ETV Bharat / state

ಬೆಂಗಳೂರು: ದ್ವಿತೀಯ ಪಿಯು ಓದುತ್ತಿದ್ದ ವಿದ್ಯಾರ್ಥಿನಿ ಶವ ಮನೆಯ ಬಾತ್‌ರೂಂನಲ್ಲಿ ಪತ್ತೆ - Girl Found Dead

author img

By ETV Bharat Karnataka Team

Published : May 16, 2024, 11:22 AM IST

ಅನುಮಾನಾಸ್ಪದ ಸ್ಥಿತಿಯಲ್ಲಿ ಹುಡುಗಿಯೊಬ್ಬಳ ಮೃತದೇಹ ಬೆಂಗಳೂರಿನ ಮನೆಯೊಂದರಲ್ಲಿ ಪತ್ತೆಯಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಅನುಮಾನಾಸ್ಪದ ಸ್ಥಿತಿಯಲ್ಲಿ ಹುಡುಗಿಯ ಶವ ಪತ್ತೆ
ಅನುಮಾನಾಸ್ಪದ ಸ್ಥಿತಿಯಲ್ಲಿ ಹುಡುಗಿಯ ಶವ ಪತ್ತೆ (ETV Bharat)

ಮೃತಳ ತಾಯಿ ಪ್ರತಿಕ್ರಿಯೆ (ETV Bharat)

ಬೆಂಗಳೂರು: ಅನುಮಾನಾಸ್ಪದ ರೀತಿಯಲ್ಲಿ ಹುಡುಗಿಯ ಮೃತದೇಹ ಸುಬ್ರಹ್ಮಣ್ಯಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪತ್ತೆಯಾಗಿದೆ. ದ್ವಿತೀಯ ಪಿಯುಸಿ ವ್ಯಾಸಂಗ ಮಾಡುತ್ತಿದ್ದ ಪ್ರಭುಧ್ಯಾ (21) ಮೃತಪಟ್ಟ ಹುಡುಗಿ. ತಾಯಿ‌ ಹಾಗೂ ಸಹೋದರನೊಂದಿಗೆ ವಾಸವಿದ್ದ ಈಕೆಯ ಮೃತದೇಹ ಬುಧವಾರ ಸಂಜೆ, ಕತ್ತು ಹಾಗೂ ಕೈ ಕೊಯ್ದುಕೊಂಡ ಸ್ಥಿತಿಯಲ್ಲಿ ಮನೆಯ ಬಾತ್ ರೂಮ್​​​​ನಲ್ಲಿ ಕಂಡುಬಂದಿದೆ.

ಕೈ ಹಾಗೂ ಕತ್ತು ಕೊಯ್ದಿದ್ದ ಹಿನ್ನೆಲೆಯಲ್ಲಿ ತೀವ್ರ ರಕ್ತಸ್ರಾವದಿಂದ ಮೃತಪಟ್ಟಿದ್ದಾಳೆ. ಇದು ಆತ್ಮಹತ್ಯೆಯೇ? ಅಥವಾ ಪರಿಚಿತರಿಂದ ಕೃತ್ಯ ನಡೆದಿದೆಯೇ ಎಂಬುದರ ಕುರಿತು ತನಿಖೆ ನಡೆಯುತ್ತಿದೆ. ಮರಣೋತ್ತರ ಪರೀಕ್ಷಾ ವರದಿಯ ನಂತರ ನಿಖರ ಕಾರಣ ತಿಳಿದು ಬರಲಿದೆ. ಸುಬ್ರಹ್ಮಣ್ಯಪುರ ಪೊಲೀಸ್ ಠಾಣೆಯಲ್ಲಿ 'ಅಸಹಜ ಸಾವು ಪ್ರಕರಣ' ದಾಖಲಿಸಿಕೊಳ್ಳಲಾಗಿದೆ ಎಂದು ಬೆಂಗಳೂರು ದಕ್ಷಿಣ ವಿಭಾಗದ ಡಿಸಿಪಿ ಲೋಕೇಶ್ ಭರಮಪ್ಪ ಜಗಲ್ಸಾರ್ ತಿಳಿಸಿದ್ದಾರೆ.

