ಬೆಂಗಳೂರು: ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹ ಸುತ್ತಲ ನಿವಾಸಿಗಳಿಗೆ ಈ ಜೈಲಿನ ಜಾಮರ್ನಿಂದ ಸಮಸ್ಯೆ ಎದುರಾಗಿದೆ. ನೆಟ್ವರ್ಕ್ ಸಮಸ್ಯೆಯಿಂದ ಜನರು ಪರದಾಡುತ್ತಿದ್ದಾರೆ. ನೆಟ್ವರ್ಕ್ ಸಮಸ್ಯೆಯಿಂದ ಓರ್ವ ಹೃದ್ರೋಗಿ ಸಾವನ್ನಪ್ಪಿದ್ದನ್ನು ನೆನಪಿಸಿದ ನಿವಾಸಿಗಳು ಕೂಡಲೇ ಈ ಸಮಸ್ಯೆಗೆ ಜೈಲಾಧಿಕಾರಿಗಳು ಸ್ಪಂದಿಸಬೇಕೆಂದು ಮನವಿ ಮಾಡಿದರು.
ಭುವನೇಶ್ವರಿ ಬಡಾವಣೆ, ನಾಗನಾಥಪುರ ಗ್ರಾಮಸ್ಥರು ಈ ಜಾಮರ್ ಸಂಬಂಧಿತ ಸಮಸ್ಯೆಗಳ ಬಗ್ಗೆ ದನಿ ಎತ್ತಿದ್ದಾರೆ. ಜೈಲಿನ ಒಳಗಡೆ ನೀರು ಪೂರೈಸುವ ಕೆಲ ಮಹಿಳೆಯರು ಜೈಲುವಾಸಿಗಳು ಎಗ್ಗಿಲ್ಲದೇ ಮೊಬೈಲ್ ಬಳಕೆ ಮಾಡುವುದನ್ನು ಗಮನಿಸಿ ಮಾಹಿತಿ ನೀಡುತ್ತಾರೆ. ಜಾಮರ್ ಜೈಲಿನ ಒಳಗಡೆ ಕೆಲಸ ಮಾಡದೇ ಜೈಲಿನ ಆಚೆ ಕೆಲಸ ಮಾಡುತ್ತಿರುವುದು, ಬಾಡಿಗೆ ಮನೆಗಳ ವಾಸಿಗಳಿಗೆ ಕುತ್ತು ತಂದಿದೆ ಎಂದು ಪ್ರತಿಭಟನೆಯ ನೇತೃತ್ವ ವಹಿಸಿರುವ ಲಕ್ಷ್ಮಣ್ ತಿಳಿಸಿದ್ದಾರೆ.
ಶಾಲಾ ಮಕ್ಕಳ ವಾಹನದ ಜಿಪಿಎಸ್ ಲೊಕೇಷನ್ ಗೊತ್ತಾಗದದೇ ಮಕ್ಕಳು ಶಾಲೆಗೆ ಹೋಗುತ್ತಿಲ್ಲ. ಮನೆಯಲ್ಲಿ ಅನಾರೋಗ್ಯ ಸಮಸ್ಯೆ ಎದುರಾದರೆ ಆಂಬ್ಯುಲೆನ್ಸ್ಗೆ ಕರೆ ಮಾಡಲು ನೆಟ್ವರ್ಕ್ ಸಿಗುತ್ತಿಲ್ಲ ಎಂದು ಗೌರಮ್ಮ ಎಂಬುವರು ತಿಳಿಸಿದ್ದಾರೆ. ತುರ್ತು ಸಾಗಣೆ ವಾಹನಗಳು, ಓಲಾ, ಊಬರ್, ಗ್ಯಾಸ್ ಇನ್ನಿತರೆ ವಾಹನಗಳಿಗೆ ಸಂಪರ್ಕ ಕಲ್ಪಿಸಲು ಆಗದೇ ಪರದಾಡುವ ಪರಿಸ್ಥಿತಿಯಿದೆ ಎಂದು ಶೃತಿ ಆರೋಪಿಸಿದ್ದಾರೆ.
