ETV Bharat / international

ಸ್ಲೋವಾಕಿಯಾ ಪ್ರಧಾನಿ ರಾಬರ್ಟ್​ ಫಿಕೊ ಮೇಲೆ ಗುಂಡಿನ ದಾಳಿ - Slovakia PM

author img

By PTI

Published : May 16, 2024, 1:49 PM IST

ಸ್ಲೋವಾಕಿಯಾ ಪ್ರಧಾನಿ ರಾಬರ್ಟ್​ ಫಿಕೊ ಅವರ ಮೇಲೆ ಅಪರಿಚಿತನೋರ್ವ ಗುಂಡಿನ ದಾಳಿ ನಡೆಸಿ ಹತ್ಯೆಗೆ ಯತ್ನಿಸಿದ್ದಾನೆ.

ಸ್ಲೋವಾಕಿಯಾ ಪ್ರಧಾನಿ ರಾಬರ್ಟ್​ ಫಿಕೊ
ಸ್ಲೋವಾಕಿಯಾ ಪ್ರಧಾನಿ ರಾಬರ್ಟ್​ ಫಿಕೊ (AP)

ಬನ್ಸ್ಕಾ ಬೈಸ್ಟ್ರಿಕಾ: ಸ್ಲೋವಾಕಿಯಾ ದೇಶದ ಪ್ರಧಾನಿ ರಾಬರ್ಟ್​ ಫಿಕೊ ಅವರ ಮೇಲೆ ಅಪರಿಚಿತನೋರ್ವ ಗುಂಡು ಹಾರಿಸಿ ಹತ್ಯೆಗೆ ಪ್ರಯತ್ನಿಸಿರುವ ಘಟನೆ ಬುಧವಾರ ನಡೆದಿದೆ. ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡ ಫಿಕೊ ಅವರನ್ನು ಕೂಡಲೇ ಆಸ್ಪತ್ರೆಗೆ ಸಾಗಿಸಲಾಗಿದ್ದು ಚಿಕಿತ್ಸೆ ನಡೆಯುತ್ತಿದೆ.

ಘಟನೆಯ ವಿವರ: ಸ್ಲೋವಾಕಿಯಾ ರಾಜಧಾನಿ ಬ್ರಾಟಿಸ್ಲಾವಾದಿಂದ ಸುಮಾರು 140 ಕಿ.ಮೀ ದೂರದಲ್ಲಿರುವ ಹ್ಯಾಂಡ್ಲೋವಾ ಪಟ್ಟಣದಲ್ಲಿ ಪ್ರಧಾನಿ ಫಿಕೊ ಬುಧವಾರ ಮಧ್ಯಾಹ್ನ ಸಭೆಯೊಂದರಲ್ಲಿ ಭಾಗಿಯಾಗಿದ್ದರು. ಈ ಸಭೆಯ ಬಳಿಕ ಹೊರಬಂದ ಅವರು ನೆರೆದಿದ್ದ ಕಾರ್ಯಕರ್ತರನ್ನು ಮಾತನಾಡಿಸಲು ತೆರಳಿದ್ದಾರೆ. ಈ ವೇಳೆ ಅಲ್ಲಿದ್ದ ಅಪರಿಚಿತ ವ್ಯಕ್ತಿ ತನ್ನ ಬಳಿಯಿದ್ದ ಬಂದೂಕಿನಿಂದ ನಾಲ್ಕು ಬಾರಿ ಗುಂಡು ಹಾರಿಸಿದ್ದಾನೆ. ಫಿಕೋ ಅವರ ಹೊಟ್ಟೆಗೆ ಗಂಭೀರ ಗಾಯಗಳಾಗಿವೆ. ತಕ್ಷಣ ಭದ್ರತಾ ಸಿಬ್ಬಂದಿ ಕಾರಿನ​ ಮೂಲಕ ಬನ್ಸ್ಕಾ ಬೈಸ್ಟ್ರಿಕ್‌ನಲ್ಲಿರುವ ಆಸ್ಪತ್ರೆಗೆ ದಾಖಲಿಸಿದ್ದಾರೆ.

ಕೃತ್ಯ ಎಸಗಿದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಪ್ರಧಾನಿ ಆರೋಗ್ಯ ಪರಿಸ್ಥಿತಿ ಚಿಂತಾಜನಕವಾಗಿದೆ ಎಂದು ಅಲ್ಲಿನ ಅಧಿಕಾರಿಗಳು ತಿಳಿಸಿದ್ದಾರೆ.

