ETV Bharat / state

ಪತ್ನಿಗೆ ವಿಡಿಯೋ ಕರೆ ಮಾಡಿ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಸಲು ಯತ್ನಿಸುತ್ತಿದ್ದ ಪತಿ ಸಾವು - Husband Death

author img

By ETV Bharat Karnataka Team

Published : May 16, 2024, 11:00 AM IST

ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಪತ್ನಿಗೆ ಬೆದರಿಕೆ ಹಾಕುತ್ತಿದ್ದ ವ್ಯಕ್ತಿ ಮೃತಪಟ್ಟ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

husband death
ಅಮಿತ್ ಕುಮಾರ್ (Etv Bharat Reporter)

ಡಿಸಿಪಿ ಸೈದುಲು ಅದಾವತ್ (ETV Bharat)

ಬೆಂಗಳೂರು: ಪತ್ನಿಗೆ ವಿಡಿಯೋ ಕರೆ ಮಾಡಿ, ನೇಣು ಬಿಗಿದುಕೊಂಡಂತೆ ಬೆದರಿಸಲು ಯತ್ನಿಸಿದ ಪತಿ ಮೃತಪಟ್ಟ ಘಟನೆ ಬಾಗಲಗುಂಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬುಧವಾರ ನಡೆದಿದೆ. ಬಿಹಾರ ಮೂಲದ ಅಮಿತ್ ಕುಮಾರ್ (28) ಮೃತ ವ್ಯಕ್ತಿ.

10 ವರ್ಷಗಳ ಹಿಂದೆ ಬೆಂಗಳೂರಿಗೆ ಬಂದಿದ್ದ ಅಮಿತ್ ಕುಮಾರ್, ಜಿಮ್ ಟ್ರೈನರ್ ಆಗಿ ಕೆಲಸ ಮಾಡಿಕೊಂಡಿದ್ದ. ಕಳೆದ ಒಂದು ವರ್ಷದ ಹಿಂದೆ ಸ್ಥಳಿಯ ಯುವತಿಯೊಬ್ಬಳನ್ನ ಪ್ರೀತಿಸಿ, ಪೋಷಕರ ವಿರೋಧದ ನಡುವೆಯೂ ವಿವಾಹವಾಗಿದ್ದ. ಆದರೆ ಇತ್ತೀಚಿಗೆ ದಂಪತಿ ನಡುವೆ ಮುನಿಸು ಮೂಡಿತ್ತು. ಪತ್ನಿ ನರ್ಸಿಂಗ್ ಕೋರ್ಸ್ ಸೇರಿದ ಬಳಿಕ ತನಗೆ ಸಮಯ ನೀಡುತ್ತಿಲ್ಲ, ಸ್ನೇಹಿತರೊಂದಿಗೆ ಸದಾ ಫೋನ್ ಕರೆಯಲ್ಲಿರುತ್ತಾಳೆ ಎಂಬ ವಿಚಾರಕ್ಕೆ ಇಬ್ಬರ ನಡುವೆ ಆಗಾಗ ಜಗಳವಾಗುತ್ತಿತ್ತು ಎಂದು ತಿಳಿದುಬಂದಿದೆ.

