ್ಲಿ ಈ ಸಮೀಕ್ಷೆ ನಡೆಸಿತು. 8 ವರ್ಷಗಳ ಹಿಂದೆ ನಡೆಸಲಾದ ಈ ವರದಿಯನ್ನು ಈ ಹಿಂದೆ ಕಾಂಗ್ರೆಸ್​ ಸರ್ಕಾರದ ಅವಧಿಯಲ್ಲಿ ಸಲ್ಲಿಕೆ ಮಾಡಲಾಗಿತ್ತಾದರೂ ಅದಕ್ಕೆ ಸದಸ್ಯ ಕಾರ್ಯದರ್ಶಿಗಳ ಸಹಿ ಆಗಿರಲಿಲ್ಲ. ಬಳಿಕ ಬಂದ ಸರ್ಕಾರಗಳು ಸಹ ಈ ವರದಿಯನ್ನು ಪಕ್ಕಕ್ಕೆ ಸರಿಸಿದ್ದವು.

ಸಾಕಷ್ಟು ಪರ-ವಿರೋಧ ಚರ್ಚೆಗೆ ಕಾರಣವಾಗಿದ್ದ ಈ ಜಾತಿಗಣತಿ ವರದಿಯನ್ನು ತಮ್ಮ ನೇತೃತ್ವದ ಸರ್ಕಾರದಿಂದ ಸ್ವೀಕಾರ ಮಾಡಲು ಬದ್ಧ ಎಂದು ಸಿದ್ದರಾಮಯ್ಯ ಈ ಹಿಂದೆ ಹೇಳಿಕೆ ನೀಡಿದ್ದರು. ಸಿದ್ದರಾಮಯ್ಯ ಎರಡನೇ ಅವಧಿಗೆ ಮುಖ್ಯಮಂತ್ರಿಯಾದ ಬಳಿಕ ಮತ್ತೆ ಮುನ್ನೆಲೆಗೆ ಬಂದಿತು. ಈ ನಡುವೆ ವರದಿ ಸಲ್ಲಿಕೆಗೆ ಆಯೋಗದ ಅಧ್ಯಕ್ಷರ ಸೇವಾ ಅವಧಿಯನ್ನು ಕೂಡ ಸರ್ಕಾರ ವಿಸ್ತರಿಸಿತ್ತು. ಈ ವೇಳೆ ಕಾಂತರಾಜು ವರದಿಯ ಮೂಲ ಪ್ರತಿ ಕಳೆದು ಹೋಗಿದೆ ಎಂಬ ಆರೋಪವೂ ಕೇಳಿ ಬಂದಿತು.

ಈ ಸುದ್ದಿಗೆ ಪ್ರತಿಕ್ರಿಯಿಸಿದ್ದ ಜಯಪ್ರಕಾಶ್​ ಹೆಗ್ಡೆ, ವರದಿಯ ಹಾರ್ಡ್ ಕಾಪಿ ಮಿಸ್​ ಆಗಿದೆ. ಸಾಫ್ಟ್ ಕಾಪಿ ನಮ್ಮ ಬಳಿ ಇದೆ. ಮಿಸ್ ಆಗಿಲ್ಲ. ಮೂಲ ಪ್ರತಿ ಕಳೆದು ಹೋಗಿರುವ ಬಗ್ಗೆ ಹಿಂದಿನ ಸರ್ಕಾರಕ್ಕೆ ಪತ್ರ ಬರೆಯಲಾಗಿತ್ತು. ಇದೀಗ ಹೊಸ ಸರ್ಕಾರಕ್ಕೂ ಈ ಕುರಿತು ಪತ್ರ ಬರೆಯಲಾಗಿದೆ. ಇರುವ ದತ್ತಾಂಶಗಳ‌ನ್ನು ಆಧರಿಸಿ ವರದಿ ಕೊಡಿ ಎಂದು ಹೇಳಿದ್ದಾರೆ. ಡಿಸೆಂಬರ್​ನಲ್ಲಿ ಈ ವರದಿ ಸಲ್ಲಿಕೆ ಮಾಡಲಾಗುವುದು ಎಂದಿದ್ದರು.

ಇನ್ನು ಈ ಸಂಬಂಧ ಬಜೆಟ್​​​ ವಿಧಾನಸಭೆ ಅಧಿವೇಶನದಲ್ಲಿ ಮಾತನಾಡಿದ್ದ ಸಚಿವ ಶಿವರಾಜ್​ ತಂಗಡಗಿ, ಫೆ. 29ರಲ್ಲಿ ವರದಿ ಸಲ್ಲಿಸುವಂತೆ ಸಮಿತಿಗೆ ಡೆಡ್​ಲೈನ್​ ನೀಡಿದ್ದೇವೆ. ಅದರಂತೆ ವರದಿ ಬಿಡುಗಡೆ ಮಾಡುತ್ತೇವೆ ಎಂದು ತಿಳಿಸಿದ್ದರು. ಅದರಂತೆ ಇದೀಗ ಇಂದು ವರದಿ ಸಲ್ಲಿಕೆಗೆ ಮುಹೂರ್ತ ನಿಗದಿಯಾಗಿದೆ.

ಈಗಾಗಲೇ ಜಾತಿಗಣತಿ ವರದಿ ಬಿಡುಗಡೆಗೆ ವಿವಿಧ ಸಂಘಟನೆಗಳು ಒತ್ತಾಯಿಸಿದ್ದು, ಮತ್ತೊಂದೆಡೆ ಈ ವರದಿಗೆ ಒಕ್ಕಲಿಗ, ಲಿಂಗಾಯತ ಸಮುದಾಯದಿಂದ ವಿರೋಧ ವ್ಯಕ್ತವಾಗಿದೆ. ಇದೀಗ ಲೋಕಸಭಾ ಚುನಾವಣೆ ಹೊತ್ತಿನಲ್ಲಿ ಈ ವರದಿ ಸಲ್ಲಿಕೆ ಆಗುತ್ತಿದ್ದು, ಈ ಸಂಬಂಧ ಸಿಎಂ ಯಾವ ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂಬ ಕುತೂಹಲ ಮೂಡಿದೆ.

ಇದನ್ನೂ ಓದಿ: ಜಾತಿ ಗಣತಿ ವರದಿ ಸ್ವೀಕಾರಕ್ಕೆ ಸರ್ಕಾರ ಬದ್ದ, ಫೆ.29ರೊಳಗೆ ಸರ್ಕಾರದ ಕೈ ಸೇರಲಿದೆ ವರದಿ: ಸಚಿವ ತಂಗಡಗಿ

Last Updated :Feb 29, 2024, 12:39 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.