ಸ್ಲೋವಾಕಿಯ ಅಧ್ಯಕ್ಷ ಜುಝಾನಾ ಕ್ಯಾಪುಟೋವಾ ಅವರು ಪ್ರಧಾನಿ ಹತ್ಯೆ ಯತ್ನವನ್ನು ತೀವ್ರವಾಗಿ ಖಂಡಿಸಿದ್ದಾರೆ. ಸಂಸತ್ ಚುನಾವಣೆಗೆ 3 ವಾರ ಮೊದಲು ಸ್ಲೋವಾಕಿಯಾದಲ್ಲಿ ನಡೆದ ಈ ಘಟನೆ ಅಲ್ಲಿಯ ಜನರನ್ನು ಆತಂಕಕ್ಕೀಡು ಮಾಡಿದೆ. ದಾಳಿಯನ್ನು ದೇಶದ ಪ್ರತಿಪಕ್ಷಗಳೂ ಖಂಡಿಸಿವೆ.

ಪ್ರಧಾನಿ ಮೋದಿ ಖಂಡನೆ: ಈ ಘಟನೆಯನ್ನು ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ವಿವಿಧ ರಾಷ್ಟ್ರಗಳ ಮುಖ್ಯಸ್ಥರು ತೀವ್ರವಾಗಿ ಖಂಡಿಸಿದ್ದಾರೆ. ಮೋದಿ ತಮ್ಮ ಎಕ್ಸ್​ ಖಾತೆಯಲ್ಲಿ, 'ಹೇಡಿತನದ ಕೃತ್ಯವನ್ನು ನಾನು ಬಲವಾಗಿ ಖಂಡಿಸುತ್ತೇನೆ. ಪ್ರಧಾನಿ ಫಿಕೊ ಅವರು ಶೀಘ್ರವಾಗಿ ಚೇತರಿಸಿಕೊಳ್ಳಲಿ. ಭಾರತವು ಸ್ಲೋವಾಕ್ ಗಣರಾಜ್ಯದ ಜನರೊಂದಿಗಿದೆ' ಎಂದು ಪೋಸ್ಟ್​ ಮಾಡಿದ್ದಾರೆ.

ಯುಎಸ್ ಅಧ್ಯಕ್ಷ ಜೋ ಬೈಡನ್ ಮತ್ತು ವಿದೇಶಾಂಗ ಕಾರ್ಯದರ್ಶಿ ಆ್ಯಂಟೋನಿ ಬ್ಲಿಂಕೆನ್ ದಾಳಿಯನ್ನು ಖಂಡಿಸಿದ್ದಾರೆ. 'ಫಿಕೊ ಶೀಘ್ರವಾಗಿ ಚೇತರಿಸಿಕೊಳ್ಳಲಿ ಎಂದು ಹಾರೈಸುತ್ತೇವೆ. ಭಯಾನಕ ಹಿಂಸಾಚಾರವನ್ನು ನಾವು ಖಂಡಿಸುತ್ತೇವೆ. ನಮ್ಮ ರಾಯಭಾರ ಕಚೇರಿಯು ಸ್ಲೋವಾಕಿಯಾ ಸರ್ಕಾರದೊಂದಿಗೆ ಸಂಪರ್ಕದಲ್ಲಿದೆ. ನಾವು ಸಹಾಯ ಮಾಡಲು ಸಿದ್ಧರಿದ್ದೇವೆ' ಎಂದು ತಿಳಿಸಿದ್ದಾರೆ.

ಬ್ರಿಟನ್ ಪ್ರಧಾನಿ ರಿಷಿ ಸುನಕ್, ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್, ಫ್ರೆಂಚ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ ಕೂಡ ದಾಳಿಯನ್ನು ಖಂಡಿಸಿದ್ದಾರೆ.

ಏತನ್ಮಧ್ಯೆ, ಫಿಕೊ ರಾಜಕೀಯ ನೀತಿಗಳನ್ನು ಖಂಡಿಸಿ ಇತ್ತೀಚೆಗೆ ಸ್ಲೋವಾಕಿಯಾದಲ್ಲಿ ಪ್ರತಿಭಟನಾ ರ್ಯಾಲಿ ನಡೆದಿದ್ದವು. ಇಂತಹ ಸಂದರ್ಭದಲ್ಲಿ ದಾಳಿ ನಡೆದಿರುವುದರ ಹಿಂದೆ ರಾಜಕೀಯ ಪಿತೂರಿ ಇದೆ ಎಂಬ ಮಾತಗಳು ಕೇಳಿ ಬರುತ್ತಿವೆ.

ಇದನ್ನೂ ಓದಿ: ಇಂಡೋನೇಷ್ಯಾದಲ್ಲಿ ಲಾವಾ ಪ್ರವಾಹದಿಂದ 58 ಜನರ ಸಾವು; ಹಲವರು ನಾಪತ್ತೆ - INDONESIA FLOODS

ETV Bharat Logo

Copyright © 2024 Ushodaya Enterprises Pvt. Ltd., All Rights Reserved.