ಮನೆಯಿಂದಲೇ ಕೆಲಸ ಮಾಡುವ ಟೆಕ್ಕಿಗಳಿಗೆ ಕೆಲಸ ಮಾಡಲಾಗದೇ ಮನೆ ಬಿಟ್ಟು ಹೊರಡುತ್ತಿದ್ದಾರೆ. ಇದರಿಂದ ಬಾಡಿಗೆ ಮನೆ ಮಾಲೀಕರಿಗೆ ಸಮಸ್ಯೆ ಎದುರಾಗಿದೆ. ಮನೆಗಳು ಖಾಲಿಯಾಗಿದ್ದು, ಸಾಲ ಕಟ್ಟಲಾಗದೇ ಸಮಸ್ಯೆ ಎದುರಿಸುತ್ತಿದ್ದೇವೆ ಮನೆ ಒಡತಿ ರಾಧ ತಿಳಿಸಿದ್ದಾರೆ.
ಇದನ್ನೂ ಓದಿ: ಬೆಂಗಳೂರು: ದ್ವಿತೀಯ ಪಿಯು ಓದುತ್ತಿದ್ದ ವಿದ್ಯಾರ್ಥಿನಿ ಶವ ಮನೆಯ ಬಾತ್‌ರೂಂನಲ್ಲಿ ಪತ್ತೆ - Girl Found Dead
ಜೈಲಿನ ಒಳಗೆ ನೆಟ್ವರ್ಕ್ ಸರಿಯಿದೆ. ಜೈಲಿನ ಆಚೆಗೆ ಎರಡು ಕಿ.ಮೀ ವ್ಯಾಪ್ತಿಯಲ್ಲಿ ನೆಟ್ವರ್ಕ್ ಇಲ್ಲ. ಅಂಗಡಿಯ ಗೂಗಲ್ ಪೇ, ಫೋನ್ ಪೇ ಕೆಲಸ ಮಾಡದೇ ಪೇಚಿಗೆ ಸಿಲುಕಿದ್ದಾರೆ ಎಂದು ಕೇಶವ ರೆಡ್ಡಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸಂಬಂಧ ಪಟ್ಟ ಜೈಲಿನ ಮೇಲಾಧಿಕಾರಿಗಳಿಗೂ ಈ ಕುರಿತಂತೆ ಹತ್ತು ಹಲವು ಬಾರಿ ದೂರು ನೀಡಿ, ಮನವಿ ಮಾಡಿದ್ದರೂ ಕೇಂದ್ರದತ್ತ ಬೆರಳು ತೋರಿಸುವ ಪರಿಪಾಠವಿದೆ ಎಂದು ನಾಗರತ್ನಮ್ಮ ತಿಳಿಸಿದ್ದಾರೆ.
ಇದನ್ನೂ ಓದಿ: 'ಅಂಜಲಿ ಕೊಲೆಗೆ ಪೊಲೀಸರ ನಿರ್ಲಕ್ಷ್ಯವೇ ಕಾರಣ': ಬೊಮ್ಮಾಯಿ - Basavaraj Bommai
ಜೈಲಿನ ಒಳಗಡೆಗೆ ಸಾಕಾಗುವಷ್ಟು ಜಾಮರ್ ಮಿತಿಯನ್ನು ಕಡಿತಗೊಳಿಸಿ, ಜೈಲಿನ ಹೊರಗಡೆಗೆ ಜಾಮರ್ ಸಮಸ್ಯೆ ಎದುರಾಗದಂತೆ ನೋಡಿಕೊಳ್ಳಲು ಪ್ರತಿಭಟನಾಕಾರರು ಮನವಿ ಮಾಡುತ್ತಿದ್ದಾರೆ. ಅಲ್ಲದೇ ಮನವಿಗೆ ಸ್ಪಂದಿಸದಿದ್ದರೆ ಹೈಕೋರ್ಟ್ ಮೆಟ್ಟಿಲೇರುವುದಾಗಿ ಪ್ರತಿಭಟನಾಕಾರರು ಎಚ್ಚರಿಕೆ ನೀಡಿದ್ದಾರೆ.