ಇದರಿಂದ ಬೇಸರಗೊಂಡು ಪತ್ನಿ ತವರು ಮನೆಗೆ ತೆರಳಿದ್ದಾಗ ಕರೆ ಮಾಡುತ್ತಿದ್ದ ಅಮಿತ್ ಕುಮಾರ್ ಮನೆಗೆ ಬರುವಂತೆ ಪದೇ ಪದೇ ಮನವಿ ಮಾಡುತ್ತಿದ್ದ. ಬುಧವಾರವೂ ಕೂಡ ಪತ್ನಿಗೆ ವಿಡಿಯೋ ಕಾಲ್​​ ಮಾಡಿರುವ ಆತ, ನೇಣು ಬಿಗಿದುಕೊಂಡಂತೆ ಬೆದರಿಸಲು ಯತ್ನಿಸಿದ್ದ. ಆದರೆ ಬಳಿಕ ಶವವಾಗಿ ಪತ್ತೆಯಾಗಿದ್ದಾನೆ. ಹೀಗಾಗಿ, ಬೆದರಿಕೆ ಹಾಕುವ ವೇಳೆ ಆಕಸ್ಮಿಕವಾಗಿ ನೇಣಿಗೆ ಕುತ್ತಿಗೆ ಬಿಗಿದು ಮೃತಪಟ್ಟನಾ? ಅಥವಾ ಆತ್ಮಹತ್ಯೆಗೆ ಶರಣಾಗಿದ್ದಾನಾ? ಎಂಬುದು ತನಿಖೆ ಬಳಿಕ ದೃಢವಾಗಲಿದೆ ಎಂದು ಪೊಲೀಸರು ತಿಳಿಸಿದ್ದಾರೆ‌. ಬಗಲಗುಂಟೆ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಡಿಸಿಪಿ ಪ್ರತಿಕ್ರಿಯೆ: ಘಟನೆ ಬಗ್ಗೆ ಮಾಹಿತಿ ನೀಡಿದ ಬೆಂಗಳೂರು ಉತ್ತರ ವಿಭಾಗದ ಡಿಸಿಪಿ ಸೈದುಲು ಅದಾವತ್, ''ಜಗಳದಿಂದ ಬೇಸತ್ತು ಪತ್ನಿಯು ತವರು ಮನೆಗೆ ಹೋದಾಗೆಲ್ಲ, ಅಮಿತ್ ಕುಮಾರ್ ಆಗಾಗ ಇದೇ ರೀತಿ ವಿಡಿಯೋ ಕರೆ ಮಾಡಿ ಬೆದರಿಸಿ ಆಕೆಯನ್ನು ಮನೆಗೆ ಕರೆಸಿಕೊಳ್ಳುತ್ತಿದ್ದ. ಬುಧವಾರ ಸಹ ತಾಯಿಯ ಮನೆಗೆ ಹೋಗಿದ್ದ ಪತ್ನಿಗೆ ಕರೆ ಮಾಡಿದ್ದ ಅಮಿತ್ ಕುಮಾರ್, ಮನೆಗೆ ಬರುವಂತೆ ಮನವಿ ಮಾಡಿಕೊಂಡಿದ್ದ. ಆಕೆ ಬರದಿದ್ದಾಗ ಪತ್ನಿಗೆ ವಿಡಿಯೋ ಕರೆ ಮಾಡಿ ನೇಣು ಬಿಗಿದುಕೊಳ್ಳುತ್ತಿರುವಂತೆ ಬೆದರಿಸಲು ಯತ್ನಿಸಿದ್ದಾನೆ. ಆದರೆ, ಪತ್ನಿ ಮನೆಗೆ ಬರುವಷ್ಟರಲ್ಲಿ ನೇಣು ಬಿಗಿದುಕೊಂಡ ಸ್ಥಿತಿಯಲ್ಲಿ ಅಮಿತ್ ಕುಮಾರ್ ಮೃತದೇಹ ಪತ್ತೆಯಾಗಿದೆ'' ಎಂದು ತಿಳಿಸಿದ್ದಾರೆ.

''ಆತ್ಮಹತ್ಯೆ ಮಾಡಿಕೊಳ್ಳುವಂತೆ ಬೆದರಿಸುವ ಸಂದರ್ಭದಲ್ಲಿ ಅಚಾತುರ್ಯದಿಂದ ಸಾವು ಸಂಭವಿಸಿದೆ ಎಂದು ಈಗಲೇ ಹೇಳಲು ಸಾಧ್ಯವಿಲ್ಲ. ಯಾಕೆಂದರೆ, ಮೃತ ವ್ಯಕ್ತಿ ಮೊದಲೇ ಒಳಗಿನಿಂದ ರೂಂ ಬಾಗಿಲು ಲಾಕ್ ಮಾಡಿಕೊಂಡಿದ್ದ. ಮಾಹಿತಿ ತಿಳಿದು ಅಕ್ಕಪಕ್ಕದವರೆಲ್ಲ ಬಂದು ಬಾಗಿಲು ಒಡೆದು, ಮೃತದೇಹವನ್ನು ಆಸ್ಪತ್ರೆಗೆ ರವಾನೆ ಮಾಡಲಾಗಿತ್ತು. ಸದ್ಯ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ರವಾನಿಸಲಾಗಿದೆ. ಹೆಚ್ಚಿನ ತನಿಖೆಯ ಬಳಿಕ ನಿಖರ ಕಾರಣ ತಿಳಿಯಲಿದೆ'' ಎಂದು ಡಿಸಿಪಿ ಸೈದುಲು ಅದಾವತ್ ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: ಸಾಲ ತೀರಿಸಲು ಮನೆ ಮಾಲಕಿಯ ಕತ್ತು ಹಿಸುಕಿ ಕೊಲೆ; ಬಾಡಿಗೆಗಿದ್ದ ಯುವತಿ ಬಂಧನ - House Owner Murder

ETV Bharat Logo

Copyright © 2024 Ushodaya Enterprises Pvt. Ltd., All Rights Reserved.