ಹತ್ಯೆ ಆರೋಪ: ''ನನ್ನ ಮಗಳಿಗೆ ಧೈರ್ಯವಾಗಿ ಬದುಕುವುದನ್ನು ಕಲಿಸಿದ್ದೆ, ಆತ್ಮಹತ್ಯೆ ಮಾಡಿಕೊಳ್ಳುವಂಥವಳಲ್ಲ. ಯಾರೋ ಆಕೆಯನ್ನು ಸಾಯಿಸಿದ್ದಾರೆ'' ಎಂದು ಮೃತಳ ತಾಯಿ ಸೌಮ್ಯ ಕೆ.ಆರ್. ಆರೋಪಿಸಿದ್ದಾರೆ. ''ಪ್ರತಿನಿತ್ಯ ಕಾಲೇಜಿನಿಂದ ಬಂದ ತಕ್ಷಣ ನನಗೆ ಮೆಸೇಜ್ ಮೂಲಕವಾದರೂ ಸರಿ ಅಪ್​ಡೇಟ್ ಮಾಡುತ್ತಿದ್ದಳು. ನಿನ್ನೆಯೂ ಸಹ 1:30ರ ಸುಮಾರಿಗೆ ಮನೆಗೆ ಬಂದಿದ್ದಾಳೆ, 3 ಗಂಟೆಯವರೆಗೂ ಚೆನ್ನಾಗಿಯೇ ಇದ್ದವಳನ್ನು ಯಾರೋ ಹತ್ಯೆ ಮಾಡಿದ್ದಾರೆ'' ಎಂದು ಆರೋಪಿಸಿದ್ದಾರೆ.

''ಮನೆಯಲ್ಲಿ ಮಗಳ ಸ್ಥಿತಿ ನೋಡಿ ತಕ್ಷಣ ಆಸ್ಪತ್ರೆಗೆ ಕರೆದುಕೊಂಡು ಹೋದೆ, ಮನೆಯಲ್ಲಿದ್ದ ಫೋನ್ ಸಹ ಇಲ್ಲ. ಪೊಲೀಸರು ಅಲ್ಲಿ ಫೋನ್ ಇರಲೇ ಇಲ್ಲ ಎಂದರು. ಯಾರು ಫೋನ್ ತೆಗೆದುಕೊಂಡು ಹೋಗಿದ್ದಾರೆ ಎನ್ನುವುದು ಸಹ ಗೊತ್ತಿಲ್ಲ. ಯಾರಿಗಾದರೂ ದ್ವೇಷವಿದ್ದರೆ ಅದು ಈ ವ್ಯವಸ್ಥೆಯಿಂದಷ್ಟೇ ಇರಬೇಕು, ನಾನೊಬ್ಬಳು ಸಾಮಾಜಿಕ ಕಾರ್ಯಕರ್ತೆಯಾಗಿ, ಎಷ್ಟೋ ಮಕ್ಕಳ ರಕ್ಷಣೆ ಮಾಡಿದ್ದೇನೆ. ಎಷ್ಟೋ ಜನ ರಾಜಕಾರಣಿಗಳನ್ನು ಪ್ರಶ್ನಿಸಿದ್ದೇನೆ‌. ಏನಾಗಿದೆ ಎಂದು ಗೊತ್ತಾಗುತ್ತಿಲ್ಲ, ನನ್ನ‌ ಮಗಳ ಸಾವಿಗೆ ನ್ಯಾಯ ಬೇಕು'' ಎಂದು ಮೃತಳ ತಾಯಿ ಆಗ್ರಹಿಸಿದ್ದಾರೆ.

ಇದನ್ನೂ ಓದಿ: ನೇಣು ಹಾಕಿಕೊಳ್ಳುವೆನೆಂದು ಪತ್ನಿಗೆ ವಿಡಿಯೋ ಕರೆ ಮೂಲಕ ಬೆದರಿಕೆ; ಬಿಗಿದ ಕುಣಿಕೆ, ಪತಿ ಸಾವು - Husband Death

ETV Bharat Logo

Copyright © 2024 Ushodaya Enterprises Pvt. Ltd., All Rights Reserved.